ಪುಸ್ತಕ ಸಂಗಾತಿ
ನಾವು ಒಬ್ಬೊಬ್ಬರು ಹಾರಬಲ್ಲವು ಪರಿಪೂರ್ಣತೆ ಸಾಧಿಸಬಲ್ಲವು
ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ. ಕವಿ ತಾನು ಅನುಭವಿಸಿ ಬರೆದಿದನ್ನು ಓದುಗ ಕಂಡು ಕೊಳ್ಳುತ್ತಾನೆ. ಆತ ವಿಮರ್ಶಕನಾಗಿ ಕವಿಯ ಅಂತರಾಳ ಹೊಕ್ಕಿ ಕೃತಿಯ ವಸ್ತು ವಿಷಯ ಜೊತೆಗೆ ಕವಿಯ ಮನಸ್ಥಿತಿ ಪರಿಸ್ಥಿತಿ ಅರಿಯುತ್ತಾನೆ. ಸಾಹಿತಿಗಳ ಜೀವನ ಕ್ರಮ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳ ನಡುವೆ ಅಳವಡಿಸಿಕೊಂಡ ಮೌಲ್ಯಗಳು ಅವರ ಜೀವನದಲ್ಲಿ ಘಟಿಸಿದ ಘಟನೆಗಳನ್ನು ಸಾಹಿತಿ ಹೇಗೆ ಓದುಗರಿಗೆ ನಿರೂಪಿಸಿದ್ದಾನೆ, ಅದು ಓದುಗನಿಗೆ ಹೇಗೆ ಪ್ರೇರಣೆಯಾಗಿದೆ. ಸಾಹಿತಿಗಳ ಕೃತಿ ಓದುವಿಕೆಯಲ್ಲಿ ನಮ್ಮ ಬದುಕು ಹೇಗೆ ಉತ್ತಮವಾಗಿಸಿಕೊಳ್ಳಲು ಮಾದರಿಯಾಗುತ್ತದೆ ಎಂಬುದನ್ನು ಹೆಚ್.ಕೆ.ಮಹೇಶ ಭಾರದ್ವಾಜ್ ತಮ್ಮ ಕವಿ ಕೃತಿಯಲ್ಲಿ ಜೀವನ ಪ್ರೀತಿಯಲ್ಲಿ ನಿರೂಪಿಸಿದ್ದಾರೆ. ಪ್ರಗತಿಪರ ಕೃಷಿಕರಾಗಿ ಸಾವಯವ ಕೃಷಿ ಸಾಧನೆಗೆ ಪ್ರಶಸ್ತಿ ಪಡೆದವರು. ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ ರಾಜ್ಯ ಮಟ್ಟದಲ್ಲಿ ಒ೦ದು ಬೃಹತ್ ಕಾರ್ಯಕ್ರಮ ಆಯೋಜಿಸಿ ಕೃಷಿಕರು, ಸೈನಿಕರು, ಶಿಕ್ಷಕರು ಮೊದಲಾಗಿ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಹಾಸನ ಜಿಲ್ಲೆಯಿಂದ ಹೆಸರು ಕೇಳಿದ್ದರು. ಮಹೇಶ್ ಹೆಸರನ್ನು ಕೃಷಿ ಕ್ಷೇತ್ರಕ್ಕೆ ಕಳಿಸಿದ್ದೆ. ಕಾರ್ಯಕ್ರಮ ನಡೆಯಬೇಕಾದಿದ್ದು