‘ಶ್ರಮಿಕರಿದ್ದರೆ ಸಾಮ್ರಾಜ್ಯ’ ಮೇ ದಿನದ ವಿಶೇಷ ಲೇಖನ ಜಯಲಕ್ಷ್ಮಿ.ಕೆ.

” ಇವರ ಶ್ರಮದಿಂದ ವೈಭವೋಪೇತ ಮಹಲುಗಳು ಎದ್ದು ನಿಂತವು. ಇವರ ಕೈಚಳಕದಿಂದ ಮನೆಗಳು ಪೀಠೋಪಕರಣಗಳಿಂದ ಅಲಂಕೃತಗೊಂಡವು. ಇವರ ಬೆವರ ಧಾರೆಯಿಂದ ರಸ್ತೆಗಳು ನಿರ್ಮಾಣಗೊಂಡವು. ಇವರ ಕಾರ್ಯಕ್ಷಮತೆಯಿಂದ ಬಗೆಬಗೆಯ ವಾಹನಗಳು ಸಂಚರಿಸತೊಡಗಿದವು. ಇವರು ಸ್ವಚ್ಛವಾಗಿಸಿದ ವಾತಾವರಣದಲ್ಲಿ ನಮ್ಮೆಲ್ಲರ ಸ್ವಾಸ್ಥ್ಯ ಅಡಕವಾಗಿದೆ. ಇವರ ಅವಿರತ ದುಡಿಮೆಯ ಫಲವಾಗಿ ನಾವೆಲ್ಲರೂ ಉಣ್ಣುತ್ತೇವೆ, ಉಡುತ್ತೇವೆ, ತೊಡುತ್ತೇವೆ. ನಾವು ಕಾಣುವ ನವ – ನಾವೀನ್ಯತೆಯ ಕನಸುಗಳು, ಮಾತುಗಳು ಸಾಕಾರಗೊಳ್ಳುವುದು ಇವರ ಶ್ರಮದಿಂದ. ದೇಶದ ಅಭಿವೃದ್ಧಿಯ ನಿಜವಾದ ಶಿಲ್ಪಿಗಳು ಇವರು… ಇವರೇ ಕಾರ್ಮಿಕರು.

ಈ ಶ್ರಮಿಕವರ್ಗ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಗೌರವಿಸುವ ಸಲುವಾಗಿ ವಿಶ್ವದ ಸುಮಾರು 80 ದೇಶಗಳು ಮೇ ತಿಂಗಳ ಒಂದರಂದು ‘ಕಾರ್ಮಿಕರ ದಿನ ‘ ವನ್ನು ಆಚರಿಸುತ್ತಿವೆ. ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಕಾರ್ಮಿಕರ ಕಾಯಕಕ್ಕೆ ಗೌರವ ಸಲ್ಲಿಸುವ ಜೊತೆಗೆ ಅವರ ಜೀವನಮಟ್ಟದ ಸುಧಾರಣೆಯ ಬಗ್ಗೆ ಚಿಂತನೆ ನಡೆಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶ.


