ಮಹಿಳಾ ಸಂಗಾತಿ
ವೀಣಾ ಹೇಮಂತಗೌಡ ಪಾಟೀಲ್
“ನನ್ನ ಸಂತೋಷ ನನ್ನ ಹಕ್ಕು”
ಅದೊಂದು ಪುಟ್ಟ ಸಭಾಂಗಣ. ಅಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದರು. ತರಹೇವಾರಿ ಸೀರೆಗಳಲ್ಲಿ ಹಿರಿಯರು ಮಿಂಚುತ್ತಿದ್ದರೆ, ತರುಣಿಯರು ನವೀನ ಮಾದರಿಯ ಬಟ್ಟೆಗಳನ್ನು ಧರಿಸಿ, ಪುಟ್ಟ ಮಕ್ಕಳು ಬಣ್ಣ ಬಣ್ಣದ ಫ್ರಾಕುಗಳನ್ನು ಮ್ಯಾಕ್ಸಿಗಳನ್ನು ಧರಿಸಿ ಮಿಂಚುತ್ತಿದ್ದರು.
ತಮಾಶೆಯ ಆಟಗಳು, ಸ್ಪರ್ಧೆಗಳು ನಡೆದು ಇನ್ನೇನು ವೇದಿಕೆ ಕಾರ್ಯಕ್ರಮ ಆರಂಭವಾಗಬೇಕು. ಮಿಲಿಟರಿ ಕಮಾಂಡರ್ ಅವರ ಪತ್ನಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಅವರನ್ನು ಪರಿಚಯಿಸುತ್ತಾ ಕಾರ್ಯಕ್ರಮದ ನಿರೂಪಕಿ ಆಕೆಯ ಪತಿಯನ್ನು ಕೂಡ ಹೊಗಳುತ್ತಾ ಶ್ರೀಮತಿ ಉಷಾ ಅವರನ್ನು ಅವರ ಪತಿ ಸಂತೋಷವಾಗಿ ಇಟ್ಟಿದ್ದಾರೆ ಎಂದು ಹೇಳಿದರು.
ಇದೀಗ ಮಾತನಾಡುವ ಸರದಿ ಶ್ರೀಮತಿ ಉಷಾ ಅವರದು…. ಸಭೆಯಲ್ಲಿ ಹಾಜರಿರುವ ಎಲ್ಲರನ್ನೂ ಅಭಿನಂದಿಸುತ್ತಾ ಕಾರ್ಯಕ್ರಮವನ್ನು ಕುರಿತು ಒಂದೆರಡು ನಿಮಿಷ ಮಾತನಾಡಿದ ಆಕೆ ಕೊನೆಯಲ್ಲಿ ಹೇಳಿದ್ದು ಇಷ್ಟು…. ನನ್ನನ್ನು ನನ್ನ ಪತಿ ಸಂತೋಷವಾಗಿ ಇರಿಸಿದ್ದಾರೆ ಎಂಬುದು ಸುಳ್ಳು. ಸಂತೋಷವಾಗಿ ಇರಲೇಬೇಕು ಎಂಬುದು ನನ್ನ ಆಯ್ಕೆಯಾಗಿತ್ತು. ನನಗೆ ನಾನು ಎಂದು ಮೋಸ ಮಾಡಿಕೊಳ್ಳಬಾರದು, ನನಗಿರುವುದು ಒಂದೇ ಜೀವನ, ಸಾಧ್ಯವಾದಷ್ಟು ಅದನ್ನು ಸಂತೋಷಕರವಾಗಿ ಸುಖಕರವಾಗಿ ಕಳೆಯಬೇಕು ಎಂಬುದು ನನ್ನ ಮಹದಾಸೆಯಾಗಿತ್ತು. ಗೃಹಿಣಿಯಾಗಿ ಇರುವುದು ಕೂಡ ನನ್ನದೇ ಆಯ್ಕೆಯಾಗಿತ್ತು. ನನ್ನ ಪತಿ ನನಗೆ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ನನ್ನನ್ನು ಬಿಡ್ತಾರಾ ಎಂಬ ನಿಮ್ಮ ಪ್ರಶ್ನೆಗೆ ಉತ್ತರ “ನಾನೇನು ಹಸುವಲ್ಲ ಕಟ್ಟಿ ಹಾಕಲು ಎಂಬುದು”. ಕಟ್ಟಿ ಹಾಕಿದ್ದರೆ ತಾನೇ ಬಿಟ್ಟು ಬಿಡುವ ಪ್ರಶ್ನೆ ಬರುವುದು.
