ಪ್ರಸ್ತುತ

ಅವಕಾಶ  –  

ವಂಚಿತರ ಗೆಲುವಿನ ಹೆಬ್ಬಾಗಿಲು!

National Museum of Women in the Arts | Home Page

ವಸುಂಧರಾ ಕದಲೂರು

  ಜನರು ಅವಕಾಶ ವಂಚಿತರಾಗಲು ಇರುವ ಕಾರಣಗಳು ಬಹಳ ಸಲ ಕ್ಷುಲ್ಲಕವಾಗಿರುತ್ತವೆ. ಅದರಲ್ಲೂ ಬಣ್ಣ, ಹಣ, ಅಧಿಕಾರ, ಜಾತಿ- ಇತರೆ ತಾರತಮ್ಯಗಳು ಪ್ರಮುಖವಾದವು. ಆದರೆ ಕೇವಲ ‘ಹೆಣ್ಣು’ ಎಂಬ ಕಾರಣಕ್ಕೇ ಅವಕಾಶ ವಂಚಿತರಾಗುವುದು ಇದೆಯಲ್ಲಾ ಇದಕ್ಕೆ ಏನೆನ್ನುವುದು..? 


          ತಮಗೆ ದೊರಕಿದ ಒಂದು ಸದಾವಕಾಶದಿಂದ ಎತ್ತರದ ಸಾಧನೆ ಮಾಡಿರುವ ಸುಧಾಮೂರ್ತಿ, ಕಿರಣ್ ಮಜುಂದಾರ್, ಹಿಮಾದಾಸ್ ಗುಪ್ತಾ, ಸಾನಿಯಾ ಮಿರ್ಜಾ, ಪಿ ಟಿ ಉಷಾ, ಪಂಢರೀಬಾಯಿ, ಲಕ್ಷ್ಮೀ, ಮಾಧವಿ, ಮಾಧುರಿ ದೀಕ್ಷಿತ್, ವೈದೇಹಿ, ತ್ರಿವೇಣಿ, ಬಿ. ಜಯಶ್ರೀ, ಎಸ್. ಜಾನಕಿ, ಬಿ ಆರ್ ಛಾಯಾ, ಡಾ. ಆಶಾ ಬೆನಕಪ್ಪ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ. ಮಲ್ಲಿಕಾ ಘಂಟಿ, ಡಾ. ಲೀಲಾ ಅಪ್ಪಾಜಿ, ಡಾ. ಉಷಾದಾತಾರ್, ಮಂಜುಭಾರ್ಗವಿ… ಹೀಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಜಗತ್ತು ಹೆಮ್ಮೆಯಿಂದ ಮೆಚ್ಚುತ್ತದೆ. ಆದರೆ, ಅದೆಷ್ಟೋ ಹೆಣ್ಣು ಜೀವಗಳು ಬದುಕುವ ಅವಕಾಶವೇ ಸಿಗದೆ, ತಾವು ಜೀವಂತ ಇರುವ ಕುರುಹನ್ನು ಬಿಟ್ಟುಕೊಡಲಾಗದೇ ಹೇಗೋ ದಿನದೂಡುತ್ತಿರುವುದನ್ನು ನಿರಾಕರಿಸಲಾಗುವುದೇ?
   ತಾವೂ ಸಹ ಇತರರಂತೆಯೇ ಅಪಾರ ಸಾಮರ್ಥ್ಯ- ಸಾಧ್ಯತೆಗಳನ್ನು ಹೊಂದಿರುವವರು, ಅನನ್ಯ ಪ್ರತಿಭೆಗಳ ಪ್ರತಿನಿಧಿಗಳಾಗಿರುವವರು, ತಮಗೂ ಸಹ ಸೂಕ್ತ ವೇದಿಕೆ ದೊರೆತರೆ ಜಗಮಗಿಸಿ ಮಿಂಚಬಲ್ಲೆವು ಎನ್ನುವ ಹಲವಾರು ಪ್ರತಿಭಾನ್ವಿತರು ನಮ್ಮೊಡನಿದ್ದಾರೆ. ಆದರೆ ಅವರು ಅವಕಾಶ ವಂಚಿತರಾಗಿ ಅಜ್ಞಾತವಾಸ ಮಾಡುತ್ತಿದ್ದಾರೆ.  ಹೀಗೆ ಕತ್ತಲಲ್ಲಿ ಕೊಳೆಯುತ್ತಿರುವ ಚೈತನ್ಯಗಳನ್ನು ಬೆಳಕಿನ ಬಯಲಿಗೆ ತರುವುದು ಹೇಗೆ? 


