ಗಾಳೇರ್ ಬಾತ್

ಗಾಳೇರ್ ಬಾತ್-02

Indian cities led by Bengaluru among cheapest to live in: report

Housekeeping ನ ಆ ದಿನಗಳು.…….

        ಈ ಲೇಖನದ ತಲೆಬರಹ ಓದಿದರೆ ನಿಮಗೆ ಆಶ್ಚರ್ಯವಾಗಬಹುದು. ಓದಿದವರಿಗೆ ಅಷ್ಟೇಕೆ ಕೇಳಿದವರಿಗೂ ಕೂಡ ವಿಚಿತ್ರ ಅನಿಸುತ್ತದೆ. ಯಾಕೆಂದರೆ ನನ್ನ life ಯೇ ಒಂತರಾ ವಿಚಿತ್ರ. ನಾನೇನೋ ಅವತ್ತು ಟೂರ್ ಪೀಸ್ ಗಾಗಿ ಬಂದು ಬೆಂಗಳೂರು ಸೇರ್ಕೊಂಡ್ ಬಿಟ್ಟೆ. ಸೇರ್ಕೊಂಡ್ ಅನಂತರದಲ್ಲಿ hotel ನಲ್ಲಿ cleaner ಆಗಿ ಕೆಲಸ ನಿರ್ವಹಿಸಿದೆ. ಆ hotel ಮಾಲೀಕ ಸರಿಯಾಗಿ ಸಂಬಳ ಕೊಡುವುದಿಲ್ಲ ಎಂದು ತಿಳಿದ ಮೇಲೆ ಅನಿವಾರ್ಯವಾಗಿ ದುಡಿದ ಶ್ರಮ ಅಲ್ಲಿಯೇ ಬಿಟ್ಟು house keeping ಕೆಲಸಕ್ಕೆ ಸೇರಿದೆ. ನಿಜ ನನ್ನಂತೆ

ಊರು ಬಿಟ್ಟು ಬೆಂಗಳೂರು ಸೇರಿದ ಎಷ್ಟೋ ಯುವಕರು ಮೊದಲು ಕೆಲಸ ಗಿಟ್ಟಿಸಿಕೊಳ್ಳುವುದು ಬಹುತೇಕ ಹೋಟೆಲ್ಗಳಲ್ಲೇ! ಯಾಕೆಂದರೆ ಅಂತವರಿಗೆ ಬೆಂಗಳೂರು ಅಪರಿಚಿತ. ಎಲ್ಲಿ ವಸತಿ, ಎಲ್ಲಿ ನೀರು, ಎಲ್ಲಿ ಗಾಳಿ, ಎಲ್ಲಿ ಬಟ್ಟೆ ? ಇಷ್ಟೆಲ್ಲಾ ಕೊರತೆಗಳ ನಡುವೆ ಊರು ಬಿಟ್ಟು ಬಂದವರಿಗೆ ಬದುಕು ಕಟ್ಟಿಕೊಳ್ಳಲು ಹೋಟೆಲ್ಗಳೇ ಸೂಕ್ತ. ನಮ್ಮಂತ ಅಮಾಯಕರನ್ನೇ ಬಂಡವಾಳ  ಮಾಡಿಕೊಳ್ಳುವ ಕೆಲವೊಂದು ಹೋಟೆಲ್ ಮಾಲೀಕರು ಸಂಬಳ ಕೊಡದೆ ವಂಚಿಸಿದಾಗ ಅನಿವಾರ್ಯವಾಗಿ ಬೇರೆ ಉದ್ಯೋಗಗಳತ್ತ ಚಿತ್ತಾ ಅರಿಸಬೇಕಾಗುತ್ತದೆ. ಹಾಗೆಯೇ ನಾನು ಕೂಡ.

