ಸುಜಾತಾ ರವೀಶ್-ದೀಪಾವಳಿ ಚುಟುಕುಗಳು

ಕಾವ್ಯಸಂಗಾತಿ

ಸುಜಾತಾ ರವೀಶ್

ದೀಪಾವಳಿ ಚುಟುಕುಗಳು

(೧)

ಹರುಷ ಸುಖ ತರಲಿ ಈ ದೀಪಾವಳಿ
ಕಳೆದು ಎಲ್ಲ ದುಗುಡಗಳ ಹಾವಳಿ
ನಂದಾದೀಪದ ಜ್ಯೋತಿಯಂತೆ ಬೆಳಗಲಿ
ಸಾಲು ದೀಪಗಳಂತೆ ಎಲ್ಲರ ಬಾಳು ಪ್ರಕಾಶಿಸಲಿ

(೨)
ನಿಶೆಯೊಡಲಿಂದ ಶಶಿ ಮೂಡಿ ಬಂದಂತೆ
ತಿಮಿರ ಬಸಿರಿಂದ ನೇಸರ ಉದಯಿಸಿದಂತೆ
ನಿರಾಸೆಯ ಕೂಪದಿಂದ ಬಂದ ಭರವಸೆಯ ಮಿಂಚಂತೆ
ಹೊಸ ಹರುಷ ತರಲೆಂದು ಬಂದಿಹುದು ಹಬ್ಬ
ದೀಪಗಳ ತೋರಣದ ಬೆಳಕಿನೀ ಸಂಭ್ರಮದ ಹಬ್ಬ.

(೩)

ಕತ್ತಲ ಭೂತವ ಹೊಡೆದೋಡಿಸುತ್ತ
ಮನೆ ಮನಗಳ ಅಂಗಳ ಬೆಳಗಿಸುತ್ತ
ಸಂಭ್ರಮ ಸಂತಸಗಳ ಸುತ್ತೆಲ್ಲ ಹರಡುತ್ತ
ಸಾಗೋಣ ಸಂತೃಪ್ತಿಯ ಹೊಸ ದಿಶೆಯತ್ತ.

(೪)

ಹಚ್ಚೋಣ ಬನ್ನಿ ದೀವಳಿಗೆಯ ಈ ಶುಭ ಸೊಡರು
ಕಳೆಯಲೆಂದು ಬಾಳ ಹಾದಿಯ ಎಲ್ಲ ಕಂಟಕ ತೊಡರು
ಕೊಚ್ಚಿ ಹೋಗಲಿ ಜೀವನದ ದುಃಖ ದುಮ್ಮಾನಗಳ ಕೊಳೆ
ಹರಿದು ಬರಲಿ ಮಂಗಳದ ಹೊಂಬೆಳಕಿನ ಸಂಭ್ರಮದ ಹೊಳೆ.


ಸುಜಾತಾ ರವೀಶ್

Leave a Reply

Back To Top