ಸುಲೋಚನಾ ಮಾಲಿಪಾಟೀಲ-ಕಾಲಕ್ಕೆ ತಕ್ಕಂತೆ ಬದಲಾದ ಬದುಕು

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಕಾಲಕ್ಕೆ ತಕ್ಕಂತೆ ಬದಲಾದ ಬದುಕು

ಮನುಷ್ಯನ ಚಲನವಲನಗಳು ಆತನ ಆಚಾರ ವಿಚಾರ, ಅರಿವು, ಜ್ಞಾನಕ್ಕೆತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಜಗತ್ತಿನಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾನವನ ಪ್ರಮುಖ ಅವಿಷ್ಕಾರ ಎಂದು ಪರಿಗಣಿಸಲಾಗಿದೆ. ಮನುಷ್ಯ ತನ್ನ ಜೀವನ ಶೈಲಿಗೆ ಸರಿಹೊಂದಲು, ಅನುಕೂಲಕರವಾಗಲು ಆರಿಸಿಕೊಂಡಂತಹ ಸಾಧನವೇ ಆಂಡ್ರಾಯ್ಡ್ ಸ್ಮಾರ್ಟ್ಫೋನ್. ದಿನನಿತ್ಯದ ಜೀವನದಲ್ಲಿ ಸ್ಮಾರ್ಟ್ಫೋನ್ ಕೂಡ ಇಂದು ಅನಿವಾರ್ಯವಾಗಿದೆ. ಇದರ ಸದ್ಬಳಕೆಯನ್ನು ಯಾವ ರೀತಿಯಲ್ಲಿ ಬಳಿಸುತ್ತೆವೆಯೋ ಅದಕ್ಕೆ ತಕ್ಕಂತೆ ಪ್ರತಿಫಲ ಸಿಗುತ್ತದೆ. ಇದರಿಂದ ಋಣಾತ್ಮಕ ಮತ್ತು ಧನಾತ್ಮಕ ಫಲಗಳನ್ನು ಪಡೆದುಕೊಳ್ಳುವುದು ಮನುಷ್ಯನಿಗೆ ಬಿಟ್ಟ ವಿಚಾರ. ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಪ್ರಭಾವ ಕರೋನಾ ಸಮಯದಲ್ಲಿ ಮತ್ತು ತದನಂತರ ಕೂಡ ಸಾಕಷ್ಟು ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸಿದೆ ಎನ್ನಬಹುದು. ಇನ್ನು ಇದರ ಋಣಾತ್ಮಕ ವಿಚಾರ ತಗೆದುಕೊಂಡಾಗ ಬದುಕಿನಲ್ಲಿ ಮನುಷ್ಯ ಅಷ್ಟೇ ಅಲ್ಲ ಮಕ್ಕಳ ಮೇಲು, ಪರಿಸರದಲ್ಲು, ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಲೇ ಇವೆ.
ಚಿಕ್ಕ ಚಿಕ್ಕ ಮಕ್ಕಳಿಗೆ ಅದೊಂದು ಆಟಿಕೆಯಾಗಿದೆ. ತಂದೆ ತಾಯಂದಿರು ಕೂಡ ತಮ್ಮತಮ್ಮ ಕೆಲಸ ಕಾರ್ಯ ನಿರ್ವಹಿಸುವ ಸಮಯದಲ್ಲಿ ಮಕ್ಕಳನ್ನು ಸುಮ್ಮನಿರಿಸಲು ಅವುಗಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟುಬಿಡುತ್ತಾರೆ. ಅದರ ಚಟ ಮಕ್ಕಳಿಗೆ ಪಾಲಕರೇ ಹಾಕುತ್ತಾರೆ. ಇದರಿಂದ ಸಮಯವನ್ನು ತಳ್ಳಬಹುದು. ಆದರೆ ಅದರಿಂದ ಬೆಳೆವ ಮಕ್ಕಳಲ್ಲಿ ನರದೌರ್ಬಲ್ಯ, ಏಕಾಂಗಿತನ, ಮೈರ್ಗೇನ ಹೀಗೆ ಮುಂತಾದ ಹಾನಿಕಾರಕ ಪರಿಣಾಮಗಳಿಂದ ಮಕ್ಕಳ ಜೀವಕ್ಕೆ ಪಾಲಕರೇ ಕುತ್ತು ತಂದೊಡ್ಡುತ್ತಿದ್ದಾರೆ.


