ಲೇಖನ ಸಂಗಾತಿ
ಕೆ. ಎನ್.ಚಿದಾನಂದ . ಹಾಸನ .
ಸಂತಶ್ರೇಷ್ಠ ಮಹಾಭಕ್ತ ಕನಕದಾಸ
‘ದೀನ ನಾನು ಸಮಸ್ತ ಲೋಕಕೆ ದಾನಿ ನೀನು ” ಎಂಬ ಮಾತಿನಲ್ಲಿ ಸಂತ ಶ್ರೇಷ್ಠ ಕನಕದಾಸರ ಭಕ್ತಿಯ ಪರಾಕಾಷ್ಠೆಯಿದೆ. ಭಕ್ತಿಯ ಭಾವನೆ ಅನನ್ಯವಾದುದು. ಏಕಾಗ್ರತೆಯ ಸಾಧನೆಗೆ ಭಕ್ತಿಯೇ ಸಾಧನ. ಭಕ್ತಿ ಎಂಬುದು ನಮ್ಮ ಮನಸ್ಸಿನ ಆಂತರಿಕ ಭಾವನೆ. ಇದೊಂದು ಶಕ್ತಿಯೂ ಆಗಿದೆ. ಭಕ್ತಿಯು ಭಯದ ಮೂಲವೂ ಹೌದು ಹಾಗೆಯೆ ಧೈರ್ಯದ ಮೂಲವೂ ಹೌದು. ಭಕ್ತಿಗೆ ನಂಬಿಕೆಯೆ ಆಧಾರವಾಗಿದೆ. ಭಯದಿಂದ ಭಕ್ತಿ, ಭಕ್ತಿಯಿಂದ ಶಕ್ತಿ, ಶಕ್ತಿಯಿಂದ ಶ್ರದ್ಧೆ , ಶ್ರದ್ಧೆಯಿಂದ ನಿಷ್ಠೆ, ನಿಷ್ಠೆಯಿಂದ ಸೇವೆ (ಕರ್ತವ್ಯ), ಸೇವೆಯಿಂದ ತೃಪ್ತಿ, ತೃಪ್ತಿಯಿಂದ ಮುಕ್ತಿ (ಆತ್ಮ ಸಾಕ್ಷಾತ್ಕಾರವಾಗುತ್ತದೆ) ಲಭಿಸುವಂತಾಗುತ್ತದೆ. ಭಕ್ತಿ ಮತ್ತು ನಂಬಿಕೆ ನಮ್ಮ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಇರುತ್ತದೆ. ನಮ್ಮ ಭಕ್ತಿಯು ವೈಚಾರಿಕತೆಯ ಹಿನ್ನಲೆಯಲ್ಲಿರಲಿ. ಆಗ ಅದು ನಮ್ಮನ್ನು ಮೇಲ್ಮುಖ ಚಲನೆಯಲ್ಲಿರಿಸುತ್ತದೆ. ಭಕ್ತಿಯು ಬದುಕಿನ ಸಾಧನವಾಗಲಿ. ಭಕ್ತಿಯಲ್ಲಿ ಮೌಢ್ಯತೆಗೆ ಅವಕಾಶವಿಲ್ಲದಿರಲಿ ಎಂಬ ಮಾತುಗಳ ಮೂಲಕ ಸಮಾಜವನ್ನು ತಿದ್ದಿ ತೀಡುವ ಕೆಲಸದಲ್ಲಿ ನಿರತರಾದ ದಾಸಶ್ರೇಷ್ಠರು ಮತ್ತು ದಾಸವರೇಣ್ಯಲ್ಲಿ ಅಗ್ರಮಾನ್ಯರಾದವ ರೆಂದರೆ ಭಕ್ತ ಕನಕದಾಸರು.