ನನ್ನ ಕುಟುಂಬದ ಪ್ರತಿ ಆಗುಹೋಗುಗಳಿಗೂ ಸ್ಪಂದಿಸುತ್ತಾ ನನ್ನ ಮನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾ ಪತಿ ಮತ್ತು ಮಕ್ಕಳ ಬೇಕು ಬೇಡಗಳಿಗೆ ಕಿವಿಯಾಗುವ ನಾನು, ನನ್ನ ಮನದ ಮಾತಿಗೆ ಕಿವಿಯಾಗಲಾರೆನೇ?
ಹೌದು ನಾನು ಸ್ವತಂತ್ರ ವ್ಯಕ್ತಿ. ನನ್ನನ್ನು ಪ್ರೀತಿಸುವವರಿಗೆ ನನ್ನೆಲ್ಲವನ್ನು ಕೊಡುವುದರ ಜೊತೆ ಜೊತೆಗೆ ನನ್ನನ್ನು ನಾನು ಕೂಡ ಹೆಚ್ಚು ಪ್ರೀತಿಸಿಕೊಳ್ಳುತ್ತೇನೆ… ಅಂತೆಯೇ ನನಗಾಗಿ ನಾನು ಸಮಯವನ್ನು ಮೀಸಲಿರಿಸಿಕೊಳ್ಳುತ್ತೇನೆ. ಮನೆ ಕೆಲಸ ಮತ್ತು ವೈಯುಕ್ತಿಕ ಆಸಕ್ತಿಯ ನಡುವಣ ರೇಖೆ ನನಗೆ ಗೊತ್ತಿದೆ.
ನನ್ನ ವೈಯುಕ್ತಿಕ ಆಸೆ ಆಕಾಂಕ್ಷೆಗಳನ್ನು, ಕರ್ತವ್ಯಗಳನ್ನು ನಾನು ಈಡೇರಿಸದಿದ್ದರೆ ಬೇರೆ ಯಾರು ಪೂರೈಸುತ್ತಾರೆ. ನನ್ನತನವನ್ನು ಒತ್ತೆ ಇಟ್ಟು ಮತ್ತೊಬ್ಬರ ಚಾಕರಿ ಮಾಡಲಾರೆ. ನನಗಿರುವುದು ಒಂದೇ ಜೀವನ… ಮನೆ, ಮಕ್ಕಳು, ಗಂಡ ಸಂಬಂಧಗಳು ಎಂದು ಸಾಮಾನ್ಯವಾಗಿ ಜೀವನ ನಡೆಸುತ್ತಿರುವ ನಾನು ನನಗಾಗಿಯೂ ಬದುಕುತ್ತೇನೆ. ಅವರೆಲ್ಲರ ಹಿತದಲ್ಲಿ ನನ್ನ ಹಿತವಿದೆ ನಿಜ ಆದರೆ ನನ್ನ ಬೇಕು ಬೇಡಗಳ ಅರಿವು ಅವರಿಗಿಲ್ಲ ಎಂದಾದರೆ ಅವರಿಗೆ ಅದರ ಅರಿವು ಮೂಡಿಸಲು ನಾನೆಂದೂ ಹಿಂಜರಿಯುವುದಿಲ್ಲ.
ನನ್ನ ಸುಖ ಸಂತೋಷಗಳಿಗೆ ನನ್ನ ಕುಟುಂಬ ಜವಾಬ್ದಾರರಲ್ಲ…. ನಮ್ಮೆಲ್ಲಾ ಸುಖ ಸಂತೋಷಗಳಿಗೆ ಕೇವಲ ನಾವು ಮಾತ್ರ ಜವಾಬ್ದಾರರು. ನಾವು ಸಂತೋಷವಾಗಿದ್ದರೆ ಮಾತ್ರ ನಮ್ಮ ಸುತ್ತಮುತ್ತಲಿರುವವರನ್ನು ಸಂತೋಷವಾಗಿ ಇಡಲು ಸಾಧ್ಯ ಎಂಬ ಸತ್ಯವನ್ನು ಅರಿತುಕೊಳ್ಳಿ. ಬೇರೆಯವರಿಂದ ಅತಿ ಕಡಿಮೆ ನಿರೀಕ್ಷೆ ಮಾಡಿ ಆದರೆ ವೈಯುಕ್ತಿಕವಾಗಿ ನಿಮಗೆ ನೀವು ಹೆಚ್ಚು ಸಮಯ ಕೊಡಿ.
