ಜಯವಂತ ಕಾಡದೇವರ ಕೃತಿ ಸಾನ್ನಿಧ್ಯ ಸುಯೋಗ ಅವಲೋಕನ ಡಾ. ಪ್ರಿಯಂವದಾ ಮ ಹುಲಗಬಾಳಿ.

ಪುಸ್ತಕ ಲೋಕ

ಜಯವಂತ ಕಾಡದೇವರ

ಸಾನ್ನಿಧ್ಯ ಸುಯೋಗ

ಡಾ. ಪ್ರಿಯಂವದಾ ಮ ಹುಲಗಬಾಳಿ.

ಕೃತಿ: ಸಾನ್ನಿಧ್ಯ ಸುಯೋಗ
ಲೇಖಕರು:ಜಯವಂತ ಕಾಡದೇವರ
ಪ್ರಕಾಶಕರು:ಡಾ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾಹಿತ್ಯ ಪ್ರತಿಷ್ಠಾನ.  ಬೆಳಗಾವಿ
ಪುಸ್ತಕದ ಬೆಲೆ- ೧೦೦ ರೂಪಾಯಿ
ಪುಸ್ತಕಕ್ಕಾಗಿ ಸಂಪರ್ಕಿಸಿ.೯೯೦೨೧೩೦೦೪೧

 ‘ನಾ ದೇವನಲ್ಲದೆ ನೀ ದೇವನೇ?
ನೀ ದೇವನಾದಡೆ ಎನ್ನನೇಕೆ ಸಲಹೆ?
ಆರೈದು ಒಂದು ಕುಡಿತೆ ಉದಕವನೆರವೆ, ಹಸಿದಾಗ ಒಂದು ತುತ್ತು ಓಗರವನಿಕ್ಕುವೆ,
ನಾ ದೇವ ಕಾಣಾ, ಗುಹೇಶ್ವರಾ’ .

