ಧಾರಾವಾಹಿ-ಅಧ್ಯಾಯ –10

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಕಲ್ಯಾಣಿಯ ಸಹನೆ

ಸಂಜೆಯಾಯಿತು ದೀಪ ಹಚ್ಚುವ ಸಮಯ ನಾರಾಯಣನ್ ಮನೆಗೆ ಬಂದರು. ಎಲ್ಲಾ ದಿನದಂತೆ ಮಕ್ಕಳ ಮಾತಿನ ನಗುವಿನ ಸದ್ದು ಇಲ್ಲ ಸಂಪೂರ್ಣ ನಿಶಬ್ದತೆ ಮನೆಯನ್ನು ತುಂಬಿತ್ತು.  ನನ್ನ ಮನೆಗೆ ತಾನೇ ನಾನು ಬಂದಿರುವುದು ಎನ್ನುವ ಸಂಶಯ ಹುಟ್ಟಿಸುವಷ್ಟು ಮೌನ ಕವಿದಿತ್ತು ಅಲ್ಲಿ. ಮಕ್ಕಳನ್ನು ಕೂಗಿ ಕರೆದರು ನಾಲ್ವರೂ ಬಂದು ಮೌನವಾಗಿ ನಿಂತರು…. ” ಏನಾಯ್ತು ಎಲ್ಲರಿಗೂ…. ಸಂಧ್ಯಾ ದೀಪ ಹಚ್ಚಿ ಪ್ರಾರ್ಥನೆ ಮಾಡುವ ಸಮಯ ಆಯ್ತು ಬನ್ನಿ…. ಎಂದರು.

ನಾರಾಯಣನ್ ಮಡಿಯುಟ್ಟು ದೇವರ ಪೂಜೆ ಮಾಡಿದರು. ಹೆಣ್ಣು ಮಕ್ಕಳು ಇಬ್ಬರೂ ಯಾಂತ್ರಿಕವಾಗಿ ಹೋಗಿ ಸರ್ಪಕಾವಿನಲ್ಲಿ ದೀಪ ಹಚ್ಚಿ ಬಂದರು. ಕಲ್ಯಾಣಿಯವರು ಎಂದಿನಂತೆ ನೆಲವಿಳಕ್ಕು ಬೆಳಗಿಸಿ ಮನೆಯ ವರಾಂಡದಲ್ಲಿ ತಂದು ಇಟ್ಟರು ಮಕ್ಕಳೆಲ್ಲರೂ ಕುಳಿತು ಎಂದಿನಂತೆ ದೇವರ ನಾಮಸ್ಮರಣೆಯಲ್ಲಿ ತೊಡಗಿದರು. ಕಲ್ಯಾಣಿ ಕೂಡಾ ದೇವರಿಗೆ ಭಕ್ತಿಯಿಂದ ಕೈ ಮುಗಿದು…. “ದೇವರೇ ಈ ಸಂಕಟದಿಂದ ಪಾರುಮಾಡು ಪತಿಯ ಮನಸ್ಸು ಹಾಗೂ ಅವರು ತೆಗೆದು ಕೊಂಡಿರುವ ನಿರ್ಧಾರ ಬದಲಾಗುವಂತೆ ವರ ಕರುಣಿಸು ಕೃಷ್ಣಾ”…. ಎಂದು ಮನಸ್ಸಿನಲ್ಲೇ ಬೇಡಿ ಕೊಳ್ಳುತ್ತಾ ದೇವರ ನಾಮವನ್ನು ಹೇಳುತ್ತಾ ರಾತ್ರಿಯ ಅಡುಗೆಯ ತಯಾರಿಯಲ್ಲಿ ನಿರತರಾದರು. ಗಂಡು ಮಕ್ಕಳು ದೇವರ ಶ್ಲೋಕಗಳನ್ನು ಹೇಳಿ ಮುಗಿಸಿ ಎಂದಿನಂತೆ ಅಪ್ಪ ಕುಳಿತಿದ್ದ ಕಡೆಗೆ ಹೋದರು. ನಾರಾಯಣನ್ ನಗುತ್ತಾ ಮಕ್ಕಳನ್ನು ಹತ್ತಿರ ಕರೆದು ಕೇಳಿದರು ” ಏನಾಯ್ತು ಮಕ್ಕಳೇ ಏಕೆ ಎಂದಿನಂತೆ ಇಲ್ಲ ನೀವೆಲ್ಲರೂ ಇಂದು….ಇಂತಹ ಮೌನವೇಕೆ ಮನೆಯಲ್ಲಿ? ಮೊದಲ ಬಾರಿಗೆ ಇಂತಹ ನೀರವ  ಮೌನ ಮನೆ ತುಂಬಿದೆ…. ನಿಮ್ಮ ಆಟ ನಗು ಯಾವುದೂ ಇಲ್ಲ…. ಅಂತದ್ದು ಏನಾಗಿದೆ ಇಂದು? “….ಎಂದರು  ಅಕ್ಕರೆಯಿಂದ. ಗಂಡುಮಕ್ಕಳು ಇಬ್ಬರೂ ಪುಕಾರಿನ ಧ್ವನಿಯೊಂದಿಗೆ ಅಪ್ಪನ ಹತ್ತಿರ ಬಂದರು….” ಅಪ್ಪಾ ಅಕ್ಕಂದಿರು ಇಬ್ಬರೂ ಎಷ್ಟು ಕರೆದರೂ ನಮ್ಮ ಜೊತೆ ಆಟಕ್ಕೆ ಬರುತ್ತಿಲ್ಲ. ಇಬ್ಬರೂ ಗುಸು ಗುಸು ಮಾತನಾಡುತ್ತಾ ಕೆಲವೊಮ್ಮೆ ಅಳುತ್ತಿದ್ದಾರೆ. ಕೇಳಿದರೆ ಏನೂ ಹೇಳುತ್ತಾ ಇಲ್ಲ ಅಪ್ಪ ಬಂದ ನಂತರ ಕೇಳೋಣ ಅಂತ ಹೇಳಿದರು…. ಏನಪ್ಪಾ ಅದು? ಎಂದು ಮುಗ್ಧತೆಯಿಂದ ಕೇಳಿದರು.