ಹೂವಿನಹಡಗಲಿಯಲ್ಲಿ. ಅನಂತರಾಜ್ ಸಾರ್, ಅಷ್ಟು ದೂರದ ಪ್ರಯಾಣ ಕೃಷಿ ಕೆಲಸ ಬಿಟ್ಟು ಹೋಗುವುದು ಕಷ್ಟವಾಗುತ್ತದೆ ಎಂದಿದ್ದರು. ಕೃಷಿ ಕಾಯಕದ ಬಗ್ಗೆ ಎಷ್ಟೊಂದು ನಿಷ್ಟೆ ಭೇಷ್..! ಈ ಕಾರಣಕ್ಕೆ ಏನೋ ರಾಜ್ಯಾಧ್ಯಕ್ಷರು ದಕ್ಷಿಣ ಕರ್ನಾಟಕದ ಅರ್ಧ ಭಾಗವನ್ನು ನನಗೆ ವಹಿಸಿ ಅದು ಹಾಸನದಲ್ಲಿ ನಡೆದಿತ್ತು. ಮಹೇಶ್ ಕೃಷಿ ಕಾಯಕದಲ್ಲಿ ನಿಷ್ಟಾವಂತರು. ನಾನು ಎಷ್ಟೋ ಬಾರಿ ಯೋಚಿಸಿದ್ದೇನೆ. ನಮಗೂ ಜಮೀನಿತ್ತಲ್ಲ. ನಾನೇಕೆ ಪ್ರಗತಿಪರ ರೈತನಾಗಲಿಲ್ಲ..! ಮೊದಲಿಗೆ ನಮ್ಮ ತಂದೆಯೇ ಇದಕ್ಕೆ ಅವಕಾಶ ಕೊಡಲಿಲ್ಲ. ನಾನು ಓದಲಿಲ್ಲ ಬರೆಯಲಿಲ್ಲ. ವ್ಯವಸಾಯ ನೀ ಸಾಯ ಎಂಬ ಮಾತಿನಂತೆ ಜೀವನ ಪೂರ್ತಿ ದುಡಿಮೆಯಲ್ಲೇ ಜೀವನ ತೇಯ್ದೆ. ನನ್ನ ಮಕ್ಕಳು ನನ್ನಂತೆ ಕಷ್ಟ ಪಡಬಾರದು. ಅವರು ಓದಿ ನೌಕರಿ ಹಿಡಿಯಲಿ ಎಂಬ ಅಪ್ಪ ಬಯಸಿದ್ದರಲ್ಲಾ..! ನಾನಾದರೂ ಪ್ರಾಯದಲ್ಲಿ ಬರೇ ನಾಟಕ ಕಥೆ ಕಾವ್ಯ ಎಂದು ಅತ್ತಲೇ ಚಿತ್ತ ಹರಿಸಿ ಇತ್ತ ನಮ್ಮಪ್ಪ ಸಂಪಾದಿಸಿದ್ದ ಜಮೀನು ಕಳೆದುಕೊಂಡ ದಡ್ಡ ಶಿಖಾಮಣಿ. ಯೌವ್ವನದಲ್ಲಿ ಗೇಯ್ಮೆ ಮಾಡದೇ ರಾಗಿ ಮುದ್ದೆ ಉಣ್ಣದೇ ಬೆಳೆದ ಸೋಮಾರಿ ಸುಖ ಪುರುಷ. ಈಗ ಸಕ್ಕರೆ ಕಾಯಿಲೆ ಮನುಷ್ಯ. ಎಂತಹ ಶ್ರಮಜೀವಿ ನಮ್ಮಪ್ಪ.,?ಅದಕ್ಕೆ ಅಪ್ಪನಿಗೆ ಆ ದೇವರು ಒಳ್ಳೆಯ ಆರೋಗ್ಯ ಕರುಣಿಸಿದ್ದ. ಶ್ರಮ ಜೀವಿಗಳಿಗೆ ಯಾವತ್ತೂ ಆರೋಗ್ಯ ಭಾಗ್ಯ ಇರುವಲ್ಲಿ ಈ ಭಾಗ್ಯಲಕ್ಷ್ಮಿ ಆಮಿಷವೇಕೆ? ದೊಡ್ಡಪ್ಪನ ಪ್ರಶ್ನೆ. ಈ ಸರ್ಕಾರಗಳು ಇವೆಯೆಲ್ಲಾ ಆವು ನಮ್ಮನ್ನು ಹೆಂಡದ ಆಸೆಗೆ ನೂಕಿ ಆಯಸ್ಸು ಕಿತ್ತುಕೊಳ್ಳುತ್ತವೆ ಕಣ್ಲಾ ಮಗಾ..