ತನ್ನ ಸತ್ಕಾರ್ಯಗಳಿಂದ ಮಾನವ ದೈವತ್ವಕ್ಕೆ ಏರಬಲ್ಲ ಎಂಬುದ ಸಾರಿದವರು‌ ಬಸವಾದಿ ಶಿವಶರಣ ಶರಣೆಯರು. ಬಸವಾದಿ ಶಿವ ಶರಣ ಶರಣೆಯರ ಆಶಯಗಳನ್ನೇ ಹಾಸಿ ಹೊದ್ದುಕೊಂಡವರು ಗದುಗಿನ ಜಗದ್ಗುರು ಶ್ರೀ ತೋಂಟದಾರ್ಯ ಮಹಾಸ್ವಾಮೀಜಿಯವರು. ‘ಅಚ್ಚಕನ್ನಡದ ಸ್ವಾಮಿಜಿ’ ‘ಭಾವಕ್ಯತೆಯ ಸ್ವಾಮಿಜಿ’,’ ಕನ್ನಡದ ವಿವೇಕಾನಂದ’ , ‘ಕನ್ನಡದ ಜಗದ್ಗುರು’, ‘ ಶ್ರಮ ಸಂಸ್ಕೃತಿಯ ರಾಯಭಾರಿ’ ‘ಮನುಕುಲದ ಬೆಳಕು’, ‘ಸಾಮಾನ್ಯರ ಸ್ವಾಮಿಜಿ’, ‘ ಸಮಾಜಮುಖಿ’,’ಕ್ರಾಂತಿಕಾರುಣ್ಯ’ ಎಂಬೆಲ್ಲ ಬಿರುದುಗಳನ್ನು ಹೊಂದಿದ ಮಾತೃಮನದ ಸ್ವಾಮಿಜಿಗಳೆಂದರೆ ನಮ್ಮ ‘ಗದುಗಿನ ಅಜ್ಜಾರು’ .
  ಬನಹಟ್ಟಿಗೂ ಗದುಗಿನ ಜಗದ್ಗುರುಗಳಿಗೂ ಅವಿನಾಭಾವ ಸಂಬಂಧ ಸಂಬಂಧದ ಕೊಂಡಿಯಾದವರು ನನ್ನ ವಿದ್ಯಾಗುರುಗಳಾದ ಪ್ರೊ ಜಯವಂತ ಕಾಡದೇವರ ಅವರು. ಬನಹಟ್ಟಿಯ ಎಸ್ ಆರ್ ಎ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದ ಕಾಡದೇವರ ಸರ್ ಅವರು ಬಹುಮುಖ ವ್ಯಕ್ತಿತ್ವ ಹೊಂದಿದ ಸಾಹಿತಿ ಅವರು ಬೆಳವಡಿ ಮಲ್ಲಮ್ಮರಾಣಿಯ ಕುರಿತು ಬರೆದ ಲೇಖನ ಬೆಳವಡಿ ನಾಡಿನ ಜನರನ್ನು ಪ್ರೇರೇಪಿಸಿ ಮಲ್ಲಮ್ಮ ರಾಣಿಯ೩೦೦ನೆಯ ವಿಜಯೋತ್ಸವ ಆಚರಿಸುವಂತೆ ಮಾಡಿದ್ದು ಅವಿಸ್ಮರಣೀಯ. ಬೆಳವಡಿ ಮಲ್ಲಮ್ಮ  ರಾಣಿಯವರ ವಿಜಯೋತ್ಸವದಿಂದ ಪ್ರಾರಂಭವಾಯಿತು ಕಾಡದೇವರ ಅವರ ಹಾಗೂ ಪೂಜ್ಯರ ಭಾಂಧವ್ಯ. ಬನಹಟ್ಟಿಯ ಜನತಾ ಶಿಕ್ಷಣ ಸಂಘದ ವಾಣಿಜ್ಯ ಪದವಿ ಮಹಾವಿದ್ಯಾಲಯಕ್ಕೆ  ತಮ್ಮಣ್ಣಪ್ಪ ಚಿಕ್ಕೋಡಿ ಅವರ ಹೆಸರಿಡುವ ಕಾಡದೇವರ ಸರ್ ಹೋರಾಟಕ್ಕೆ  ಪೂಜ್ಯರು ಬೆನ್ನಲುಬಾಗಿದ್ದರು ಎನ್ನುವ ವಿಷಯ ಈ ಪುಟ್ಟ ಕೃತಿಯಲ್ಲಿ ಕಾಣಿಸಿದ್ದಾರೆ. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಬಹುಮುಖ್ಯ ಪಾತ್ರವಹಿಸಿದ್ದ ಶ್ರೀ ಚಿಕ್ಕೋಡಿ ತಮ್ಮಣ್ಣಪ್ಪನವರು ಬನಹಟ್ಟಿಯಲ್ಲಿನ ಶಿಕ್ಷಣ ಕ್ರಾಂತಿಯ ಹರಿಕಾರರು. ಜನರ ಮಾನ ಮುಚ್ಚುವ ಕಾಯಕದಲ್ಲಿ ನಿರತರಾದ ನೇಕಾರರ ಬದುಕಿನಲ್ಲಿ ಅಕ್ಷರದ ಬಟ್ಟೆ ನೆಯ್ದವರು ಶ್ರೀ ತಮ್ಮಣ್ಣಪ್ಪನವರು. ವಚನ ಪಿತಾಮಹರ ಬಾಳಿಗೆ ದಾರಿ ತೋರಿದವರು ಶ್ರೀ ತಮ್ಮಣ್ಣಪ್ಪನವರು. ಅಂತಹ ಮಹಾನ್ ತ್ಯಾಗಿಯ ಹೆಸರು ಶಾಶ್ವತವಾಗಿ ಶಿಕ್ಷಣ ಲೋಕದಲ್ಲಿ ಉಳಿಯಲಿ ಎಂಬ ಸದಾಶಯ ಅರಿತು ಪೂಜ್ಯರು ಕಾಡದೇವರ ಸರ್ ಹೋರಾಟಕ್ಕೆ ಸ್ಪಂದಿಸಿದರು. ಒಳ್ಳೆಯದು ಏನೇ ಇದ್ದರೂ ಅದಕ್ಕೆ ಪೂಜ್ಯರ ಬೆಂಬಲ ಇರುತ್ತಿತ್ತು ಎನ್ನುವುದಕ್ಕೆ ಇಲ್ಲಿನ ಲೇಖನಗಳು ಸಾಕ್ಷಿ.