ಇನ್ನು ವಿದ್ಯಾರ್ಥಿಗಳ ಜೀವನದಲ್ಲಿ ಶೋಕಿಗಾಗಿ ಸ್ಮಾರ್ಟ್ಫೋನ್ ಬಳಕೆ, ಅದರಲ್ಲಿ ಇಂಟರ್ನೆಟ್ ಇದ್ದರೆ ಮುಗಿದೇ ಹೋಯಿತು. ವಿವಿಧ ಆಟಗಳ ದಾಸರಾಗಿ, ಏನು ನೋಡಬೇಕೋ ಏನು ನೋಡಬಾರದನ್ನೆಲ್ಲ ನೋಡಿ ಮೌಜು ಮಸ್ತಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮರೆತು ತಮ್ಮ ವರ್ತನೆಗಳಿಂದ ಬದುಕುವ ದಿಕ್ಕನ್ನೇ ಬದಲಾಯಿಸಿಕೊಂಡವರನ್ನು ಕಾಣುತ್ತಿದ್ದೇವೆ. ಇದರಿಂದ ಪಾಲಕರಿಗೂ, ಶಿಕ್ಷಕರ ವರ್ಗಕ್ಕೂ ಸಾಕಷ್ಟು ಅವಮಾನ, ವೇದನೆ ಅನುಭವಿಸಬೇಕಾಗುವ ಸಂದರ್ಭಗಳು ಬಂದೊಡ್ಡಿವೆ. ಹಣದ ಬೆಲೆಯಿಲ್ಲ, ಹಿರಿಯರಿಗೆ ಗೌರವವಿಲ್ಲ, ಗುರುಗಳಿಗೆ ಮರ್ಯಾದೆ ಕೊಡದೆ ಮತ್ತು ವಿದ್ಯಾರ್ಥಿಗಳ ಮಧ್ಯೆ ತಮ್ಮ ಪುಂಡಾಟಿಕೆ ನಡೆಸುತ್ತ ಮೆರೆದು ಜೀವನವನ್ನೇ, ಭವಿಷ್ಯವನ್ನೇ ಹಾಳು ಮಾಡಿಕೊಂಡಿರುವುದನ್ನು ನೋಡಿದ್ದೆವೆ, ನೋಡುತ್ತಲೂ ಇದ್ದೆವೆ. ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡವರು ಈಗಿನ ಮೊಬೈಲ್ ಬಳಕೆಯ ದುರುಪಯೋಗ ಪಡೆದುಕೊಂಡಂತಹ ೭೦% ವಿದ್ಯಾರ್ಥಿಗಳನ್ನು ಕಾಣಬಹುದು.
ಕುಟುಂಬದ ವಿಚಾರಕ್ಕೆ ಬಂದಾಗ ಕುಟುಂಬದಲ್ಲಿಯೂ ಕೂಡ ಮೊದಲಿನಂತೆ ಪ್ರೀತಿ, ವಾತ್ಸಲ್ಯ, ಒಗ್ಗಟ್ಟು ಕಂಡುಬರುತ್ತಿಲ್ಲ. ಎಲ್ಲರ ಕೈಯಲ್ಲಿಯೂ ಒಂದೊಂದು ಸ್ಮಾರ್ಟ್ಫೋನ್ ಆಗಿದೆ. ಅದರ ಆಕರ್ಷಣೆಯಲ್ಲಿ ಮುಳುಗಿ, ಅದರ ವ್ಯಸನಿಕರಾಗಿ, ಕುಟುಂಬ ಅನ್ನುವ ಸುಂದರ ಪದ ಛಿದ್ರ ಛಿದ್ರವಾಗಿದೆ. ಎಷ್ಟೋ ಯುವಕರು ನಿರುದ್ಯೋಗಿಗಳಾಗಲು ಇದರ ವ್ಯಸನವೇ ಕಾರಣ. ಯಾರ ಹಿತನುಡಿಗಳು ಬೇಕಾಗಿಲ್ಲ. ಒಂಟಿತನವನ್ನು ಆರಿಸಿಕೊಂಡು ಸಂಬಂಧಗಳನ್ನೆಲ್ಲ ದೂರಮಾಡಿಕೊಂಡು ಬದಕುತ್ತಿದ್ದಾರೆ. ಒಳ್ಳೆಯ ಸ್ನೇಹಿತರಿಲ್ಲ, ಪಾಲಕರ ಸಾಮಿಪ್ಯವಿಲ್ಲ, ಹೊರ ಜಗತ್ತಿನ ಸಂಪರ್ಕ ಬೇಕಾಗಿಲ್ಲ,
