ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ಶಿವಯೋಗ ಸಾಮ್ರಾಟ  

ದ್ವಿತೀಯ  ಅಲ್ಲಮ

ಎಡೆಯೂರ ಶ್ರೀ ಸಿದ್ಧಲಿಂಗೇಶ್ವರರು

 ಕಲ್ಯಾಣ ಕ್ರಾಂತಿಯ ನಂತರದಲ್ಲಿ ಸುಮಾರು ಇನ್ನೂರು ವರುಷಗಳ ವರೆಗೆ ವಚನ ಚಳುವಳಿ ಸಂಪೂರ್ಣ ಭೂಗರ್ಭದಲ್ಲಿ ಸೇರಿ ಹೋಗಿತ್ತು. ರಾಜಾಶ್ರಯವಿಲ್ಲದೆ ಸಾಹಿತ್ಯ ಪಂಡಿತರ ನಿರ್ಲಕ್ಷಕ್ಕೊಳಪಟ್ಟ ಶ್ರೇಷ್ಠ ಸಾಹಿತ್ಯದ ಮರು ಸಂಕಲನ ವಿಜಯನಗರದ ಪ್ರೌಢ
ದೇವರಾಯನ ಕಾಲದಲ್ಲಿ ನಡೆಯಿತು. 15  ನೇ ಶತಮಾನದ ಉತ್ತರಾರ್ಧ ಭಾಗದಲ್ಲಿ ಶರಣರ ವಚನ ಚಳುವಳಿಗೆ ಮತ್ತೆ ಚಾಲನೆ ನೀಡಿದವರು  ಎಡೆಯೂರಿನ ಶ್ರೀ ತೋಂಟದ ಸಿದ್ಧಲಿಂಗೇಶ್ವರರು.

  ಎಡೆಯೂರಿನ ಶ್ರೀ ತೋಂಟದ ಸಿದ್ಧಲಿಂಗೇಶ್ವರರು ಕನ್ನಡ ನಾಡು ಕಂಡ ಅನುಭಾವಿ ಸಂತ ಶರಣರಲ್ಲಿ ಪ್ರಮುಖರು. 16ನೇ ಶತಮಾನದ  ಆರಂಭದಲ್ಲಿ  ಸಿದ್ಧಲಿಂಗೇಶ್ವರರು ಜೀವಿಸಿದ್ದ ಕಾಲ ಮಾನ ಎಂದು ಬಹುತೇಕ ಸಂಶೋಧಕರು ನಿರ್ಧರಿಸುತ್ತಾರೆ.

