ಕಾವ್ಯ ಸಂಗಾತಿ
ಅಭಿಷೇಕ್ ಭಾರದ್ವಾಜ್
ಬೇಡದ ಅತಿಥಿ
:ಅಂದು:
ಹಸಿರು ತುಂಬಿ ತುಳುಕುತ್ತಿತ್ತು ಬನ
ಹಣ್ಣು ಕಾಯಿಗಳಿಗಿರಲಿಲ್ಲ ಬರ
ತಿಂದು ತೇಗ ಬಹುದಿತ್ತು ಸಂತಸದಿ ತುಂಬುತಲಿತ್ತು ಉದರ
ಎಲ್ಲೆಲ್ಲೂ ಸುಮಧುರ ಹಸಿರು ತುಂಬಿದ ರಮ್ಯ ವಾತಾವರಣ|
ಗಿರಿ ಶಿಖರಗಳಿಂದ ಹರಿಯುತಲಿದ್ದ ಜಲಧಾರೆಯ ಸಿಂಚನ
ಹಕ್ಕಿ ಪಕ್ಕಿಗಳ ಮಧುರ ಇಂಪಾದ ಗಾನ
ಮನತುಂಬಿ ಬಳಕುವ ಬಳ್ಳಿಎಲೆಗಳ ಮೇಲೆ ಇಬ್ಬನಿಯ ನರ್ತನ
ಹೂವಿನ ಮೇಲಣ ಭ್ರಮರದ ಸವಿಯಾದ ಝೇಂಕಾರ|
ಬಿದಿರಿನಾ ಗಿಡಗಂಟೆ ಕಾನನದಿ ವೃಕ್ಷಗಳ ಸಂತೆ
ಮರದ ಕೊಂಬೆಗಳು ಚಾಚಿ ನಿಂತಿರುವ ಮೇಘಗಳ ಕಂತೆ
ತಿಳಿಯುತ್ತಿರಲಿಲ್ಲ ಕಾನನದ ಸೌಂದರ್ಯ ಸವಿಯುವಾಗ ಸಾಗುತಲಿದ್ದ ಹೊತ್ತು
ಹೂ ದುಂಬಿಗಳ ಝೇಂಕಾರವೇ ಕಾನನದ ಸಂಪತ್ತು|
ಅಂದು
ಕಾಣೆಯಾಗಿದೆ ಹಚ್ಚ ಹಸಿರಿನ ಕಾನನ
ಬೆಳೆದು ನಿಂತಿದೆ ಬೃಹತ್ತಾದ ಕಟ್ಟಡಗಳ ಪಟ್ಟಣ
ಕಾಣಲು ಸಿಗುತ್ತಿಲ್ಲ ಮೈದುಂಬಿ ನಿಂತಿದ್ದ ವೃಕ್ಷಗಳ ಸಾಲು
ಕಾಣುತಿದೆ ಕಡಿದ ಮರಗಳ ಅವಶೇಷದ ಅಳಲು |
ನಾಶಪಡಿಸಿರುವರಿಂದು ನಮ್ಮ ನೆಲವೀಡ ಕಾಡು
ಸ್ವಾರ್ಥ ಜನಗಳಿಗಾಗಿ ನಿರ್ಮಿಸಿದರೀ ನಾಡು
ನೆಲೆಸಲಿಲ್ಲ ನಮಗಾಗಿ ನೆಲೆವೀಡು
ಯಾರು ಕೇಳುವರು ನಮ್ಮ ಈ ಒಡಲ ದುಃಸ್ಥಿಯ ಪಾಡು|
ತಿನ್ನಲು ಏನಿಲ್ಲ ನಾಡಿನೊಳು ಹೊಟ್ಟೆಗೆ ತುಂಬುವುದು ಏನು
ತಿನ್ನಲೋದರೆ ಬಡಿವರು ಬಡಿಗೆಯಿಂದ ಮುರಿವಂತೆ ಕಾಲು
ಎಲ್ಲಿ ನೋಡಿದರೂ ಕಾಣುವುದು ಬರಿ ಕಟ್ಟಡದ ಸಾಲು
ಕಾಣದೆ ಮರಗುತಿದೆ ಮನ ಸಾಲು ಮರಗಳ ಕಾಡು
ಇಲ್ಲಿ ನಮಗಿಲ್ಲ ಜೀವಿಸಲು ಮೀಸಲು |
ಏ ಸ್ವಾರ್ಥಿ ಮನುಜ ನಮ್ಮ ಒಡಲ ವೇಧನೆಯನೊಮ್ಮೆ ಅರಿಯಿರಿ
ನಮಗೂ ನಿಮ್ಮಂತೆ ಸಹಬಾಳ್ವೆ ಜೀವನವ ನೀಡಿರಿ
ನಮಗಾಗಿ ಪ್ರಕೃತಿಯ ರಕ್ಷಿಸಿರಿ
ಜೊತೆಗೂಡಿ ಸಾಮರಸ್ಯದಿ ಬಾಳಿರಿ |
ಯಾರು ಕೇಳುವರಿಲ್ಲಿ ನಮ್ಮ ಮನದ ಗೋಳು
ಹಸಿವ ನೀಗಿಸಲು ಸಿಗುತ್ತಿಲ್ಲ ತುತ್ತು ಕೂಳು
ಅನ್ನವಿಲ್ಲದೆ ಸಾಗಿಸಲಾದಿತೆ ಈ ಬಾಳು
ಮನವ ತಣಿಸಲು ಸಿಗದಾಗಿದೆ ಮರದ ನೆರಳು
ಕಾಣೆಯಾಗಿದೆ ಮೈದುಂಬಿ ನಿಂತಿದ್ದ ಮರದ ಬಿಳಲು
ಜಗದಿ ನಮಗಿಂದು ಬಂದಿಹುದು ಅಳಲು |
ಕಂಡ ತೋಟಗದ್ದೆಳಿಗೆ ಲಗ್ಗೆಯಿಟ್ಟು ಮನಪೂರ್ತಿ ತಿಂದಿದ್ದ ಗಳಿಗೆಯದು
ಅನ್ನಕ್ಕಾಗಿ ಅಲೆದಾಡುತಿಹ ದಿನವಿದು
ಯಾರಿಗೂ ಕಾಣದಾಗಿದೆ ಈ ನಮ್ಮ ದುಃಸ್ಥಿತಿ
ಜಗದಿ ನಾವಾಗಿಹೆವು ಯಾರಿಗೂ ಬೇಡದ ಅಥಿತಿ
ಹಸಿವಿಗೆ ಬಲಿಯಾಗಿ ಆಗುತಿಹುದು ಜೀವಿಗಳ ತಿಥಿ
ಎಲ್ಲವೂ ನಾಶ ಪಡಿಸಿದ ಮಾನವ ನೀನು ಒಮ್ಮೆ ಆಗುವೆ ಪ್ರಕೃತಿಯ ವಿಕೋಪಕ್ಕೆ ಆಹುತಿ
ಇದುವೇ ಕಾಲ ಚಕ್ರದೊಳಿರುವ ನೀತಿ
—————————————
ಶೈವಾನೀಕ