ಕಥಾಯಾನ

ಹದಿನೆಂಟು ವರುಷದ ಬಳಿಕ ಸಿಕ್ಕವಳು…

Green-leafed Tree Under a Calm Blue Sky

ಮಲ್ಲಿಕಾರ್ಜುನ ಕಡಕೋಳ

ಹದಿನೆಂಟು ವರುಷದ ಬಳಿಕ ಸಿಕ್ಕವಳು

 ಆದರೆ ಮೊನ್ನೆ ಸಂಜೆ ಸಿಕ್ಕಾಗ  ತುಂಬಾನೇ ಚೆಂದ ಕಾಣಿಸುತ್ತಿದ್ದಳು.  ಹದಿನೆಂಟು ವರುಷಗಳ ಹಿಂದೆ ಅವಳಿಗೆ  ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ.  ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ  ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ  ಹಿಗ್ಗುವ ಸಂತಸವೇ ಮೊನ್ನೆ ಮತ್ತೆ  ನಮ್ಮಲ್ಲಿ ಚೇತನಗೊಂಡಿತು.

ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ  ಕತೆಗಳಲ್ಲಂತೆ  ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ  ತರುಬಿದೆ. ಕುದುರೆಯೆಂದರೆ  ಕುದುರೆಯಲ್ಲ. ಕಪ್ಪು ಕಲರಿನ  ಹೀರೋ  ಹೊಂಡಾ…. 

ಜಾಂಬಳ ವರ್ಣದ ಕಾಟನ್ ಸೀರೆ, ತಿಳಿ ಅರಿಶಿಣ ಬಣ್ಣದಂಚಿನ ಕೆಂಪು ಕುಪ್ಪಸ  ಅವಳ ತುಂಬಿದ ಮೈ ತುಂಬಿಕೊಂಡಿದ್ದವು. ತಲೆತುಂಬಾ ಅರೆನೆರೆತ ಕೂದಲು. ಥೇಟ್  ಹಳ್ಳಿಯ ಮುಗುದೆ – ಗೌಡತಿಯಂತೆ  ಜವಾರಿತನ ಬದುಕಿದ್ದಳು. ಅದಕ್ಕೆ ನಾನು ಆರಂಭಕ್ಕೇ ಹೇಳಿದ್ದು ಚೆಂದ ಕಾಣಿಸುತ್ತಿದ್ದಳೆಂದು. ಖರೇ ಖರೇನ ಹೇಳ್ತಿದೀನಿ….ಮೊದಲಿಗಿಂತ ಈಗಲೇ ಹೆಚ್ಚು ಚೆಂದ ಕಂಡಳು. ಅದನ್ನವಳಿಗೂ  ಹೇಳಿದೆ. 

ಯಾವಾಗ ಬಂದೆ..? ಕೇಳಿದಳು.
ನನಗೇನೋ….ಕೇಳಿದಂತಾಗಿ  ಏನುತ್ತರಿಸಿದೆನೋ..! ನೆನಪು ಹಾರಿ ಹೋಯಿತು. ಆಕೆ ಸಂಜೆಯ ವಾಕಿಂಗ್  ಮುಗಿಸಿ  ತೋಟದ ಮನೆ ಕಡೆಗೆ ಹೊರಟಂತಿತ್ತು. ಮನಸಿನ ತೊಗಲು ಹರಿದು ಸ್ಪರ್ಶಿಸಲಾಗದ  ಸುಖವೇ  ಅನರ್ಘ್ಯವೆಂದು ಹೆಸರಿಲ್ಲದ ಹಸಿವುಗಳನ್ನು ಅನೇಕ ಬಾರಿ ಪರಸ್ಪರ ಉಸುರಿ ಕೊಂಡವರು. ಹೀಗೇ ಇಬ್ಬರೂ ಒಂದೇ ನೋವಿನ ದೋಣಿಯಲಿ  ಪಯಣಿಸಿಬಂದ ಲೋಕಚರಿತರಂತೆ ಅದೆಷ್ಟೋ ಕಾಲ ಚರ್ಚಿಸಿದವರು. ದಂಗೆಕೋರ ಪ್ರೇಮಿಗಳಂತೆ ಸರಸ ಪ್ರೇಮಕೆ ಸನ್ಯಾಸ ದೀಕ್ಷೆ ಪಡೆದು, ನಕ್ಷತ್ರದೊಳಗಣ ವಿಮಲ ಸರೋವರದ ಕನಸುಗಳ ಕಂಡವರು ನಾವು. 