ಹೊಯ್ಸಳರು ರಾಜ್ಯವಾಳುತ್ತಿದ್ದ ಕಾಲಕ್ಕೆ ಈಗಿನ ಹರದನಹಳ್ಳಿಯನ್ನು ತಮ್ಮ ಎರಡನೇ ರಾಜಧಾನಿಯಂತೆ ನಡೆಸಿಕೊಳ್ಳುತ್ತಿದ್ದರು ಹಾಗು ಈ ಪ್ರದೇಶಕ್ಕೆ ಎಣ್ಣೆನಾಡು ಎಂತಲೂ  ಕರೆಯುತ್ತಿದ್ದರು . ವಿವಿಧ ಆಕಾರ  ದಾಖಲೆಗಳು ಲಭ್ಯವಾಗಿರುವ ಪ್ರಕಾರ ಇದೇ ಪ್ರದೇಶವನ್ನು ‘ಮಗ್ಗೇಯ’, ‘ಮಾರ್ಗೆಯ್’, ‘ವಾಣಿಜ್ಯ ಪುರಿ’ ಎಂಬ ಹೆಸರುಗಳಿಂದಲೂ ಕರೆಯಲಾಗಿದೆ. ಆದರೆ ಎಲ್ಲಕ್ಕೂ ಮುಂಚಿನ ದಾಖಲೆ ಮೂರನೇ ಬಲ್ಲಾಳನ ಕ್ರಿ.ಶ 1345 ರ ಶಾಸನದಲ್ಲಿ ಈ ಹಳ್ಳಿಯನ್ನು ಮಗ್ಗೇಯ ಎಂದು ಹೆಸರಿಸಲಾಗಿದೆ. ಆದರೆ ಆದೇ ಸಮಯದ ಇನ್ನೊಂದು ತಾಮ್ರದ ಶಾಸನ ಅಡೆ ಹಳ್ಳಿಯನ್ನು ‘ವಾಣಿಜ್ಯ ಪುರಿ’ ಎಂದೂ ಸಂಭೋದಿಸಲಾಗಿದೆ . ‘ವಾಣಿಜ್ಯ ಪುರಿ’ ಎಂಬುದು ಸಂಸ್ಕೃತ ಪದವಾಗಿದ್ದು ಅದರದ್ದೇ ಆದ ಕನ್ನಡ ಪದ ‘ಹರದನ ಹಳ್ಳಿ’ಯೂ ಚಾಲ್ತಿಯಲ್ಲಿತ್ತು. ಹರದ ಎಂದರೆ ವ್ಯಾಪಾರಿ ಎಂದರ್ಥ.ಶೈವ ಸಮುದಾಯದ ವ್ಯಾಪಾರಿಗಳನ್ನು ಆ ಪ್ರದೇಶದಲ್ಲಿ ‘ವಾಣಿಜ’ ರು ಬಣಜಿಗರು ವಾಣಿಕರು  ಎಂದು ಕರೆಯಲಾಗುತ್ತಿತ್ತು. ಇವರ ವ್ಯಾಪಾರ ಪ್ರಮುಖವಾಗಿ ತಮಿಳುನಾಡಿನೊಂದಿಗೆ ಹೊಂದಿದ್ದರು.  ಆದರಿಂದ ಈ ಹಳ್ಳಿಗೆ ಹರದನ ಹಳ್ಳಿ ಎಂದು ಹೆಸರು ಬಂದಿರಬಹುದು ಎಂದೂ ಕೆಲ  ತರ್ಕಗಳಿವೆ. ಹರದ ಅಂದರೆ ವ್ಯಾಪಾರ ಕೇಂದ್ರ ಮಾರುಕಟ್ಟೆ ಎಂದರ್ಥ.

   ಲಿಂಗಾಯತ ಧರ್ಮದಲ್ಲಿ  ಹರದನಹಳ್ಳಿ ಬಹು ಮುಖ್ಯವಾದದ್ದು. ಲಿಂಗಾಯತ ಮಠ ಗಳಲ್ಲಿ ಒಂದಾದ ಶೂನ್ಯ ಸಿಂಹಾಸನ ಪರಂಪರೆಯ ನಿರಂಜನ ಪೀಠ ಈ ಹರದನಹಳ್ಳಿಯ ಮೂಲದ್ದು ಎಂದು ಅನೇಕರ ಅಭಿಪ್ರಾಯವಾಗಿದ್ದರೂ ಎಡೆಯೂರು ಶ್ರೀ ಸಿದ್ಧಲಿಂಗಶಿವಯೋಗಿಗಳು ಏಳನೂರ ಎಪ್ಪತ್ತು ಅಮರ ಗಣಂಗಳನ್ನು ಕರೆದುಕೊಂಡು ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚ ರಾತ್ರಿ  ಸಂಚಾರ ಮಾಡುತ್ತಾ ವಿರಕ್ತ ಪರಂಪರೆ ಸಂಸ್ಕೃತಿಯನ್ನು ಬೆಳೆಸಿದರು  .ಆದರೆ   ಜನ ಸಾಮಾನ್ಯರಿಂದ ಹರದನಹಳ್ಳಿ ಮಠವೆಂದೇ ಕರೆಸಿಕೊಳ್ಳುತ್ತದೆ. ಅನಾದಿ ಜ್ಞಾನೇಶ್ವರರು ಈ ಮಠದ ಪ್ರಥಮ ಪೀಠಾಧಿಪತಿಗಳು. ಇವರು ಶೂನ್ಯ ಸಿಂಹಾಸನದ ನಾಲ್ಕನೇ ಪೀಠಾಧಿಪತಿಗಳೂ ಹೌದು. ಅಲ್ಲಮಪ್ರಭು, ಚನ್ನಬಸವಣ್ಣ ಹಾಗು ಸೊನ್ನಲಿಗೆ ಸಿದ್ಧರಾಮರು ಅಲಂಕರಿಸಿದ ಶೂನ್ಯ ಪೀಠವನ್ನು ಅಲಂಕರಿಸಿದ್ದ ನಾಲ್ಕನೇ ಶೂನ್ಯ ಸಿಂಹಾಸನಾಧ್ಯಕ್ಷರು. ಇದೇ ಮಠದ ವಿರಕ್ತ  ಪರಂಪರೆಯನ್ನು ಇದೀಗ ನಾವು ಕುಂತೂರು, ಸಾಲೂರು, ಗುಬ್ಬಿ,ಸಿದ್ದಗಂಗೆ ಹಾಗು ಎಡೆಯೂರುಗಳಲ್ಲಿ ಕಾಣಬಹುದಾಗಿದೆ.