ಎನ್ನುತ್ತಿದ್ದ ದೊಡ್ಡಪ್ಪ ಕುಡಿತದ ಚಟಕ್ಕೆ ಅಪ್ಪನಿಗಿಂತ ಮೊದಲೇ ಕೈಲಾಸ ವಾಸಿಯಾಗಿದ್ದರು. ಬಿ.ಎ.ಪದವೀದರರಾಗಿ ಹಳ್ಳಿಯಲ್ಲೇ ಉಳಿದು ಕೃಷಿಯನ್ನೇ ತಮ್ಮಜೀವನ ವೃತ್ತಿಯನ್ನಾಗಿಸಿಕೊಂಡು ಶಾಲಾ ಮಕ್ಕಳಿಗೆ ಸಂಜೆ ಉಚಿತ ಪಾಠ ಮಾಡುತ್ತಿರುವ ಮೇಷ್ಪ್ರು. ಮಹೇಶ್ ಸಾವಯವ ಕೃಷಿ ಬಗ್ಗೆ ಆಕಾಶವಾಣಿಗೆ ಸಂದರ್ಶನ ನೀಡಿದ್ದಾರೆ. ಸ್ವತ: ಸಾವಯವ ಗೊಬ್ಬರ ತಾವೇ ತಯಾರಿಸಿಕೊಂಡು ಉತ್ತಮ ಫಸಲು ತೆಗೆದಿದ್ದಾರೆ ಮಹೇಶ್ ಹಂದ್ರಾಳು ಅವರ ತೋಟದಲ್ಲಿ ಒಂದು ಸುಂದರ ಕವಿಗೋಷ್ಠಿ ಮಾಡೋಣವೇ ಎಂದು ಹಿಂದೆ ಕೇಳಿದ್ದೆ. ಅದಕ್ಕಿನ್ನು ಉತ್ತರ ಬಂದಿಲ್ಲ. ಇರಲಿ ಬದುಕೆಂದರೆ ನಾವಂದುಕೊಂಡಂತಲ್ಲ. ಅದು ಬಂದಂತೆ ಬರಮಾಡಿಕೊಳ್ಳಬೇಕು. ತಮಗೆ ಬೇಕಾದಂತೆ ಅದನ್ನು ದುಡಿಸಿಕೊಳ್ಳಬೇಕು. ಎಗ್ಗಿಲ್ಲದ ಜೀವನ ನಿರ್ವಹಣೆಯಿಂದಾಗಿ ಬದುಕನ್ನೇ ಶಾಪವಾಗಿಸಿಕೊಂಡ ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವ ಹಾದಿಯನ್ನು ಯಾರಾದರೂ ತೋರುವವರಿದ್ದರೆ ಸದ್ಯಕ್ಕೆ ಅವರೇ ನಮ್ಮ ಪಾಲಿನ ಕಂದೀಲು.
ನಮ್ಮ ಬದುಕಿನ ಕತ್ತಲೆಯನ್ನು ನೀಗಿಸಿ ಬೆಳಕಿನಡೆ ಹೆಜ್ಜೆ ಹಾಕಲು ದಾರಿ ದೀಪಗಳಾಗಿ ಕಾಣುತ್ತಾರೆ. ಬದುಕೆಂಬ ಬಂಡಿಗೆ ಯಾವುದೇ ನಿಯಮ ಸಿಗ್ನಲ್ಲುಗಳನ್ನು ಹಾಕಿಕೊಳ್ಳದೆ ನಾವು ನಮ್ಮ ಕೈಯಾರೆ ಸೃಷ್ಟಿಸಿಕೊಂಡ ಹೊಂಡಗಳಿಗೆ ಬಿದ್ದು ಹಸನಾದ ಬದುಕನ್ನು ಹಾಳು ಮಾಡಿಕೊಂಡಿದ್ದೆವೆ.
