ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು

ಕಂದನ ಹನಿಗಳು_ ಕವನ ಸಂಕಲನ ಲೇಖಕರು_ ಟಿಎನ್ ಶಿವಕುಮಾರ್(ತನಾಶಿ)
ಪ್ರಕಾಶಕರು_ಕದಂಬ ಪ್ರಕಾಶನ ಬೆಂಗಳೂರು ಪ್ರಥಮ ಮುದ್ರಣ ಮೇ 2023

 
ಲೇಖಕರಾದ ಶ್ರೀ ಟಿ ಎನ್ ಶಿವಕುಮಾರ್, ತನಾಶಿ ಎಂದೇ ಪ್ರಖ್ಯಾತರಾದವರು. ಮಂಡ್ಯ ಜಿಲ್ಲೆಯ ಮಂಡ್ಯದಕೊಪ್ಪಲು ಗ್ರಾಮದಲ್ಲಿ ಪ್ರಾರಂಭವಾದ ತನಾಶಿಯವರ ವಿದ್ಯಾಭ್ಯಾಸ ಅರೆಕೆರೆಯಲ್ಲಿ ಹೈಸ್ಕೂಲು, ಮಂಡ್ಯದ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿಎ, ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂಎ ಪದವಿ.  ನಂತರ 12 ವರ್ಷ ಮಳವಳ್ಳಿ, ಮಂಡ್ಯ ಕೆರಗೋಡು ಮತ್ತು ವಿಶ್ವಮಾನವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸದ್ಯ ನ್ಯಾಯಾಂಗ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ತನಾಶಿಯವರು ಸುಮಾರು ಸಾವಿರ ಉಪನ್ಯಾಸ ನೀಡಿರಬಹುದು.  ಈ ಸಮಯದಲ್ಲಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಎಂಟು ಜನ ಸಾಹಿತಿಗಳೊಡನೆ ಒಡನಾಟ ಹೊಂದಿರುವುದು ಅವರ ಸುಕೃತ. ಕನ್ನಡದಲ್ಲಿ ರಾಮಾಯಣ 565 ಕಂತುಗಳಲ್ಲಿ ನೀಡಿದ್ದಾರೆ ಮಂಕುತಿಮ್ಮನ 945 ಕಗ್ಗಗಳಿಗೆ ಅರ್ಥಧಾರೆ ನೀಡಿದ್ದಾರೆ, ಕನಕದಾಸರ ಹರಿಭಕ್ತಿಸಾರದ 108 ಷಟ್ಪದಿಗಳಿಗೆ ವ್ಯಾಖ್ಯಾನ ನೀಡಿದ್ದಾರೆ.

“ಕುಲ ಗೌರವವಾಗಲಿ, ತಲೆ ಮಾರಾಗಲಿ ಬೆಳೆದಷ್ಟು ಬಳ್ಳಿಯಾಗಿ ಹಬ್ಬುತ್ತವೆ. ಭಾವನೆಗಳನ್ನು ತಬ್ಬುತ್ತವೆ. ಹರುಷವನ್ನು ಹರಡಿ ಸಂತಸದ  ಊಟೆಯನ್ನು ಚಿಮ್ಮಿಸುತ್ತವೆ . ಬಾಳ ಬಳ್ಳಿಯು ಬೆಳೆಯೆ ಮನಕೆಲ್ಲ ಹಬ್ಬವಾಗಿ ಭಾಷೆ ಕಬ್ಬವಾಗುತ್ತದೆ. ಪ್ರತಿದಿನವೂ ಚೈತನ್ಯ ತುಂಬಿ ತುಳುಕುತ್ತದೆ .” ಎಂದು ತಮ್ಮ ಮೊದಲ ಮಾತು ಆರಂಭಿಸುವ ತನಾಶಿ ತಾವು ತಾತನಾದ ಸಂಭ್ರಮವನ್ನು ಹಾಗೂ ತಮ್ಮ ಮೊಮ್ಮಗ ಹಿಮ್ಮತ್ ಶರ್ಮನ ಬಗ್ಗೆ ತಾವು ಬರೆದ ಕವನಗಳನ್ನು ಈ ಸಂಕಲನದಲ್ಲಿ ದಾಖಲಿಸುತ್ತಾರೆ. ಒಟ್ಟು 26 ಕವನಗಳು ಇರುವ ಗೀತೆಗಳಲ್ಲಿ ಶಿಶುವಿನ ಮನದಾಳದ ದನಿ,  ತಾತ ಅಜ್ಜಿಯರ ಮನೋಭೂಮಿಕೆ ಇದೆ. ಛಂದೋಬದ್ಧವಾದ ಪದ್ಯಗಳೂ ಇವೆ.

