ಕಾವ್ಯ ಸಂಗಾತಿ
ಡಾ ಅನ್ನಪೂರ್ಣಾ ಹಿರೇಮಠ
ನಿನ್ನ ನೆನಪ ತುಂಬೈತಿ
ನಟ್ಟಿರುಳಿನಾಗ ನಿನ್ನ ನೆನಪು ಬರತೈತಿ
ಬಿಟ್ಟಿರಲೆಂಗ ಹೇಳೊ ನನ್ನ ಗೆಳೆಯಾ
ಹೊಂಗನಿಸಿನ್ಯಾಗ ನಿನ್ನ ರೂಪ ತುಂಬೈತಿ
ಮರೆತೆಂಗ ಬದುಕಲಿ ಹೇಳೋ ಗೆಳೆಯಾ//
ಕಣ್ಮುಚ್ಚಿದರೂ ಕಣ್ತೆರೆದರೂ ನಿನ್ನ ರೂಪ ಕುಂತೈತಿ
ನಾಲಿಗೆ ತುದಿಯಾಗ ನಿನ್ನ ಹೆಸರ ಕುಣಿತೈತಿ
ಎದೆ ಬಡಿತದಾಗ ಜೊತೆಯಾಗಿ ಮಿಡಿತೈತಿ
ನನ್ನುಸಿರಿನೊಳಗ ಹಾಡಾಗಿ ಬೆರೆತೊಂದಾಗೈತಿ//
ಕುಂತರೂ ನಿಂತರೂ ತಳಮಳ ಶುರುವಾಗೈತಿ
ನನ್ನ ದೇಹವಿದು ತಂಬೂರಿಯಾಗಿ ನಿಂತೈತಿ
ನುಡಿಯೋ ತಂತಿಗಳೆಲ್ಲ ಬಿಗಿಯಾಗಿ ಹೋಗೈತಿ
ಸರಿಗಮ ನುಡಿಸೋ ಬಂದು ಗೆಳೆಯಾ ಎಂದೈತಿ//
ಭಾವದಲೆಯಾಗ ಪ್ರೀತಿ ತೊರೆಯಾಗಿ ಹರಿದೈತಿ
ಮನ ಬಯಸಿ ಬಯಸಿ ಬೆಂಗಾಡ ಹೊಕ್ಕೈತಿ
ಅಗಲಿಕೆಯ ಅರೆಗಳಿಗೆ ಸಹಿಸದೇ ಸೊರಗೈತಿ
ವಿರಹದುರಿಗೆ ಸುಟ್ಟು ಸುಟ್ಟು ಕರಕಲಾಗೈತಿ//
ನೀ ಬರತಿ ಅಂತ ಕಾದು ಕಂಗಾಲಾಗೈತಿ
ವಿರಹದ ಪ್ರವಾಹ ನನ್ನ ಕೊಚ್ಚಿ ಕೊಲ್ಲಾತೈತಿ
ಜೀವವಿಂದು ಸೊರಗಿ ಸೊರಗಿ ಸುಣ್ಣವಾಗೈತಿ
ಗೆಳೆಯಾ ನೀ ಬಂದು ಅಪ್ಪಿ ಮುದ್ದಾಡೋ ಅನ್ನತೈತಿ
ಡಾ ಅನ್ನಪೂರ್ಣಾ ಹಿರೇಮಠ
ಪ್ರೀತಿಯ ಗೆಳೆಯನ ಅಂಬಲಿಕೆ ಸ್ನೇಹದ ಅನೋನ್ಯ ಸಂಬಂಧ ಕುರಿತಾದ ಅರ್ಥ್ ಪೂರ್ಣವಾದ ಸ್ವಾರಶ್ಯಕರವಾದ
ಕವನ ಮೇಡಮ್
ವಾವ್… ಚಂದದ ವಿರಹ ಗೀತೆ..!
ಅಭಿನಂದನೆಗಳು ಕವಯತ್ರಿ…
ಸವಿರಾಗಗಳ ಸುಖಸ್ವಪ್ನಗಳ ಶುಭರಾತ್ರಿ..!