ಸರಿಯಾಗಿ ಊಟ ನಿದ್ರೆಯಿಲ್ಲ ಇದರಿಂದ ಬದುಕಿನ ಚಿತ್ರಣವನ್ನು ಬದಲಾಯಿಸಿಕೊಂಡು ತಮ್ಮ ಜೀವನ ಮತ್ತು ಶರೀರವನ್ನೆ ಹಾಳು ಮಾಡಿಕೊಂಡಿದ್ದಾರೆ. ಎಷ್ಟೋ ಜನ ರೌಡಿಗಳಾಗಿ ದುಶ್ಚಟದ ದಾಸರಾಗಿದ್ದಾರೆ. ಸ್ಮಾರ್ಟ್ಫೋನ್ ಅಂದ್ರೇನೆ ತಮ್ಮ ಜೀವ, ಜೀವನಸಂಗಾತಿಯಂತೆ ವರ್ತಿಸುತ್ತಿದ್ದಾರೆ.
ಇನ್ನು ಸಾಫ್ಟ್ವೇರ್ ಇಂಜಿನಿಯರ್ ಬದುಕು ನೋಡಲಾಗುವುದಿಲ್ಲ. ಬದುಕಲು ದುಡಿಯಬೇಕಲ್ಲವೇ? ಆಂಡ್ರಾಯ್ಡ ಸ್ಮಾರ್ಟ್ಫೋನ್ ಸಂಪರ್ಕ ಅನಿವಾರ್ಯವಾಗಿದೆ. ಇದರ ವಿಕಿರಣದಿಂದ ಕ್ಯಾನ್ಸರ್, ಕೀಲುನೋವು, ತಲೆನೋವು, ಬೆನ್ನುನೋವು, ಹೃದಯ ಸಂಬಂಧಿ ಕಾಯಿಲೆಗಳು, ದೃಷ್ಟಿಹೀನತೆ, ಪುರುಷಾರ್ಥ ಕಡಿಮೆ, ಅಶಕ್ತತೆಯಿಂದಾಗಿ ಶರೀರದ ಮೇಲೆ ಹಲವು ಕೆಟ್ಟ ಪರಿಣಾಮಗಳು ಬೀರಿ ಎದುರಿಸುವ ಸಂದರ್ಭಗಳು ಬಂದಿವೆ. ಅಷ್ಟೇ ಅಲ್ಲ ತನ್ನ ಶರೀರದ ಸಮತೋಲನ ಕಳೆದುಕೊಂಡು ಸಾವಿಗೂ ಶರಣನಾಗಬಹುದು. ಇದನ್ನು ಪಕ್ಕಕ್ಕೆ, ತೆಲೆದಿಂಬಿನ ಕೆಳಗೆ ಇಟ್ಟು ಕೊಂಡು ಮಲಗುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಆಯಾಸದಿಂದ ಬಳಲುವರು. ಇದರ ವ್ಯಸನದಿಂದ ಸರಿಯಾದ ಸಮಯಕ್ಕೆ ಯಾವ ಮನೆಗೆಲಸಗಳು ಆಗದೆ ಒಬ್ಬರಮೇಲೊಬ್ಬರು ತಪ್ಪು ಹೊರಿಸುತ್ತಾ ಜಗಳವಾಡುತ್ತ ಎಷ್ಟೋ ದಂಪತಿಗಳು ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ. ಅರವತ್ತರ ನಂತರ ಒಂಟಿಯಾಗಿರದೆ ಸ್ಮಾರ್ಟ್ಫೋನ್ ವ್ಯಸನಿಗಳಾಗಿ ಕಿವಿಯಲ್ಲಿ ಹೆಡ್ ಫೋನ್ ಮೂಲಕ ಹಲವು ಹಾಡು, ಜೋಕ್ಸ್, ಪ್ರವಚನ ಮುಂತಾದ ವಿಷಯಗಳನ್ನು ಕೇಳುವುದರಿಂದ ಕಿವಿಗಳಿಗೆ ಹಾನಿಯನ್ನುಂಟು ಮಾಡಿಕೊಳ್ಳಲು ತಾವೇ ಆಸ್ಪದ ಕೊಟ್ಟಂತೆ. ಹೀಗೆಯೇ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ದಿಂದ ಸಾಕಷ್ಟು ದುಷ್ಪರಿಣಾಮಗಳು ಮನುಷ್ಯನ ಬದುಕಿನಲ್ಲಿ ಮೂಡಿವೆ, ಮುಡುತ್ತಲೇ ಇವೆ.

ಇನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ದಿಂದ ಧನಾತ್ಮಕ ವಿಚಾರಗಳಿಂದ ಅದರ ಅನುಕೂಲತೆಗೆ ಬಗ್ಗೆ ಬಂದರೆ ಮನುಷ್ಯ ತನ್ನ ದೈನಂದಿನ ಚಟುವಟಿಕೆಯ ವ್ಯವಹಾರದಲ್ಲಿ ಇದರ ಬಳಕೆ ಅತ್ಯುತ್ತಮ ಅತ್ಯಧಿಕ ಎನ್ನಬಹುದು. ವ್ಯಾಪಾರ, ಉದ್ಯೋಗ, ಶಿಕ್ಷಣ, ಸಂಘಸಂಸ್ಥೆ, ದವಾಖಾನೆ, ಪ್ರವಾಸ, ಮನೋರಂಜಿಸಲು, ಹಲವಾರು ವಿಷಯಗಳನ್ನು ತಿಳಿದುಕೊಳ್ಳಲು, ಕಲಿಯಲು ಬಹಳ ಉಪಯುಕ್ತವಾಗಿದೆ. ಕರೋನಾ ಸಮಯದಲ್ಲಿ ಇದರ ಬಳಕೆಯ ಜೊತೆಜೊತೆಗೆ ಸಾಕಷ್ಟು ಸವಲತ್ತುಗಳನ್ನು ಒದಗಿಸಿದೆ. ಒಂದೊಂದಾಗಿ ಬಿಡಿಸಿ ಹೇಳುವುದಾದರೆ. ಮೊಟ್ಟೆ ಮೊದಲು ಆರೋಗ್ಯದ ಕಾಳಜಿ ವಹಿಸಲು ಒಬ್ಬ ಸ್ನೇಹಿತನಂತೆ ಹಿತೈಸಿಯಂತೆ ಸಹಕಾರ ಕಲ್ಪಿಸಿದೆ. ದವಾಖಾನೆಗೆ ಹೋಗದೆ ಸ್ಮಾರ್ಟ್ಫೋನ್ ಮೂಲಕ ಡಾಕ್ಟರ್ ಜೊತೆ ಎದುರು ನಿಂತು ತನ್ನ ಭಾದೆಗಳ ಬಗ್ಗೆ ಚರ್ಚಿಸಿ ವಿಚಾರಿಸಿ ಔಷಧಿಗಳನ್ನು ಮನೆಯ ಬಾಗಿಲಿಗೆ ತಲುಪಿಸುವ ಕ್ರಿಯೆಯನ್ನು ಮಾಡಲು ಸಹಕಾರಿಯಾಗಿದೆ. ಜಾಗ್ರತೆಯಿಂದ ಇರಲು ಹಲವಾರು ಸಂದೇಶಗಳು ಸುತ್ತಮುತ್ತಲಿನ ಪರಿಚಯಸ್ಥರಿಂದ, ಸ್ನೇಹಿತರಿಂದ, ಬಳಗದವರಿಂದ ತಿಳಿದುಕೊಳ್ಳಲು ಇದರ ಉಪಯೋಗವಾಗಿದೆ. ಕಲಿಯುವ ಮಕ್ಕಳಿಗೆ ಶಾಲೆ ರಜದಲ್ಲಿಯೂ ಆನಲೈನ್ ಕ್ಲಾಸಗಳ ಮುಖಾಂತರ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಬಹಳ ಪ್ರಯೋಜನಕಾರಿ ಆಗಿದೆ. ಎಂತಹದೇ ಕಠಿಣ ವಿಷಯಗಳನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಸಹಾಯದ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಮಕ್ಕಳಿಗೂ ಹಿತಮಿತವಾಗಿ ಬಳಸಲು ಕೊಟ್ಟರೆ ಮಕ್ಕಳ ಜ್ಞಾನ ಬೆಳೆಯಲು ಸಹಕಾರಿ. ಸಂಗೀತ, ನೃತ್ಯ, ಹಾಡು, ಚಿತ್ರಕಲೆ, ಬುದ್ಧಿಮತ್ತೆ ಬೆಳೆಸುವ ಆಟಗಳು ಇದೆಲ್ಲವನ್ನು ಕಲಿಯಲು ಅರಿಯಲು ಉತ್ತೇಜಿಸಲು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಸದುಪಯೋಗವಾಗಿದೆ.