ಏನು ಪ್ರಪಂಚವಿದು ಏನು ಧಾಳಾಧಾಳಿ
ಏನದ್ಭುತಾಪಾರ ಶಕ್ತಿ ನಿರ್ಘಾತ
ಮಾನವನ ಗುರಿಯೇನು ಬೆಲೆಯೇನು ಮುಗಿವೇನು
ಏನರ್ಥವಿದಕ್ಕಲ್ಲ ಮಂಕುತಿಮ್ಮ -.ಡಿ.ವಿ.ಜಿ
ನಮ್ಮ ಜೀವನಾನುಭವಗಳು ಮತ್ತು ಸಾಹಿತಿಗಳ ಬದುಕಿನ ಅನುಭವಾಮೃತದಿಂದ ಪೂರಿತವಾದ ಸಾಹಿತ್ಯದ ವ್ಯಾಸಂಗಗಳು ಬೆಳಕನ್ನು ಕಂಡು ಕೊಳ್ಳಲು ನೆರವಾಗಬಹುದು. ನಮ್ಮ ಕನ್ನಡ ಬರಹಗಾರರು ತಮ್ಮ ಬರಹದಂತೆಯೇ ಬದುಕಿನಲ್ಲೂ ಉತ್ತಮ ಮೌಲ್ಯಗಳೊಂದಿಗೆ ಬಾಳಿದವರು. ಮಹೇಶ್ ೨೧ನೇ ಶತಮಾನದ ನೂರು ಪ್ರಮುಖ ಸಾಹಿತಿಗಳ ಬದುಕಿನ ಬಗ್ಗೆ ಕಣ್ಣಾಯಿಸಿ ಹೇಳುತ್ತಾರೆ
ಯಾವ ಪ್ರಮುಖ ಕನ್ನಡ ಸಾಹಿತಿಯೂ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಯಾವುದೇ ಕವಿ ಬರಹಗಾರರೂ ತಮ್ಮ ಸಂಗಾತಿಗೆ ವಿಚ್ಛೇದನ ನೀಡಿಲ್ಲ. ತಮ್ಮ ತಂದೆ ತಾಯಂದಿರನ್ನು ಅವರ‍್ಯಾರೂ ವೃದ್ಧಾಶ್ರಮಕ್ಕೆ ಸೇರಿಸಿಲ್ಲ. ಯಾವ ಪ್ರಮುಖ ಸಾಹಿತಿಗಳೂ ಅಪರಾಧಕ್ಕಾಗಿ ಜೈಲಿನ ದರ್ಶನ ಮಾಡಿಲ್ಲ..
ನಮ್ಮ ಕನ್ನಡ ಸಾಹಿತಿಗಳಿಗೆ ಬದುಕಿನ ಬಗೆಗಿದ್ದ ದೃಷ್ಟಿಕೋನವೇನು? ಹಾಗೆಯೇ ಅವರು ತಮ್ಮ ನಡೆಯಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯವೇನು? ಪ್ರಶ್ನೆ ಎತ್ತಿಕೊಂಡು ಮೌಲಿಕ ಬದುಕಿಗೆ ಮಾದರಿಯಾದ ಸಾಹಿತಿಗಳನ್ನು ಉಲ್ಲೇಖಿಸುತ್ತಾ ಅವರ ಬದುಕನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ.
ಡಿ.ವಿ.ಜಿ.ಕನ್ನಡ ಸಾರಸ್ವತ ಲೋಕದ ಧೀಮಂತರು. ಎಸ್.ಎಸ್.ಎಲ್.ಸಿ. ಫೇಲಾಗಿ ಕೆಲವು ಕಾಲ ಜಟಕಾಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿ ನಂತರ ಪತ್ರಕರ್ತರಾಗಿ ಜೀವನ ನಿರ್ವಹಿಸಿ ಬಹು ಭಾಷಾ ಪರಿಣಿತರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿ ಡಿ.ವಿ.ಜಿ.ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್ ಮಾಸಪತ್ರಿಕೆ ನಡೆಸುತ್ತಿದ್ದ ವೇಳೆ ನೆಂಟರೊಬ್ಬರ ಮನೆಗೆ ಯಾವುದೋ ಸಮಾರಂಭಕ್ಕೆ ಹೋಗಬೇಕಿತ್ತು ಆದರೆ ಹೋಗಲಿಲ್ಲ. ಕಾರಣ ಅವರ ಪತ್ನಿ ಬಳಿ ಇದ್ದ ಒಂದೇ ಸೀರೆ ಹರಿದಿತ್ತಂತೆ.! ಆ ಸೀರೆಯಲ್ಲಿ ಹೋದರೆ ಡಿವಿಜಿಯವರ ಮರ್ಯಾದೆಗೆ ಕುಂದು ಬರುತ್ತದೆಂದು ಅವರ ಪತ್ನಿ ಯಾವ ಸಮಾರಂಭಗಳಿಗೂ ಹೋಗುತ್ತಿರಲಿಲ್ಲ. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ಸರ್ಕಾರವು ಪತ್ರಕರ್ತರಿಗೆ ನೀಡುತ್ತಿದ್ದ ಸಂಭಾವನೆ ನಿರಾಕರಿಸುತ್ತಾರೆ. ತಮಗೆ ಬಂದ ಕೇ೦ದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಮೊತ್ತವಲ್ಲದೆ ನಾಗರೀಕರು ಸನ್ಮಾನ ಮಾಡಿ ಅರ್ಪಿಸಿದ ಒಂದು ಲಕ್ಷ ನಿಧಿಯನ್ನು ತಾವು ಕಟ್ಟಿ ಬೆಳೆಸಿದ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನ ಮಾಡಿದ ಡಿವಿಜಿ ಸರಳತೆ ಸ್ವಾಭಿಮಾನ ಸಜ್ಜನಿಕೆಗಳ ಸಾಕಾರ ಮೂರ್ತಿ.