        ಅದೊಂದು big company. ಆ company ಹೆಸರು ನಾನು ಹೇಳುವುದಿಲ್ಲ. ಆದರೆ ಅದು ಬೆಂಗಳೂರಿನ ಮಧ್ಯಭಾಗದಲ್ಲಿರುವ ಶಾಂತಿನಗರದ ಅಂಚಿನಲ್ಲಿದೆ. ಅಲ್ಲಿಯೇ ನಾನು housekeeping  ದಿನಗಳನ್ನು ಕಳೆದಿದ್ದು. ನನಗೆ ಎಲ್ಲಾ ಹೊಸತು. ಒಂದು ರೀತಿಯ ವಿಚಿತ್ರ ಜನ. ಲೇ ಮಾವ, ಲೇ ಬಾವಾ ಎನ್ನುತ್ತಲೇ ಬೆಳೆದ ನನಗೆ “ಏನು ಗುರು ಏನು ಸಮಾಚಾರ” ಎನ್ನುವ ಮಾತುಗಳು ಅಷ್ಟೇ ವಿಸ್ಮಯವಾಗಿ ಕಾಡುತ್ತಿದ್ದವು. “ಸೂಳೇಮಗ”, “ಬೊಳಿಮಗ” ಎಂದು ಬಯ್ಯೂವ ನಮ್ಮ ಹಳ್ಳಿಯ ಭಾಷೆ ಕಾಮಿಡಿಗೂ ಸೈ ಜಗಳಕ್ಕೂ ಸೈ. ಆದರೇ ಬೆಂಗಳೂರಿನ “ಅವನಮ್ಮನ್” ಎನ್ನುವ ಶಬ್ದ ಜಗಳಕ್ಕೆ ಮಾತ್ರ ಸೀಮಿತವಾಗಿದ್ದು ನನಗೆ ಒಂಥರಾ ಭಾಷೆಯ ಗಮ್ಮತ್ತು ರುಚಿಸುತ್ತಿತ್ತು. ಹಾಗೋ ಹೀಗೋ ಹೇಗೋ ಮಾಡಿ ಕಂಪನಿಯಲ್ಲಿ housekeeping ಕೆಲಸವನ್ನು ಗಿಟ್ಟಿಸಿಕೊಂಡೆ. ನನಗೆ ಆಗ ಪರಿಚಿತರಾಗಿದ್ದು ತುಂಬ ಜನ ಸ್ನೇಹಿತರು. ಆದರೆ ಅವರೆಲ್ಲಾ ಈಗ ಸರಿಯಾಗಿ ನೆನಪಿಲ್ಲ. ಅಲ್ಲಿ ನಡೆದ ಘಟನೆಗಳು ಮಾತ್ರ ನನ್ನ ಮೆದುಳಿನಲ್ಲಿ ಅಳಿಸದೆ print ಆಗಿಬಿಟ್ಟಿವೆ. ಕೆಲಸಕ್ಕೇನೂ ಸೇರಿದೆ. ಕಂಪನಿಯವರು ವಸತಿಯನ್ನು ಕೊಟ್ಟಿದ್ದರು. ಆ ವಸತಿಯ ಬಂಗಲೆ ಹೇಗಿತ್ತೆಂದರೆ? ನನಗೂ ಈಗಲೂ ಕೂಡ ಪದಗಳು ಸಿಗುತ್ತಿಲ್ಲ. ಆ ಬಂಗಲೆಯನ್ನು ವರ್ಣಿಸಲು. ಬೆಂಗಳೂರಿನ ದೊಡ್ಡ ಚರಂಡಿ ಅದು. ಅದೆಷ್ಟೋ ಜನರ ನೋವುಗಳನ್ನು ತನ್ನ ಒಡಲಲ್ಲಿ  ತುಂಬಿಕೊಂಡು, ಅದೆಷ್ಟೋ ಜನರ ಮಲಿನವನ್ನು ತನ್ನ ಕೈಯಲ್ಲಿಟ್ಟುಕೊಂಡು ಹರಿಯುತ್ತಿತ್ತೆಂದರೆ ನನಗೂ ಈಗಲೂ ಕೂಡ ಆಶ್ಚರ್ಯ ವಾಗುತ್ತದೆ. ತುಂಬಾ ಶಾಂತತೆಯ ಸ್ವಭಾವ. ಸಮುದ್ರದಂತೆ ಭೋರ್ಗರೆಯುವುದಿಲ್ಲ. ನದಿಯಂತೆ ಕುಣಿಯುವುದಿಲ್ಲ. ತನ್ನ ಪಾಡಿಗೆ ತಾನು ಹೊರಟರೆ ನೋಡುವ ಜನರೆಲ್ಲ ಮೂಗಿನ ಮೇಲೆ ಕೈ ಇಟ್ಟು ಕೊಳ್ಳಬೇಕು. ಅಂತಹ ನಡಿಗೆ ಆ ಚರಂಡಿಯದ್ದು.