ತಕ್ಷಣಕ್ಕೆ ನಾರಾಯಣನ್ ಅವರಿಗೆ ವಿಷಯ ಏನು ಇರಬಹುದು ಎಂದು ಹೊಳೆಯಲಿಲ್ಲ. ” ಸುಮತೀ ಬಾರಮ್ಮ ಇಲ್ಲಿ ತಮ್ಮಂದಿರು ಏನು ಹೇಳುತ್ತಾ ಇರುವರು ಅಂತ ನನಗೆ ತಿಳಿಯುತ್ತಿಲ್ಲ…. ಏನು ವಿಷಯ ಅಂತ ಈ ಅಪ್ಪನಿಗೆ ಹೇಳ ಬಾರದೇ ಎಂದು ಮುದ್ದಿನ ಮಗಳನ್ನು ಕೂಗಿ ಕರೆದರು.

ಸುಮತಿ ಅಲ್ಪ ಅಳುಕಿನಿಂದಲೇ ಅಪ್ಪನ ಕೂಗಿಗೆ “ಬಂದೆ  ಅಪ್ಪಾ” ಎಂದು ಹೇಳುತ್ತಾ ಕೋಣೆಯಿಂದ ಹೊರಗೆ ಬಂದಳು. ಹಿಂದೆಯೇ ನಿಧಾನವಾಗಿ ಅವಳ ಅಕ್ಕನೂ ಬಂದಳು. ನಾಣು ಕೇಳಿದರು “ತಮ್ಮಂದಿರ  ಜೊತೆ ಹೆಚ್ಚು ಮಾತನಾಡದೇ ಪಿಸುಮಾತು ಆಡುತ್ತಾ ಅಳುತ್ತಿರುವುದೇಕೆ? ಅಳುವಂತದ್ದು ಏನಾಯ್ತು?”…. ಕುಳಿತಲ್ಲಿಂದಲೇ ಕಲ್ಯಾಣಿಯನ್ನು ಕೂಗಿ “ಕಲ್ಯಾಣೀ ಏಕೆ ಮಕ್ಕಳು ಹೀಗೆ…. ಏನಾಯ್ತು ಇವರಿಗೆ”..ಎಂದು ಕೇಳಿದಾಗ ಅಡುಗೆ ಮನೆಯ ಬಾಗಿಲಿಗೆ ಬಂದು” ನೀವೇ ಕೇಳಿ ನೋಡಿ ಅವರಿಗೆ ಏನಾಗಿದೆ ಎಂದು… ನನ್ನಲ್ಲೂ ಅವರು ಏನೂ ಹೇಳಲಿಲ್ಲ” ಎಂದು ಅನ್ನವನ್ನು ಬಸಿಯಲು ಅಡುಗೆ ಮನೆಗೆ ಹೋದರು.  “ಹೇಳಿ ಮಕ್ಕಳೇ ಏನಾಯ್ತು …. ಹೀಗೆ ಮೌನವಾಗಿ ನಿಂತರೆ ಅಪ್ಪನಿಗೆ ಅರ್ಥ ಆಗುವುದಾದರೂ ಹೇಗೆ?  ಎಂದು ಪ್ರೀತಿಯಿಂದ ನಾಣು ಕೇಳಲು ಸುಮತಿ ಸ್ವಲ್ಪ ಧೈರ್ಯ ತಂದುಕೊಂಡು ….”ನಾವು ನಮ್ಮೂರು ಬಿಟ್ಟು ಮೈಸೂರಿಗೆ ಹೋಗುತ್ತೀವಾ ಅಪ್ಪಾ”…. ಎಂದಾಗ …. “ಹೌದು ಮಗಳೇ ನಾವು ಅಲ್ಲಿಗೆ ಹೋಗುತ್ತಾ ಇದ್ದೇವೆ”….