ವಿಶೇಷ ಲೇಖನ
ಅಂಗೈಯಲ್ಲಿ ಆಂಡ್ರಾಯ್ಡ್ ಅಕ್ಷಯಪಾತ್ರೆ
ಲಕ್ಷ್ಮೀದೇವಿ ಪತ್ತಾರ
ಕೃಷ್ಣ ಬಾಲಕನಾಗಿದ್ದಾಗ ತನ್ನ ತಾಯಿ ಯಶೋದೆಗೆ ಬಾಯಿ ತೆರೆದು ಬ್ರಹ್ಮಾಂಡವನ್ನು ತೋರಿಸಿದಂತೆ ಇಂದು ನಾವೆಲ್ಲರೂ ಅಂಗೈಯಲ್ಲಿ ಮೋಬೈಲನಿಂದ ಬ್ರಹ್ಮಾಂಡವನ್ನು ಕಾಣುತ್ತಿದ್ದೇವೆ.
ಇಂದು ಅಬಾಲ ವೃದ್ಧರಾದಿಯಾಗಿ ಎಲ್ಲರಿಗೂ ಅತ್ಯಂತ ಅವಶ್ಯಕವೂ ಅನಿವಾರ್ಯವೂ, ಆದ ವಸ್ತುವೆಂದರೆ ಅದು ಮೊಬೈಲ. ಇದು ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟು ಅದನ್ನು ಅವಲಂಬಿಸಿದ್ದು, ಅದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದೆ.ಜಗತ್ತಿನಲ್ಲೆ ಅತಿ ಹೆಚ್ಚು ಜನಸಂಖ್ಯೆವುಳ್ಳ ಆರ್ಥಿಕವಾಗಿ ಮುನ್ನುಗ್ಗುತ್ತಿರುವ ನಮ್ಮ ದೇಶದಲ್ಲಿ ಮೊಬೈಲ್ ಇಲ್ಲದಿದ್ದರೆ ವ್ಯವಹಾರ ಮಾಡುವುದು ತುಂಬಾ ಕಷ್ಟವಾಗುತ್ತಿತ್ತು. ಬ್ಯಾಂಕಿಗೆ ಹೋಗಿ ಹಣ ತರುವುದಾಗಲಿ ಯಾರಿಗಾಗಲಿ ಹಣ ಕಳಿಸುವುದಕ್ಕಾಗಲಿ ಮೊಬೈಲ್ ಇಲ್ಲದಿದ್ದರೆ
ಎಷ್ಟು ಸಮಯ, ಎಷ್ಟು ಶ್ರಮ ತೆಗೆದು ಕೊಳ್ಳುತ್ತಿತ್ತು ಯೋಚಿಸಿ ನೋಡಿ.
ಮೊಬೈಲ್ ಎಂದರೆ ಜ್ಞಾನದ ಭಂಡಾರ. ಮೊಬೈಲ್ ಎಂದರೆ ಮನೋರಂಜನೆ ಭರಪೂರ. ಮೊಬೈಲದಿಂದ ವ್ಯವಹಾರ ಸಸಾರ. ಮೋಬೈಲ ಒಂದಿದ್ದರೆ ಸಾಕು ನಮಗೆ ಬೇಕಾದ ವಸ್ತುವನ್ನು , ಮಾಹಿತಿಯನ್ನು ಬೇಕಾದ ಸಮಯದಲ್ಲಿ ಬೇಕಾದಂತೆ ಪಡೆಯಬಹುದು ಎನ್ನುವ ಧೈರ್ಯ ಬಂದು ಬಿಟ್ಟಿದೆ. ಮೊಬೈಲ್ ಎಂಬ ಸ್ನೇಹಿತ ಜೊತೆಗಿದ್ದರೆ ಸಾಕು ಬೇಸರ ಬಲು ದೂರ.