ಜನನ ಮತ್ತು ಬಾಲ್ಯ
———————
ಶ್ರೀ ಸಿದ್ಧಲಿಂಗೇಶ್ವರರು ಜನಿಸಿದ್ದು ಈಗಿನ ಚಾಮರಾಜ ನಗರ ಜಿಲ್ಲೆಯ, ಅದೇ ತಾಲೂಕಿನ ಹರದನ ಹಳ್ಳಿ ಎಂಬ ಗ್ರಾಮದಲ್ಲಿ.ಮಲ್ಲಿಕಾರ್ಜುನಶೆಟ್ಟಿ  ಮತ್ತು ಜ್ಞಾನಾಂಬೆ ಎಂಬ ಲಿಂಗಾಯತ ಬಣಜಿಗ ಮಗನಾಗಿ ಜನಿಸುತ್ತಾರೆ.   ಶರಣ ದಂಪತಿಗಳಿಗೆ ವಿವಾಹವಾಗಿ ಬಹಳ ಕಾಲಗಳು ಉರುಳಿದರೂ ಸಂತಾನ ಭಾಗ್ಯವಿರಲಿಲ್ಲ. ಇದಕ್ಕಾಗಿ ನಿತ್ಯವೂ ಭಕ್ತಿ ಭಾವಗಳಿಂದಇಷ್ಟಲಿಂಗವನ್ನು  ಪ್ರಾರ್ಥಿಸುತ್ತಾ , ಅತಿಥಿ, ಯೋಗಿಗಳ ಸೇವೆಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡಿಕೊಂಡು ಜೀವನ ನಡೆಸಿಕೊಂಡು ಹೋಗುವಾಗಲೇ ಅವರಿಗೆ ಸಿದ್ಧಲಿಂಗೇಶ್ವರರ ಜನನವಾಗುತ್ತದೆ.