ನೆನಪಿದೆಯಾ  ನಿನಗೆ  ?

ನಾವಿಬ್ಬರೂ ಅಂದು

ಹೊಳೆಯ ದಡದಲಿ ನಿಂದು

ಮರುಳ ಮನೆಗಳ ಕಟ್ಟಿ

ಆಟವಾಡಿದ ದಿವಸ

ನೆನಪಿದೆಯಾ ನಿನಗೆ ?  

ಯಾಕೋ ಗೊತ್ತಿಲ್ಲ…ಜಿಎಸೆಸ್ ಅವರ ಈ ಕವಿತೆ ಗಾಢವಾಗಿ ಕಾಡ ತೊಡಗಿತು.


ಹೌದು, ನಾವಿಬ್ಬರು ಕೆಂಪುಹಳ್ಳದ  ಹುರುಮಂಜಿನಂತಹ ಉಸುಕಿನಲಿ  ‘ಗುಬ್ಬಿಮನೆ’ ಕಟ್ಟಿ ಗಂಡ – ಹೆಂಡತಿಯಾಗಿ ಆಡಿದ ಎಲ್ಲ ಆಟಗಳು ನೆನಪಾದವು.  ನನಗೆ ಈಜು ಬರ್ತಿರ್ಲಿಲ್ಲ. ಅದು ಮೂರು ಹಳ್ಳಗಳು ಕೂಡುವಲ್ಲಿರುವ  ಭಯಾನಕ  ಸೆಳೆತದ ಸುಳಿ ಮಡುವು. ಅಂತಹ ಕರಿನೀರಿನ ಮಡುವಲ್ಲಿ ಆಳಕ್ಕೆ ಉಸಿರು ಕಟ್ಟಿ ಮುಳು ಮುಳುಗೇಳಿ ಬರುತ್ತಿದ್ದಾಕೆ  ಒಮ್ಮೆ ನನ್ನನ್ನು ಎಳಕೊಂಡು  ಮುಳುಗೆದ್ದಿದ್ದಳು. ಅವಳಂತರಂಗದ ಜೀವಶಿಲ್ಪಕ್ಕೆ ಸಂಪೂರ್ಣ ಸಮರ್ಪಿಸಿಕೊಂಡೆ. ಹದಿನೆಂಟರ ಮೊದಲ ಹರೆಯಕ್ಕೆ ಧನ್ಯತೆಯ ಸಲಾಮು ಸಲ್ಲಿಸಿದೆ. ಗೊತ್ತಿಲ್ಲ ನನಗೆ ನನ್ನವ್ವ ಪುರಾಣ ಕತೆಗಳಂತೆ ಹೇಳುತ್ತಿದ್ದ “ಜಕಣಿ ಜಲ ದೇವತೆಯರು” ಆಗ ನೆನಪಾಗಿದ್ದರು.  