‘ ಕಾಮ್ಗಾರ್ ದಿವಸ್ ‘,’ ಅಂತಾರಾಷ್ಟ್ರೀಯ್ ಶ್ರಮಿಕ್ ದಿವಸ್ ‘ ‘ಮೇ ಡೇ ‘ ಎಂಬೆಲ್ಲ ಹೆಸರುಗಳಿಂದ ಆಚರಣೆಗೊಳ್ಳುತ್ತಿರುವ ಈ ಕಾರ್ಮಿಕ ದಿನಾಚರಣೆ ಮೊದಲು ಆರಂಭವಾದದ್ದು 1889 ರಲ್ಲಿ. ಭಾರತದಲ್ಲಿ ಚೆನ್ನೈನ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ 1923 ರ ಮೇ ಒಂದರಂದು ಕಾರ್ಮಿಕರ ದಿನಾಚರಣೆಯನ್ನು ಮಾಡುವ ಮೂಲಕ ಶ್ರಮದಾಯಕ ಕಾಯಕ ಮಾಡುವ ವರ್ಗಕ್ಕಾಗಿ ಒಂದು ದಿನವನ್ನು ಮೀಸಲಿಟ್ಟಿತು. ದಕ್ಷತೆಯಿಂದ ಮಾಡುವ ಪ್ರತಿಯೊಂದು ಕೆಲಸವೂ ಗೌರವಾರ್ಹವೇ. ಅಂದುಕೊಂಡ ಕೆಲಸ ಕಾರ್ಯರೂಪಕ್ಕೆ ಬರದಿದ್ದಾಗಲೇ ಆ ಕೆಲಸದ – ಕೆಲಸಗಾರರ ಬೆಲೆ ಏನೆಂಬುದರ ಅರಿವು ನಮಗಾಗುವುದು. ದುಡಿದು ದಣಿದ ದೇಹಗಳಿಗೆ ವಿರಾಮ ನೀಡುವ ಸಲುವಾಗಿ ಮೇ ಒಂದರಂದು ರಜೆ ನೀಡಲಾಗುವುದಾದರೂ ಕಾರ್ಮಿಕರ ಹಕ್ಕು ಬಾಧ್ಯತೆಗಳ ರಕ್ಷಣೆಗಾಗಿ ಇರುವ ಕಾಯಿದೆಗಳ ಬಗ್ಗೆ ಅವರನ್ನು ಬೌದ್ಧಿಕವಾಗಿ ಜಾಗೃತಗೊಳಿಸಲು ಆ ದಿನ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಅವರ ಸಮಸ್ಯೆಗಳಿಗೆ ಕಿವಿಯಾಗಿ, ಅವರ ಬೇಡಿಕೆಗಳಿಗೆ ಸ್ಪಂದಿಸುವುದಕ್ಕಾಗಿಯೇ ಮೀಸಲಾದ ದಿನವಿದು.”ಸಾಮಾಜಿಕ ನ್ಯಾಯ ಹಾಗೂ ಎಲ್ಲರಿಗೂ ಯೋಗ್ಯವಾದ ಕೆಲಸ ” ಎನ್ನುವುದು ಈ ವರ್ಷದ ಕಾರ್ಮಿಕ ದಿನಾಚರಣೆಯ ಧ್ಯೇಯ ವಾಕ್ಯ.

ಮುಖ್ಯ ಉದ್ದೇಶಗಳು:

ಕಾರ್ಮಿಕರಿಗೆ ಕೆಲಸ ಮಾಡಲು ಅನುಕೂಲಕರ ವಾತಾವರಣವನ್ನು ಕಲ್ಪಿಸಿಕೊಡುವುದು.

ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು.

ಉದ್ಯೋಗದ ಅವಧಿ ಹಾಗೂ ವೇತನದಲ್ಲಿ ಶೋಷಣೆಗೆ ಒಳಗಾಗದಂತೆ ಕಾಯುವುದು.

ಕಾರ್ಮಿಕ ಕಾನೂನುಗಳನ್ನು ಬಳಪಡಿಸುವುದು

ಅವರಿಗೆ ಸಾಮಾಜಿಕ ಭದ್ರತೆಯನ್ನು ನೀಡುವುದು.

ಬಾಲ ಕಾರ್ಮಿಕ ಸ್ಥಿತಿಗೆ ಅವರ ಮಕ್ಕಳು ಬಾರದಂತೆ ಅವರಿಗೆ ಶಿಕ್ಷಣವನ್ನು ನೀಡಿ ಸುಶಿಕ್ಷಿತರನ್ನಾಗಿಸುವುದು.

ಅರೋಗ್ಯ ತಪಾಸಣೆ, ಉದ್ಯೋಗ ವಲಯದಲ್ಲಿ ಸುರಕ್ಷತೆ, ಕೆಲಸದ ಸ್ಥಿತಿ -ಗತಿಗಳ ಸುಧಾರಣೆ.

ಕಾರ್ಮಿಕರ ಧೈರ್ಯ, ಸಾಹಸ, ಕಠಿಣ ಶ್ರಮ ಇತ್ಯಾದಿಗಳ ಬಗ್ಗೆ ಅವರಿಗೇ ಅರಿವು ಮೂಡಿಸುವುದು.

ಅವರಿಗೆ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಸುವುದು.

ಇವೆಲ್ಲಕ್ಕಿಂತ ಮುಖ್ಯವಾಗಿ ಕಾರ್ಮಿಕರ ಘನತೆಯನ್ನು ಕಾಪಾಡುವುದು.
ಇವೆಲ್ಲ ಕಾರ್ಮಿಕರ ದಿನಾಚರಣೆಯ ಮೂಲ ಉದ್ದೇಶಗಳು.