ಗುರುಕುಲದಲ್ಲಿ ಸಿದ್ಧಲಿಂಗೇಶ್ವರರು
——————————————–
ಸಿದ್ಧಲಿಂಗೇಶ್ವರರು ಎಂಟು ವರ್ಷದವರಾಗಿದ್ದಾಗ ಅವರ ತಂದೆ ತಾಯಿಗಳು ಅವರನ್ನು ಚೆನ್ನಬಸವೇಶ್ವರರ ಗೋಸಲ ಶಿಕ್ಷಣ ಕೇಂದ್ರಕ್ಕೆ  ವಿಧ್ಯಾಭ್ಯಾಸಕಾಗಿ ಕಳುಹಿಸುತ್ತಾರೆ.ಅಧ್ಯಾತ್ಮಿಕ, ದೈವೀಕ ಜ್ಞಾನಗಳಲ್ಲಿ ತನ್ನ ವಯಸ್ಸಿಗೆ ಮೀರಿದ ಜ್ಞಾನಿಯಾಗಿದ್ದ ಬಾಲಕ ಸಿದ್ದಲಿಂಗನನ್ನು ಕಂಡು ಗುರು ಚೆನ್ನ ಬಸವೇಶ್ವರರು ಆಶ್ಚರ್ಯ ಚಕಿತರಾಗುತ್ತಾರೆ.ಗುರುಗಳು ಕೂಡಲೇ ಬಾಲಕನಿಗೆ ಸನ್ಯಾಸತ್ವ ವಿರಕ್ತ ನಿರಂಜನ  ದೀಕ್ಷೆ ನೀಡಿ, ತಮ್ಮ ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ.

ಲೋಕ ಸಂಚಾರ ಮತ್ತು ಜ್ಞಾನ ಭೋದನೆಗಳು
———————————————————
ಹಳೆಯ ಗುರುಕುಲ ಪದ್ಧತಿಯಲ್ಲಿ ತರಗತಿಗಳಿಗೆ ಹಾಜರಾಗಿ ಪಡೆಯುವ ಜ್ಞಾನಕ್ಕಿಂತ ಲೋಕ ಸಂಚಾರ ಮಾಡುತ್ತಾ ಗಳಿಸುವ ಜ್ಞಾನ ಮಹತ್ತರವಾದದ್ದು ಎಂಬ ನಂಬಿಕೆಯಿತ್ತು. ಹೀಗಾಗಿ ಲೋಕ ಸಂಚಾರ ಮಾಡುತ್ತಲು ಜ್ಞಾನ ಸಂಪಾದಿಸಿಕೊಳ್ಳುವುದು ಶಿಕ್ಷಣದ ಒಂದು ಮುಖ್ಯ ಭಾಗವಾಗಿತ್ತು. ಅದೇ ರೀತಿ ಸಿದ್ಧಲಿಂಗೇಶ್ವರರು ಚೆನ್ನ ಬಸವೇಶ್ವರರ ಮಾರ್ಗದರ್ಶನದಲ್ಲಿ ವಿಧ್ಯಾಭ್ಯಾಸ ಮುಗಿಸಿದ ಮೇಲೆ, ಗುರುಗಳ ಅಪ್ಪಣೆಯ ಮೇರೆಗೆ ಲೋಕ ಸಂಚಾರ ಹೊರಟು ನಿಲ್ಲುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆವಿಗೂ, ಪಶ್ಚಿಮಘಟ್ಟಗಳಿಂದ ಅರುಣಾಚಲ ಪ್ರದೇಶದ ವರೆವಿಗೂ ಇಡೀ ಭಾರತವನ್ನು ಸಂಚಾರ ಮಾಡಿ ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡುವ ಕಾರ್ಯದಲ್ಲಿ ಶ್ರೀ ಎಡೆಯೂರ ಶ್ರೀ ಸಿದ್ಧಲಿಂಗ ಶಿವಯೋಗಿಗಳು ತೊಡಗಿಕೊಳ್ಳುತ್ತಾರೆ.

ವಚನಗಳು
—————–
ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದಿದ್ದ ವಚನ ಕ್ರಾಂತಿಯ ಕೀರ್ತಿಗೆ ಪುನಶ್ಚೇತನ ನೀಡಿದ ಸಿದ್ಧಲಿಂಗೇಶ್ವರರು ‘ಷಟ್ ಸ್ಥಲ ಜ್ಞಾನ ಸಾರಾಮೃತ’ ಎಂಬ ವಚನ ಸಂಚಿಕೆಯನ್ನು ರಚಿಸಿದರು. 701 ವಚನಗಳಿಂದ ಕೂಡಿದ್ದ ಈ ಗ್ರಂಥ ಷಟ್ (ಆರು) ಸ್ಥಳಗಳನ್ನು(ಮೂಲಗಳನ್ನು) ಐಕ್ಯದೆಡೆಗೆ ಕೊಂಡೊಯ್ಯುವ ವಿಚಾರಗಳಿಂದ ಕೂಡಿದ ಗ್ರಂಥವಾಗಿದೆ. ಸಿದ್ದಲಿಂಗೇಶ್ವರರ ಅಂಕಿತ ‘ಮಹಾಲಿಂಗ ಗುರು ಶ್ರೀ ಸಿದ್ದೇಶ್ವರ ಪ್ರಭು’.