ಎಂದರು ನಾಣು. ಈ ಮಾತು ಕೇಳಿ ಸುಮತಿ ಹಾಗೂ ಅವಳ ಅಕ್ಕ ಆವಕ್ಕಾದರು. ಮತ್ತು  ಅವರ ಮನದಲ್ಲಿ ಮೂಡಿದ ಪ್ರಶ್ನೆಗೆ ಸರಿಯಾದ ಉತ್ತರ ಅಲ್ಲ ಅದು ಎಂದು ಅಕ್ಕ ತಂಗಿ ಇಬ್ಬರಿಗೂ ಅನಿಸಿತು. ಮತ್ತೊಮ್ಮೆ ಒಕ್ಕೊರಲಿನಿಂದ ಕೇಳಿದರು ಅಪ್ಪಾ ಇಲ್ಲಿನ ನಮ್ಮ ಮನೆ ತೋಟ ಎಲ್ಲವನ್ನೂ ಬಿಟ್ಟು …. ನಾವು ಹುಟ್ಟಿ ಆಡಿ ಬೆಳೆದ ಈ ಊರನ್ನು ಬಿಟ್ಟು…. ಹೋಗುವುದೇ”….

ಮಕ್ಕಳು ಕೇಳಿದ ಈ ಪ್ರಶ್ನೆಯಿಂದ ನಾಣುವಿಗೆ ಮಕ್ಕಳ ಇಂದಿನ ಮೌನದ ಅರ್ಥ ತಿಳಿದು ಹೋಯಿತು. ಕಲ್ಯಾಣಿಯು ವಿಷಯವನ್ನು ಮಕ್ಕಳಿಗೆ ತಿಳಿಸಿದ್ದಾಳೆ ಎನ್ನುವುದು ಖಾತ್ರಿಯಾಯಿತು. ಮಕ್ಕಳ ಆತಂಕ ತುಂಬಿದ ಮಾತುಗಳನ್ನು ಕೇಳಿ ಮೆಲುವಾಗಿ ನಗುತ್ತಾ…. “ಹೌದು ಮಕ್ಕಳೇ ಅಪ್ಪ ಮೈಸೂರು ರಾಜ್ಯದ ಸಕಲೇಶಪುರ ಎಂಬಲ್ಲಿ ಕಾಫಿ ತೋಟ ನೋಡಿದ್ದೆ ಅಂತ ಹೇಳಿದ್ದೆನಲ್ಲಾ ಆ ತೋಟವನ್ನು ನಾವು ಕೊಂಡುಕೊಳ್ಳುತ್ತಾ ಇದ್ದೇವೆ. ಹಾಗಾಗಿ ಇಲ್ಲಿನ ತೋಟ ಮನೆ ಎಲ್ಲವನ್ನೂ ಮಾರಿ ನಾವು ಅಲ್ಲಿ ಹೋಗಿ ವಾಸ ಮಾಡಬೇಕಾಗಿದೆ”…. ಅಪ್ಪ ಹೇಳಿದ ಮಾತುಗಳನ್ನು ಕೇಳಿ ಮಕ್ಕಳು ಮೌನವಾಗಿ ನಿಂತರು. ಗಂಡು ಮಕ್ಕಳಿಗೆ ಏನೂ ಅರ್ಥ ಆದಂತೆ ತೋರಲಿಲ್ಲ. ಅವರು ಇನ್ನೂ ಚಿಕ್ಕವರು. ಆದರೂ ಮೈಸೂರಿಗೆ ಅಪ್ಪ ಅಮ್ಮನೊಂದಿಗೆ ತಾವು ಹೋಗುತ್ತೇವೆ ಅನ್ನುವುದು ಅವರಿಗೆ ಗೊತ್ತಾಯಿತು.