ಮನೆಗೆ ಮೊಮ್ಮಗುವಿನ ಆಗಮನ ಸಂತಸದ ಹೊನಲನ್ನೇ ಹರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ .ಮಗುವಿನೊಡನೆ ತಾವು ಮಗುವಾಗಿ ಆಡಲು, ಬೆರೆಯಲು ತಾತ ಅಜ್ಜಿಯರು ಕಾಯುತ್ತಿರುತ್ತಾರೆ. ಹಾಗಾಗಿಯೇ ತಮ್ಮ ಮಕ್ಕಳ ಬಾಲ್ಯವನ್ನು ಉದ್ಯೋಗ ಒತ್ತಡ ಜವಾಬ್ದಾರಿಗಳ ಕಾರಣದಿಂದ ಸರಿಯಾಗಿ ಸವಿಯಲು ಆಗದ ಹಿರಿಯರಿಗೆ ಮೊಮ್ಮಕ್ಕಳು ನಿಜಕ್ಕೂ ಚೈತನ್ಯದ ಸೆಲೆ ಹಾಗೂ ಜೀವನಕ್ಕೆ ಸಂಜೀವಿನಿಯಂತೆ. ಈ ಸಂಭ್ರಮವನ್ನೇ ಕವಿ ಈ ಪದ್ಯಗಳುದ್ದಕ್ಕೂ ಪದಗಳನ್ನಾಗಿಸಿ ಕವಿತೆಯಾಗಿ ಹಾಡಿದ್ದಾರೆ ನಲಿದಿದ್ದಾರೆ ಓದುಗರನ್ನು ನಲಿಸುತ್ತಾರೆ.

“ಬಂದ ಮೊಮ್ಮಗ ಬಂದ” ಕವನದಲ್ಲಿ

ಭರವಸೆಯ ಬೆಳಕನ್ನು ಬಾಳಲ್ಲಿ ತಂದೆ
ಹೊಸ ಕನಸಿನಂಕುರವ ಮಾಡುತ್ತಾ ನಿಂದೆ

ಎಂದು ಹೇಳುತ್ತಾ ಮಗುವಿನ ಆಗಮನದ ಹರ್ಷ ಎಲ್ಲರೊಡನೆ ಹಂಚಿಕೊಳ್ಳುತ್ತಾರೆ. ಇದನ್ನು ಓದಿದಾಗ ನನಗೆ ಕುವೆಂಪು ಅವರ “ಜೇನಾಗುವ” ಸಂಕಲನದಲ್ಲಿ ಅವರು ತಮ್ಮ ಮಗ ತೇಜಸ್ವಿ ಆಗಮನವನ್ನು ವರ್ಣಿಸಿದ ಈ ಸಾಲುಗಳು ನೆನಪಾದವು

“ಕೇಳ್ದೊಡನೆ ಚಿಮ್ಮಿ ತಾನಂದದೋಕುಳಿ ಬುಗ್ಗೆ” ಎನ್ನುತ್ತಾರೆ ಈ ಸಂಭ್ರಮಕ್ಕೆ ಅವರು.  ಹಾಗೆಯೇ  ಮುಂದುವರೆದು ಮಗುವನ್ನು

ಸ್ವಾಗತ ನಿನಗೆಲೆ  ಕಂದಯ್ಯ
ನಮ್ಮೆದೆ ಬಾನಿನ ಚಂದಯ್ಯ

ಎಂದು ಸ್ವಾಗತಿಸುತ್ತಾರೆ. ಈ ಕವಿತೆಯಲ್ಲೂ ಅದೇ ಹರ್ಷೋಲ್ಲಾಸ ನಲಿದಾಡುತ್ತದೆ.