ಏನಾಗಿದೆ ನಿನಗೆ..? ಆಗೆಲ್ಲಾ ಲಂಕೇಶ್,  ಮಾರ್ಕ್ಸ್, ಮಾರ್ಕ್ವೆಜ್..ಅಂತಿದ್ದಿ… 
” ನನ್ನವ್ವ  ಫಲವತ್ತಾದ ಕಪ್ಪು ನೆಲ… ಬನದ ಕರಡಿಯ ಹಾಗೆ ಚಿಕ್ಕಮಕ್ಕಳ  ಹೊತ್ತು ಸಾಕಿದಾಕೆ…” ಲಂಕೇಶರ ಸಾಲುಗಳೋದಿ ಏನೇನೋ ಹೇಳಾಂವ ಯಾಕೆ ಏನಾಗಿದೆ ನಿನಗೀಗ…? ನಾನಂದು ಕಂಡ ಕನಸಿನ ಗಂಧರ್ವ ಕಿಂಪುರುಷ ನೀನೇನಾ…? ಎಂದು  ಗೊಣಗಿ, ಗುದ್ದಾಡುವ ದನಿಯಲಿ  ಕೊಡವಿ ಬಿಟ್ಟಳು.  ಹಿಂದೊಮ್ಮೆ  ನಾವಿಬ್ಬರೂ…ಹುಯ್ದ ಚಿತ್ತೆ ಮಳೆಯಲಿ  ತೋಯ್ದುಡುಗೆಯಲೇ ಘತ್ತರಗಿ  ಅಮ್ಮನ ಸನ್ನಿಧಿಯಲಿ ನಿಂತಾಗ…  ” ಬದುಕು – ಬರಹಗಳನ್ನು ವ್ರತದಂತೆ  ಪಾಲಿಸುವ ನೀನೊಬ್ಬ ಹೇತ್ಲಾಂಡಿ ” ಅಂತ, ಅವಳೇ ಕಾರ್ಣಿಕ ನುಡಿದದ್ದು  ಬಡಬಡಿಸಿಕೊಂಡೆ. ಕುದುರೆಯಿಂದ  ಕೆಳಗಿಳಿದು ತುಡುಗು ಮಾಡಿದ ಪಾಪದ ಹುಡುಗನಂತೆ  ಹಂಗೇ ನಿಂತಿದ್ದೆ. ಒಂದುಬಗೆಯ ಜೀವ ಖಜೀಲಾದ ಸ್ಥಿತಿ ನನ್ನದಾಗಿತ್ತು. ಅವಳೆಲ್ಲ ಮಾತುಗಳಿಗೆ ಕಿವಿಯಾಗಿ ನಿಂತೇ ಇದ್ದೆ. “ನಾನೂನು ಇಲ್ಲ ನೀನೂನು ಇಲ್ಲ…ತನ್ನ  ತಾನರಿತವಗೆ ಬೇರೇನೂ ಇಲ್ಲ..” ಅಲ್ಲಮನ ವಚನ ಆಗಸದ ಅಶರೀರವಾಣಿಯಿಂದ ಶಾರೀರಗೊಂಡಿತು.

“…ಆ ಕೆಂಪುಹಳ್ಳ ಮುತ್ತೈದೆಯಂತೆ  ಮೈತುಂಬಿ, ಮುಂಚಿನಂತೆ ಹರಿಯುತ್ತಿಲ್ಲ. ಹಳ್ಳದೆದೆಯ ನರ ನಾಡಿಗಳಲ್ಲಿ ಸರ್ಕಾರ ಜಾಲಿಯ ಮುಳ್ಳು ಕಂಟಿಗಳೇ ತುಂಬಿಕೊಂಡಿವೆ. ನಾವು ಆಟವಾಡಿದ  ಸ್ಮಾರಕದ ಆ ಜಾಗ ಎಲ್ಲಿ ಮಾಯವಾಗಿದೆಯೋ ತಿಳಿಯುತ್ತಿಲ್ಲ…” ಇದೆಲ್ಲ ನನ್ನೊಳಗೆ ನಾನೇ ಮಾತಾಡಿಕೊಂಡೆ.