ಬೌದ್ಧಿಕ ಚಿಂತನೆಯಿಂದ ಮಾಡುವ ಕಾರ್ಯಗಳಾಗಲೀ, ದೈಹಿಕ ಶ್ರಮದಿಂದ ಮಾಡುವ ಕೆಲಸಗಳಾಗಲೀ ಜನಜೀವನ ಸುಧಾರಣೆಗಾಗಿ ಕೈಗೊಳ್ಳುವ ಎಲ್ಲ ಕೆಲಸ – ಕಾರ್ಯಗಳೂ ಗೌರವಾರ್ಹವೇ. ಕೃಷಿ ವಲಯ. ಗಣಿಗಾರಿಕೆ, ಕಾರ್ಖಾನೆ, ಇತ್ಯಾದಿ ಕ್ಷೇತ್ರಗಳಲ್ಲಿ ದುಡಿಯುವ ಶ್ರಮಿಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗುತ್ತದೆ. ಮಾರ್ಟಿನ್ ಲೂಥರ್ ಹೇಳುವಂತೆ “ಸಮಾಜವನ್ನು ಮೇಲೆತ್ತುವ ಕಾರ್ಯಕ್ಕಾಗಿ ದೇಹ ಸವೆಸುವವರೆಲ್ಲ ಶ್ರಮಿಕರು”. ‘ಕಾರ್ಮಿಕನ ಶ್ರಮಕ್ಕೆ ಮೊದಲ ಗೌರವ ಸಲ್ಲಬೇಕು ‘ (Dignity of labour ) ಇದು ಗಾಂಧೀಜಿಯವರ ಚಿಂತನೆ ಕೂಡಾ ಆಗಿತ್ತು.

ಬೇರೆ ವಿಚಾರಗಳಿಗೆ ವಿದೇಶಗಳತ್ತ ದೃಷ್ಟಿ ಹರಿಸುವ ನಾವು ಎಲ್ಲ ಉದ್ಯೋಗಗಳೂ ಗೌರವಾರ್ಹ ಎನ್ನುವ ಅವರ ತತ್ವದತ್ತ ಗಮನ ಹರಿಸುವುದಿಲ್ಲ.  ಇಲ್ಲಿನಂತೆ ಬೇರೆ ರಾಷ್ಟ್ರಗಳಲ್ಲಿ ವೃತ್ತಿಯ ಆಧಾರದಲ್ಲಿ ವ್ಯಕ್ತಿಯ ಘನತೆ ನಿರ್ಧರಿತವಾಗುವುದಿಲ್ಲ. ಎಲ್ಲ ಕೆಲಸಗಳನ್ನು ಗೌರವದಿಂದ ಕಾಣುವ ಮನೋಭಾವವನ್ನು ಮಕ್ಕಳು ಬಾಲ್ಯದಿಂದಲೇ ಮೈಗೂಡಿಸಿಕೊಳ್ಳುವಂತೆ ಮಾಡಿದಾಗ ವೃತ್ತಿ ಗೌರವದ ಬಗ್ಗೆ ಅವರಿಗೆ ಮನವರಿಕೆಯಾಗುತ್ತದೆ.