ನಗುವೇ ನಗವು ಕವನದಲ್ಲಿ ಮಗುವಿನ ನಿಷ್ಕಲ್ಮಶ ನಗುವನ್ನು ವರ್ಣಿಸುತ್ತಾ ಕಂದನ ನಸುನಗೆ ಮನೆಯನ್ನು ನಂದನ ಮಾಡುತ್ತದೆ ಎನ್ನುತ್ತಾರೆ. ಹಾಗೆಯೇ ನಗುವಿನ ಮಹತ್ವವನ್ನು ಹೀಗೆ ಬಣ್ಣಿಸುತ್ತಾರೆ

ಮನಸಲಿ ಕಾಳಿಕೆಯಿರದೆಯೆ ನಕ್ಕರೆ
ಬಾಳದು ಜೇನಿನ ಸಕ್ಕರೆಯು
ಒಳಗಿನ ದುಗುಡವ ಹೊರಗಡೆ ಚೆಲ್ಲಲು
 ಜೀವನವೆಂದಿಗು ಅಕ್ಕರೆಯು

ಮಕ್ಕಳಾಟ ಮನಸ್ಸಿಗೆ ಸವಿ ಮೋದ ಅಷ್ಟೇ ಅಲ್ಲದೆ ಅವುಗಳಿಂದ ನಾವು ಪಾಠ ಕಲಿಯುವುದು ಸಾಕಷ್ಟಿದೆ ಎಂಬುದು ಕವಿಯ  ಅನ್ನಿಸಿಕೆ. “ಕಂದನ ಬಾಲಲೀಲೆ”  ಕವನದಲ್ಲಿ ಮಗುವು ಮಂಚದಡಿ ಅಂಬೆಗಾಲಿಕ್ಕುತ್ತಾ ಹೋಗಿ ತಿರುಗಿ ನೋಡಿದ್ದು ನಿಮಗೆ ಹೀಗೆ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದಂತೆ ಅನ್ನಿಸುತ್ತದೆ . ಹಾಗಾಗಿಯೇ ಪ್ರತಿಯೊಂದರಲ್ಲೂ ಪಾಠ ಕಲಿಯುವುದಿದೆ ಎಂದೂ, ಭಾವನೆಗಳನ್ನು ಹಾಗಾಗಿಯೇ ವ್ಯಕ್ತಪಡಿಸುವುದರಲ್ಲಿಯೇ ಬಾಳಿನ ಸೊಗ ಇದೆ ಎಂಬುದನ್ನು ಈ ಸಾಲುಗಳಲ್ಲಿ ಧ್ವನಿಸುತ್ತಾರೆ

ಜಗದಲ್ಲಿ ನಮಗೆ ಇದೇ ಪಾಠ ತಿಳಿಯೆ ಮಕ್ಕಳಲು ಕಲಿವುದುಂಟು
ನಗುವಾಗ ನಕ್ಕು ಅಳುವಾಗ ಅತ್ತು
ಚಲುವಲ್ತೆ ಬಾಳಗಂಟು

ಪುಟ್ಟ ಕಂದನ ಸ್ವಗತವಾದ “ಕುಳಿತ ಕಂದನ ಮನಸ್ಸು ” ಕವನದಲ್ಲಿ ತನ್ನನ್ನು ಎತ್ತಿಕೊಳ್ಳದೆ ಸುಮ್ಮನೆ ಕುಳ್ಳಿರಿಸಿ ಫೋಟೋ ತೆಗೆಯುವ ಅಪ್ಪ-ಅಮ್ಮಂದಿರನ್ನು ಕುರಿತು

ನನ್ನ ಕೂರಿಸಿ ಚಿತ್ರ ತೆಗೆಯುವ
ನಿಮ್ಮ ಮನಸನ್ನು ಬಲ್ಲೆನು
ಚಿನ್ನವೆನುತಲಿ ಮುದ್ದುಗರೆಯುವ
ಮಾತ ಸೊಗಸನ್ನು ಬಲ್ಲೆನು

ಎನ್ನುತ್ತಾ ಮಗುವಿನ ಭಾವನೆ ಹೀಗಿದ್ದಿರಬಹುದು ಎಂದು ಊಹಿಸುತ್ತಾರೆ.