        ಅದರ ಪಕ್ಕದಲ್ಲಿಯೇ ನಮ್ಮ ಬಂಗಲೆ. ಬಂಗಲೆ ಎಂದರೆ ಸಾಮಾನ್ಯವಾಗಿ ಹತ್ತಾರು ಜನ. ಹೌದು ನಾವು ಕೂಡ ಅಲ್ಲಿ ಹತ್ತಾರು ಹುಡುಗರು ವಾಸಿಸುತ್ತಿದ್ದೆವು. ಆದರೆ ನಮ್ಮ ಬಂಗಲೆ ಗಾತ್ರದಲ್ಲಿ ಅಷ್ಟೊಂದು ವಿಶಾಲ ವಾಗಿರಲಿಲ್ಲ. ಆದರೆ ಅದರ ಮನಸ್ಸು ಮಾತ್ರ ತುಂಬಾ ದೊಡ್ಡದು. ಯಾಕೆಂದರೆ ಅಲ್ಲಿ ವಾಸಿಸುತ್ತಿದ್ದ ನಾವು ಬೇರೆ ಬೇರೆ ರಾಜ್ಯ, ಬೇರೆ ಬೇರೆ ಜಿಲ್ಲೇ, ಬೇರೆ ಬೇರೆ ಜಾತಿ, ಬೇರೆ ಬೇರೆ ಧರ್ಮದ ಹುಡುಗರು ಇದ್ದೆವು. ಯಾರನ್ನೂ ಕೂಡ ಪ್ರತ್ಯೇಕವಾಗಿ ನೋಡುತ್ತಿರಲಿಲ್ಲ. ಎಲ್ಲರನ್ನೂ ಒಂದೇ ಸಮವಾಗಿ ಕಾಣುವ ಆ ಬಂಗಲೆ ನಮಗೆ ಮೂಲಭೂತ ಸೌಕರ್ಯಗಳು ನೀಡಿದ್ದು ತುಂಬಾ ಕಡಿಮೆ. ಅದಕ್ಕಾಗಿಯೇ ನಾವು ಆ ದಿನ ಐಕ್ಯತೆಯಿಂದ ಇದ್ದೇವು ಅನಿಸುತ್ತದೆ. ವಸತಿ ಏನೋ ಕೊಟ್ಟಿದ್ದರು, ಆದರೆ ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕಿತ್ತು. ಬಿಡಿಗಾಸೂ ಇಲ್ಲದ ನನಗೆ ತಿಂಗಳ ಸಂಬಳ ಸಿಗುವರಿಗೂ ಹೇಗೆ ಹೊಟ್ಟೆಯನ್ನು ಸಂಭಾಳಿಸುವುದು ಎನ್ನುವ ಚಿಂತೆಯಲ್ಲಿದ್ದೆ. ನನಗೆ ತುಂಬಾ ಆತ್ಮೀಯರಾದ ಸ್ನೇಹಿತರು ಒಂದೆರಡು ದಿನ ಊಟದ ವ್ಯವಸ್ಥೆಯನ್ನು ನೋಡಿಕೊಂಡರು. ಅವರು ಕೂಡ ಎಷ್ಟು ದಿವಸ ನೋಡಿಕೊಂಡಾರು? ಹೀಗೆ ಆ ಒಂದು ದಿನ ಕೆಲಸ ಮುಗಿಸಿ ಕಂಪನಿಯ  main gate ನಲ್ಲಿ ಕುಳಿತಿದ್ದೆ. ನನ್ನ ಸಪ್ಪೆ ಮುಖ ನೋಡಿದ security guard ಒಬ್ಬರು ನನ್ನ ವಿಚಾರಿಸಿದಾಗ ಊಟಕ್ಕೆ ನನ್ನ ಹತ್ತಿರ ಹಣ ಇಲ್ಲ ಎಂದು ತಿಳಿಸಿದೆ. ಆಗ ಅವರು ಕಂಪನಿಗೆ ಬಂದ materialsನ ಖಾಲಿ ಬಾಕ್ಸ್ ಅಲ್ಲಿ ಬಿದ್ದಿರುವುದಾಗಿ ತೋರಿಸಿ, ಅವುಗಳನ್ನು ಗುಜರಿಗೆ ಹಾಕು. ಅದರಲ್ಲಿ ಬಂದಂತ ದುಡ್ಡು 50:50 ಎಂದರು. ನನ್ನ ಪಾಲಿಗೆ ಆ ದಿನದಿಂದ ಅವರು ದೇವರಾಗಿದ್ದರು. ನಾನು ಕೆಲಸ ಮುಗಿದ ನಂತರ ಪ್ರತಿದಿನ ರಟ್ಟಿನ ಬಾಕ್ಸ್ ಅನ್ನು ಗುಜರಿಗೆ ಹಾಕಿ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಒಂದೊಂದು ಸಾರಿ ರಟ್ಟಿನ ಬಾಕ್ಸ್ ಕಡಿಮೆ ಇದ್ದಾಗ ಐದೋ ಹತ್ತೋ ರೂಪಾಯಿ ಬರುವುದು. ಆಗ ನಾನು ಬಿಸ್ಕೆಟ್ ತಿಂದು ಜೀವನ ನಡೆಸಿದ್ದುಂಟು. ಅದೇನೇ ಇರಲಿ ಬಿಡಿ ಇವತ್ತಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಹಾಗೆ ಬದುಕುವರು ಉಂಟು ಎಂದು ಕೇಳಿದಾಗ ನನಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ನಾನು ಕೂಡ ಒಂದಾನೊಂದು ಕಾಲದಲ್ಲಿ ಆಗೆ ಬದುಕಿದ್ದೆ. ಹಾಗಾಗಿ ನನಗೆ ಇದು ಕೌತುಕ ಎನಿಸುವುದಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಂತಹ ಹಸಿವಿನ ಕುರಿತು ಸರ್ಕಾರದ ಕಣ್ಣು ತೆರೆಸಬೇಕು ಎಂಬ ಹಂಬಲ ಇವಾಗಲು ಕೂಡ ಇದೆ.