” ಕಾಗಿನೆಲೆಯಾದಿಕೇಶವರಾಯ ” ಎಂಬ ನಾಮಾಂಕಿತಧಾರಿಯಾಗಿ ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಚಿರದ್ರುವತಾರೆಯಾಗಿ ಮಿನುಗುತ್ತಿರುವ ಭಕ್ತ ಸಂತ ದಾಸಶ್ರೇಷ್ಠರೆಂದರೆ ಕನಕದಾಸರು. ” ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ” ಎಂಬ ಸಾರ್ವಕಾಲಿಕ ಸಾರ್ವತ್ರಿಕ ಸತ್ಯವನ್ನು ಜಗತ್ತಿಗೆ ನೀಡಿದವರು ಕನ್ನಕದಾಸರು. ಭಗವಂತನ ಸ್ಮರಣೆ ಮತ್ತು ಸಮಾಜದ ಬೆಳವಣಿಗೆ ಈ ಎರಡು ದೃಷ್ಟಿಕೋನಗಳನ್ನಿಟ್ಟುಕೊಂಡು ಸಾಹಿತ್ಯದ ಮೂಲಕವೇ ಜೀವನಾನುಭವವನ್ನು ಕಟ್ಟಿ ಕೊಡುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡವರು ಕನಕದಾಸರು. ಹರಿಸರ್ವೋತ್ತಮ ತತ್ವವು 15 – 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅಧಿಕಾರಾವಧಿಯಲ್ಲಿ ಉತ್ತುಂಗ ಶಿಖರದಲ್ಲಿತ್ತು. ಇದೇ ಅವಧಿಯಲ್ಲಿ ಹರಿದಾಸ ಸಾಹಿತ್ಯವು ಸರ್ವ ವಿಧದಲ್ಲೂ ಜನ ಮನ್ನಣೆ ಗಳಿಸಿತ್ತು. ಶ್ರೀಪಾದರಾಯರು,ವ್ಯಾಸರಾಯರು, ಪುರಂಧರ ದಾಸರು, ಜಗನ್ನಾಥದಾಸರು, ವಿಜಯ ವಿಠ್ಠಲ ದಾಸರು ಮುಂತಾದ ಹರಿದಾಸರಂತೆ ಇವರ ಸಮಕಾಲೀನರಾಗಿ ಆಧುನಿಕ ಕರ್ನಾಟಕದ ಕವಿ, ತತ್ವಜ್ಞಾನಿ, ಸಂಗೀತಗಾರ, ದಾಸಶ್ರೇಷ್ಠ, ಸಂತ ಶ್ರೇಷ್ಠರು ಹಾಗೂ ಪ್ರಾಜ್ಞ ಮಹನೀಯರಾಗಿ ಸರ್ವಶ್ರೇಷ್ಠ ಸ್ಥಾನವನ್ನು ಪಡೆದವರು ಕನಕದಾಸರು.
ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜನಾಂಗಕ್ಕೆ ಸೀಮಿತವಾದ ಭಕ್ತರಲ್ಲ ಬದಲಾಗಿ ಎಲ್ಲಾ ಜನಾಂಗಗಳಿಗೆ ಬೇಕಾದವರು. 15 – 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದವರು ಭಕ್ತ ಕನಕದಾಸರು ಎಂದರೆ ತಪ್ಪಾಗಲಾರದು. ಐತಿಹ್ಯವೊಂದರ ಪ್ರಕಾರ ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟ ಬಂಕಾಪುರ ಪ್ರಾಂತದ ಮುಖ್ಯಪಟ್ಟಣ ಬಾಡ ಒಂದು ಒಳ್ಳೆಯ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ ( ದಂಡನಾಯಕ ) ಬೀರಪ್ಪನಾಯಕ. ಬೀರಪ್ಪನಾಯಕನ ಪತ್ನಿ ಬಚ್ಚಮ್ಮ.
ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹಳ ನಂಬಿಕೆ. ದಕ್ಷಿಣ ಭಾರತದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರು ಸ್ಥಾಪಿಸಿದ ಶ್ರೀವೈಷ್ಣವ ಮತವನ್ನು ಡಣ್ಣಾಯಕನಾದ ಬೀರಪ್ಪನಾಯಕ ಮತ್ತು ಆತನ ಪತ್ನಿ ಬಚ್ಚಮ್ಮ ಸ್ವೀಕರಿಸಿದ್ದರು. ಆಗಿನಿಂದ ಇವರು ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ, ಮನೆ ದೇವರನ್ನಾಗಿ ಮಾಡಿಕೊಂಡರು. ಬೀರಪ್ಪ ನಾಯಕ ಮತ್ತು ಬಚ್ಚಮ್ಮನವರಿಗೆ ತಮಗೆ ಒಬ್ಬ ಕುಲವನ್ನು ಬೆಳಗಬಹುದಾದ ಮಗ ಜನಿಸಬೇಕು ಎಂದು ಬಹಳ ದಿನಗಳ ಹಂಬಲವಿತ್ತು. ” ವಂಶೋದ್ಧಾರಕನಾದ ಒಬ್ಬ ಪುತ್ರನನ್ನು ಕರುಣಿಸು ” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಭವಿಷ್ಯದಲ್ಲಿ ಅವರ ಆಸೆ ಫಲಪ್ರದವಾಯಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಸಂತಸವೋ ಸಂತಸ. ತಿರುಪತಿ ತಿಮ್ಮಪ್ಪನ ಆಶೀರ್ವಾದವೇ ಈ ಪುತ್ರ ಎಂದು ಅವರು ತಮ್ಮ ಮಗುವಿಗೆ ” ತಿಮ್ಮಪ್ಪ ” ಎಂದೇ ನಾಮಕರಣ ಮಾಡಿದರು.
ತಿಮ್ಮಪ್ಪನಾಯಕ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ ಮಾಡಿಸಲಾಯಿತು. ಬಂಕಾಪುರದಲ್ಲಿ ವಿದ್ಯಾಭ್ಯಾಸವಾಯಿತು. ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಅಷ್ಟಲ್ಲದೆ, ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತನು. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ನಂತರ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ದಂಡನಾಯಕನಾದನು. ತನ್ನ ಪ್ರಾಂತ್ಯದ ಗ್ರಾಮವೊಂದರ ಜಮೀನಿನಲ್ಲಿ ತಿಮ್ಮಪ್ಪ ನಾಯಕನಿಗೆ ಏಳು ಹಂಡೆಗಳಷ್ಟು ಬಂಗಾರವು ಲಭಿಸಿತು. ಅಷ್ಟೂ ಬಂಗಾರವನ್ನು ವಿಜಯನಗರದ ಅರಸರ ಸಮ್ಮುಖದಲ್ಲಿ ತನ್ನ ಪ್ರಾಂತ್ಯದ ಜನರಿಗೆ ಹಂಚಿದನು. ಅಂದಿನಿಂದ ತಿಮ್ಮಪ್ಪ ನಾಯಕನು ಕನಕನಾಯಕನಾದನು. ನಂತರದ ದಿನಗಳಲ್ಲಿ ಶ್ರೀ ಹರಿಯು ಕನಕನಾಯಕನ ಕನಸಿನಲ್ಲಿ ಕಾಣಿಸಿಕೊಂಡು ” ಹೇ ಕನಕ ಬಾ ಇಲ್ಲಿ ನೀ ನನ್ನ ದಾಸನಾಗು ” ಎಂದಾಗ ಕನಕನಾಯಕ ಒಪ್ಪಲಿಲ್ಲ. ಮುಂದಿನ ದಿನಗಳಲ್ಲಿ ಕನಕ ನಾಯಕನು ಯುದ್ಧವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಸೋತ ನಂತರ ಬದುಕಿನಲ್ಲಿ ವೈರಾಗ್ಯ ಉಂಟಾಗಿ ದಂಡನಾಯಕ ವೃತ್ತಿಯನ್ನು ತ್ಯಜಿಸಿ ಹರಿಭಕ್ತನಾದನು. ನಂತರ ಕನಕ ನಾಯಕನು ಕನಕದಾಸನಾಗಿ ಸರ್ವ ಶ್ರೇಷ್ಠ ಸಂತನಾದನು ಎಂದು ಹೇಳಲಾಗಿದೆ.
ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿದ್ದು, ಅವರಿಂದ ಮಧ್ವಮತ ತತ್ವಶಾಸ್ತ್ರ ವನ್ನು ಕಲಿತರು. ಒಂದು ದಿನ ವ್ಯಾಸರಾಯರು ತಮ್ಮ ಶಿಷ್ಯರನ್ನು ಉದ್ದೇಶಿಸಿ “ನಿಮ್ಮಲ್ಲಿ ಯಾರು ಮೋಕ್ಷಕ್ಕೆ ಹೋಗಲು ಅರ್ಹರಾಗಿದ್ದೀರಿ?” ಎಂದು ಪ್ರಶ್ನಿಸಿದರು. ಆಗ ಕನಕದಾಸರು “ನಾನು” ಹೋದರೆ ನಾನು ಹೋಗಬಲ್ಲೆ ಎಂದು ಉತ್ತರಿಸಿ ತಮ್ಮ ಗುರುಗಳ ಮೆಚ್ಚುಗೆಯನ್ನು ಗಳಿಸಿದರು. ಮನುಷ್ಯನಲ್ಲಿರುವ “ನಾನು” ಎಂಬ ಅಹಂನ್ನು ಬಿಟ್ಟರೆ ಯಾರು ಬೇಕಾದರೂ ಮೋಕ್ಷಕ್ಕೆ ಹೋಗಬಲ್ಲರು ಎಂಬುದು ಅವರ ಅಭಿಪ್ರಾಯವಾಗಿತ್ತು. ” ನಾನು ಹೋದರೆ ಹೋಗಬಲ್ಲೆ! ” ಎಂಬ ಕನಕದಾಸರ ಮಾತು ಎಷ್ಟೊಂದು ಅರ್ಥಗರ್ಭಿತವಾಗಿದೆ. ನಮ್ಮೆಲ್ಲರಿಗೂ ಗೊತ್ತಿದೆ ಸ್ವಾರ್ಥ ಮತ್ತು ಅಹಂಕಾರ ನಮ್ಮೆಲ್ಲರ ಸಾಮಾನ್ಯ ದೌರ್ಬಲ್ಯಗಳು. ನಾನು, ನನ್ನದು, ನನ್ನಿಂದಲೇ ಎಂಬ ಪದಗಳು ಸ್ವಯಂ ಅಹಂ ಅನ್ನು ಸೂಚಿಸುತ್ತವಲ್ಲದೆ ಪ್ರಭಾವಿಸುತ್ತವೆ. ನಾನು, ನನ್ನದು, ನನ್ನಿಂದಲೇ ಎಂಬ ನುಡಿಗಳಿಂದ ಕಂಸ ಹತನಾದ. ಹಿರಣ್ಯಕಶಿಪು ಬಲಿಯಾದ. ದುರ್ಯೋಧನ ಸಕಲವನ್ನೂ ಕಳೆದುಕೊಂಡ. ಹೀಗೆ ಅಹಂಭಾವಗಳ ಅಂತ್ಯ ಸ್ವಯಂ ನಾಶವೆ ಆಗಿರುತ್ತದೆ. ಈ ಮೇಲಿನ ಮಾತಿನಲ್ಲಿ ” ನಾನು ಹೋದರೆ ” ಅಂದರೆ ನಾನು ಎಂಬ ಅಹಂ ಅನ್ನು ತೊರೆದಾಗ, ನಾವು ಎಷ್ಟನ್ನು ಕಳೆದುಕೊಂಡಿರು ತ್ತೇವೆಯೋ ಅದಕ್ಕಿಂತ ದುಪ್ಪಟ್ಟು ಪಡೆದುಕೊಳ್ಳು ತ್ತೇವೆ ಎಂಬ ಸಾವಧಾನದ ಅರಿವು ನಮಗಿರಬೇಕಾಗುತ್ತದೆ. ಅಹಂನ ನಾಶದಿಂದ ನಾವು ನಮಗರಿವಿಲ್ಲದಂತೆಯೆ ನಮ್ಮ ಆಂತರ್ಯವನ್ನು ಕಾಣುತ್ತೇವೆ. ಅಂತರಂಗ ದರ್ಶನ ಭಕ್ತಿಭಾವವನ್ನು ತಂದು ಕೊಡುತ್ತದೆ. ಹಿರಿಯರನ್ನು