ಜೀವನವೆಂದರೆ ಒ೦ದು ಹೂವು ಇದ್ದಂತೆ
ಪ್ರೇಮವೆನ್ನುವುದು ಆ ಹೂವಿನಲ್ಲಿರುವ ಮಕರಂದ ಇದ್ದಂತೆ – ವಿಕ್ಟರ್ ಹ್ಯೂಗೋ
ಸಾಹಿತ್ಯಕ್ಕಿಂತ ಬದುಕು ದೊಡ್ಡದು ಎಂಬ ಅಭಿಪ್ರಾಯದ ತೇಜಸ್ವಿ ಹಾಗೆಯೇ ಬದುಕಿದರು. ತೇಜಸ್ವಿಯವರು ಸಾಂಸ್ಕೃತಿಕವಾಗಿ ಅಷ್ಟು ಎತ್ತರಕ್ಕೆ ಬೆಳೆದರೂ ತೋರಿಕೆಯ ಅರೆ ಬರೆ ವಿದ್ಯಾವಂತರಿಗಿಂತ ಸಾಧಾರಣ ವರ್ಗದ ಜನರೊಂದಿಗೇ ಹೆಚ್ಚು ಸಲೀಸಾಗಿ ಬೆರೆತಿದ್ದರು. ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪಡೆದ ಅವರು ಅಧ್ಯಾಪಕರಾಗದೆ ಮೂಡಿಗೆರೆ ಸಮೀಪದಲ್ಲಿ ತೋಟ ಖರೀದಿಸಿ ಕೃಷಿಕರಾಗಿ ಹಂಗಿಲ್ಲದ ಬದುಕು ಕಟ್ಟಿಕೊಂಡರು. ಮೇರು ಸಾಹಿತಿ ಕುವೆಂಪುರವರ ಪುತ್ರರಾದರೂ ತಮ್ಮಜೀವನದೃಷ್ಟಿ ಹಾಗೂ ಸಾಹಿತ್ಯದಲ್ಲಿ ಎಲ್ಲೂ ತಂದೆಯ ನೆರಳಾಗದೆ ತಂದೆಯ ಪ್ರಭಾವವನ್ನು ಬಳಸದೆ ಬದುಕಿದ್ದು ತೇಜಸ್ವಿಯವರ ಸ್ವಭಾವದ ಗರಿಮೆ. ಕರ್ವಾಲೋ ಕಾದಂಬರಿಯಲ್ಲಿ ವಿಜ್ಞಾನಿ ಕರ್ವಾಲೋ ಹೇಳುವ ಮಾತು: ನಾನು ಪ್ರೊಫೆಸರು, ಮಂದಣ್ಣ ಹಳ್ಳಿ ಗಮಾರ, ಇವೆಲ್ಲಾ ಹೆಬುದ್ದೆಯನ್ನು ನೀನು ನಿಶಾಂಶ ತಿಳಿದರೆ ಏನಪ್ಪಾ ಕಲಿತಂತೆ ಆಯ್ತು? ಇದರಲ್ಲೇ ನಿನ್ನ ಆಯಸ್ಸು ಮುಗಿದು ಹೋಗುತ್ತೆ. ಸತ್ಯದ ಕಿಂಚಿತ್ ದರ್ಶನಾನೂ ಆಗೋಲ್ಲ ನಿನಗೆ. ಈ ಮಾಯೆಯನ್ನು ಮೀರಬೇಕು ನಾವು ಆಗಲೇ ನಿಮಗೆ ಬೇರೆ ಬೇರೆ ಜಗತ್ತು ಪ್ರಪಂಚ ಕಾಣ್ತದೆ..