ಮನೆಯವರು ಮನೆಯಲ್ಲೆ ಕುಳಿತು ಹಲವಾರು ಸಾಹಿತ್ಯಿಕ ಚಟುವಟಿಕೆ, ಗಾರ್ಡನಿಂಗ್ ಚಟುವಟಿಕೆ, ಮನೆಮದ್ದುಗಳ ತಯಾರಿಕೆ, ಹೊಸ ಹೊಸ ಅಡಿಗೆಗಳು, ಹಬ್ಬಹರಿದಿನಗಳ ವಿವರ, ಮುಂತಾದವುಗಳನ್ನು ವಿಷಯಕ್ಕೆ ತಕ್ಕ ಗುಂಪುಗಳ ಸದಸ್ಯರಾಗಿ ಹಲವಾರು ಮಿತ್ರರ ಪರಿಚಯವಾಗಿ ತಮ್ಮ ದೈನಂದಿನ ಚಟುವಟಿಕೆಯ ಜೊತೆಜೊತೆಗೆ ಇವುಗಳನ್ನು ಕೂಡ ಮುಂದುವರಿಸಿಕೊಂಡು ಹೋಗುವವರು ಇದ್ದಾರೆ. ಪ್ರವಾಸಿ ತಾಣಗಳ ವಿವರಗಳನ್ನು ಕೂಡ ತಿಳಿದುಕೊಳ್ಳಲು ಹೋಗುವುದಾದರೆ ಇದು ಮಾರ್ಗಸೂಚಿಯಾಗಿ ಕೆಲಸಮಾಡುತ್ತದೆ. ಮುಂಗಡವಾಗಿ ರಿಜರ್ವೆಶನ್ ಮಾಡಲು ಸ್ಮಾರ್ಟ್ಫೋನ್ ಸಹಕಾರಿ. ಆನಲೈನದಿಂದ ಮನೆಗೆ ಅತ್ಯವಶ್ಯಕ ಸಾಮಾನುಗಳನ್ನು ತರಿಸಲು, ಹೋಟೆಲ್ ನಿಂದ ತಿಂಡಿ, ತಿಂಗಳ ಸಂತೆ ಕೂಡ ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ಫೋನ್ ಪೇ ಮೂಲಕ ಪಡೆದುಕೊಳ್ಳಬಹುದು. ಮನೆ, ಅಂಗಡಿ ಖರೀದಿಸುವುದು ಅಂದರೆ ರಿಯಲ್ ಎಸ್ಟೇಟ್ ದ ಮುಖಾಂತರ ಸವಿಸ್ತಾರವನ್ನು ತಿಳಿದುಕೊಳ್ಳಲಾಗುತ್ತದೆ.