ಅವಳದು ಮುಂಚಿನಿಂದಲೂ ಲಿಪಿಗಿಂತ  ಲಿಪ್ಲಾಂಗ್ವೇಜ್ ಅಧಿಕ. ಹೀಗಾಗಿ ನನ್ನ ವಾಟ್ಸ್ಯಾಪ್, ಫೇಸ್ಬುಕ್ ಬರಹ  ನೋಡೋದಿಲ್ಲವೆಂದು  ಖಡಾಖಂಡಿತ ಧಾಟಿಯಲಿ ಉಲಿದಳು. ಪ್ಲಾಸ್ಟಿಕ್  ಬ್ಯಾಟೊಂದನ್ನು ಹಿಡಕೊಂಡು ಪುಟ್ಟ  ಬಾಲಕನೊಬ್ಬ ಅದೇ ರಸ್ತೆಯಲಿ  ಆಟವಾಡಿಕೊಂಡಂತೆ ಬರುತ್ತಿದ್ದ. ಹತ್ತಿರಕೆ ಬಂದು ಯಾರ್ಮಮ್ಮೀ ಇವ್ರು ? ಕೇಳಿತು ಮಗು. ನಾನು ಯಾರೀ ಮಗು ಎಂದು ಕೇಳುವ ಮುನ್ನವೇ…ತನ್ನ ಗಂಡನ  ಹೆಸರು ಹೇಳಿ,  ಹೌದು ಅವನ ಹಸಿತ್ಯಾಜ್ಯದ  ಫಲವೇ ಇವನು, ಎಂದು ಮಗನತ್ತ ತೋರಿಸಿದಳು. ಅವಳ  ಮಾತಲ್ಲಿ ವಿಷಾದಪೂರಿತ ವ್ಯಂಗ್ಯವಿತ್ತು. ಅಷ್ಟೊತ್ತಿಗೆ ಮಗು ಆಡುತ್ತಾಡುತ್ತಾ  ದೂರ ಚಲಿಸಿತ್ತು.  

ಸೂರ್ಯ ತಾಯಿಹೊಟ್ಟೆ ಸೇರಿ ಕಣ್ನಸುಕು  ಮುಸುಕಿ, ಮೋಡ ಗುಡುಗುಗಳ ಕಗ್ಗತ್ತಲು ಘೋರಿಸಿತು. ಕಣ್ಣಳತೆಗೂ  ದೂರದ ತೋಟದ ಮನೆಯ ಕಡೆಯಿಂದ ಮಾಟದ ದೀವಟಿಗೆಯ ಕೋಲ್ಮಿಂಚಿನ ಸೆಳಕು ಬೀಸಿದಂತಾಯಿತು. ನನಗೇಕೋ ಸೂರ್ಯನಿಲ್ಲದ ಸುತ್ತಲಿನ ಕತ್ತಲೆಗಿಂತ  ಕೆಂಪಗೆ ಕಾದ ಛಡಿಗಳ ಭಯದ ಕತ್ತಲು ಎದೆಯ ತುಂಬ ತುಳುಕ ತೊಡಗಿತು. ನಾಳೆ “ಮತ್ತೆ ಭೆಟ್ಟಿಯಾಗೋಣವೆಂದು” ಕಪ್ಪು ಕುದುರೆಯ ಲಗಾಮಿಗೆ ಕಿಕ್ ಹೊಡೆದು  ಕತ್ತಲೆ ಸೀಳಿಕೊಳ್ಳುತ್ತ ಅರವತ್ತರ  ವೇಗದಲ್ಲಿ ಕುದುರೆ ಓಡಿಸತೊಡಗಿದೆ. ನನ್ನೊಳಗೆ ಅವಳು ಚೆಲುವ ಪರಿಮಳ ಅರಳಿಸುತ್ತ ದೇವಕನ್ನಿಕೆಯಾಗಿ…ಅನುಭವಿಸುತ್ತಲೇ ಹಿಂಬಾಲಿಸಿದಳು…ನಾನು ಕನ್ಯ ಸಿಸುಮಗನಂತೆ ಅರವತ್ತರ ವೇಗದಲ್ಲಿ ಸಾಗುತ್ತಲೇ ಇದ್ದೆ.

*******

 

3 thoughts on “ಕಥಾಯಾನ

  1. ಓಪ್ರತಿಯಯೊಬ್ಭರಿಗೂ ತಮ್ಮ ಹಳೆಯ ನೆನಪುಗಳು ಮರುಕಳಿಸುತ್ತವೆ ಸರ್

Leave a Reply

Back To Top