ಗ್ರಾಮೀಣ ಜೀವನ ಬಹುಮುಖಿ ಯಾದುದು. ಹಲವು ವೃತ್ತಿಗಳ ಹಲವು ಜಾತಿಯ ಹಲವು ರೀತಿ ನೀತಿಗಳ ಜನರನ್ನು ಹಳ್ಳಿಗಾಡಿನಲ್ಲಿ ನೋಡುತ್ತೇವೆ. ಈ ಎಲ್ಲ ವೃತಿಗಳು ಸಂಪ್ರದಾಯಗಳ ಜನ ಜನಪದ ಸಾಹಿತ್ಯ ರಚನೆಯಲ್ಲಿ ಕೊಡುಗೆ ನೀಡಿರುವುದರಿಂದ ಗ್ರಾಮೀಣ ಜೀವನದ ಸರ್ವ ಮುಖಗಳೂ ಅವರ ಸಾಹಿತ್ಯದಲ್ಲಿ ಪ್ರಕಟವಾಗಿದೆ. ಜನಪದ ಸಾಹಿತ್ಯ ಜೀವಂತ ಜನತೆಯ ಜೀವನ ಸಾಹಿತ್ಯ ಎಂದಿದ್ದಾರೆ ಡಾ. ಎಂ.ಎಸ್. ಸುಂಕಾಪುರ. ಕವಿಗಳೆಂದರೆ ಶಿಷ್ಟರಷ್ಟೇ ಅಲ್ಲ. ಜನಪದರು ಹೌದು. ಜನಪದರ ಸಿರಿ ಬದುಕಿನಲ್ಲಿ ನಮ್ಮ ಹಿರಿಯರು ಜೀವನದಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯಗಳನ್ನು ಜೀವನ ಪ್ರೀತಿಯನ್ನು ಬಿಂಬಿಸಿದ್ದಾರೆ.
ತಂದೀಯ ನೆನೆದಾರ ತಂಗುಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ವ ನೆನೆದರೆ
ಮಾಸಿದ ತಲೆಯ ಮಡಿಯಾಯ್ತು..
ದ.ರಾ.ಬೇಂದ್ರೆಯವರ ಬದುಕಿನ ಸೂತ್ರ ಒಲವೇ ನಮ್ಮ ಬದುಕು. ಬೇಂದ್ರೆಯವರು ತಮ್ಮ ಕವನಗಳಲ್ಲಿ ಭಾವಗಂಗೆಯನ್ನು ಇಳಿಸಿ ರಸಧಾರೆ ಹರಿಸಿದ ವರಕವಿ. ಅವರು ಸುಖದ ದಾರಿಯಲ್ಲಿ ನಡೆದು ಮಹಾಕವಿಯೆನಿಸಿಕೊಂಡವರಲ್ಲ. ಬದಲಾಗಿ ಬೆಂದು ಬೇಂದ್ರೆಯಾದವರು.
ಎನ್ನ ಪಾಡೆನಗಿರಲಿ ಆದರೆ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ ನನ್ನೆದೆಯು ಕರಗಿದರೆ ಅದರ ಸವಿಯನ್ನಷ್ಟೇ ಹಣಿಸು ಎಂದರು.
ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆ ವದನೆ ನಾವು ಅದಕು ಇದಕು ಎದಕು
ಎಂದು ಪ್ರೇಮ ಸಂದೇಶ ನೀಡಿದರು. ಕುವೆಂಪುರವರ ಬದುಕು ಮತ್ತು ಕೃತಿಗಳ ನಡುವೆ ಅವಿನಾಭಾವ ಸಂಬಂಧ
ಇದೆ. ಅವರು ಬದುಕನ್ನು ಕಡೆಗಣಿಸಿದವರಲ್ಲ. ಅವರ ಪ್ರಕಾರ ಬಾಳು ಅಮೂಲ್ಯವಾದುದು. ಅಷ್ಟೇ ಏಕೆ ಈ ಸೃಷ್ಟಿಯಲ್ಲಿರುವ ಮರಗಿಡ ಪ್ರಾಣಿ ಪಕ್ಷಿಗಳ ಬದುಕೂ ಮಹತ್ತಾದುದೇ.
