ಶಾಂತಿವಾಸು ಕವಿತೆ-ಬನ್ನಿ ಪದಗಳೇ ಬನ್ನಿರಿ

ಕಾವ್ಯ ಸಂಗಾತಿ

ಶಾಂತಿವಾಸು

ಬನ್ನಿ ಪದಗಳೇ ಬನ್ನಿರಿ

ಸಂಗಾತಿ ಬ್ಲಾಗ್: ಪದಗಳೇ, ಸ್ವಲ್ಪ ನಿಲ್ಲಿ.
ಭಾವ ತುಂಬಿ ದೈವದಲಿ ಮೊರೆಯಿಡುತಾ,
ಹಣತೆ ಹಚ್ಚುವ ಲೋಗರಿಗೆ ದೈವ ಕೃಪೆಯೆಡೆ
ಕರೆದೊಯ್ವ ನಿಮ್ಮನು ಕವಿತೆ ಮಾಡುವೆ.
ನೀವಲ್ಲವೇ ಭಕ್ತರ, ದೈವದೊಡನೆ ಬೆಸೆವ ಸೇತುವೆ?
ಬನ್ನಿ ಪದಗಳೇ ಬನ್ನಿರಿ.

ಪದಗಳೇ, ಕರೆದಾಗ ಬನ್ನಿ.
ಮಸಣದ ದಿಕ್ಕು ಮರೆತು “ನಾನು ನನ್ನಿಂದಲೇ”
ಎಂದು ಮೆರೆದು ಸೊಟ್ಟಗಾದುದ, ಬಾಯಿ ಮುಚ್ಚಿಸಿ
ನಿಮ್ಮ ಮೂಲಕವೇ   ಅಟ್ಟದಿಂದಿಳಿಸುವೆ.
ನನ್ನ ಅಕ್ಕಪಕ್ಕದಲ್ಲೇ ನಿಂತಿರಿ.
ಬನ್ನಿ ಪದಗಳೇ ಬನ್ನಿರಿ.

ಪದಗಳೇ, ನನ್ನ ನಂಬಿ ಬನ್ನಿ.
ವಜ್ರದಂತೆ ಕಠಿಣವಾದ ನಿಮ್ಮನು ಉಜ್ಜಿ ಉಜ್ಜಿ ಹೊಳೆವಂತಾಗಿಸಿ,
ಬಾಗಿ ಬಳಕುವ ಪುಟಕ್ಕಿಟ್ಟ ಬಂಗಾರದ ಹಾರವಾಗಿಸುವೆ.
ನಿಮ್ಮ ಕಾಠಿಣ್ಯವ ಮೆದುವಾಗಿಸಿ ಬಳಸುವೆ.
ಬನ್ನಿ ಪದಗಳೇ ಬನ್ನಿರಿ.

ಪದಗಳೇ, ಒಂಚೂರು ಅತ್ತಿತ್ತ ಜರುಗಿ ನಿಲ್ಲಿ.
ದುಃಖ ಹೆಪ್ಪುಗಟ್ಟಿದ್ದರೂ ನಿಮ್ಮನರ್ಥೈಸಿಕೊಳ್ವ ಮನವ ಕರಗಿಸಿ,
ಅಳಿಸಿ, ಹಗುರಾಗಿಸುವಲ್ಲಿ ನಿಮ್ಮನೇ ಮುಂದಾಳಾಗಿ ಸ್ಥಾಪಿಸುವೆ.
ಮನಸ್ಸಿಗೆ ಎಟುಕುವಷ್ಟು ದೂರ ದೂರ ನಿಲ್ಲಿ.
ಬನ್ನಿ ಪದಗಳೇ ಬನ್ನಿರಿ.