ಲೇಖಕರು ತಾವು ಪೂಜ್ಯರೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲ ಘಟನೆಗಳನ್ನು 22 ಲೇಖನಗಳಲ್ಲಿ ಈ ಕೃತಿಯ ಮೂಲಕ ಓದುಗರಿಗೆ ನೀಡಿದ್ದಾರೆ. ಬನಹಟ್ಟಿಯ ವಿಶೇಷತೆಗಳನ್ನು ಕಾಡದೇವರ  ಸರ್ ಅವರಿಂದ ತಿಳಿದುಕೊಂಡು ಅವರನ್ನು ಗೌರವಿಸುವ ಆಶಯದಿಂದ ಆ ವಿಶೇಷ ವ್ಯಕ್ತಿಗಳ ಕುರಿತು ಕೃತಿ ಬರೆಯಿಸಿ ಕನ್ನಡದ ಓದುಗರಿಗೆ ನೀಡಿದರು. ಸ್ವಾತಂತ್ರ ಹೋರಾಟಗಾರ ಕಲಕಂಬ ಮಾಸ್ತರರು, ಕಾದಂಬರಿ ಲೋಕದ ನಕ್ಷತ್ರ ದು ನಿಂ ಬೆಳಗಲಿ ಅವರು, ದೇವನ ಮನೆಯಕವಿ ಬ ಗಿ ಯಲ್ಲಟ್ಟಿ ಅವರು, ಶ್ರೇಷ್ಠ ವೈದ್ಯ ಸಾಹಿತಿ ಡಾ. ಸ ಜ ನಾಗಲೋಟಿಮಠರು ಹೀಗೆ ಹಲವಾರು ಮಹನಿಯರನ್ನು ಕನ್ನಡ ನಾಡಿಗೆ ಪರಿಚಯಿಸಲು ಅವರ ಕುರಿತು ಕೃತಿಗಳನ್ನು ಶ್ರೀಮಠದಿಂದ ಪ್ರಕಟಿಸಿದರು.
ಮತ್ತು ಹೃದಯ ಜಗದ್ಗುರುಗಳು ಬನಹಟ್ಟಿಗೆ ಆಗಮಿಸಿದಾಗ ತಮ್ಮ ಸ್ಪೂರ್ತಿದಾಯಕ ಭಾಷಣದ ಮೂಲಕ ಅನೇಕ ಪ್ರಗತಿಪರ ಕಾರ್ಯಗಳಿಗೆ ಪ್ರೇರಣೆ ಯಾದದ್ದು ಹಿರಿಯರಾದ ಆರ್ ಎಸ್ ಹುಲಗಬಾಳಿ ಮಾಸ್ಟರ್ ರನ್ನು ಶ್ರೀಮಠಕ್ಕೆ ಕರೆದು ಗೌರವಿಸಿದ್ದು ಬಗಿ ಎಲ್ಲಟ್ಟಿ ದಂಪತಿಗಳನ್ನ ಗೌರವಿಸಿದ್ದು ಮಲ್ಲಿಕಾರ್ಜುನ ಹುಲಗಬಾಳಿಯವರ ಸಾಹಿತ್ಯವನ್ನ ಮೆಚ್ಚಿಕೊಂಡದ್ದು ಈ ಎಲ್ಲ ಸಂಗತಿಗಳು ಈ ಕೃತಿಯಲ್ಲಿ ಹೊಳಹುಗೊಂಡಿವೆ. ಶ್ರೀಗಳ ಪಟ್ಟಾಧಿಕಾರದ ದಶಮಾನೋತ್ಸವ ಸಂದರ್ಭ, ಗುಲಾಬ್ ಡ್ರೈವರ್ ಕಥೆಯ ಕಥೆ ಪಟಾಧಿಕಾರ ರಜತ ಮಹೋತ್ಸವ ಜಯವಂತ ಮುನ್ನೊಳ್ಳಿ ಅವರಿಗೆ ಸನ್ಮಾನ, ಪ್ರದೀಪ ಕುಮಾರ್ ಹೆಬ್ರಿ ಅವರ ಯುಗಾವತಾರಿ ಚಿಂತನೆ ಎಸ್ ಆರ್ ಎ ಕಾಲೇಜಿನ ಅಮೃತ ಮಹೋತ್ಸವ ಹೀಗೆ ಹಲವಾರು ಪೂಜ್ಯರ ಕುರಿತ ಸಂಭ್ರಮ ಪಡುವ ಸಂತಸ ಪಡುವ ಸಂಗತಿಗಳನ್ನು ಲೇಖಕರು ಭಕ್ತಿಯಿಂದ ಅಭಿಮಾನದಿಂದ ಆಧಾರದಿಂದ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಬನಹಟ್ಟಿಯ ಮನೆಮಗಳಾದ ನನಗೆ ಈ ಕೃತಿಯನ್ನು ಓದಿದಾಗ ಹಲವಾರು ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದರಿಂದ ಭಾವ ತುಂಬಿ ಬಂದಿತು. ಪ್ರತಿಯೊಬ್ಬ ಕನ್ನಡಿಗನಿಗೂ ಹಾಗೂ ಇಂದಿನ ಯುವ ಜನಾಂಗಕ್ಕೂ ಶ್ರೀಗಳನ್ನು ಹತ್ತಿರದಿಂದ ಕಂಡ ಅನುಭವ ಆಗುವಂತೆ ಕೃತಿ ಮೂಡಿ ಬಂದಿದೆ ಎಂದರೆ ಅತಿಶಯೋಕ್ತಿಯೆನಲ್ಲ. ಪ್ರಕಾಶನದ ಸಂಚಾಲಕರಾದ ಪ್ರಕಾಶ ಗಿರಿಮಲ್ಲನವರ ಅವರ ಪ್ರಕಾಶಕರ ಮಾತು ಡಾ ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾಹಿತ್ಯ  ಪ್ರತಿಷ್ಠಾನದ ಧ್ಯೆಯೋದ್ದೇಶಗಳನ್ನು ಸವಿವರವಾಗಿ ತಿಳಿಸಿಕೊಡುತ್ತವೆ.  ಮಲ್ಲಿಕಾರ್ಜುನ ಹುಲಗಬಾಳಿಯವರ ಬೆನ್ನುಡಿ ಲೇಖಕರ ನನ್ನ ನುಡಿ ಕೃತಿಗೆ ಮೆರಗು ತಂದಿವೆ. ಅರ್ಥಪೂರ್ಣ ಮುಖಪುಟ ಹೊಸ ವಿಚಾರಗಳ ಬೆಳಕಿನ ಕಿಡಿ ತೋಂಟದ ಶ್ರೀ ಗಳಾಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆಯಾಗಿ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಅಪರೂಪದ ಕೃತಿ ಇದಾಗಿದೆ.


ಡಾ. ಪ್ರಿಯಂವದಾ ಮ ಹುಲಗಬಾಳಿ.


    

Leave a Reply

Back To Top