ಗೌರವಿಸುವ, ಜನ ಸಾಮಾನ್ಯರಿಗೆ ಪ್ರೀತಿ ಮತ್ತು ಕರುಣೆತೋರುವ, ತಂದೆ-ತಾಯಿ ಯನ್ನು ಆದರಿಸುವ , ಸ್ತ್ರೀಯರನ್ನು ರಕ್ಷಿಸುವ, ಗುಣ ಸ್ವಭಾವ ತಾನಾಗಿಯೇ ಬೆಳೆಯುತ್ತದೆ. ಮಾತಿನಲ್ಲಿ ನಯ – ವಿನಯಭಾವ ಕಂಡು ಬರುತ್ತದೆ. ಒಳ್ಳೆಯತನ ಗೋಚರವಾಗುತ್ತದೆ. ಮಿತ್ರ ಬಳಗ ನಮ್ಮನ್ನು ಇಷ್ಟಪಡುತ್ತದೆ. ಬಂಧು ಬಳಗ ನಮ್ಮನ್ನು ಅರಸಿ ಬರುತ್ತದೆ. ಮನಸ್ಸು ನಿರ್ಮಲತೆಯ ಕಡೆ ವಾಲುತ್ತದೆ. ನಾನು ಎಂಬ ಪದವನ್ನು ಕೇವಲ ಸ್ವಯಂ ಆತ್ಮಸೂಚಕವಾಗಿ ವಿನಯಪೂರ್ವಕ ವಾಗಿ ಬಳಸುವ ಸ್ವಭಾವ ನಮ್ಮಲ್ಲಿ ಅಂತರ್ಗತವಾಗಬೇಕು. ನಾವು – ನಮ್ಮವರು ಎಂಬ ಮನೋಭಾವಕ್ಕೆ ಅಂಟಿಕೊಂಡಂತಿರಬೇಕು. ಆಗ ನಮ್ಮ ಬದುಕೆ ಸುಂದರವಾಗುತ್ತದೆ ಎನ್ನುತ್ತಾರೆ ಕನಕದಾಸರು. ನಂತರ ಗುರುಗಳ ಮಾರ್ಗದರ್ಶನದ ಮೇರೆಗೆ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರಾದರು. ಬಹಳಷ್ಟು ಜನರ ನಂಬಿಕೆಯಂತೆ ಉಡುಪಿಯ ದೇವಸ್ಥಾನದೊಳಗೆ ಕನಕದಾಸರಿಗೆ ಪ್ರವೇಶ ದೊರೆಯದೆ ಹೋದಾಗ ದೇವಸ್ಥಾನದ ಹಿಂದೆ ನಿಂತು ಭಕ್ತಿ ಪರವಶರಾಗಿ ಹಾಡತೊಡಗಿದರಂತೆ ” ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ” ಎಂದು. ಆಗ ಅವರ ಭಕ್ತಿಗೆ ಮೆಚ್ಚಿದ ದೇವರು ದೇವಸ್ಥಾನದ ಹಿಂಭಾಗ ಗೋಡೆ ಒಡೆದು ಶ್ರೀಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತಂತೆ. ಈಗಲೂ ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಹಿಂಭಾಗದ ಗೋಡೆಯಲ್ಲಿರುವ ಬಿರುಕಿನಲ್ಲಿ ಶ್ರೀಕೃಷ್ಣನನ್ನು ಕಾಣಬಹುದು. ಅಲ್ಲಿ ಒಂದು ಕಿಟಕಿಯನ್ನು ನಿರ್ಮಿಸಲಾಗಿದ್ದು ಅದನ್ನು ‘ಕನಕನ ಕಿಂಡಿ’ ಎಂದೇ ಕರೆಯಲಾಗುತ್ತಿದೆ.