ಕೆಲ ವಚನಗಳನ್ನು ಇಲ್ಲಿ ಸಾದರಪಡಿಸಲಾಗಿದೆ
——————————————————-
ವಚನ 1

ಆದಿ ಅನಾದಿಗಳಿಲ್ಲದಂದು
ನಾದ ಬಿಂದು ಕಲೆ ಮೊಳೆದೋರದಂದು
ದೇಹ ದೇಹಿಗಳು ಉತ್ಪತ್ತಿಯಾಗದಂದು
ಜೀವಾತ್ಮ ಪರಮಾತ್ಮರಿಲ್ಲದಂದು
ಸಕಲ ಚರಾಚರಗಳಿಲ್ಲದಂದು
ಇವೇನೂ ಇಲ್ಲದಂದು
ನೀನು ಶೂನ್ಯನಾಗಿದ್ದೆ ಅಯ್ಯಾ
ಮಹಾಲಿಂಗ ಗುರು ಸಿದ್ದೇಶ್ವರ ಪ್ರಭುವೇ.

ವಚನ 2 :

ಒಳಗೆ ನೋಡಿದರೆ ಒಳಗೆ ಬಯಲು
ಹೊರಗೆ ನೋಡಿದರೆ ಹೊರಗೂ ಬಯಲು
ನೆನೆವೆನೆಂದರೆ ನೋಡಾ ಮನ ಬಯಲು
ನೆನೆಸಿಕೊಂಬೆನೆಂದರೆ ನೀನಿಲ್ಲವಾದೆ ನಾ
ಬಯಲು ನೀ ಬಯಲು ನೋಡಾ
ಭಾವಿಸಿಕೊಂಬ ವಸ್ತು ಇನ್ನಿಲ್ಲವಾಗಿ
ಭಾವ ಬಯಲೆಂಬೆನು ನೋಡಾ
ಮಹಾಲಿಂಗ ಗುರು ಸಿದ್ಧೇಶ್ವರ ಪ್ರಭುವೇ.

ವಚನ 3 :

ಭಕ್ತಸ್ಥಲ ಮಹೇಶ್ವರಸ್ಥಲದಲ್ಲಡಗಿ
ಮಹೇಶ್ವರಸ್ಥಲ ಪ್ರಸಾದಸ್ಥಲದಲ್ಲಡಗಿ
ಪ್ರಸಾದಸ್ಥಲ ಪ್ರಾಣಲಿಂಗಸ್ಥಲದಲ್ಲಡಗಿ
ಪ್ರಾಣಲಿಂಗಸ್ಥಲ ಶರಣಲಿಂಗಸ್ಥಲದಲ್ಲಡಗಿ
ಶರಣ ಸ್ಥಲ ಐಕ್ಯದಲ್ಲಡಗಿ
ಇಂತಿ ಷಡಾಂಗ ಯೋಗ ಸಮರಸವಾಗಿ
ಷಡ್ ಸ್ಥಲವ ಮೀರಿ ನಿರವಯಸ್ಥಲವ ನೇಯ್ದು
ಆ ನಿರವಯ ಸ್ಥಲವ ನಿರಾಳದಲ್ಲಡಗಿ
ಆ ನಿರಾಳ ನಿತ್ಯ ನಿರಂಜನ ಪರವಸ್ತು ತಾನಾಯತ್ತಾಗಿ
ಕ್ರಿಯಾ ನಿಷ್ಪತ್ತಿ, ಜ್ಞಾನ ನಿಷ್ಪತ್ತಿ, ಭಾವ ನಿಷ್ಪತ್ತಿ,
ಮಾಡುವ ಕ್ರಿಯೆಗಳೆಲ್ಲ ನಿಷ್ಪತ್ತಿಯಾಗಿ ಅರಿವ
ಅರುಹೆಲ್ಲ ಅಡಗಿ ಭಾವಿಸುವ ಭಾವವೆಲ್ಲ
ನಿರ್ಭಾವವಾಗಿ ನಿರ್ಲೇಪ ನಿರಂಜನ ವಸ್ತು
ತಾನು ತಾನಾದಲ್ಲದೇ ಧ್ಯಾನಿಸಲಿಕ್ಕೇನು ಇಲ್ಲ
ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭುವೇ.

