ಕಾವ್ಯ ಸಂಗಾತಿ
ಡಾ ಅನ್ನಪೂರ್ಣಾ ಹಿರೇಮಠ
ಕನಕನ ಚರಿತ
ಚಿತ್ತಗೊಟ್ಟ ಕೇಳಿ ನಾಡ ಜನರೆಲ್ಲ ದಾಸಶ್ರೇಷ್ಠನ ಕಥೆಯನ್ನ
ಜಾತಿ ಮತ ಪಂಥ ಧರ್ಮಗಳ ತೊಡೆಯಲು ತೊಡೆ ತಟ್ಟಿನಿಂತ
ಕನಕನ ಕಥೆಯನ್ನ ಕನಕ ಕನಕದಾಸನಾದ ಕಥೆಯನ್ನ//
ಹುಟ್ಟಿದನೀತ ಹಾವೇರಿ ಜಿಲ್ಲೆಯ ಬಾಡದಗ್ರಾಮದ ಹೂವಾಗಿ
ಕುರುಬ ಜನಾಂಗದ ಬಚ್ಚಮ್ಮ ಬೀರಪ್ಪನಾಯಕರ ಮಗನಾಗಿ
ತಿರುಪತಿ ತಿಮ್ಮಪ್ಪನ ಹರಕೆಯ ಕುಡಿಯು ಶ್ರೇಷ್ಠ ಕೀರ್ತನಕಾರನಾಗಿ
ತಿಮ್ಮಪ್ಪನೆಂಬ ದೇವರ ಹೆಸರಿಂದ ಮೈದಳೆದು ಬೆಳೆದವನಾಗಿ
ಜಗದ ತುಂಬೆಲ್ಲಾ ಸಮತೆಯ ಪರಿಮಳ ಹಾಡಿ ಹರಡಿದವನಾಗಿ,//
ವ್ಯಾಕರಣ ತರ್ಕ ತತ್ವಮೀಮಾಂಸೆ ಕತ್ತಿವರಸೆ ಕುದುರೆಸವಾರಿ
ಎಲ್ಲ ವಿದ್ಯೆಯಲಿ ಪಾರಂಗತ ಚತುರ ಚಾಣಾಕ್ಷತೆ ಮೆರೆದವನು
ಚಿಕ್ಕ ವಯಸ್ಸಿನಲಿ ದಂಡಾಧಿಕಾರಿ ವ್ಯಾಸರಾಯನ ನೆಚ್ಚಿನ ಶಿಷ್ಯ
ತಾರತಮ್ಯಗಳ ಅಲ್ಲಗಳೆದ ಕಾಗಿನೆಲೆ ಆದಿಕೇಶವನೆಂಬ ಅಂಕಿತದ
ಕೀರ್ತನಗಳಿಂದ ಸುಳಾದಿ ಉಗಾಭೋಗಗಳ ಬರೆದ ಮಹನೀಯ//
ಮೋಹನ ತರಂಗಿಣಿಯಲಿ ಮೋಹಕ ಕೃಷ್ಣಚರಿತೆ ಬಿತ್ತರಿಸಿದವ
ನಳಚರಿತೆಯಲಿ ನಳದಮಯಂತಿಯರ ಪ್ರೇಮಕಥೆ ಹೇಳಿದವ
ರಾಮಧಾನ್ಯ ಚರಿತೆಯಲಿ ಹದುಳ ರಾಗಿಯ ವರ್ಣನೆ ಮಾಡಿದವ
ಹರಿಭಕ್ತಿಸಾರದಲಿ ಭಗವದ್ಗೀತೆಯಂತೆ ಜೀವನಕಲೆ ಹೇಳಿದವ
ಎಲ್ಲ ಭಾಮಿನಿ ಷಟ್ಪದಿಯಲಿ ರಚಿಸಿ ಕೀರ್ತಿ ಮೆರೆದ ಕರುನಾಳು//
ಭಕ್ತಿಯ ಪಾರಮ್ಯ ಮೆರೆದನೀತ ಅನಂತ ಕೀರ್ತನೆಗಳಲಿ
ಆತ್ಮ ಸಂಸ್ಕೃತೀಕರಣಗೊಳಿಸಿ ಸಾಯುಜ್ಯ ಪದವಿ ಪಡೆದವ
ವೈದಿಕ ಧರ್ಮಗಳ ನಡವಳಿಕೆ ಅಲ್ಲಗಳೆದ ದಿಟ್ಟನಡೆಯಲಿ
ಜಗದ ತುಂಬಾ ಇವನೆಸರಿನ ಪ್ರಾಧಿಕಾರಿಗಳ ಪ್ರಹಾರವೀಗ
ಅಧ್ಯಯನಪೀಠ ಸಂಶೋಧನಾ ಕೇಂದ್ರ ಚಲನಚಿತ್ರಗಳಪಾರ//
—————-
ಡಾ ಅನ್ನಪೂರ್ಣಾ ಹಿರೇಮಠ
ಒಳ್ಳೆಯ ಬರವಣಿಗೆ ಮೇಡಂ