ಕಾವ್ಯ ಸಂಗಾತಿ
ಸುಮತಿ ಕೃಷ್ಣಮೂರ್ತಿ
ಭಾವಸೆರೆ
ದೀಪವಾಗಿ ಬೆಳಕ ಕೊಡಲು
ಹೊರಟ ಬದುಕಿಗೆ
ಅಡಿಯಲಿದ್ದ ನಿಶೆಯ
ನಂಟು ಮೀರಲಾಯಿತೆ?
ತೆಪ್ಪವಾಗಿ ಭವ ಸಾಗರ
ದಾಟ ಹೊರಟರೆ
ಬಿದಿರ ತಟ್ಟೆ ಹಂಗು
ಕಳಚಿ ಉಳಿಯಲಾಯಿತೆ?
ಸಮಿಧೆಯಾಗಿ ಅಗ್ನಿ
ಕುಂಡದಲ್ಲಿ ಬಿದ್ದರೂ
ಪುಣ್ಯ ಸಿಗುವ ಸ್ವಾರ್ಥವನ್ನು.
ತೊರೆಯಲಾಯಿತೆ?
ಮರಣ ಶಯ್ಯೆಯಲ್ಲಿ ಇರುವ
ಕುಟುಕು ಜೀವಕೂ
ಬಂಧ ಮುಕ್ತವಾಗೋ ಬಯಕೆ
ಬೇಡವಾಯಿತೆ?
ಭಾವ ಬಂಧನಕ್ಕೆ
ಸಿಲುಕಿ ನಟಿಸೋ ಪಾತ್ರಕೆ
ಸೂತ್ರ ಕಿತ್ತು ಹಾರಬಲ್ಲ
ಧೈರ್ಯ ಎಲ್ಲಿದೆ?
ಸುಮತಿ ಕೃಷ್ಣಮೂರ್ತಿ