ಶೈವಾನೀಕರವರ ಕವಿತೆ-ನನ್ನೊಲವ ಪ್ರೇಮ ದೀಪ

ಕಾವ್ಯ ಸಂಗಾತಿ

ಶೈವಾನೀಕರವರ

ನನ್ನೊಲವ ಪ್ರೇಮ ದೀಪ

ನನ್ನೆದೆಯ ದೀವಿಗೆಯಲ್ಲಿ ನಿನ್ನೊಲವ ಆರದ ದೀಪವನ್ನೊಮ್ಮೆ ಹಚ್ಚಿ ಬಿಡು ಗೆಳತಿ
ಪ್ರೇಮ ತೈಲವನು ಎರೆದು
ಬೆಸುಗೆ ಭಾಂದವ್ಯದ ಬತ್ತಿ ಹೊಸೆದು
ನನಗದುವೇ ನಿತ್ಯ ದೀಪಾವಳಿ

ನಿನ್ನ ಪ್ರೇಮ ಕಾಂತಿಯ ನೆರಳಿನಲಿ
ನನ್ನ ಬದುಕು ಬಿರಿಯಲಿ
ನಿತ್ಯವೂ ನಿನ್ನ ನಗೆ ಬೆಳಕು ಚೆಲ್ಲುತಿರಲಿ
ಕತ್ತಲಾದ ಮನ ಮಡಿಕೆ ಬೆಳಕಾಗಲಿ
ನಿನ್ನೊಲವ ಸಾಂಗತ್ಯ ಸದಾ ಜೊತೆಗಿರಲಿ

ನಿನ್ನ ಕಣ್ಣ ಕನ್ನಡಿಯಲ್ಲಿ ನನ್ನ ಬಿಂಬ ಕಾಣುತಿರಲಿ
ಕಾಡಿಗೆಯ ಕಿನಾರೆಗೆ ನನ್ನ ಜೀವವೇ ಮುಡಿಪಾಗಿರಲಿ
ನಿನ್ನ ಕದಪುಗಳಲಿ ನನ್ನ ರೂಪವು ಮಿನುಗುತಿರಲಿ
ನಿನ್ನಧರಗಳ ಕೆಂಬಣ್ಣದಲಿ ನನ್ನ ನೆನಪು ಕೂತಿರಲಿ

ನನ್ನ ವಿರಹದ ಮಬ್ಬಿಗೆ ಹಚ್ಚಿಕೊಂಡ ದೀಪ ನೀನು
ನನ್ನೆಲ್ಲಾ ಭಾವಗಳ ಭಾವನೆಹೊನಲು ನೀನು
ನಿನ್ನೊಲವ ದೀವಿಗೆಗೆ ಬತ್ತಿಯಾಗಿಹೆನು
ನಿನ್ನ ಪ್ರೇಮಕಿಡಿಯನು ಅಪ್ಪಿ ಬೆಳಗುತಿಹೆನು

ನನ್ನುಸಿರ ಶ್ವಾಸದಲಿ ಮಿಡಿತ ನೀನು
ನನ್ನೆದೆಯ ಬಡಿತಕ್ಕೆ ನಾದ ನೀನು
ನನ್ನೊಲವ ಮಾತುಗಳಿಗೆ ಧನಿಯು ನೀನು
ನನ್ನ ಪ್ರಾಣಕ್ಕೆ ಮೂಲ ನೀನು

ನನ್ನೆದೆಯ ಗುಡಿಯಲ್ಲಿ ನಿತ್ಯ ಬೆಳಗಲಿ
ನಿನ್ನೊಲವ ದೀಪ್ತಿ
ಆತ್ಮಪೀಠವನು ಅಲಂಕರಿಸಿ ನೀಡು ಮುಕ್ತಿ
ನನ್ನೆಲ್ಲ ಸಾಧನೆಗೆ ನೀನೆ ಶಕ್ತಿ
ನನ್ನ ಪ್ರೇಮಪೂಜೆಗೆ ಒಲಿದ ನಿನ್ನ ಒಲವ ಮೂರ್ತಿ

