ಕವಿತೆ
ಕಾಯಕದ ದಿನ ನಗರ ಸತ್ತು ಹೋಗಿದೆ

ನಾಗರಾಜ ಹರಪನಹಳ್ಳಿ
ಕಾಯಕದ ದಿನ ನಗರ ಸತ್ತು ಹೋಗಿದೆ

ಕಾಯಕ ಜೀವಿಗಳ ದಿನ
ನಗರ ಸತ್ತು ಹೋಗಿದೆ
ಬೆವರು ಸುರಿಸಿ ಬದುಕುವ
ಜನರ ಹೊರದಬ್ಬಿದೆ
ಮಹಲುಗಳ ಕಟ್ಟಿ ಗುಡಿಸಲಲಿ
ಬದುಕಿದ ಜನ
ಗುಳೆಬಂದ ನಾಡಿಗೆ ಹಸಿವು ಹೊತ್ತು ಮರಳಿದ್ದಾರೆ
ಮಡಲಲ್ಲಿ ಕಣ್ಣೀರು ನಿಟ್ಟುಸಿರು
ತುಂಬಿಕೊಂಡು
ಭೂಮಿ ಬಿಟ್ಟು ಬಂದದ್ದಕ್ಕೆ ಪರಿತಪಿಸಿದ್ದಾರೆ
ಈ ಬಿಸಿಲಿಗೂ ಕರುಣೆಯಿಲ್ಲ
ಕಾಯಕದ ಮಂತ್ರ ಕೊಟ್ಟ ಬಸವಣ್ಣ, ದುಡಿಮೆಯಲ್ಲಿ ಪಾಲು ಕೇಳಿದ ಕಾರ್ಲಮಾರ್ಕ್ಸ
ಮಣ್ಣಲ್ಲಿ ಮಣ್ಣಾಗಿ ಮಲಗಿದ್ದಾರೆ
ಸಮಾನತೆ , ಸ್ವಾಭಿಮಾನ ಕಲಿಸಿದ ಕರುಣೆಯ ಬಾಬಾ ಸಾಹೇಬ ಕಲ್ಲಾಗಿದ್ದಾರೆ
ಅತ್ತ ಹಳ್ಳಿ ,ಭೂಮಿ ತೊರೆದು ಬಂದವರ
ನಗರ ತಳ್ಳಿದ ಕ್ಷಣ ತಲ್ಲಣಗೊಂಡಿದೆ ಒಡಲು
ತಾಯಿನೆಲ ಕಂಗೆಟ್ಟಿದೆ
ಹಂಗಿನ ನಗರ ಹೊರತಳ್ಳಿದೆ
ಎತ್ತ ಹೋಗಲಿ ಬದುಕೇ
ನಡುವಿನ ದಾರಿ ನಿಟ್ಟುಸಿರು ಬಿಟ್ಟಿದೆ
ನೆತ್ತಿಯ ಸೂರ್ಯ ಮತ್ತಷ್ಟು ನೆತ್ತಿಸುಟ್ಟಿದ್ದಾನೆ
ಸೋತ ಕಾಲುಗಳು ಹೆಜ್ಜೆಯಿಡಲು ಸೋಲುತ್ತಿರಲು
ಹೊಸ ಆಶಾಕಿರಣ ಮೂಡಿದೆ
ಮುಗಿಲಿಗೆ ದಿಗಿಲು ಬಡಿದಂತೆ ಮೋಡಗಳು ದಟ್ಟೈಸಿವೆ
ನೆಲ ಹನಿ ಪ್ರೀತಿಗಾಗಿ ಕಾದಿದೆ
ಊರ ನೆಲ ತನ್ನ ಜನರ ತಬ್ಬಿಕೊಳ್ಳಲು ಕಾದಿದೆ
*********
ಕವಿತೆ ವಾಸ್ತವದ ಅನಾವರಣ ಗೊಳಿಸಿದೆ.
ಕವನ ನೈಜವಾಗಿದೆ.