       ಹೇಗೋ ಮಾಡಿ ಮೊದಲ ತಿಂಗಳು ಮುಗಿಯಿತು. ಕೈಗೆ ಸಂಬಳ ಬಂದಿತ್ತು. ಮುಖದಲ್ಲಿ ಸ್ವಲ್ಪ ಮಂದಹಾಸ. Company ಯಲ್ಲಿಯೇ ಪರಿಚಿತರಾದ ಸ್ನೇಹಿತರ ಜೊತೆ ಸಂತೋಷದಿಂದ ದಿನ ಕಳೆಯುತ್ತಿದ್ದೆ. ನನಗೂ ಆಗಲೂ ಕೂಡ ಕವಿತೆ ಬರೆಯುವ ಹುಚ್ಚಿತ್ತು. ದೊಡ್ಡ ದೊಡ್ಡ ಕವಿತೆ ಅಲ್ಲದಿದ್ದರೂ ಚಿಕ್ಕ ಚಿಕ್ಕ ಸಾಲುಗಳನ್ನು ಬರೆಯುತ್ತಾ ಎಲ್ಲರನ್ನೂ impression ಮಾಡುತ್ತಿದ್ದೆ. ಆಗ  companyಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಮತ್ತು ಹುಡುಗರು ನನ್ನ ತುಂಬಾ ಇಷ್ಟ ಪಡುತ್ತಿದ್ದರು. ಆಗ ನನಗೆ ಪರಿಚಿತವಾದ ಕೆಲವೊಂದು ಹುಡುಗಿಯರೆಂದರೆ ಶಾಂತಿ, ಆಶಾ, ಜ್ಯೋತಿ ಇವರೆಲ್ಲಾ ಇನ್ನೂ ಹರೆಯದ ಹುಡುಗಿಯರು. ಕಮಲ, ಸುಜಾತ ಇವರು ಮದುವೆಯಾದ ಆಂಟಿಯರು. ಇವರನ್ನೇ ನಾನು ಯಾಕೆ ಇಲ್ಲಿ ಹೇಳುತ್ತೇನೆ ಎಂದರೆ ಇವರದ್ದೆಲ್ಲಾ ಒಂದೊಂದು ಕಥೆ ಉಂಟು.