ಸುಮತಿ ಹಾಗೂ ಅವಳ ಅಕ್ಕನಿಗೆ ಅರ್ಥವಾಯಿತು  ತಾವು ಹುಟ್ಟಿ ಬೆಳೆದ ನೆಲವನ್ನು ಬಿಟ್ಟು  ಬೇರೆ ನೆಲದಲ್ಲಿ ಹೋಗಿ ವಾಸಿಸಲು  ಅಪ್ಪ ತೀರ್ಮಾನಿಸಿದ್ದಾರೆ ಎಂದು. ಇಬ್ಬರ ಮುಖವೂ ಬಾಡಿತು. ಸುಮತಿಯಂತೂ ಸ್ಥಬ್ದವಾಗಿ ಅಲುಗಾಡದೆ ನಿಂತಳು. ಅಪ್ಪ ಹೇಳುತ್ತಾ ಇರುವುದು ನಿಜವೇ? ಅಮ್ಮ ಹೇಳಿದಾಗಲೇ ಮನಸ್ಸು ಮದುಡಿ ಹೋಗಿತ್ತು ಈಗ ಅಪ್ಪ ಹೇಳಿದ ಮಾತುಗಳನ್ನು ಕೇಳಿ ಅವಳಿಗೆ ಮಾತೇ ಬಾರದಾಯಿತು.  ಹಾಗಾದರೆ ನಾವು ನಿಜವಾಗಿಯೂ ಇಲ್ಲಿನ ಮನೆ ತೋಟ ಎಲ್ಲವನ್ನೂ ತೊರೆದು ಹೋಗುತ್ತಿದ್ದೇವೆಯೇ? ಮನದಲ್ಲಿ ಉದ್ಭವಿಸಿದ ಈ ಪ್ರಶ್ನೆಯಿಂದ ಕಣ್ಣುಗಳು ತುಂಬಿ ಬಂದಿದ್ದು ಕಾಣದೇ ಇರಲೆಂದು ತಲೆ ಕೆಳಗೆ ಮಾಡಿ ನೆಲವನ್ನು ನೋಡುತ್ತಾ ನಿಂತಳು. ಕಣ್ಣಿಂದ ಉರುಳಿದ ಹನಿಗಳು ಅವಳ ಕೆನ್ನೆಯಿಂದ ಜಾರಿ ತೊಟ್ಟಿದ್ದ ಬಟ್ಟೆಯ ಮೇಲೆ ಬಿದ್ದು ನೆಲ ಸೇರಿದವು. ಲಾಂದ್ರದ ಬೆಳಕಿನಲ್ಲಿ ನಾಣು ಅದನ್ನು ಗಮನಿಸಲಿಲ್ಲ. ಆದರೆ ಅವಳ ಅಕ್ಕ ಅದನ್ನು  ಗಮನಿಸಿದಳು ಏಕೆಂದರೆ ಅವಳ ಸ್ಥಿತಿ ಕೂಡಾ ಅದಕ್ಕಿಂತ ಭಿನ್ನವಾಗಿರಲಿಲ್ಲ.

ಮೆಲ್ಲನೆ ಸುಮತಿಯ ಹತ್ತಿರ ಬಂದು ಅವಳ ತೋಳನ್ನು ಒತ್ತಿ  ಹಿಡಿದು ಸಾಂತ್ವನ ಮಾಡುವ ವಿಫಲ ಪ್ರಯತ್ನ ಮಾಡಿದಳು.