ಕಾರ್ಯಗಳು
———————

ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯದ ಗೋಪುರ, ಎಡೆಯೂರು, ಕುಣಿಗಲ್ ತಾಲೂಕು, ತುಮಕೂರು ಜಿಲ್ಲೆ.
ಈಗಿನ ತುಮಕೂರು ಜಿಲ್ಲೆಯ ಕಗ್ಗೆರೆ ಗ್ರಾಮ ಹಾಗು ಸುತ್ತಮುತ್ತಲಿನ ಗ್ರಾಮಗಳಿಗೆ ಮಾಂಡಲೀಕರಾಗಿದ್ದವರು ವಕ್ಕಲಿಗರ ನಂಬಿಯನ. ಸಿದ್ಧಲಿಂಗೇಶ್ವರರು ಲೋಕ ಸಂಚಾರ ಮಾಡುತ್ತಾ ಈ ನಂಬಿಯನ ತೋಟದಲ್ಲಿ ಬೀಡು ಬಿಡುತ್ತಾರೆ. ಅದಾಗಲೇ ಸಿದ್ಧಲಿಂಗೇಶ್ವರರ ಬಗ್ಗೆ ಕೇಳಿ ತಿಳಿದಿದ್ದ ನಂಬಿಯನ ಖುದ್ದು ತಾನೇ ಬಂದು ಸ್ವಾಮಿಯವರನ್ನು ಭೇಟಿಯಾಗುತ್ತಾನೆ ಹಾಗು ತಮ್ಮ ಮನೆಗೆ ಆಗಮಿಸಿ ಆತಿಥ್ಯವನ್ನು ಸ್ವೀಕರಿಸಿ ಊರಿನ ಜನಗಳನ್ನು ಆಶಿರ್ವದಿಸಬೇಕಾಗಿ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪಿದ ಸಿದ್ಧಲಿಂಗೇಶ್ವರರು ಮತ್ತೊಮ್ಮೆ ನಂಬಿಯನ ಬಂದು ಕರೆಯುವವರೆಗೂ ತಾವು ಅದೇ ತೋಟದಲ್ಲಿ ಇರುವುದಾಗಿ ತಿಳಿಸುತ್ತಾರೆ. ಸಂತೋಷದಿಂದ ನಂಬಿಯನ ತನ್ನ ಮನೆಗೆ ಹಿಂದಿರುಗಿ ಸ್ವಾಮಿಯವರ ಸೇವೆಗೆ ಅಣಿ ಮಾಡಲು ಮೊದಲಾಗುತ್ತಾನೆ. ಇದೇ ಸಮಯಕ್ಕೆ ಬಹಳ ವರ್ಷಗಳಿಂದ ಆ ಊರಿನೊಂದಿಗೆ ವೈರತ್ವ ಸಾಧಿಸುತ್ತಿದ್ದ ದಕ್ಷಿಣ ಪ್ರಾಂತ್ಯದ ಗುಡ್ಡಗಾಡು ಪ್ರದೇಶದ ಬೇಡರ ಗುಂಪು ಕಗ್ಗೆರೆ ಮತ್ತಿತರ ಪ್ರದೇಶಗಳ ಮೇಲೆ ಯುದ್ಧ ಸಾರುತ್ತದೆ. ಯುದ್ಧದಲ್ಲಿ ಪ್ರಬಲರಾಗಿದ್ದ ಬೇಡರ ಪಡೆ ಯುದ್ಧದಲ್ಲಿ ವಿಜಯಿಗಳಾಗಿ ಅಲ್ಲಿನ ಮಾಂಡಲೀಕರು ಸೇರಿದಂತೆ ಎಲ್ಲರನ್ನು ಸೆರೆಯಾಳುಗಳನ್ನಾಗಿ ಹೊತ್ತೊಯ್ಯಲಾಗುತ್ತದೆ. ಮುಂದೆ ಈ ಸಂಕಷ್ಟದಿಂದ ಪಾರಾಗಲು ಅವರಿಗೆ ಸುಮಾರು ಹನ್ನೆರಡು ವರ್ಷಗಳೇ ಬೇಕಾಗುತ್ತವೆ. ಇಷ್ಟು ಸುಧೀರ್ಘ ಅವಧಿ ಬಂಧನದಲ್ಲಿ ಕಳೆದಿದ್ದ ಅವರ್ಯಾರಿಗೂ ನಂಬಿಯನು ಸಿದ್ಧಲಿಂಗೇಶ್ವರರನ್ನು ಆಹ್ವಾನಿಸಿದ ವಿಷಯ ನೆನಪೇ ಇರಲಿಲ್ಲ.