           ನಮ್ಮ ಬಂಗಲೆಯಲ್ಲಿದ್ದಿದ್ದು ನಾವೆಲ್ಲ  bachelors. ನಾವ್ಯಾರು ಅಡುಗೆ ಮಾಡಿಕೊಳ್ಳುತ್ತಿರಲಿಲ್ಲ. ಅಡುಗೆ ಮಾಡಿಕೊಳ್ಳಲು ಆ ಬಂಗಲೆಯಲ್ಲಿ ಅಡುಗೆಮನೆಯ ವ್ಯವಸ್ಥೆಯೇ ಇರಲಿಲ್ಲ. ಸರಿಯಾಗಿ bathroom ಮತ್ತು toilet ಇಲ್ಲದ ಬಂಗಲೆಯಲ್ಲಿ ಅಡುಗೆಮನೆ ಎಂಬುದು ಕನಸಿನ ಮಾತೇ ಎಂದೇ ಹೇಳಬಹುದು. ಇನ್ನೂ ಮಳೆಗಾಲ ಬಂತೆಂದರೆ ಸಾಕು ಮಳೆರಾಯ ನಮ್ಮನ್ನೆಲ್ಲ ಮುತ್ತಿಕ್ಕಿಬಿಡುತ್ತಿದ್ದ.‌ ಅಂತದ್ರಲ್ಲಿ ನಾವು ಎಲ್ಲಿಂದ ಅಡುಗೆ ಮಾಡಿಕೊಳ್ಳುವುದು? ಹಾಗಾಗಿ ನಮ್ಮ ದಿನನಿತ್ಯದ ಊಟ ಹೋಟೆಲ್ಗಳಲ್ಲಿಯೇ ಸಾಗುತ್ತಿತ್ತು. ಇಲ್ಲ ಕಂಪನಿ ಕೊಡುವ pocket ಆಹಾರದಲ್ಲಿಯೇ ಮುಗಿದುಬಿಡುತ್ತಿತ್ತು. ಇದೆಲ್ಲದರ ನಡುವೆ ಆಶಾ ಮತ್ತೆ ಜ್ಯೋತಿ ಎಂಬ ಹುಡುಗಿಯರು ಒಂದು business ಶುರು ಮಾಡಿಕೊಂಡಿದ್ದರು. Business ಅಂದ ತಕ್ಷಣ ನಿಮ್ಮ mindನಲ್ಲಿ ಏನೇನೋ ವಿಚಾರಗಳು ಓಡಾಡುವುದು ಬೇಡ. ಯಾಕಂದ್ರೆ ನೀವು ತಿಳಿದುಕೊಂಡಿರತಕ್ಕಂತ business ಅಂತದ್ದೇನಿಲ್ಲ.