“ಏನನ್ನು ನೋಡುತ್ತಾ ಕುಳಿತಿರುವೆ ನಮ್ಮ ಭಾವಗಳನ್ನು ನಿಮ್ಮಲ್ಲಿ ಕಾಣುತ್ತೇವೆಯೇ” ಎಂಬ ದೊಡ್ಡವರ ಪ್ರಶ್ನೆಗೆ “ಕಂದನ ಉತ್ತರ” ಕವನದಲ್ಲಿ ಮಗು

ನನ್ನ ಜೊತೆಯಲ್ಲಿ ನಗುತ
ನೋವ ಮರೆಯಿರಿ ನೀವು
ಕಷ್ಟಗಳ ಮಧ್ಯದಲಿ
ಸುಖವನುಣುವಂತೆ

ಎಂದು ಉತ್ತರಿಸುತ್ತದೆ

“ಮಗುವಿನ ಮಜ್ಜನ”ದಲ್ಲಿ ಕವಿ ಮಗುವನ್ನು ಬೆಳೆಸುವ ರೀತಿ ಬದಲಾಗಿರಬಹುದು ವಿನಹ ತಾಯತನ ಮತ್ತು ಬಾಲಲೀಲೆ  ಕಾಲ ಕಾಲಕ್ಕಾಗಲಿ ಅಥವಾ ಬಡತನ ಸಿರಿತನದಲ್ಲಾಗಲಿ ಬದಲಾಗದು ಎಂದು ಹೇಳುತ್ತಾರೆ. ಅಂದಿನ ಯಶೋಧೆ ಕೃಷ್ಣನಿಂದ ಹಿಡಿದು ಇಂದಿನ ನವಯುಗದ ಅಮ್ಮ ಮಗುವಿನವರೆಗೆ ಬಾಲಲೀಲೆಗಳು ಕೊಡುವ ಸಂತಸ ಅದೇ, ತಾಯ್ತನದ ಸಂತೃಪ್ತಿ ವಾತ್ಸಲ್ಯ ಅದೇ,.

ಕಾಲ ಹಳತಾಗಿರಲಿ ಇಲ್ಲ ಹೊಸದಾಗಿರಲಿ
ಬಾಲಲೀಲೆಯಲೆಂದು ವ್ಯತ್ಯಾಸವಿಲ್ಲ
ನಾಳೆ ನೆನ್ನೆಗಳಿರಲಿ ಸಿರಿಯು ಬಡತನವಿರಲಿ
ತಾಯ್ತನವದೆಂದಿಗೂ ಬದಲಾಗಲಿಲ್ಲ

ಸ್ವಗತ ಮತ್ತು ಬೆಳ್ಳಿ ಬೆಳಗು ಕವನಗಳಲ್ಲಿ ಮಗುವಿನ ದೃಷ್ಟಿಯಿಂದ ಪ್ರಪಂಚವನ್ನು ನೋಡಿ ವರ್ಣಿಸುವ ಕವಿಯು “ಬಾಲ ಲೀಲೆ” ಕವನದಲ್ಲಿ ತಾತನಾದ ತಮ್ಮ ಮನದಾಳವನ್ನು ಹೀಗೆ ತೆಗೆದಿಡುತ್ತಾರೆ

ಏಸು ಪುಣ್ಯವೋ ಕಾಣೆ ಮೊಮ್ಮಗುವ ಲಾಲಿಪುದು
ಕೂಸಿನಂದದಿ ಬಂದ ಮನೆಯ ಬೆಳಕನ್ನು

ಮೊಮ್ಮಗುವಿನ ಮುಗ್ಧ ನಗುವ  ನೋಡುವ ತಾತನಿಗೆ ಹೀಗನಿಸುತ್ತದೆ

ಮನದ ಕೊಳೆಯ ತೊಳೆಯ ನಗು
ಮನುಜ ಕುಲದ ಕಲೆಯ ನಗು
ನಗುವಿಲ್ಲದ ಬದುಕೆಲ್ಲಿದೆ
ನಗುನಗುತಾ ನಲಿವ ಬಾಳಲಿ

ಮಗು ಮತ್ತು ಗುಬ್ಬಿಯ ನಡುವಿನ ಸಂಭಾಷಣೆಯನ್ನು ಪುಟ್ಟ ಪುಟ್ಟ ಸಾಲುಗಳಲ್ಲಿ ಹಿಡಿದಿಡುವ ಕವಿ ಪರಿಸರ ಪ್ರೇಮ  ಹಾಗೂ ಕಾಳಜಿಯನ್ನು ಮೆರೆಯುತ್ತಾರೆ.