ಮೊಬೈಲನಿಂದಲೇ ಹಣ ,ಮೊಬೈಲಿಂದಲೇ ಊಟ, ಮೊಬೈಲಿಂದಲೇ ಪಾಠ, ಮೊಬೈಲನಿಂದಲೇ ಸರಂಜಾಮು, ಮೊಬೈಲಿಂದಲೇ ವಧುವರರ ಅನ್ವೇಷಣೆ, ಮೊಬೈಲನಿಂದಲೆ ಬುಕ್ಕಿಂಗ್, ಮೊಬೈಲಿಂದಲೇ ಕುಕಿಂಗ್ .ಏನು ಬೇಕು ಅದನ್ನು ಕೊಡುವ ಕಾಮಧೇನು ಕಲ್ಪವೃಕ್ಷವಾಗಿದೆ ಈ ಮೊಬೈಲ್. ವಿದ್ಯಾರ್ಥಿಗಳು, ಶಿಕ್ಷಕರು ತಮಗೆ ಅರ್ಥವಾಗದ, ಬಿಡಿಸಲು ಬಾರದ ಸಮಸ್ಯೆಗಳಿದ್ದರೆ , ಪಠ್ಯ ವಿಷಯವಿದ್ದರೆ ಈಗ ಇತರೆ ಪುಸ್ತಕವನ್ನಾಗಿಲಿ ಇಲ್ಲವೇ ಇತರ ಶಿಕ್ಷಕರನ್ನಾಗಲಿ ವಿಚಾರಿಸದೆ ಗೂಗಲ್ ಗೆ, ಮೊರೆ ಹೋಗುತ್ತಾರೆ.ಹೆಚ್ಚಿನ ಜ್ಞಾನ ಪಡೆಯಲು ಯೂಟ್ಯೂಬ್, ಟೆಲಿಗ್ರಾಂ , ಬ್ಲಾಗ್ ಮುಂತಾದ ಜಾಲತಾಣಗಳನ್ನು ತಡಕಾಡುತ್ತಾರೆ.ಫಿಜಿಕ್ಸ್ ವಾಲಾದಂತಹ ಕೆಲವೊಂದು ಪ್ರಸಿದ್ಧ ಟ್ಯುಟರಗಳು ಅದ್ಭುತ ಜ್ಞಾನವನ್ನು ಆನ್ಲೈನ್ ನಲ್ಲಿ ಫ್ರೀಯಾಗಿ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದಾರೆ.
ಗೃಹಿಣಿಯರು ತಮಗೆ ಬೇಕಾದ ವಿವಿಧ ಅಡಿಗೆ ವಿಧಾನವನ್ನು ಮತ್ತು ವಿವಿಧ ಕರಕುಶಲತೆಗಳನ್ನು ಗೂಗಲ್ ಸಹಾಯದಿಂದ ಪಡೆಯುತ್ತಿದ್ದಾರೆ.ರಂಗೋಲಿ ಹಾಕುವುದಾಗಿ, ಕಸೂತಿ ಹಾಕುವುದಾಗಲಿ, ಕೇಶವಿನ್ಯಾಸ, ಸೌಂದರ್ಯ ಟಿಪ್ಸ್, ಆರೋಗ್ಯ ಟಿಪ್ಸ್ ಮುಂತಾದ ಸಕಲ ವಿದ್ಯೆಗಳನ್ನು ಕಲಿಸುವ ಅದ್ಭುತ ಶಿಕ್ಷಕ ಮೊಬೈಲ್ ಎಂದರೆ ಸುಳ್ಳಲ್ಲ.
ಅಲ್ಲದೆ ಮೊಬೈಲ್ ಮೂಲಕ ತಮ್ಮಲ್ಲಿರುವ ಪ್ರತಿಭೆ, ಜ್ಞಾನ ಕೌಶಲ್ಯವನ್ನು ಹೊರಗೆಡುವಲು ಬೃಹತ್ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ .ಕವಿ ಕಲಾವಿದರಿಗಂತೂ ಮೊಬೈಲಿಂದ ಆಗುವ ಉಪಯೋಗವನ್ನು ಹೇಳತೀರದು .ವಾಟ್ಸಪ್ ಗ್ರೂಪ್ ಗಳಲ್ಲಿ, ಬ್ಲಾಗ್ ಗಳಲ್ಲಿ ತಮ್ಮ ಜ್ಞಾನ ಕೌಶಲ್ಯವನ್ನು ಪ್ರದರ್ಶಿಸಿ ಪ್ರಸಿದ್ಧಿ , ಪ್ರಶಸ್ತಿ ,ಹಣವನ್ನು ಪಡೆಯುತ್ತಿದ್ದಾರೆ . ಅಲ್ಲದೆ ತಮಗೆ ಗೊತ್ತಿರದ ಕೌಶಲ್ಯಗಳನ್ನು ಮೊಬೈಲಿಂದ ಪಡೆಯುತ್ತಿದ್ದಾರೆ ಮತ್ತು ತ್ವರಿತವಾಗಿ ಜನರನ್ನ ತಲುಪುತ್ತಿದ್ದಾರೆ.