ಆನಂದಮಯ ಈ ಜಗ
ಹೃದಯ
ಎತಕೆ ಭಯ? ಮಾಣೋ
ಸೂರ್ಯೊದಯ ಚಂದ್ರೋದಯ
ದೇವರ ದಯ ಕಾಣೋ
ನಾಡಿನ ಸಂಸ್ಕಾರವಂತ ವಿಚಾರವಂತ ಸಾಹಿತಿಗಳ ಬದುಕಿನ ಘಟನೆಗಳನ್ನು ಅವರ ಕವಿತ್ವ ಸಾಹಿತ್ಯ ಇವೆಲ್ಲವನ್ನೂ ಅಭ್ಯಸಿಸಿ ಅವರ ಬದುಕನ್ನು ಕಿರು ಕೃತಿಯಲ್ಲಿ ಅವಲೋಕಿಸಿದ್ದಾರೆ. ಕಡೆಯದಾಗಿ ನಮ್ಮ ಊರಿನ ರಸಿಕರು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಶಾಲೆಯಲ್ಲಿ ಕಲಿತ ವಿದ್ಯೆಗಿಂತಲೂ ಸ್ವಂತ ಪ್ರಯತ್ನದಿಂದ ಕಲಿತಿದ್ದೆ ಹೆಚ್ಚು. ಇವರೊಬ್ಬ ಜಾನಪದ ತಜ್ಞ. ದ.ರಾ.ಬೇಂದ್ರೆಯವರು ಗರುಡ ಗಂಬದ ದಾಸಯ್ಯ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ನಮ್ಮ ಜನಕ್ಕೆ ನಮ್ಮ ಜೀವನದ ರಮ್ಯತೆಯನ್ನು ತೋರಿಸಿ ಮಂಕು ಕವಿದ ಕಣ್ಣಿಗೆ ಅಂಜನ ಹಾಕುವ ಕಲೆಯಲ್ಲಿ ಕೈ ಪಳಗಿದವರಲ್ಲಿ ಗೊರೂರಿಗೆ ಗಣ್ಯ ಸ್ಥಾನವಿದೆ. ಅಳುತ್ತ ಬಂದವರನ್ನು ನಗುತ್ತ ಹೋಗುವಂತೆ ಮಾಡುವುದು ಜಾತಿ ರಸಿಕರ ಕಸುಬಾಗಿದೆ.
ರಿಚರ್ಡ್ ಬ್ಯಾಕ್ ಅವರ ಜೋನಾಥನ್ ಲಿವಿಂಗ್‌ಸ್ಟನ್ ಕೃತಿ ಓದಿ ನೇಮಿಚಂದ್ರರು ಬರೆದರು.
ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಭರವಸೆ ಇರಲಿ. ಭರವಸೆ ಕಳೆದುಕೊಳ್ಳದ ಬದುಕು ಇರಲಿ. ಕನಸುಗಳ ಬೆನ್ನೆತ್ತುವ ಧೈರ್ಯವಿರಲಿ. ಕನಸು ನನಸಾಗಿಸಲು ಬೆವರು ಸುರಿಸುವ ಪ್ರಯತ್ನವಿರಲಿ. ನಾವು ಒಬ್ಬೊಬ್ಬರು ಹಾರಬಲ್ಲೆವು ಪರಿಪೂರ್ಣತೆ ಸಾಧಿಸಬಲ್ಲವು.
ಚುಟುಕು ಬ್ರಹ್ಮರೆಂದು ಹೆಸರಾದ ದಿನಕರದೇಸಾಯಿಯವರ ಈ ಒಂದು ಚುಟುಕು ಉಲ್ಲೇಖಿಸಿ ವಿಮರ್ಶೆಗೆ ಮುಕ್ತಾಯ ಹಾಡುತ್ತೇನೆ.
ನನ್ನ ದೇಹದ ಬೂದಿ ಗಾಳಿಯಲ್ಲಿ ತೂರಿಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ..
—————————————–
ಗೊರೂರು ಅನಂತರಾಜು