“ಮನೆಯ ಸಿರಿ” ಕವನದಲ್ಲಿ ತಾಯಿಯ ಮನದಾಳದ ಮಾತುಗಳು ಹೀಗೆ ಹೊರಬರುತ್ತದೆ
ನನ್ನ ನಲಿವಿನ ಬಳ್ಳಿ ನೋಡುತಿರೆ ನಿನ್ನನ್ನು
ಮತ್ತೊಮ್ಮೆ ತಾಯ್ತನವ ಬಯಸುವೆನು ನಾನು

ಹಿಂದಿನವರು ಹೇಳುವ ಪ್ರಸವ ವೈರಾಗ್ಯದ ಬಗ್ಗೆ ನೆನಪು ತಂದಿತು.

ಮಗುವಿಗೆ ವರ್ಷ ತುಂಬಿದಾಗ ಹುಟ್ಟು ಹಬ್ಬದ ಸಂಭ್ರಮದಲ್ಲಿ ಮಗುವಿನ ದೃಷ್ಟಿಯಲ್ಲಿ ಅದು ಕೇಳುವ ಉಡುಗೊರೆ ಇದು
ನಾನು ಬೆಳೆಯಲು ನಿಮ್ಮ ಹರಕೆಯೇ ವಜ್ರಕವಚವು ಆಗಲಿ
ನಿಮ್ಮ ಹರಕೆಯ ಬಲದ ಎದುರಲಿ
ಬರುವ ಕಷ್ಟವು ನೀಗಲಿ

ನಿಜಕ್ಕೂ ಇದೇ ತಾನೇ ಎಲ್ಲಾ ಮಕ್ಕಳಿಗೂ ಮನೆಯ ಹಿರಿಯರು ನೀಡುವ ಆಶೀರ್ವಾದ

ಮತ್ತೊಂದು ಮಗುವಿನ ಸ್ವಗತ “ಮಗುವಿನ ಒಳದನಿ” ಕವನದಲ್ಲಿ ಇಂದಿನ ಮಕ್ಕಳ ಕಷ್ಟವನ್ನು ಅರ್ಥ ಮಾಡಿಕೊಂಡಂತೆ ಅವರ ಮನಸ್ಸನ್ನು ತೆರೆದಿಟ್ಟಂತೆ ಮಗುವಿನ ಒಳದನಿ ಹೀಗೆ ಅನಾವರಣಗೊಳ್ಳುತ್ತದೆ

ನಿಮ್ಮ ಗಡಿಬಿಡಿಯಲ್ಲಿ
ನನ್ನ ಬಾಲ್ಯವನೆಲ್ಲ
ಕಳೆಯದಿರಿ ದೊಡ್ಡವರೆ
ಎಳೆ ಮಗುವು ನಾನು

ಇಂದಿನ ಧಾವಂತದ ಯುಗದಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಉದ್ಯೋಗಸ್ಥರಾಗುತ್ತಿರುವಾಗ ನಿಜಕ್ಕೂ ಇದು ಎಲ್ಲ ಮಕ್ಕಳ ಒಳದನಿಯೆ ಅನಿಸುತ್ತದೆ.

“ಹರುಷದ ವರುಷ” ಕವನದ ಸಾಲುಗಳು

ಬಾಳ ಬೆಳಕನ್ನು ಚೆಲ್ಲುತಲ್ಲೆಡೆ
ಮನೆಯ ಜನಕ್ಕೆ ತಾನು ತಂಪು ಬೀಸಣಿಗೆಯಾದನು

ಜನಪದ ತ್ರಿಪದಿ “ಕೂಸಿದ್ದ ಮನೆಗೆ ಬೀಸಣಿಗೆ ಯಾತಕ” ಸಾಲುಗಳನ್ನು ನೆನಪಿಸುತ್ತವೆ.