ಮಕ್ಕಳನ್ನು ಉದ್ದೇಶಿಸಿ ನಾಣು ಹೇಳಿದರು….” ಅಪ್ಪ ಇಲ್ಲಿನ ಮನೆ ತೋಟ ಗದ್ದೆ ಎಲ್ಲವನ್ನೂ ಮಾರಿ ಸಕಲೇಶಪುರದ ತೋಟವನ್ನು ಅಲ್ಲಿನ ಮಾಲೀಕರಿಂದ ಖರೀದಿಸಿ ಅಲ್ಲಿ ಹೋಗಿ ನಾವೆಲ್ಲರೂ ವಾಸ ಮಾಡುವುದು ಎಂದು ತೀರ್ಮಾನ ಮಾಡಿ ಆಗಿದೆ….ನಿಮ್ಮ ಅಮ್ಮ ಕೂಡಾ ಯೋಚಿಸಿ ಸರಿಯಾದ ಅಭಿಪ್ರಾಯ ಕೊಡುತ್ತಾಳೆ ಎಂದು ನಿರೀಕ್ಷಿಸುತ್ತಿದ್ದೇನೆ…ನಾಳೆಯ ನಿಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ನನ್ನ ಈ ಮುಂದಾಲೋಚನೆ …. ಇಂದು ನಿಮಗೆಲ್ಲರಿಗೂ ಇದು ಕಷ್ಟವಾಗಿ ತೋರುವುದು…. ಕಾಲಕ್ರಮೇಣ ನೀವು ದೊಡ್ಡವರಾದಂತೆ ನಿಮಗೆ ನಾನು ಮಾಡಿದ್ದು ಸರಿ ಎಂದು ಅನಿಸದೇ ಇರದು….ನಾಳಿನ ನಿಮ್ಮ ಉತ್ತಮ ಭವಿಷ್ಯಕ್ಕಾಗಿ ನನ್ನ ಈ ನಿರ್ಧಾರ. ನೀವೆಲ್ಲರೂ ಮನಸ್ಪೂರ್ತಿಯಾಗಿ ತಯಾರಾಗಬೇಕಿದೆ. ನಿಧಾನವಾಗಿ ನೀವು ಕೂಡಾ ಅಲ್ಲಿಗೆ ಹೊಂದಿಕೊಳ್ಳುವಿರಿ….ಎಂದು ಹೇಳಿ ನಾಣು ಎದ್ದು ಒಳ ನಡೆದರು. ಅಪ್ಪನ ಅಭಿಪ್ರಾಯಕ್ಕೆ ಎಂದೂ ಎದುರು ಹೇಳದ ಮಕ್ಕಳು ಯಾವ ಅಭಿಪ್ರಾಯವನ್ನೂ ಹೇಳದೇ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡು ಅಲ್ಲಿಯೇ ನಿಂತರು.  ಸುಮತಿಯ ಮನಸ್ಸು ಇಂದು ಕದಡಿದ ಕೊಳದಂತೆ ಆಯಿತು. ಮಾತನಾಡದೇ ಅಕ್ಕನ ಕೈಹಿಡಿದು ತಮ್ಮಂದಿರನ್ನು  ಕರೆದುಕೊಂಡು ಅಮ್ಮನ ಬಳಿಗೆ ಹೋದಳು. ಅಡುಗೆ ಮನೆಯಲ್ಲಿ ಕಲ್ಯಾಣಿಯವರು ಅಡುಗೆಯನ್ನು ಮಾಡಿ ಇಟ್ಟು ಎಲ್ಲರೂ ಊಟಕ್ಕೆ ಬರುವುದನ್ನೇ ಕಾಯುತ್ತಾ ಕುಳಿತಿದ್ದರು.  ಮೆಲ್ಲನೆ ಸುಮತಿ ಅಮ್ಮನ ಬಳಿ ಬಂದಳು. ಅಮ್ಮನ ಹೆಗಲ ಮೇಲೆ ಕೈ ಇಟ್ಟಳು. ಅವಳ ಕೈ ತಣ್ಣಗೆ ಕೊರೆಯುತ್ತ ಇರುವುದು ಕಲ್ಯಾಣಿಯವರ ಅನುಭವಕ್ಕೆ ಬಂತು. ಮಗಳ ಮನವು ಎಷ್ಟು ನೊಂದಿದೆ ಎಂಬ ಅರಿವು ಅವಳ ಕರ ಸ್ಪರ್ಶದಿಂದಲೇ ಆಯಿತು ಅವರಿಗೆ. ಅವರಿಗೆ ಗೊತ್ತು ಸುಮತಿ ಎಂದೂ ತನ್ನ ಮನದ ನೋವನ್ನು  ಯಾರಲ್ಲೂ ಹೇಳಿ ಕೊಳ್ಳುವುದಿಲ್ಲ. ನೋವುಗಳನ್ನು ನುಂಗಿ ಸಹಿಸುವ ತಾಳ್ಮೆ ಸಹನೆ ಸಣ್ಣ ಮಗುವಿನಿಂದಲೂ ಅವಳಿಗೆ ಇದೆ.  ಅವಳ  ಸಹನೆ ತಾಳ್ಮೆ ಹಾಗೂ ಎಲ್ಲರನ್ನೂ ಪ್ರೀತಿಸುವ ಗುಣ ಕಲ್ಯಾಣಿಯವರಿಗೆ ಅಚ್ಚುಮೆಚ್ಚು.


ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

One thought on “

Leave a Reply

Back To Top