ಈ ಬದುಕು ಎಲ್ಲರಿಗೂ ಕೊಡುವುದು ಕೇವಲ ಒಂದು ಅವಕಾಶವನ್ನು ಮಾತ್ರ.. ನಿಮ್ಮೆಲ್ಲಾ ಸಮಯವನ್ನು ನಿಮ್ಮ ಗಂಡನಿಗೆ, ಮಕ್ಕಳಿಗೆ ಕುಟುಂಬಕ್ಕೆ ಎಂದು ಮೀಸಲಿಡುವುದು ತಪ್ಪಲ್ಲ ಆದರೆ ನಿಮಗಾಗಿ ಸ್ವಲ್ಪವೂ ಸಮಯವನ್ನು ಇಟ್ಟುಕೊಳ್ಳುವುದಿಲ್ಲ ಎಂದರೆ ನೀವು ಬದುಕಿರುವ ಸಾರ್ಥಕತೆ ಏನು?
ನಿಮ್ಮ ಇಷ್ಟಾನಿಷ್ಠಗಳನ್ನು ನೀವು ಅರಿತುಕೊಳ್ಳದೆ ಬೇರೆಯವರು ಅರಿತುಕೊಳ್ಳಲಿ ಎಂಬ ಆಸೆ ಖಂಡಿತ ಬೇಡ. ಬೇರೆಯವರಿಗೆ ಇಷ್ಟವಾಗುವ ರೀತಿಯಲ್ಲಿ ಉಡುಗೆ ತೊಡುಗೆ ತೊಡುವ, ಅಡುಗೆ ಮಾಡಿ ಹಾಕುವ ನೀವು ನಿಮ್ಮ ವೈಯುಕ್ತಿಕ ಕಾಳಜಿ ಕೂಡ ಮಾಡಿಕೊಳ್ಳಿ…. ಅಂದಾಗ ಮಾತ್ರ ಜೀವಿತದ ಕೊನೆಗಾಲದಲ್ಲಿ “ಅಯ್ಯೋ!! ಎಲ್ಲರಿಗೂ ನಾನು ಮಾಡಿದೆ, ನನ್ನನ್ನು ಕೇಳುವವರೇ ಇಲ್ಲ” ಎಂದು ಹಲುಬದಿರಲು ಇಂದಿನಿಂದಲೇ ನಿಮ್ಮನ್ನು ನೀವು ಒಬ್ಬ ವಿಶೇಷ ವ್ಯಕ್ತಿಯಾಗಿ ಭಾವಿಸಿ ಪ್ರೀತಿಸಿ ಆರಾಧಿಸಿ ಎಂದು ಹೇಳಿ ಮಾತು ಮುಗಿಸಿದರು.
ಕೆಲ ಹೆಣ್ಣು ಮಕ್ಕಳ ಕಣ್ಣಂಚಲ್ಲಿ ತುಸು ತೇವ ಇದ್ದರೆ, ಮತ್ತೆ ಕೆಲ ಹೆಣ್ಣು ಮಕ್ಕಳು ಭಾವುಕರಾಗಿದ್ದರು. ಬದುಕಿನ ಕುರಿತ ಹೊಸ ಭಾವ ಒಂದು ಅಲ್ಲಿ ಸ್ಪುರಿಸಿತ್ತು. ಅದಕ್ಕೆ ಕಾರಣೀಭೂತರಾದ ಉಷಾ ಅವರ ಭಾಷಣಕ್ಕೆ ಪ್ರತಿಯಾಗಿ ಅದ್ಭುತವಾದ ಕರತಾಡನದ ಪ್ರತಿಕ್ರಿಯೆಯ ಧ್ವನಿ ಸಭಾಂಗಣವನ್ನು ತುಂಬಿತ್ತು.
ವೀಣಾ ಹೇಮಂತಗೌಡ ಪಾಟೀಲ್