ಸೋಮೇಶ್ವರ ಶತಕ ಹಾಗೂ ಮಂಕುತಿಮ್ಮನ ಕಗ್ಗಕ್ಕೆ ಅರ್ಥ ಮತ್ತು ವ್ಯಾಖ್ಯಾನಗಳನ್ನು ಬರೆದ, ಹಳೆಗನ್ನಡ ಪ್ರಕಾರದಲ್ಲಿ ಬಹಳಷ್ಟು ಕೃತಿಗಳನ್ನು ರಚಿಸಿರುವ ತನಾಶಿ  ಅವರು ಸರಳ ಸುಂದರ ಪದಗಳಲ್ಲಿ ಈ ಕವನಗಳನ್ನು ರಚಿಸಿರುವುದು ನಿಜಕ್ಕೂ ಅಚ್ಚರಿಯನ್ನು ತರುತ್ತದೆ. ಶ್ರೀ ಗುರುರಾಜ ಕರ್ಜಗಿ ಯವರು ಕವಿಗಳ  “ಮಂಕುತಿಮ್ಮನ ಕಗ್ಗ ವ್ಯಾಖ್ಯಾನ”ಕ್ಕೆ ಮುನ್ನುಡಿ ಬರೆಯುವಾಗ “ನಿತ್ಯ ಬದುಕನ್ನು ಆಧ್ಯಾತ್ಮಕ್ಕೆ ಹೊಂದಿಸುವುದು ತನಾಶಿಯವರ ಸ್ಥಾಯೀ ಭಾವ” ಎನ್ನುತ್ತಾರೆ. ಈ ಸಾಕ್ಷಿ ಪ್ರಜ್ಞೆ ಮೆರೆಯುತ್ತಿರುವುದು ಕೆಲವೊಂದು ಕವನ ಸಾಲುಗಳಲ್ಲಿ ಹೊಳೆಯುತ್ತವೆ. “ಕೂಸಿನ ನಿದ್ದೆ” ಕವನದಲ್ಲಿ

ಎಷ್ಟು ಗಳಿಸಿ ಮೆರೆದರೇನು ಮಾನವನೇ ನೀನು
ಮಗುವಿನಂತೆ ನಿದ್ದೆಯನ್ನು ಮಾಡುವೆಯ ನೀನು
ಎನ್ನುವ ಸಾಲುಗಳು ಇದನ್ನು ಸ್ವಷ್ಟೀಕರಿಸುತ್ತದೆ.

“ನಗುವೇ ಜೀವನ” ಕವನದ

ಬದುಕ ಘಟನೆ
ಹಾಸ್ಯವಾಗ್ಲಿ
ಬದುಕೆ ಹಾಸ್ಯವಾಗದಿರಲಿ
ಗುಣೀಭೂತ ವ್ಯಂಗ್ಯವಿರ್ಲಿ
ಗುಣವು ಮಾಯವಾಗದಿರಲಿ

ಎನ್ನುವ ಜೀವನ ಸತ್ಯದ ಸಾಲುಗಳು ಸಹ ಅವರ ಇದೇ ಭಾವವನ್ನು ಸೂಚಿಸುತ್ತದೆ.

“ಮಗುವಿನ ಒಳದನಿ” ಕವನದ ಈ ಸಾಲುಗಳು  ಅವರು ವಾಸ್ತವತೆಯನ್ನು ಅರ್ಥೈಸಿಕೊಂಡಿರುವ ರೀತಿಗೆ ದ್ಯೋತಕ.

ಒಂಟಿತನ ನೀವಾಗಿ
ಬರ ಸೆಳೆದುಕೊಂಡಿದ್ದು
ನಾನಿಲ್ಲವೇ ನಿಮಗೆ ಜೊತೆಯಾಗಿರಲು

ಎಂದು ಮಗುವೇ ದೊಡ್ಡವರನ್ನು ಸಂತೈಸುತ್ತದೆ.

“ಕನಸ ಕೊಟ್ಟವನು” ಕವನದಲ್ಲಿ ಮಿಠಾಯಿ ಮಾರುವವನು ಮಕ್ಕಳಿಗೆ ಕೊಡುವ ಹರ್ಷವನ್ನು ಬಣ್ಣಿಸುತ್ತ ಆದರೆ ಅವನು ಎಂದಿಗೂ ಅನುಭವಿಸುವ ನೋವನ್ನು ಈ ಸಾಲುಗಳಲ್ಲಿ ಹಿಡಿದಿಡುತ್ತಾರೆ.

ಅಂದು ಅವ ಕೊಟ್ಟ ಕನಸುಗಳ
ಹಿಡಿದು ಬೆಳೆದೆವು ನಾವು
ಕನಸು ಕೊಟ್ಟವನ ಬದುಕು
ಇಂದಿಗೂ ಕಹಿಬೇವು.