ಈಗಂತು ಫೋನ ಮಾಡಿದ್ರೆ ಸಾಕು ಮನೆ ಬಾಗಿಲಿಗೆ ಎಲ್ಲ ಬಂದು ತಲುಪುತ್ತದೆ. ಕೆಲವು ಸ್ವಯಂ ಸೇವಕ ತಂಡಗಳು ವಿವಿಧ ರೀತಿಯ ಸಹಾಯಗಳನ್ನು ಫೋನ್ ಮಾಡಿ ತಿಳಿಸಿದರೆ ಸಾಕು ತ್ವರಿತವಾಗಿ ಮಾಡುತ್ತಿದ್ದಾರೆ. ಇದರಿಂದಾಗಿ ಅವಶ್ಯಕತೆ ಇರುವ ಸಹಾಯ ,ಅವಶ್ಯಕತೆ ಇರುವವರಿಗೆ, ತಕ್ಷಣದಲ್ಲೇ ದೊರೆಯುವಂತೆ ಮಾಡಿದ ಪುಣ್ಯ ಈ ಮೊಬೈಲ್ಗೆ ತಟ್ಟುತ್ತದೆ.
ಹೀಗೆ ಮೊಬೈಲು ಕೆಲವರಿಗೆ ವಿದ್ಯೆ ಪಡೆಯಲು, ವಿದ್ಯೆ ವಿದ್ವತ್ ಪ್ರದರ್ಶಿಸಲು, ಮತ್ತೆ ಕೆಲವರಿಗೆ ಉದ್ಯೋಗ ಪಡೆಯಲು, ಹಲವು ವೃತ್ತಿ ಕೈಗೊಳ್ಳಲು , ಹಣ ಗಳಿಸಿ ಬದುಕನ್ನು ಕಟ್ಟಿಕೊಳ್ಳಲು , ಉನ್ನತ ಸ್ಥಾನ ಮಾನ ಗಳಿಸಲು ದೇವರು ಕೊಟ್ಟ ಉಡುಗೊರೆ ಎಂಬಂತಾಗಿದೆ
. ಮೇಲೆ ತಿಳಿಸಿದ ಎಲ್ಲಾ ಲಾಭಗಳು ಶಿಕ್ಷಕಿಯಾಗಿ, ಗೃಹಿಣಿಯಾಗಿ ನನಗೆ ಮೊಬೈಲ್ ನಿಂದ ದೊರೆತಿವೆ.ಅದರಲ್ಲೂ ಕೈಯಲ್ಲಿ ಹೆಚ್ಚೆಚ್ಚು ದುಡ್ಡು ಇಟ್ಟುಕೊಂಡು ಹೊರಗೆ ಹೋದಾಗ ಕಳುವು ಆಗುವದೆಂಬ ಭಯ ನನಗೆ ಇಲ್ಲದಾಗಿದೆ.ಮೊಬೈಲನ ಫೋನ್ ಪೇ ಉಪಯೋಗಿಸಿ ಅಂಗಡಿ, ಮಾಲ್ , ಅಟೋದವರಿಗೆ ಕೊಟ್ಟರಾಯಿತು. ಮೊನ್ನೆ ಪರ ಊರಿಗೆ ಹೋದಾಗ ಬ್ಯಾಗಿನಲ್ಲಿನ ದುಡ್ಡು ಖಾಲಿ ಆಯ್ತು. ಆಗ ಎಟಿಎಂ ನೋಡಿದರೆ ಊರಲ್ಲೇ ಬಿಟ್ಟು ಬಂದಿದ್ದೆ.ಚಿಂತೆಗೆ ಬಿದ್ದೆ. ಒಂದು ವಿಚಾರ ಹೊಳೆಯಿತು . ಪಕ್ಕದಲ್ಲಿ ಇದ್ದವರಿಗೆ ಫೋನ್ ಪೇ ಮಾಡಿ ಅವಳ ಕಡೆಯಿಂದ ದುಡ್ಡನ್ನು ತೆಗೆದುಕೊಂಡೆ. ಮನದಲ್ಲಿ ಮನದುಂಬಿ ಮೊಬೈಲಗೆ ಧನ್ಯವಾದ ತಿಳಿಸಿದೆ.