           ನಮ್ಮ ನಡುವೆಯೇ ಹಲವು ಬಗೆಯಲ್ಲಿ ಅವಕಾಶ ವಂಚಿತರಾಗಿರುವವರಿದ್ದಾರೆ. ಒಂದಷ್ಟು ತಾಳ್ಮೆ ಹಾಗೂ ಅಂತಃಕರುಣೆಯಿಂದ ನೋಡಿದರೆ ಅಂತಹವರು ಕಣ್ಣಿಗೆ ಕಂಡಾರು…

    ಆಕೆ ನನ್ನ ಅಕ್ಕನ ಕಾಲೇಜು ಗೆಳತಿ. ಆಕೆಗೆ ಸಂಬಂಧದಲ್ಲೇ ಮದುವೆಯಾಗಿ ಊರಿನಲ್ಲೇ ಉಳಿದವಳು. ಕಾಲೇಜಿನ ಸಾಂಸ್ಕೃತಿಕ ವೇದಿಕೆಗಳಲಿ ಮಿಂಚುತ್ತಿದ್ದವಳಿಗೆ ಪದವಿ ಶಿಕ್ಷಣ ಮುಗಿಸಿ, ಮುಂದೆಯೂ ಹೆಚ್ಚು ಓದಿ, ಉದ್ಯೋಗ ಹಿಡಿಯುವ ಮಹದಾಸೆ ಇತ್ತು. ಅದೇನಾಯಿತೋ ತಿಳಿಯದು, ಪದವಿಯ ಕೊನೆಯ ವರ್ಷದಲ್ಲಿ ಮದುವೆಯಾಗಿ ಹೋಯಿತು. ವರ್ಷ ಕಳೆಯುವಷ್ಟರಲ್ಲಿ ಒಂದು ಮಗುವಿನ ತಾಯಿಯೂ ಆದಳು. ಇನ್ನು ಪದವಿ ಮುಗಿಸುವುದಂತೂ ಅವಳ ಕನಸಾಗಿ ಉಳಿಯಿತು. ಕಳೆದ ವರ್ಷ ಯಾವುದೋ ಸಮಾರಂಭದಲ್ಲಿ  ಭೇಟಿಯಾದಾಗ ಆಕೆ ಹೇಳಿದ್ದಿಷ್ಟಿ, “ಮಗು ಬೆಳೆದು ದೊಡ್ಡದಾಯ್ತು. ಈಗಷ್ಟೇ ಎಜುಕೇಷನ್ ಕಂಪ್ಲೀಟ್ ಆಯ್ತು.  ಇನ್ನು ದೊಡ್ಡ ನಗರಕ್ಕೆ ಹೋಗಿ ಉದ್ಯೋಗ ಹಿಡಿದು ಲೈಫ್ ಸೆಟಲ್ ಮಾಡಿಕೊಳ್ಳಬೇಕನ್ನೋ ಹುಮ್ಮಸ್ಸಿನಲ್ಲಿದೆ. ನಂಗೆ ಖುಷಿ. ಆದರೆ ಮನೇಲಿ ನಾನು ಒಬ್ಬಳೇ ಉಳಿದೆ. ಈಗ ನನಗೂ ಏನಾದ್ರು ಮಾಡಬೇಕನ್ನೋ ಆಸೆಯಾಗ್ತಿದೆ. ಅಟ್ ಲೀಸ್ಟ್ ಡಿಗ್ರೀನಾದ್ರೂ ಕಂಪ್ಲೀಟ್ ಮಾಡ್ಕೊಳ್ಳೋಣ ಅಂತ” ಎಂದಳು.            ಆ ದಿನವೆಲ್ಲಾ ಆಕೆಯದ್ದೇ ಗುಂಗು ನನಗೆ. ಆಕೆಯ  ಪಾಸಿಟೀವ್ ನೇಚರ್ ನೋಡಿ ಖುಷಿ. ಆದರೆ ಅಪಾರ ಉತ್ಸುಕಳಾಗಿರುವ ಆಕೆಗೆ, ಹಿಂದೆ ಎಂದೋ ಅರ್ಧಕ್ಕೇ ಕೊನೆಗೊಂಡಿದ್ದ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವ ಚಿಗುರಿದ ಕನಸು ಹೆಮ್ಮರವಾಗಲು ಸಾಧ್ಯವಾದರೆ…! ಅದಕ್ಕಾಗಿ ಆಕೆಗೊಂದು ಅವಕಾಶ ಬೇಕಿದೆ. 