ಸ್ನೇಹಿತರು, ಬಂಧುಗಳು, ಕುಟಂಬದವರು ದೂರದಲ್ಲಿರುವವರಾಗಿದ್ದಾರೆ, ಹೊರದೇಶಗಳಲ್ಲಿಯೂ ಇರುವವರಾಗಿದ್ದರೆ
ಸಲೀಸಾಗಿ ಅವರನ್ನು ಎದುರು ಪ್ರತ್ಯಕ್ಷ ಕಂಡು ಮಾತನಾಡಿಸುವುದು ಯೋಗಕ್ಷೇಮವನ್ನು ಕೇಳುವುದು ಮಾಡುತ್ತಾರೆ.
ಸ್ಮಾರ್ಟ್ಫೋನ್ ನಿಂದ ಪರಿಚಯ, ಸ್ನೇಹ ಮತ್ತಷ್ಟು ಬೆಳೆಯುತ್ತಾ ಒಬ್ಬರಿಗೊಬ್ಬರು ಮಾರ್ಗದರ್ಶಕರಾಗಿ, ಹಿತೈಸಿಗಳಾಗಿ, ಮತ್ತಷ್ಟು ಸಮೀಪ ಬರಮಾಡಿಕೊಂಡಿದೆ.
ಗ್ರಾಮಾಂತರ ಪ್ರದೇಶಗಳಲ್ಲಿಯೂ ಇದರ ಬಳಕೆಯಿಂದಲೆ ಒಕ್ಕಲುತನ, ವ್ಯವಸಾಯ ಮತ್ತಷ್ಟು ಅಚ್ಚುಕಟ್ಟಾಗಿ ಮಾಡಿಕೊಂಡವರು ಉಂಟು. ಒಕ್ಕಲುತನಕ್ಕೆ ಬೇಕಾಗುವ ಸಾಮಗ್ರಿಗಳು ಸುಲಭವಾಗಿ ದೊರಕಿಸಿಕೊಳ್ಳಲು, ಉತ್ತಮವಾದ ಬೀಜಗಳು, ಗೊಬ್ಬರ ತಯಾರಿಸುವ ವಿಧಾನವನ್ನು ಕೂಡ ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ದಿಂದ ತಿಳಿದುಕೊಳ್ಳಲಾಗುತ್ತಿದೆ. ನಾಲ್ಕು ಆಳುಗಳು ಮಾಡುವ ಕೆಲಸ ಒಂದೇ ಯಂತ್ರಮಾಡುವ, ಉಪಕರಣಗಳನ್ನು ಪರಿಚಯಿಸುತ್ತದೆ. ಮನೆ ಕಟ್ಟುವುದು ಅಂದರೆ ಮನೆಗಳ ಪ್ಲ್ಯಾನ, ಡೆಕೊರೆಶನ್ , ಕಾರ್ಪೆಂಟರ್ ನ ಕೆಲಸದ ವಿನ್ಯಾಸಗಳನ್ನು ಇದು ಪರಿಚಯಿಸುವುದು. ಹೆಣ್ಣುಮಕ್ಕಳಿಗೆ, ಗೃಹಣಿಯರಿಗೂ ಟೇಲರಿಂಗ, ಎಮ್ರಾಯಡರಿ, ಕಸೂತಿ, ಇನ್ನಿತರ ಕಲಿಕೆಗಳನ್ನು ಇದರ ಮೂಲಕ ಕಲಿಯಬಹುದು. ವಿದ್ಯಾಭ್ಯಾಸಕ್ಕೂ, ಜಾಬ್ಸ್ ಹುಡುಕಲು, ನೀರಿನ ಬಿಲ್, ಲೈಟ ಬಿಲ್, ಮನೆಯ ಟ್ಯಾಕ್ಸ, ಇನ್ನಿತರ ಫಾರ್ಮ್ ತುಂಬುವುದು ಆಗಲಿ, ಆಡಮಿಶನ್ಸಗಳಾಗಲಿ ಕುಂತಲ್ಲೇ ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ಮುಖಾಂತರ ಮಾಡುವರು. ಆನಲೈನ ಅಥವಾ ಆಫ್ ಲೈನ ಮುಖಾಂತರ ವ್ಯಾಪಾರ ಉದ್ಯೋಗವನ್ನು ಉತ್ತೇಜಿಸಲು ಇದು ಸಹಾಯಮಾಡುತ್ತದೆ. ಕಾನೂನುಬಾಹಿರ ವಿಷಯಗಳು ಸಂಗತಿಗಳು ಕಂಡಾಗ ಪೋಲಿಸರಿಗೆ, ಅಕ್ಕಪಕ್ಕದವರಿಗೆ ತಿಳಿಸಲು ಮೊಬೈಲ್ ಬಳಕೆ ಇದ್ದರೆ ಬೇಗ ಮತ್ತು ಸಲಿಸಾಗಿ ಹಿಡಿಯಬಹುದು. ಅಪಘಾತ ಕಂಡ ಸಮಯದಲ್ಲೂ ವೈದ್ಯರಿಗೆ ಪೊಲೀಸರಿಗೆ ಮೆಕಾನಿಕಗೆ ಮನೆಯವರಿಗೆ ವಿಡಿಯೋ ಮಾಡಿ ಸ್ಥಳದ ವಿವರ ನೀಡಲು ಸಹಕಾರಿ. ಕೆಲಸದ ನಿಮಿತ್ತ ಆಫಿಸಗಳಿಗೆ ವ್ಹಿಜಿಟ್ ಕೊಡಬೇಕಾದರೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲು, ಜಮಾಖರ್ಚಿನ ಲೆಕ್ಕಕ್ಕೂ, ಹಲವಾರು ಪರಿಚಯಸ್ಥರ ಫೋನ್ ನಂಬರ್ಸ್ ಕೂಡಿಡಲು, ಕೆಲವು ಅಡ್ರೆಸ್ ಗಳನ್ನು ಹುಡುಕಲು, ಪ್ರವಾಸದಲ್ಲಿ ಐತಿಹಾಸಿಕ ಸ್ಥಳಗಳ ಫೋಟೋಸ್, ಮನರಂಜನೆಯ ತಾಣಗಳ ಫೋಟೋಸ್ ಶೇಖರಿಸಿ ಇಡಲು ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ಅವಶ್ಯಕವಾಗಿರುತ್ತದೆ. ವಾಟ್ಸಾಪ್, ಇನ್ನಸ್ಟಾಗ್ರ್ಯಾಮ, ಪಿನರೆಸ್ಟ, ಫೇಸ್ಬುಕ್, ಯುಟ್ಯೂಬ್ ಇನ್ನಿತರ ಆಪ್ಸಗಳನ್ನು ಬಳಸಬಹುದು. ಅದರಲ್ಲಿ ನಮ್ಮ ವಿಚಾರಗಳು ಒಳ್ಳೆಯ ಸಂದೇಶಗಳನ್ನು, ನಮ್ಮ ಅಭಿರುಚಿಗಳನ್ನು ಹಂಚಿಕೊಳ್ಳಬಹುದು. ನಾವು ಮನೆಯಿಂದ ಹೊರಗೆ ಇದ್ದಾಗ ಜಗತ್ತಿನಲ್ಲಿ ನಡೆಯುವ ವಿಷಯಗಳ ಬಗ್ಗೆಯೂ ಮೊಬೈಲ್ ಮೂಲಕ ವಾರ್ತೆಗಳನ್ನು ನೋಡಿ ತಿಳಿದುಕೊಳ್ಳಬಹುದು. ಒಂದು ಡಾಯರಿ ರೂಪದಲ್ಲಿ ಮೊಬೈಲ್ ತನ್ನ ಕೆಲಸ ನಿರ್ವಹಿಸುತ್ತದೆ ಅಂದರೆ ತಪ್ಪಾಗಲಾರದು.
ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಪಡೆಯುವ, ಸಹಾಯ ಮಾಡುವ ಹಸ್ತಗಳಿಗೆ ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ಬಹಳ ಸಹಾಯಕಾರಿ. ಬಡ ಕುಟುಂಬಗಳಿಗೆ, ಅಂಗವಿಕಲರಿಗೆ, ಬಡ ವಿದ್ಯಾರ್ಥಿಗಳಿಗೆ, ವೃದ್ಧಾಶ್ರಮಕ್ಕೆ ಅನಾಥ ಮಕ್ಕಳಿಗೆ ಸಹಾಯ ನೀಡಲು ಇವುಗಳ ಸಂಘಸಂಸ್ಥೆಗಳ ವಿವರ ಪಡೆದುಕೊಂಡು ವಿದ್ಯಾದಾನ, ಅನ್ನದಾನ, ದೇಹದ ಅಂಗದಾನ, ರಕ್ತದಾನ, ಧನ ದಾನ ಕೂಡ ಮಾಡಬಹುದು. ಕೆಲವರು ಬಹಿರಂಗ ಪಡಿಸಲು ಇಚ್ಛಿಸಿದೆ ಗುಪ್ತವಾಗಿ ದಾನ ಮಾಡುವವರಿಗೆ ಸಹಕಾರಿ. ಇದು ನಮಗೆ ಒಳ್ಳೆಯ ಸ್ನೇಹಿತನೆಂದರೂ ತಪ್ಪಿಲ್ಲ. ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ಬಳಕೆಯಿಂದ ಬಷ್ಟಾಚಾರಗಳನ್ನು, ಅತ್ಯಾಚಾರಿಗಳನ್ನು, ಲಂಪಟರನ್ನು, ಕಳ್ಳಕಾಕರನ್ನು, ದೈಹಿಕ ಮಾನಸಿಕ ತೊಂದರೆ ನೀಡುವ ಆಫಿಸರ್ ಗಳನ್ನು, ದಂಗೆ ಎಬ್ಬಿಸುವ ಪುಂಡಪೋಕರಿಗಳನ್ನು, ಕೆಟ್ಟ ರಾಜಕಾರಣಿಗಳನ್ನು ಅನಾಯಾಸವಾಗಿ ಆಯಾ ಸಂದರ್ಭಗಳಲ್ಲಿ ವ್ಹಿಡಿಯೋ ಮಾಡಿ ಅವರವರ ಕರ್ತುತ್ವಗಳನ್ನು ಬಹಿರಂಗಗೊಳಿಸಲು ಸಹಾಯಕ. ಇದು ತಪ್ಪುಗಳನ್ನು ತಿದ್ದಲು ಹೇಳಿ ಕೆಲವು ವಿಷಯಗಳಲ್ಲಿ ಎಚ್ಚರಿಕೆಯಿಂದ ಬಳಸಲು ಸೂಚಿಸುತ್ತದೆ. ಇದು ಕೂಡ ನಮ್ಮ ಶರೀರದ ಅವಿಭಾಜ್ಯ ಅಂಗವಾಗಿದೆ. ನಮ್ಮ ಶರೀರದ ಜೊತೆಜೊತೆಗೆ ಇದನ್ನು ಅತ್ಯವಶ್ಯಕವಿದ್ದಲ್ಲಿ ಹಿತವಾಗಿ ಮಿತವಾಗಿ ಬಳಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ನಮ್ಮ ಮೊಬೈಲ್ ಕೂಡ ದೀರ್ಘ ಕಾಲ ಬಾಳಿಕೆ ಬರುತ್ತದೆ.

ಪ್ರಪಂಚದ ಎಲ್ಲಾ ರೀತಿಯ ವಿಷಯಗಳ ಸಂಗ್ರಹ ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ಮೂಲಕ ನೋಡಬಹುದು, ತಿಳಿದು ಅರಿತುಕೊಳ್ಳಬಹುದು. ಬರಬರುತ್ತಾ ಹೊಸ ಹೊಸ ತಂತ್ರಜ್ಞಾನದ ಬಳಕೆಯಿಂದ ಇನ್ನು ಸಾಕಷ್ಟು ವಿಷಯಗಳು ಬಹಿರಂಗಗೊಳ್ಳುತ್ತವೆ. ಒಂದು ರೀತಿಯಲ್ಲಿ ಸಕಾರಾತ್ಮಕವಾಗಿ ನೋಡುವುದಾದರೆ ಎಲ್ಲಾದರ ಪರಿಚಯ ಆಗುವುದೇ ಆನ್ಡ್ರಾಯಿಡ್ ಸ್ಮಾರ್ಟ್ಫೋನ್ ಮೂಲಕ ಅಲ್ಲವೇ?


ಸುಲೋಚನಾ ಮಾಲಿಪಾಟೀಲ

Leave a Reply

Back To Top