ಕಾಗಿನೆಲೆಯ ಆದಿಕೇಶವನ ಸದ್ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ ? ಎಂದು ಸಮಾಜವನ್ನು ಪ್ರಶ್ನಿಸಿದರು. ಸಾಹಿತ್ಯದ ಮೂಲಕವೇ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ಕನ್ನಡ ಸಾಹಿತ್ಯದ ಸಾರಸ್ವತ ಲೋಕಕ್ಕೆ ಅರ್ಪಿಸಿದರು. ಅಷ್ಟೇ ಅಲ್ಲದೆ ಸಂಗೀತ ಲೋಕಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಸಂಪತ್ತು ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರು ಮೋಹನತರಂಗಿಣಿ , ನಳಚರಿತ್ರೆ , ರಾಮಧಾನ್ಯ ಚರಿತೆ, ಹರಿಭಕ್ತಿಸಾರ ಎಂಬ ಕಾವ್ಯ ಕೃತಿಗಳನ್ನು ರಚಿಸಿದ್ದಾರೆ.
ಮೋಹನತರಂಗಿಣಿ: ನಲವತ್ತೆರಡು ಸಂಧಿಗಳಿಂದ ಸಾಂಗತ್ಯ ರೂಪದಲ್ಲಿ ರಚನೆಗೊಂಡಿರುವ ಮೋಹನತರಂಗಿಣಿಯಲ್ಲಿ ಪೌರಾಣಿಕತೆ ಹಾಗೂ ಸಮಕಾಲೀನ ಜೀವನವನ್ನು ವಿಸ್ತೃತವಾಗಿ ತಿಳಿಸಲಾಗಿದೆ. ಕನಕದಾಸರು ಈ ಕೃತಿಯಲ್ಲಿ ಕೃಷ್ಣಚರಿತೆಯನ್ನು ಹೇಳುತ್ತಾ ವಿಜಯನಗರದ ಕೃಷ್ಣದೇವರಾಯ ನನ್ನು ಭಗವಾನ್ ಶ್ರೀಕೃಷ್ಣನಿಗೆ ಹೋಲಿಸಿದ್ದಾರೆ. ವಿಜಯನಗರವು ದ್ವಾರಕೆಯೇ ಎಂಬಂತೆ ಸಮಾನ ಹೋಲಿಕೆ ನೀಡಿದ್ದಾರೆ. ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ಡಣ್ಣಾಯಕನಾಗಿ ಕನಕದಾಸರು ಆಗಿಂದಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜ ವೈಭವ , ರಾಜ ಸಭೆ , ರಾಜ ಪರಿವಾರದ ಸರಸ ಸಮ್ಮಾನ , ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ , ನವರಾತ್ರಿ , ವಿಜಯನಗರದ ಪುರರಚನೆ , ಉದ್ಯಾನವನ , ಪ್ರಜೆಗಳ ವೇಷಭೂಷಣ , ರಾಜ್ಯದ ಯುದ್ಧ ವಿಧಾನ ಮುಂತಾದವುಗಳು ಈ ಕೃತಿಯಲ್ಲಿ ಬಣ್ಣಿಸಿರುವುದು ನಮಗೆ ಕಂಡುಬರುತ್ತದೆ. ಶ್ರೀಕೃಷ್ಣ-ರುಕ್ಕಿಣಿ, ಪ್ರದ್ಯುಮ್ನ-ರತಿದೇವಿ, ಅನಿರುದ್ಧ-ಉಷೆ ಇವರುಗಳ ಶೃಂಗಾರಜೀವನ ಮೋಹನತರಂಗಿಣಿಯ ಜೀವಾಳವಾಗಿದೆ. ಹರಿಭಕ್ತಸಾರ: ಈ ಕಾವ್ಯವು ಭಾಮಿನಿ ಷಟ್ಪದಿಯಲ್ಲಿದ್ದು 110 ಪದ್ಯಗಳನ್ನು ಒಳಗೊಂಡಿದೆ. ಬದುಕಿನ ಎಡರು ತೊಡರುಗಳು ಮತ್ತು ವೈರಾಗ್ಯಗಳಿಂದೊಡಗೂಡಿದ ಸುರಪುರ ನಿಲಯ ಚೆನ್ನಿಗರಾಯನ ಸ್ತುತಿ ಇದರಲ್ಲಿದೆ.