ಇಂದಿಗೂ ಮನೆಮನೆಯೂ ಬೃಂದಾವನವೇ ಮನೆಯ ಪ್ರತಿ ಪುಟ್ಟ ಕಂದನೂ ಬಾಲಕೃಷ್ಣನ ಪ್ರತಿರೂಪವೇ.  ಹಾಗಾಗಿಯೇ ಇವರ ಬಾಲಕೃಷ್ಣನಿಗೆ ಬರೆದ ಭಾಮಿನಿಗಳು ಇವರ ಮೊಮ್ಮಗನಿಗೆ ಅನ್ವಯಿಸುವಂತೆಯೇ ಇವೆ.. ಮೊಮ್ಮಗನನ್ನು ಬಣ್ಣಿಸುವ ಒಂದು ಸುಂದರ ಭಾಮಿನಿ ಇಲ್ಲಿ ನಿಮ್ಮ ಓದಿಗಾಗಿ

ಅರಳುಗಂಗಳ ಪರಮ ಪಾವನ
ಸುರರ ಲೋಕದ ಪಾರಿಜಾತವು
ಮರೆತು ಭೂಮಿಗೆ ಇಳಿದು ಬಂದಿತೊ ಜನರ ಕಣ್ಗಳ ತಣಿಸಲು
ಗರಿಮೆಯೊಂದಿಗೆ ತಂದೆ ತಾಯ್ಗಳ
ವರದ ಕಾಣ್ಕೆಯ ಚೆಲುವ ರೂಪದಿ
ಅರರೆ ಸೊಬಗಿನ ಮನದ ಮೋಹಕ ನಮ್ಮ ವಿಜಯನ ಕುವರನು

ಮುದ್ದಾದ ಮುಖಪುಟ ಇದಕ್ಕೆ ರೂಪದರ್ಶಿ ಪುಸ್ತಕದ ಹೀರೋ ಹಿಮ್ಮತ ಮತ್ತು ಅವನಮ್ಮ ಮತ್ತು ಸವಿ ಘಳಿಗೆಗಳ ಹಲವಾರು  ಫೋಟೋಗಳು ಈ ಪುಸ್ತಕದಲ್ಲಿದ್ದು ಗಸಗಸೆ ಪಾಯಸದ ಮಧ್ಯೆ ಗೋಡಂಬಿಯಂತೆ ಸವಿಯನ್ನು ಹೆಚ್ಚಿಸುತ್ತದೆ.

ಮನದ ತುಡಿತ ಮಿಡಿತಗಳಿಗೆ ಭಾವಗಳಿಗೆ ಪದ ರೂಪವನ್ನು ಅನಾಯಾಸವಾಗಿ ನೀಡುವ ಈ ಕವಿ ಛಂದೋಬದ್ಧ ರಚನೆಯಲ್ಲೂ ಸಾಕಷ್ಟು ಪಳಗಿದವರು. ಅನೇಕ ಗುಂಪುಗಳಲ್ಲಿ ಮಾರ್ಗದರ್ಶನ ನೀಡುತ್ತಾ ಗುರು ಸ್ಥಾನದಲ್ಲಿ ಇರುವಂತಹವರು.  ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಕವನಗಳ ಸ್ಪೂರ್ತಿ ರಚನೆಗಳಿಗೆ ಕಾರಣವಾದ ಇವರ ಮೊಮ್ಮಗ ಹಿಮ್ಮತ್ ನ ಭೇಟಿಯೂ ಆಗಿದ್ದು ನನಗೆ ಸಂತಸದ ವಿಷಯ.  ಈ ಪುಸ್ತಕಕ್ಕೆ ಅವರು ಬೆಲೆ ನಿಗದಿಪಡಿಸಿಲ್ಲ ಹೌದು ಖಂಡಿತ ಇದು ಅಮೂಲ್ಯ ಕೃತಿ.  ಇವರ ಪ್ರಕಟಿತ ಐದನೇ ಕೃತಿ ಆಗಿದ್ದರೂ ಸಾಕಷ್ಟು ಪುಸ್ತಕಗಳನ್ನು ಪ್ರಕಟಿಸುವಷ್ಟು ಸಾಹಿತ್ಯ ಕೃಷಿ ಇವರದು. ಬೇಗ ಇವೆಲ್ಲಾ ಪುಸ್ತಕ ರೂಪದಲ್ಲಿ ಬಂದು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಒಳ್ಳೆಯ ಉಡುಗೊರೆಯಾಗಲಿ ಎಂಬ ಆಶಯ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

One thought on “

Leave a Reply

Back To Top