ಇನ್ನು ಶಿಕ್ಷಕಿಯಾಗಿ ಮೊಬೈಲ್ ಇಲ್ಲದೆ ಯಾವ ಕೆಲಸ ಆಗೋದಿಲ್ಲ .ಪಾಠ ಬೋಧನೆಗೆ ಬೇಕಾದ ಹಲವಾರು ಮಾಹಿತಿಗಳನ್ನು, ಉಪಯೋಗವನ್ನು ವಾಟ್ಸಪ್ ಗ್ರೂಪ್ ಗಳಿಂದ, youtube ನಿಂದ ಮತ್ತು ಹಲವಾರು ಸಾಫ್ಟ್ವೇರ್ ಗಳಿಂದ ಪಡೆಯುತ್ತಿದ್ದೇನೆ.ಅಲ್ಲದೆ ಆನ್ಲೈನ್ ವಿಡಿಯೋ ಪಾಠ ಮಾಡಲು, ಆನ್ಲೈನ್ ತರಗತಿ ಕೇಳಲು ಮತ್ತು ನಮ್ಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಇರುವುದರಿಂದ ಸ್ಮಾರ್ಟ್ ಕ್ಲಾಸ್ ಮಾಡಲು,ವಿದ್ಯಾರ್ಥಿಗೆ ಮಾಹಿತಿ ಕಳಿಸಲು,ನನಗೆ ಮೊಬೈಲ್ ತುಂಬಾ ಅವಶ್ಯಕ.
ಇನ್ನು ವೈಯಕ್ತಿಕವಾಗಿ ನನಗೆ ಲೋನ್ ಕಟ್ಟಲು,ವ್ಯವಹರಿಸಲು, ಆತ್ಮೀಯರೊಂದಿಗೆ ಮಾತನಾಡಲು ಅಲ್ಲದೆ ಬೇಸರವಾದಾಗ ಮನುರಂಜನೆಗೆ ಮೊಬೈಲಿನ ವಿಡಿಯೋಗಳನ್ನು , ಯು ಟ್ಯೂಬ್ ನಲ್ಲಿನ ಕೆಲವು ಧಾರಾವಾಹಿಗಳನ್ನು,ಫಿಲ್ಮಗಳನ್ನು ನೋಡಲು ,ಸುಮಧುರವಾದ ನನ್ನಿಷ್ಟದ ಹಾಡುಗಳನ್ನು ಕೇಳಲು ಮೋಬೈಲ ಬೇಕೇ ಬೇಕು.ಆನಲೈನಲ್ಲೆ ನನಗೆ ಇಷ್ಟದ ವಸ್ತುಗಳನ್ನು ತರಿಸಲು , ಬಸ್,ಟ್ರೈನ್ ಬುಕ್ ಮಾಡೋದು ,ಬೇರೆ ಬೇರೆ ಪ್ರೇಕ್ಷಣೀಯ ಸ್ಥಳಕ್ಕೆ ಹೋಗಲು ಲಾಡ್ಜ್ ಬುಕ್ ಮಾಡಿ ಆರಾಮವಾಗಿ ಇದ್ದು ಓಡಾಡಿ ಬರಲು ಇದು ನನಗೆ ತುಂಬಾ ಹೆಲ್ಪ್ ಆಗಿದೆ. ಇದು ಬೇಡಿದ್ದನ್ನು ಬೇಕಾದಷ್ಟು ನೀಡುವ ಅಕ್ಷಯಪಾತ್ರೆ ಎಂದರೆ ಸುಳ್ಳಾಗದು
ಇನ್ನು ಎಲ್ಲಾ ವಸ್ತುಗಳಿಗೆ ಇರುವಂತೆ ಅದ್ಭುತ ಅಮೋಘ ಅಮೂಲ್ಯ ವಸ್ತುವಾದ ಮೊಬೈಲ್ ನಲ್ಲೂ ಅಧಿಕ ಲಾಭಗಳಿದ್ದರೂ ಅದರಲ್ಲೂ ಅಷ್ಟೇ ಅವಗುಣಗಳು ಇದ್ದೇ ಇವೆ. ಈಗಾಗಲೇ ತಿಳಿಸಿರುವಂತೆ ಅತಿಯಾದ ಅವಲಂಬನೆಯ ಅವಶ್ಯಕತೆಯ ಸಾಧನ ಮೊಬೈಲ್ ಆಗಿದೆ . ಇದು ನನಗೆ ವೈಯಕ್ತಿಕವಾಗಿ ಸಾಕಷ್ಟು ಲಾಭಗಳನ್ನು ನೀಡಿದ್ದರೂ ಅಷ್ಟೇ ನಷ್ಟ ಅಥವಾ ದುಷ್ಪರಿಣಾಮಗಳನ್ನು ನನ್ನ ಜೀವನದಲ್ಲಿ ಉಂಟು ಮಾಡಿದೆ. ಮುಖ್ಯವಾಗಿ ಇದು ನನಗೆ ಅನಾರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಿ ನನ್ನ ಕಣ್ಣುಗಳು ವೀಕಾಗಲು ಮತ್ತು ಕಣ್ಣು ಉರಿ ನಿದ್ರಾಭಂಗ , ತಲೆನೋವು, ಒತ್ತಡ ಮುಂತಾದ ಹಲವು ಸಮಸ್ಯೆಗಳನ್ನು ಉಂಟು ಮಾಡಿ ನನ್ನ ಆರೋಗ್ಯ ಕೆಡಲು ಕಾರಣವಾಗಿದೆ. ಅಲ್ಲದೆ ಇದರ ಅವಲಂಬನೆ ಹೆಚ್ಚಾಗಿ ಇತರ ಕೆಲಸಗಳು ಹಿಂದೆ ಬಿದ್ದಿವೆ ನನ್ನ ಪ್ರೀತಿಯ ಹವ್ಯಾಸಗಳಾದ ಪುಸ್ತಕಗಳನ್ನು ಓದುವುದು , ಕಥೆ ಕವನ ಬರೆಯುವುದು ,ಯು ಮತ್ತು ಮನೆಯ ಇತರ ಕೆಲಸಗಳನ್ನು ಮಾಡದೆ ಪದೇಪದೇ ಮೊಬೈಲ್ ಹಿಡ್ಕೊಂಡು ವಾಟ್ಸಾಪ್, ಫೇಸ್ ಬುಕ್, ಟೆಲಿಗ್ರಾಂ ನಂತಹ ಆ್ಯಪ್ ಗಳ ಅಂತರ್ಜಾಲ ಮಾಹಿತಿ ವಿಡಿಯೋಗಳನ್ನು ನೋಡುವುದರಲ್ಲೇ ಕಳೆದು ಹೋಗುತ್ತೇನೆ . ಇತ್ತೀಚೆಗಂತೂ ಮಗಳಿಗೆ ವರಗಳನ್ನು ಈ ತರದ ಗ್ರುಪ್ ಗಳಲ್ಲಿ ತಡಕಾಡುವ ಗೀಳು ಹಿಡಿದು ಬಿಟ್ಟಿದೆ. ನನಗೇನೂ ವಯಸ್ಸಾಯಿತು ನನ್ನ ಮಕ್ಕಳು ಮತ್ತು ನಮ್ಮ ಸಂಬಂಧಿಕರ ಮಕ್ಕಳು, ವಿದ್ಯಾರ್ಥಿಗಳು ವಿಪರೀತವಾಗಿ ಮೊಬೈಲ್ ಅನ್ನು ಗೇಮ್ ಆಡುವುದರಲ್ಲಿ , ವಿಡಿಯೋಗಳನ್ನು, ನೋಡುವುದರಲ್ಲೇ, ಚಾಟ್ ಮಾಡುವದರಲ್ಲಿ ಹೆಚ್ಚು ಹೊತ್ತು ಕಳೆಯುವುದು ಕಂಡಾಗ ಜಿಗುಪ್ಸೆ, ಬೇಸರ, ನೋವು ಉಂಟಾಗುತ್ತದೆ. ಮೊಬೈಲ್ ಪಾಠ ಕೇಳುವೆ ಮತ್ತು ನೋಟ್ಸ್ ಬರೆಯುತ್ತೇನೆ ಎಂದು ಮೊಬೈಲ್ ಬಳಸುತ್ತಾ ಮುಂದೆ ಬೇರೆ ಏನನ್ನು ನೋಡುತ್ತಾ ಕಳೆದುಹೋಗುವುದನ್ನು