ನಳಚರಿತ್ರೆ : ಈ ಕಾವ್ಯವ ಒಂಭತ್ತು ಸಂಧಿಗಳಿಂದ ಕೂಡಿದ್ದು ಭಾಮಿನಿ ಷಟ್ಪದಿಯಲ್ಲಿ ರಚನೆಯಾಗಿದೆ. ಇದು 481 ಪದ್ಯಗಳಿಂದ ಕೂಡಿದ ಕೃತಿಯಾಗಿದೆ. ನಳ-ದಮಯಂತಿಯರ ಪ್ರೇಮಸಂದೇಶಗಳು, ಕಷ್ಟಕಾಲ ಹಾಗೂ ನಂತರದ ಪುನರ್ಮಿಲನಗಳಿಂದೊಡಗೂಡಿದ ಈ ಕೃತಿಯು ಹೃದಯಸ್ಪರ್ಶಿಯಾದ ಚಿರಂತನ ಪ್ರೇಮಕಾವ್ಯವಾಗಿದೆ. ರಾಮಧಾನ್ಯಚರಿತೆ: ಈ ಕಾವ್ಯವು ಭಾಮಿನಿ ಷಟ್ಪದಿಯಲ್ಲಿದ್ದು 156 ಪದ್ಯಗಳನ್ನೊಳಗೊಂಡಿದೆ. ರಾಮಧಾನ್ಯಚರಿತೆ ಕೃತಿಯಲ್ಲಿ ಸಿರಿವಂತರ ಆಹಾರಧಾನ್ಯ ಅಕ್ಕಿ ಹಾಗೂ ಬಡವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ.
ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಬಡವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯ ಚರಿತೆ ಇಂದಿನ ಬಂಡಾಯ ಸಾಹಿತ್ಯದ ಬೇರು ಎಂದರೆ ತಪ್ಪಾಗಲಾರದು. ರಾಮಧಾನ್ಯ ಚರಿತೆಯು ಕನ್ನಡ ಸಾಹಿತ್ಯ ರಂಗದಲ್ಲಿ ಅಪರೂಪದ ಸ್ವಕಲ್ಪಿತ ಕಥಾವಸ್ತುವಾಗಿದೆ.
ತಮ್ಮ ನಿರಂತರ ಸಾಧನೆ, ಸಹಜಕಾವ್ಯ ಶಕ್ತಿ, ವ್ಯಾಸರಾಯರ ಆಶೀರ್ವಾದ, ಬದುಕಿನ ದಟ್ಟ ಅನುಭವ, ಆಧ್ಯಾತ್ಮಿಕ ನೆಲೆಗಳಿಂದೊಡ ಗೂಡಿದ ಕನಕದಾಸರ ದಾಸಸಾಹಿತ್ಯವು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಹಾಗೂ ಜನಸಾಮಾನ್ಯರಿಗೆ ಅವರು ನೀಡಿದ ಅಮೋಘಕೊಡುಗೆಯಾಗಿದೆ.