       ಕೆಲಸದ ಮಧ್ಯೆ tifin ಗೆಂದು ಬಿಡುವು ವಿರುತ್ತದೆ. ಆ ಕಂಪನಿಯ building ತುಂಬಾ ದೊಡ್ಡದು. ಅದರ ಕೆಳಗಿನ ಅಂತಸ್ತಿನಲ್ಲಿ ಸಾವಿರಾರು vehicles ಗಳನ್ನು parking ಮಾಡಿರುತ್ತಾರೆ. ಆ parking ಸ್ಥಳದಲ್ಲಿ ನಾವು ಊಟ ಮತ್ತು ತಿಂಡಿ ಮುಗಿಸುತ್ತಿದ್ದೆವು. ಅಷ್ಟೇ ಏಕೆ ಒಮ್ಮೊಮ್ಮೆ ನಮ್ಮ ಜೊತೆಗೆ ಕೆಲಸ ಮಾಡತಕ್ಕಂತ ladies ಮತ್ತು ಹುಡುಗಿಯರು, vehicle ಗಳ ಮರೆಯಲ್ಲಿ ತಮ್ಮ ಬಟ್ಟೆಗಳನ್ನು ಬದಲಿಸಿ uniform ತೊಟ್ಟು ಕೊಂಡಿದ್ದುಂಟು. ಕನಿಷ್ಠ ಬಟ್ಟೆ ಬದಲಿಸಲು room ಇಲ್ಲದ ನಾವುಗಳು ಕೂಡ ಆ ಒಂದು  big company employees ಎಂದೇಳಿ ಕೊಳ್ಳುವುದಷ್ಟೇ ನಮಗೆ ಹೆಮ್ಮೆ. ಅದಕ್ಕೇನೇ ಇರಬೇಕು ಕಾರ್ಮಿಕರ ಸಂಘಗಳು ಹುಟ್ಟಿಕೊಂಡಿದ್ದು ಅನಿಸುತ್ತದೆ.

      ಅದೊಂದು ದಿನ. ತಿಂಡಿ ತಿನ್ನುವ ಸಮಯ. ಕೆಲವು ಹುಡುಗರು ತಿಂಡಿ ತಿನ್ನಲು ಹೊರಗಡೆ ಹೋಗಿದ್ದರು. ಕೆಲವರು parking ಸ್ಥಳದಲ್ಲಿಯೇ ತಿಂಡಿ ತಿನ್ನುತ್ತಿದ್ದರು. ನನಗೆ ಹಸಿವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ನನ್ನ ಜೇಬಿನಲ್ಲಿ ದುಡ್ಡಿಲ್ಲ. ಏನು ಮಾಡುವುದೆಂದು ಯೋಚಿಸುತ್ತಾ….  ಪ್ರಕಾಶನೂ ಕೂಡ ನನ್ನ ಆಗೇ ನಿನ್ನೆ ದುಡ್ಡಿಲ್ಲ ಎಂದು ಹೇಳಿದ್ದ. ಹಾಗಿದ್ದರೆ ಅವನು ಈ ದಿನ ತಿಂಡಿಗೆ ಏನು ಮಾಡುವನು! ಎಂದು ಇಬ್ಬರೂ ಸೇರಿ ಯಾರ ಹತ್ತಿರ ನಾದರೂ ಸಾಲ ಕೇಳೋಣ ಎಂದುಕೊಂಡು  parking ಸ್ಥಳಕ್ಕೆ ಬಂದೆ. ಅಲ್ಲಿ ನೋಡಿದರೆ ಆಶಾ ಮತ್ತು ಪ್ರಕಾಶ ತುಂಬಾ ಸಲಿಗೆಯಿಂದ ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಏನೇನೋ ಮಾತನಾಡುತ್ತಾ ಆಗಾಗ ಕಿಲಕಿಲನೆ ನಗುತ್ತ ತಿಂಡಿ ತಿನ್ನುತ್ತಿದ್ದರು. ಇದನ್ನು ಕಂಡ ನನಗೆ ಅವರ ಪಕ್ಕ ಹೋಗಿ ಮಾತನಾಡಿಸಬೇಕೆಂದು ಅನಿಸಲಿಲ್ಲ. ಪಾಪ ಅವನೋ ಎಲ್ಲಿಂದಲೋ ನನ್ನ ಆಗೆ ಬಂದ ಬಡಪಾಯಿ. ಅವನಾದರೂ ಸುಖವಾಗಿ ತಿನ್ನಲಿ ಎಂದು ಮನಸ್ಸು ಹೇಳುತ್ತಿದ್ದರೆ. ನನ್ನ ತಲೆ ಏನೇನೋ ಯೋಚಿಸುತ್ತಿತ್ತು. ಇದು ಹೀಗೆಯೇ ಪ್ರತಿದಿನ ನಡೆಯುತ್ತಲೇ ಇತ್ತು.