          ನಾಗರತ್ನ ನನ್ನ ಹೈಸ್ಕೂಲಿನ ಸಹಪಾಠಿ. ಉತ್ತಮ ಕ್ರೀಡಾಪಟು. ಓಟದಲ್ಲಂತೂ ಚಿಗರೆಯೇ. ಶಾಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದವರೆಗೆ ಹೋಗಿದ್ದವಳು..!ಮುಂದೇನಾಯಿತೋ ಗೊತ್ತಿಲ್ಲ. ಆಕೆ ಪಿ ಯು ಸಿ ಗೂ ಸಹ ಕಾಲೇಜಿನ ಮೆಟ್ಟಿಲು ಹತ್ತಲಿಲ್ಲ. ಡಾಕ್ಟರಳಾಗಲು ಆಕೆಗೆ ಬಹಳ ಆಸೆಯಿತ್ತು. ಸಾಧನೆಯ ಮೆಡೆಲುಗಳಿಗೆ ತಲೆಬಾಗಬೇಕಾದವಳು ಅದಾವ ಜವಾಬ್ದಾರಿಯ ನೊಗ ಎಳೆಯಲು ತನ್ನ ಹೆಗಲು ನೀಡಿದಳೋ..  ಮನೆಯ ಬಡತನ, ನೆರವು- ಅರಿವು- ಅವಕಾಶದ ಕೊರತೆಯೋ ತಿಳಿಯದು. ಆ ಚೇತನ ಈಗ ಅಸಮಾಧಾನದ ನಿಟ್ಟುಸಿರಿಡುತ್ತಾ ಅದೆಲ್ಲಿ ಬೇಯುತ್ತಿದೆಯೋ. ಪ್ರತಿಭಾವಂತ ಹುಡುಗಿಯೊಬ್ಬಳು ಅವಕಾಶ ವಂಚಿತಳಾಗಿ ಇತಿಹಾಸ ನಿರ್ಮಿಸುವುದನ್ನು ನಾವು ಕಾಣದಾದೆವು.