ಪದಗಳೇ, ನಿಮಗೆ ಅಪಮಾನಗೊಳಿಸಲಾರೆ.
ಮನಸಿನ ಮಾತುಗಳನು ಮಿದುಳಿಗೆ ತಾಕಿಸಿ,
ಕೆಟ್ಟುದನ್ನಲ್ಲೇ ಸೋಸಿ ನಂತರವೇ ನಾಲಿಗೆಗೆ ನೀಡುವೆ.
ನಿಮಗೆ ಗೌರವ ನೀಡುವೆ.
ದಯವಿಟ್ಟು ಬನ್ನಿ.
ಬನ್ನಿ ಪದಗಳೇ ಬನ್ನಿರಿ.

ಪದಗಳೇ, ನಿಮ್ಮನು ಕಿಲಕಿಲನೆ ನಗಿಸುವೆ.
ನಾಳೆಗಳ ನಂಬದಷ್ಟು ವಿಷಾದ, ದುಗುಡ
ತುಂಬಿದ ಮನಕೆ ನಿಮ್ಮ ನಗುವೇ ಔಷಧವು.
ಮೊದಲು, ನೀವು ನಗುನಗುತ್ತಾ ಇರುವಂದದಿ
ನಗೆಯ ಪಟ್ಟಕ್ಕೇ ನಿಮ್ಮನ್ನೇರಿಸುವೆ.
ಬನ್ನಿ ಪದಗಳೇ ಬನ್ನಿರಿ.

ಪದಗಳೇ, ನೀವಿಲ್ಲದೆ ಕವನವೇ ಇಲ್ಲ.
ಹೆಪ್ಪುಗಟ್ಟಿದ ಮೌನದಲಿ, ಮಂಜು ಮುಸುಕಿದ ಬೈಗಿಗೆ
ಮಲ್ಲಿಗೆಯ ಘಮಲು ಮುತ್ತನಿಕ್ಕಲು, ನಾಲಿಗೆ ತಡವರಿಸಿದೆ.
ಪದಗಳು ಬೇಕೇ ಬೇಕಿವೆ. ಈಗಲ್ಲದೆ ಮತ್ತೆಂದು ಬರುವಿರಿ?
ಬನ್ನಿ ಪದಗಳೇ ಬೇಗ ಬನ್ನಿರಿ.

ಪದಗಳೇ, ನೀವೇಕೆ ಬರುತ್ತಿಲ್ಲ?ನಾನೇನು ತಪ್ಪು ಮಾಡಿದೆ?
ಹೇಳಿ ಹೇಳಿ. ನಾನು ನಿಮ್ಮನೇನು ಸಾಲ ಕೇಳಿದೆನೇ?
ಮಹಾಮಹಿಮರ ಸಹವಾಸ ಬಿಟ್ಟು ಬರಲು ಕೋರಿದೆನೇ?
ನಿಮ್ಮನ್ನಾರಾಧಿಸುವ ನನಗೂ, ಅಲ್ಪ ಕರುಣೆ ತೋರಿರಿ.
ಬನ್ನಿ ಪದಗಳೇ ಬನ್ನಿರಿ.

ಪದಗಳೇ ಬಳಿಗೆ ಬನ್ನಿ.
ಸುಮ್ಮನೆ ಕುಳಿತು ನಿಂತು ಹೊತ್ತು ಕಳೆವ ನಿಮ್ಮನ್ನಾಯ್ದು
ಅಂದವಾಗಿ ಕಟ್ಟಿ, ಚಂದದ ಗುಚ್ಛವಾಗಿಸುವೆ.
ಗುರುವನು ಭಜಿಸುವ ಮಹಾಮಹಿಮರಲ್ಲಿಗೇ
ನಿಮ್ಮನ್ನು ಸೇರಿಸುವೆ.
ಬನ್ನಿ ಪದಗಳೇ ಬನ್ನಿರಿ.


ಶಾಂತಿವಾಸು

2 thoughts on “ಶಾಂತಿವಾಸು ಕವಿತೆ-ಬನ್ನಿ ಪದಗಳೇ ಬನ್ನಿರಿ

  1. ತುಂಬಾ ಮಾರ್ಮಿಕವಾದ ಕವನ. ಮೇಡಂ

Leave a Reply

Back To Top