ಕಂಡು ಈ ಮೊಬೈಲನ್ನು ಯಾಕಾದರೂ ಕಂಡು ಹಿಡಿದರಪ್ಪ ಅನಿಸುತ್ತೆ .” ಮಂತ್ರಕ್ಕಿಂತ ಉಗುಳೇ ಜಾಸ್ತಿ ಆಯಿತು” ಎನ್ನುವಂತೆ ಓದುತ್ತೇವೆ ಎಂದು ಹೇಳುತ್ತಾ ಓದುವುದು ಬಿಟ್ಟು ಮೊಬೈಲನ್ನು ಆಟ ಆಡುತ್ತಾ, ಚಾಟ್ ಮಾಡುತ್ತಾ ,ಇಲ್ಲವೆ ಬೇಡವೆಂದರೂ ಸ್ಕ್ರೀನ್ ಮೇಲೆ ಬರುವ ಅಸಂಬದ್ಧ ವಿಡಿಯೋ ನೋಡುತ್ತಾ ಕಳೆಯುವರು.ನಮ್ಮ ಸಂಬಂಧಿಕರ ಪುಟ್ಟ ಮಕ್ಕಳಿಗೆ ಮೊಬೈಲ್ ಕೊಟ್ಟರೆ ಮಾತ್ರ ಊಟ ಮಾಡುವವರು.
ಕರೋನಾ ಬಂದ ಮೇಲಂತೂ ಹೊರಗೆ ಹೋಗೋದು ನಿರ್ಬಂಧಿಸಿದ್ದಾಗ ಹೆಚ್ಚಾಗಿ ಮಕ್ಕಳು , ವಯಸ್ಕರರು ಮೋಬೈಲ ಗೀಳಿಗೆ ಒಳಗಾಗಿದ್ದಾರೆ.ನಾನು ನೋಡಿರುವಂತೆ ಕೆಲವು ಮಕ್ಕಳು ಮಧ್ಯೆ ರಾತ್ರಿವರೆಗೂ ಮೊಬೈಲನ್ನು ನೋಡುವುದನ್ನು ಕಂಡಿದ್ದೇನೆ
ಈ ಮೋಬೈಲ ಬಳಕೆ ಇರದ ಪೂರ್ವದಲ್ಲಿ ಎಲ್ಲರೂ ಎಷ್ಟು ಆರಾಮವಾಗಿ, ಸಮಾಧಾನದ ಜೀವನ ಸಾಗಿಸುತ್ತಿದ್ದೇವು.ಇದು ಬಂದು ನಮ್ಮೆಲ್ಲರ ನೆಮ್ಮದಿಯನ್ನು ಹಾಳು ಮಾಡಿಬಿಟ್ಟಿದೆ ಎನಿಸುತ್ತದೆ . ತಂದೆ ತಾಯಿ,ಮಕ್ಕಳು ಒಟ್ಟಾಗಿ ಕುಳಿತು ಮಾತನಾಡದಂತೆ ಈ ಮೊಬೈಲ್ ಎಲ್ಲ ಸಂಬಂಧಗಳನ್ನು ಹಾಳು ಮಾಡಿಬಿಟ್ಟಿದೆ. ಎಲ್ಲರೂ ತಮ್ಮ ತಮ್ಮ ಮೊಬೈಲಗಳ ಮೋಡಿಗೆ ಸಿಲುಕಿ ಇನ್ನೊಬ್ಬರೊಂದಿಗೆ ಮುಖಾಮುಖಿಯಾಗಿ ಮಾತನಾಡುವುದನ್ನು ಮರೆತುಬಿಟ್ಟಿದ್ದಾರೆ. ಅದೇ ಮೊಬೈಲ್ ನಲ್ಲಿ ಗಂಟೆಗಟ್ಟಲೆ ಮಾತನಾಡುವ ಚಟ ಶುರು ಆಗಿದೆ.ಮೊಬೈಲು ನೋಡುತ್ತಾ ಹೊತ್ತು ಹೊತ್ತಿಗೆ ಉಣ್ಣುವುದು ,ಮಲಗುವುದು, ಕೆಲಸ ಮಾಡುವುದನ್ನು ಮರೆತುಬಿಡುತ್ತಿದ್ದೇವೆ.ಹಲವಾರು ತರದ ಮನೊವ್ಯಾಧಿಗಳಿಗೆ ಈ ಮೊಬೈಲ್ ಕಾರಣವಾಗಿ ಎಂದರೆ ತಪ್ಪಾಗಲಾರದು.