ಕಾರ್ಖಾನೆಗಳೂ ಒಳಗೊಂಡತೆ ಹಲವಾರು ವಲಯಗಳಲ್ಲಿ ದುಡಿಯುವ ಕಾರ್ಮಿಕರು ಇಂದು ಬಹಳಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಆವಶ್ಯಕತೆಗಳು ಎನಿಸಿದ ಕನಿಷ್ಠ ಆಹಾರ, ಬಟ್ಟೆ, ವಸತಿ ಇವುಗಳನ್ನೂ ಪೂರೈಸಿಕೊಳ್ಳಲಾಗದ ಸ್ಥಿತಿ ಕೆಲ ಕಾರ್ಮಿಕರಿಗಿದೆ. ಸಂಘಟಿತ ವಲಯಗಳಲ್ಲಿನ ಕಾರ್ಮಿಕರಿಗೆ ಕೆಲವು ಅನುಕೂಲಗಳು ಲಭ್ಯವಾದರೂ ಅಸಂಘಟಿತ ವಲಯಗಳಲ್ಲಿ ದುಡಿಯುವ ಶ್ರಮಿಕರಿಗೆ ಮೂಲಭೂತ ಆವಶ್ಯಕತೆಗಳನ್ನೂ ಪೂರೈಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಈ ಬಗ್ಗೆ ನಾವು ಓದುತ್ತೇವೆ, ಕೇಳುತ್ತೇವೆ ಕೂಡಾ. ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆಗೆ ಸ್ಪರ್ಧಿಸಲಾಗದ ಕಾರ್ಮಿಕರು ಬದುಕಿಗೆ ಬೇರೆ ದಾರಿ ಇಲ್ಲದೆ, ವೇತನ ಕಾಯಿದೆ, ಸುರಕ್ಷತಾ ಕಾಯಿದೆ ಮೊದಲಾದವುಗಳ ಅರಿವೂ ಇಲ್ಲದೆ ಪ್ರತಿಕೂಲ ವಾತಾವರಣದಲ್ಲಿ ಕಡಿಮೆ ವೇತನಕ್ಕೆ ದುಡಿಯುವ ಪರಿಸ್ಥಿತಿ ನಮ್ಮ ದೇಶದಲ್ಲಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಕಾರ್ಯ ನಿಪುಣತೆ ಇಲ್ಲದ ಕಾರ್ಮಿಕರಿಗೆ ನಿರುದ್ಯೋಗ. ಅರೆ ಉದ್ಯೋಗ, ಬಡತನ, ಅಜ್ಞಾನಗಳಿಂದ ಹೊರ ಬರಲಾಗುತ್ತಿಲ್ಲ. ಬಹುಶಃ ದೇಶ ಅಭಿವೃದ್ಧಿ ಹೊಂದುತ್ತಾ ಹೋದಂತೆ ಇವರ ಜೀವನ ಮಟ್ಟವೂ ಸುಧಾರಣೆಗೊಳ್ಳಬಹುದು.

ಜಾತಿ ಆಧಾರದಲ್ಲಿ, ಆರ್ಥಿಕ ಸ್ಥಿತಿಗತಿಗಳ ನೆಲೆಯಲ್ಲಿ, ಗಣ್ಯ ವ್ಯಕ್ತಿಗಳ ಪ್ರಭಾವದಲ್ಲಿ, ಸಮಾಜಿಕ ಸ್ಥಾನ ಮಾನಗಳು ಲಭ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ದೇಹದ ಶಕ್ತಿಯನ್ನು ಕ್ರೋಢೀಕರಿಸಿ ದುಡಿಯುವ ಕಾರ್ಮಿಕರು ಮೂಲೆ ಗುಂಪಾಗಬಾರದು. ಅವರ ಕಾರ್ಯ ಕುಶಲತೆಯನ್ನು ಪ್ರಶಂಸಿಸುವ ಜೊತೆಗೆ ಅವರನ್ನೂ ಮೇಲೆತ್ತುವ, ಅವರ ಹಿತಾಸಕ್ತಿಯನ್ನು ಕಾಪಾಡುವ ಬಗ್ಗೆ ನಾವೆಲ್ಲರೂ ಚಿಂತನೆ ನಡೆಸೋಣ.


3 thoughts on “‘ಶ್ರಮಿಕರಿದ್ದರೆ ಸಾಮ್ರಾಜ್ಯ’ ಮೇ ದಿನದ ವಿಶೇಷ ಲೇಖನ ಜಯಲಕ್ಷ್ಮಿ.ಕೆ.

  1. ವಾಹ್ !!!! ಸೊಗಸಾದ ಬರಹ, ಅಭಿನಂದನೆಗಳು. ಹೌದು, ಪಾಶ್ಚಾತ್ಯರ degnity of labour ಬಗೆಗಿನ ಗೌರವಾದಾರ ಅನನ್ಯವಾದುದು. ನಮ್ಮ ದೇಶದಲ್ಲಿ ಅದು ತೀರಾ ವ್ಯತಿರಿಕ್ತ !!

  2. ಶ್ರಮಿಕರನ್ನು ಗೌರವದಿಂದ ಕಂಡರೆ ಅಷ್ಟೆ ಸಾಲದು..ಅವರ ಶ್ರಮಕ್ಕೆ ಪ್ರತಿಫಲ ಮುಖ್ಯ… ಶೋಷಣೆ ಮುಕ್ತ ಸಮಾಜ ನಿರ್ಮಾಣ ಸರಕಾರದ ಉದ್ದೇಶ ಆಗಬೇಕು.ಸಮಯೋಚಿತ ಬರಹ….ಅಭಿನಂದನೆಗಳು…

Leave a Reply

Back To Top