ನನ್ನ ಬಯಲೆದೆಗೆ ಹಚ್ಚಿಟ್ಟ ದೀವಿಗೆಯು ನೀನು
ಕಾರ್ಮುಗಿಲ ಮನದೊಳು ಬೆಳಕೀವ ಚಂದ್ರಮವು ನೀನು
ನಿನ್ನ ದಂತಪಂಕ್ತಿಗಳೆ ಹೊಳೆವ ತಾರೆ
ನನ್ನೆದೆಯ ದೀವಿಗೆಯ ಹಚ್ಚು ಬಾರೆ

ನನ್ನ ನಿತ್ಯ ಚಲೆನೆಗೆ ಉಸಿರ ವಾಹಕ ನೀನು
ನನ್ನ ವಿರಹ ಗಂತವ್ಯಕೆ ಉಸಿರಿತ್ತು ಹಸಿರ ಪೋಷಿಸು
ಆರಿಹೋಗದೆ ಬೆಗಸೆಯಲಿಟ್ಟು ಕಾಯುವೆನು ನಾನು
ಬಾಡಿದ ಭಾವನೆಗಳಿಗೆ ಒಲವ ಸಿಂಚಿಸಿ ಪೋಷಿಸು

ಆಂತರ್ಯ ಕನ್ನಡಿಯಲಿ ತುಂಬಿದ ಪ್ರತಿ ಬಿಂಬ ನೀನು
ಅದನಾರಾಧಿಸುತ ಬೇಡುವವನು ನಾನು
ಪ್ರೇಮ ಬಿಕ್ಷೆಯನಿತ್ತು ಸಂತೈಸು
ಬರಡೆದೆಯ ಭೇದೆಗೆ ಒಲವ ಬಿತ್ತಿ ಓಲೈಸು

ಭರವಸೆಯ ಬೆಳಕಿತ್ತು ಸಂತೈಸು
ನಿನ್ನನ್ನೇ ಬಳಿದುಕೊಂಡಾಯ್ತು ಪಸೆಯ ಉಸಿರು
ಉರಿವಲೆಗೆ ಹೆಗಲ ಚಾಚಿ ಸಾವನ್ನೂ ಬದುಕನ್ನೂ ಉರಿವ ನೆರಳಿನಲೆ ಗೂಡು ಕಟ್ಟಿಕೊಂಡಾಯ್ತು
ನಿನ್ನ ಸನಿಹವೇ ನನ್ನೆಲ್ಲ ಕನಸುಗಳಿಗೆ ಹಸಿರು

ನಂಬುಗೆಯ ದೀವಿಟಿಗೆ ಹಚ್ಚಿ ಬೆಳಕಾಗಿಸು
ದುಗುಡ ಕತ್ತಲೆಗಳ ಹೊಡಿದೋಡಿಸು
ಸ್ನೇಹ ಪ್ರೀತಿಯ ತಿಲಕ ನೊಸಲಿಗೆ ಚುಂಬನದೊಳಿಡು
ನಿನ್ನಗಾಗಿ ಎದೆಬಯಲು ಬಿರಿದು ಕಾದಿಹುದು

ಗಾಳಿಯೊಡಗೂಡಿ ಬಂದ ಗಂಧ ಘಮಲು
ತಲೆಗೇರಿ ಕೂತಿಹುದು ನಿನ್ನ ಪ್ರೇಮದ ಅಮಲು
ಚೈತನ್ಯ ತುಂಬಲು ಚಿನ್ಮಯವು ನೀನಾಗು
ನಿನ್ನ ಅಭಿಮಾನಿಯಾಗಿ ಮಸಣದ ಮೌನದೊಳು ಜೀವಂತ ಶವವಾಗಿ ಕಾದಿಹೆನು

ನಿನ್ಹೆಸರ ದೀವಿಗೆಯ ಮನದಲ್ಲಿ ಬೆಳಗಿಹೆನು
ನನ್ನೆಲ್ಲ ಸಾಲುಗಳಲಿ ನಿನ್ನ ಕಿಡಿ ಹೊತ್ತಿಸಿಹೆನು
ನನ್ನ ನರನಾಡಿಗಳ ಹೊಸೆದು ಬತ್ತಿಯಾಗಿಸಿಹೆನು
ನನ್ನೊಲವ ಗುಡಿಗೆ ಸದಾ ಉರಿವ ಅಖಂಡ ದೀಪ ನಿನ್ನಾಗಿಸಿಹೆನು


       ಶೈವಾನೀಕ 

Leave a Reply

Back To Top