ಕಾವ್ಯಸಂಗಾತಿ
ಅರುಣಾ ನರೇಂದ್ರ
ಇರುಳ ಹೆಣಗು
ಹಗಲು ಕಣ್ಣೆವೆ
ತೀಡಿಕೊಳ್ಳುತ್ತಿರುವಾಗ
ಇರುಳು
ಬರಬರನೆ
ಮುಸುಕೆಳೆದುಕೊಂಡಿತು!
ಊಡುವ ದೀಪದ
ಬತ್ತಿಯಿಳಿಸಿ
ಕಂದೀಲು ಸರಿಸಿಟ್ಟು
ನಲುಗದ ಮಲ್ಲಿಗೆಯ
ಮುಖ ನೇವರಿಸಿ
ಮುದುಡದ ಹಾಸಿಗೆ
ಮಡಚಿ ಎತ್ತಿಟ್ಟೆ |
ಕಾದು ಕಾದು
ಆರಿ ಅಂಗಾರವಾದ
ಹಾಲಿರುವ
ಲೋಟ ತೊಳೆದಿಟ್ಟೆ !
ಸತ್ತ ಹಳವಂಡಗಳ
ಕಸಗುಡಿಸಿ
ಹೊರಚೆಲ್ಲಿ
ಉಷೆಯೆದೆಯ
ಅಪ್ಪಿಕೊಂಡೆ !
ಅವಳ ಸೆರಗೂ
ಏಕೋ….
ಕಣ್ಣೀರಲ್ಲಿ
ತೋಯ್ದು
ತೊಪ್ಪೆಯಾಗಿತ್ತು !
ನಾನು ಅವಳನ್ನು
ಅವಳು ನನ್ನನ್ನು
ಸಂತೈಸಲಾಗದೆ
ಬಿಕ್ಕು ಮತ್ತೆ ಒತ್ತರಿಸಿತು !
ಅರುಣಾ ನರೇಂದ್ರ,
ಶಿಕ್ಷಕಿ
ಕೊಪ್ಪಳ
ಬಹಳ ಚಂದದ ಕವಿತೆ