        ಮತ್ತೊಂದು ದಿನ.  ನಾನು ಆಶಾ ಮತ್ತು ಪ್ರಕಾಶ ತಿಂಡಿ ತಿನ್ನುವುದನ್ನು ನೋಡುತ್ತ ಕುಳಿತಿದ್ದೆ. ಆ ದಿನ ಪ್ರಕಾಶ ತಿಂಡಿಯನ್ನು ತಿಂದು ಬೇಗನೇ ಹೊರಟು ಹೋದ. ಸ್ವಲ್ಪ  ಹೊತ್ತಿನ ನಂತರ  ಆಶಾಳ ಹತ್ತಿರ ಪ್ರಭು ಕೂಡ ಬಂದು ಕುಳಿತ. ನಾನು ಇವನ್ಯಾಕಪ್ಪಾ ಇವಳ ಹತ್ತಿರ ಹೋದನೆಂದು ಯೋಚಿಸುತ್ತಿರುವಾಗಲೇ ಆಶಾ ತನ್ನ bagನಿಂದ tifin box ಅನ್ನು ತೆಗೆದು ಅವನ ಕೈಗೆ ಕೊಟ್ಟಳು. ಅವನು ಕೂಡ ನಗುನಗುತ್ತಲೇ boxನ್ನು ಬಿಚ್ಚುತ್ತಾ ತಿಂಡಿಯನ್ನು ತಿಂದು ಹೊರಟುಹೋದ. ಸ್ವಲ್ಪ ಹೊತ್ತಿನ ನಂತರ ಆಶಾಳೂ ಕೂಡ ಅಲ್ಲಿಂದ ಹೊರಟು ಹೋದಳು. ನನ್ನ maind ನಲ್ಲಿ ಲೆಕ್ಕಾಚಾರಗಳು ತುಂಬಾ ನಡೆಯಲಿಕ್ಕೆ ಶುರುವಿಟ್ಟುಕೊಂಡವು. ನಾನು ಈ ಮೊದಲು mostly ಪ್ರಕಾಶ ಮತ್ತು ಆಶಾ love ಮಾಡುತ್ತಿರಬಹುದೇನೋ! ಅದಕ್ಕಾಗಿಯೇ ಆಶಾ ಪ್ರಕಾಶನಿಗೆ ಪ್ರತಿದಿನ ತಿಂಡಿ ತಂದುಕೊಡುತ್ತಿದ್ದಳು ಎಂದುಕೊಂಡಿದ್ದೆ. ಆದರೆ ಇವತ್ತು ಪ್ರಭುವಿಗೂ ಕೂಡ ತಿಂಡಿ ಕೊಟ್ಟಿದ್ದರಿಂದ ನನ್ನ ಮನಸ್ಸಿನಲ್ಲಿ ಅವಳ ಬಗ್ಗೆ ಬೇರೆನೆ ಯೋಜನೆಗಳು ಶುರುವಾದವು. ಇವಳೇನು ದ್ರೌಪದಿನ ಇಬ್ಬಿಬ್ಬರನ್ನು love ಮಾಡುತ್ತಿದ್ದಾಳೆ. ಯಪ್ಪಾ ಶಿವನೇ ಇಂಥವರನ್ನೆಲ್ಲ ಆ ದೇವರೇ ಕಾಪಾಡಬೇಕು. ಎಂದು ಯೋಚಿಸುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಪ್ರಕಾಶ ಬಂದು;