ಕರ್ನಾಟಕ ಸಂಗೀತಕ್ಕಾಗಿ ಕನ್ನಡ ಭಾಷೆಯಲ್ಲಿ ಸಾಹಿತ್ಯ ಸಂಯೋಜನೆ ಮಾಡಿದ್ದಾರೆ. ಅವರು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಲೆಂಬ ಉದ್ದೇಶದಿಂದ
ಸರಳ ಕನ್ನಡ ಭಾಷೆಯನ್ನು ಬಳಸಿದರು. ಆದ್ದರಿಂದಲೇ ಕೀರ್ತನೆಗಳು ಎಂದೆಂದಿಗೂ ಸಾರ್ವಕಾಲಿಕವಾಗಿವೆ. ಕನಕದಾಸರ ಜೋಳಿಗೆಯಲ್ಲಿ ಭಕ್ತಿಯ ಸಿಂಚನವಿದೆ. ಅವರ ಕೀರ್ತನೆಗಳಲ್ಲಿ ಮಧುರಾಮೃತವಿದೆ. “ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ” ಎನ್ನುತ್ತಾ ಈ ಜಗದ ಸಕಲ ಜೀವರಾಶಿಯನ್ನು ರಕ್ಷಿಸುವವನೊಬ್ಬನಿದ್ದಾನೆ. ನಮ್ಮೆಲ್ಲರ ಬೇಕು, ಬೇಡಗಳನ್ನು ಈಡೇರಿಸುವವನು ಅವನೇ ಪರಮಾತ್ಮ ಎಂದಾಗ ಮನಸ್ಸು ತುಂಬಿ ಬರುತ್ತದೆ ಎಂಬುದನ್ನು ತೋರಿಸಿದವರು ಕನಕದಾಸರು. ಕನಕದಾಸರ ಜೀವನ ನಮ್ಮೆಲ್ಲರ ಬದುಕಿಗೆ ಆದರ್ಶದ ಪುಸ್ತಕವಾಗಿದೆ. ಅದರಲ್ಲಿನ ಪದಗಳನ್ನು ಅರ್ಥೈಸಿಕೊಂಡರಷ್ಟೇ ನಾವು ಯಾರೆಂದು ನಮಗೆ ಅರ್ಥವಾಗುತ್ತದೆ. ವರಕವಿ, ಕೀರ್ತನಕಾರರು, ಸಂತರು ಎನ್ನಿಸಿಕೊಂಡ ಕನಕದಾಸರು ಕರ್ನಾಟಕ ಹರಿದಾಸಸಾಹಿತ್ಯದ ಅಶ್ವಿನಿದೇವತೆಗಳಲ್ಲೊಬ್ಬರು. ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರಲ್ಲೊಬ್ಬರಾಗಿ, ಯಾವ ಮತವನ್ನು ಬಿಡದೆ, ಯಾವ ಮತಕ್ಕೂ ಅಂಟಿಕೊಳ್ಳದೆ, ಸಕಲತತ್ವಗಳನ್ನು ಮೀರಿ, ನಿರ್ದಿಗಂತವಾಗಿ ಬೆಳೆದು ವಿಶ್ವಮಾನವರಾಗಿ ವಿಜೃಂಭಿಸಿದ ಯೋಗಪುರುಷರು ಕನಕದಾಸರು. ಆದ್ದರಿಂದ ಕನಕದಾಸರಂತೆ ಎಲ್ಲರೂ ಉದಾರ ಮನೋಭಾವ ಬೆಳೆಸಿಕೊಳ್ಳೋಣ. ಅಹಂ ಪ್ರವೃತ್ತಿ ಬಿಡೋಣ. ಕನಕದಾಸರ ಆಶಯಗಳನ್ನು ಮೈಗೂಡಿಸಿಕೊಳ್ಳೋಣ. ವೈಚಾರಿಕತೆಯಿಂದ ಸಮಾಜದಲ್ಲಿನ ಅಸಮಾನತೆ ಭಾವನೆಗಳನ್ನು ದೂರ ಮಾಡೋಣ. ಎಲ್ಲರಿಗೂ ಕನಕ ಜಯಂತಿಯ ಶುಭಾಶಯಗಳು.
ಕೆ. ಎನ್.ಚಿದಾನಂದ . ಹಾಸನ .