ಕೊನೆಗೊಂದು ಮಾತು ಹೇಳಲೇಬೇಕು. ಎಲ್ಲ ವಸ್ತುಗಳಲ್ಲೂ ಗುಣ ಅವಗುಣಗಳು ಇದ್ದೇ ಇರುತ್ತವೆ. ಅವನು ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನ ನಮಗಿರಬೇಕು
ಅದರಲ್ಲಿಯೂ ಅಮೂಲ್ಯವಾದ ಉಪಯುಕ್ತವಾದ ಮೊಬೈಲನ್ನು ಸರಿಯಾಗಿ ನಿರ್ವಹಣೆ ಮಾಡುವ ತಂತ್ರ ನಮಗೆ ತಿಳಿದರೆ ಅದು ನಮ್ಮ ಕೆಲಸಗಳನ್ನು ಸುಲಭಗೊಳಿಸುವ ಅತ್ಯುತ್ತಮ ಉಪಯುಕ್ತ ಯಂತ್ರ ಆಗುತ್ತದೆ. ಅಗತ್ಯವಿದ್ದಷ್ಟೇ ನಾವು ಬಳಸಬೇಕು ಮತ್ತು ವಿದ್ಯಾರ್ಥಿಗಳಿಗೆ ಮಕ್ಕಳಿಗೆ ತಿಳಿಹೇಳಿ ಅವರನ್ನು ಮೋಬೈಲನಿಂದ ಸುರಕ್ಷಿತ ಅಂತರದಲ್ಲಿ ಇರುವಂತೆ ಜಾಗರೂಕತೆ ವಹಿಸಬೇಕು.ರುಚಿಯಾಗಿದೆ ಎಂದು ಅತಿಯಾಗಿ ತಿಂದರೆ ಅಜೀರ್ಣವಾಗಿ ಪಿತ್ತ ಹೆಚ್ಚಾಗಿ ದೇಹದ ಸಮತೋಲನ ತಪ್ಪಿ ಹಲವಾರು ರೋಗಗಳಿಗೆ ಈಡಾಗುತ್ತೇವೆ.ಅದೆ ಹಿತಮಿತವಾಗಿ ಉಂಡವರು ದೀರ್ಘಕಾಲ ಬದುಕಿ ಬಾಳುತ್ತಾರೆ. ಅದೇ ರೀತಿ ಮೊಬೈಲನ್ನು ಹಿತ ಮಿತವಾಗಿ ಬಳಸಿದರೆ ಅದು ನಮಗೆ ಯಾವಾಗಲೂ ಒಳ್ಳೆ ಸ್ನೇಹಿತ ಬಂಧುವಾಗಿರುತ್ತದೆ.ಅಂದಾಗ ದೇಹ ಮನಸ್ಸುಗಳು ಸುರಕ್ಷಿತವಾಗಿ ಆರೋಗ್ಯಕರವಾಗಿ ಇರುತ್ತವೆ.
————————————
ಲಕ್ಷ್ಮೀದೇವಿ ಪತ್ತಾರ,
ಉತ್ತಮ ಲೇಖನ