  “ಏನೋ ಗಾಳೇರ ಯಾಕೆ ಇಲ್ಲಿ ಕೂತಿದೀಯ, ಟಿಫಿನ್ ಆಯ್ತಾ” ಎಂದಾಗ ನನಗೆ ತಡೆದುಕೊಳ್ಳಲಾಗದೆ,

    “ನನಗೆಲ್ಲಿಂದ ಟಿಫಿನಪ್ಪ, ನಿಮಗೇನು ನಿಮ್ಮ ಹುಡುಗಿ ಆಶಾ ಇದ್ದಾಳೆ. ಮನೆಯಿಂದ ನಿಮಗೆ ಬೇಕುಬೇಕಾದದ್ದು ತಂದು ಮಾಡಿಕೊಡುತ್ತಾಳೆ. ಸೌಜನ್ಯಕ್ಕಾದರೂ ಒಂದು ಮಾತು ಕರೆಯುವುದಿಲ್ಲ ಲೋ ಪ್ರಕಾಶ” ಎಂದುಬಿಟ್ಟೆ.

     “ಹೇ ಅವಳೇನು ಪುಕ್ಸಟ್ಟೆ ಕೊಡಲ್ಲಪ್ಪ….. ಟಿಫಿನ್ ಗಾಗಿ ತಿಂಗಳ ಸಂಬಳ ಆದಮೇಲೆ ಒಂದು ಟಿಫಿನ್ ಗೆ ಮೂವತ್ತು ರೂಪಾಯಿ ಅಂತ ಲೆಕ್ಕ ಹಾಕಿಕೊಂಡು ಇಸ್ಕೋತಾಳೆ ನಿನಗೆ ಬೇಕಿದ್ರೆ ಹೇಳು ನಾಳೆಯಿಂದ ಇನ್ನೊಂದು box extra ತರಲಿಕ್ಕೆ ಹೇಳತೀನಿ” ಅಂತ ನನ್ನ ಉತ್ತರಕ್ಕೂ ಕಾಯದೆ ಹೊರಟು ಹೋದ.

     ನಾನು ಆಶಾ ಮತ್ತು ಪ್ರಕಾಶ love ಮಾಡುತ್ತಿರಬಹುದು ಎಂದುಕೊಂಡಿದ್ದೆ. ಪ್ರಭು ಕೂಡ ಅವಳ ಹತ್ತಿರ ತಿಂಡಿ ತಿನ್ನುತ್ತಿದ್ದು ನೋಡಿ ಇವಳೊಬ್ಬ ವೆಬಿಚಾರಿ ಎಂದುಕೊಂಡಿದ್ದೆ. ಹೀಗಿರುವಾಗ ನೀವು business ಅಂದ ತಕ್ಷಣ ಬೇರೇನೋ ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ ಬಿಡಿ. ಏನೇ ಆಗಲಿ ಹಿರಿಯರು ಹೇಳಿದಂತೆ “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು” ಎನ್ನುವ ಗಾದೆ ಆಗ ನನಗೆ ಮನದಟ್ಟಾಯಿತು. ಹೀಗೆ ಆಶಾ companyಯಲ್ಲಿ ಕೆಲಸ ಮಾಡುವುದಷ್ಟೇ ಅಲ್ಲದೆ companyಯಲ್ಲಿ ಊರು ಬಿಟ್ಟು ಸೇರಿಕೊಂಡ ನಮ್ಮಂಥ ಎಷ್ಟೋ ಯುವಕರಿಗೆ ಊಟ ಹಾಕುತ್ತಾ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದು ನೋಡಿದರೇ ದೇವರು ಎಂತಹ ಕ್ರೂರಿ ಎನ್ನದೇ ಅನಿಸಲು ವಿಧಿಯಿಲ್ಲ.

**************************

ಮೂಗಪ್ಪ ಗಾಳೇರ್

,,,

4 thoughts on “ಗಾಳೇರ್ ಬಾತ್

Leave a Reply

Back To Top