                 ಸುಗುಣಾಗೆ ಇಬ್ಬರು ಹೆಣ್ಣುಮಕ್ಕಳು. ಸಾಕಷ್ಟು ಸ್ಥಿತಿವಂತರಾಗಿದ್ದ ಆಕೆಯ ಮನೆಯವರಿಗೆ ತಮ್ಮ ವಂಶೋದ್ಧಾರಕ್ಕಾಗಿ ಒಂದು ಗಂಡು ಮಗು ಬೇಕೆಂದು ಮುಂದಿನ ಮೂರು ಗರ್ಭಧಾರಣೆಯಲ್ಲೂ ನಿಷೇಧಿತ ಭ್ರೂಣಲಿಂಗಪತ್ತೆ ಮಾಡಿಸುವ ಮೂಲಕ ಆ ಭ್ರೂಣ ಹೆಣ್ಣೆಂದು ತಿಳಿದುಕೊಂಡು  ಸತತ ಮೂರು ಗರ್ಭಪಾತ ಮಾಡಿಸಿದ್ದರು. ಇದರಲ್ಲಿ ಆಕೆಯ ತಾಯಿ ಮನೆ ಹಾಗೂ ಅತ್ತೆ ಮನೆಯವರ ಪಾಲು ಸಮವಾಗಿತ್ತು. ಮನೆತನದ ಮರ್ಯಾದೆಗಾಗಿ, ಆರ್ಥಿಕ ಸ್ವಾವಲಂಬನೆಯಿಲ್ಲದೆ, ಹೆಚ್ಚಿನ ವಿದ್ಯಾನುಕೂಲವಿಲ್ಲದೆ ಸುಗುಣಾ ನಿರಂತರ ಗರ್ಭಧರಿಸುವಿಕೆ ಹಾಗೂ ಅವೈಜ್ಞಾನಿಕ ಗರ್ಭಾಪಾತಗಳಿಂದಾಗಿ, ತನ್ನ ಎರಡು ಹೆಣ್ಣುಮಕ್ಕಳನ್ನು ಇದೀಗ ಮಲತಾಯಿಯ ವಶಕ್ಕೊಪ್ಪಿಸಿ ತಾನು ಯಮನ ಪಾಲಾದಳು. ಸಹಜವಾಗಿ ಬದುಕುವ ಅವಕಾಶದಿಂದಲೇ ವಂಚಿತಳಾದಳು. 


   ಇಂತಹ ಹಲವು ವಿಚಾರಗಳನ್ನು ಎಲ್ಲಿಯೋ ನೋಡಿದಾಗ, ಕೇಳಿದಾಗ, ಓದಿದಾಗ ನಮ್ಮಹೃದಯಭಾರವಾಗುವುದು ಸಹಜ. ಮನಸ್ಸು ಸಹಾಯಕ್ಕೆ ತುಡಿಯುವುದೂ ಉಂಟು. ಹಾಗೆಂದ ಮಾತ್ರಕ್ಕೆ ಅವಕಾಶ ವಂಚಿತರಾಗಿರುವ ಎಲ್ಲರಿಗೂ ನಾವೊಬ್ಬರೇ ಅವಕಾಶ ಕಲ್ಪಿಸಿ ಕೊಡಲಾಗದು. ನಿಜ, ಆದರೆ, ಯಾರಿಗೆ ಅವಕಾಶವಾಗುವುದೋ ಅವರು ಇತರರಿಗೆ ಸಹಾಯ ಮಾಡಬಹುದಲ್ಲವೇ? ಯಾರು ತಮಗೆ ಈಗಾಗಲೇ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಮೇಲೇರಿದ್ದಾರೆಯೋ ಅವರ ಬಗ್ಗೆ ವೃಥಾ ಕರುಬದೇ ಅವರ ಸಾಧನೆಗೆ  ಸಹೃದಯ ಮೆಚ್ಚುಗೆಯನ್ನು ನೀಡಬಹುದಲ್ಲವೇ! ಯಾರು ಇನ್ನೂ ಬದುಕಿನಲ್ಲಿ ಮೇಲೆ ಬರುವ ಪ್ರಯತ್ನದಲ್ಲಿದ್ದಾರೆಯೋ ಅವರಿಗೆ ನಿರ್ವಂಚನೆ ಭರವಸೆಯನ್ನು ತುಂಬಬಹುದಲ್ಲವೇ? ಬನ್ನಿ ಈ ಶುಭಕಾರ್ಯಕ್ಕೆ ಕೈಜೋಡಿಸೋಣ.

**************


Leave a Reply

Back To Top