ಬಂಧನಮುಕ್ತರಾಗಿ ಊರಿಗೆ ಹಿಂದಿರುಗಿದ ಎಲ್ಲರಿಗೂ ನಂಬಿಯನ ತೋಟದಲ್ಲಿ ಹುತ್ತ ಬೆಳೆದಿರುವುದು ಕಂಡಿತ್ತು. ಆದರೆ ಅದರ ಬಗ್ಗೆ ಯಾರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ ಅಲ್ಲೊಂದು ಆಶ್ಚರ್ಯ ನಡೆಯಲು ಶುರುವಾಗುತ್ತದೆ. ಮೇಯಲು ಬಿಟ್ಟಿದ್ದ ದನಗಳ ಗುಂಪಿನಿಂದ ತಪ್ಪಿಸಿಕೊಂಡ ಹಸುವೊಂದು ಬಿರುಸಾಗಿ ಓಡಿ ನಂಬಿಯನ ತೋಟದಲ್ಲಿರುವ ಹುತ್ತದ ಮೇಲೇರಿ ತನ್ನಷ್ಟಕ್ಕೆ ತಾನೇ ಹುತ್ತಕ್ಕೆ ಹಾಲು ಕರೆಯಲು ಆರಂಭಿಸುತ್ತದೆ. ಇದನ್ನು ಆರಂಭದಲ್ಲಿ ಕಂಡ ಅಲ್ಲಿನ ದನಗಾಹಿಗಳು ಅದನ್ನು ಹಗುರವಾಗಿ ಪರಿಗಣಿಸಿದ್ದರು, ಆದರೆ ಹಸುಗಳು ಸರತಿಯ ಪ್ರಕಾರ ದಿನವೂ ಹೋಗಿ ಸ್ವಪ್ರೇರಿತವಾಗಿ ನಂಬಿಯನ ತೋಟದಲ್ಲಿರುವ ಹುತ್ತಕ್ಕೆ ಹಾಲು ಎರೆಯುವುದನ್ನು ಕಂಡು ಅಲ್ಲೇನೂ ವಿಶೇಷವಿರಬಹುದು ಎಂದು ಭಾವಿಸಿದ ದನಗಾಹಿಗಳು ಹುತ್ತವನ್ನು ಒಡೆಯಲು ಮುಂದಾಗುತ್ತಾರೆ. ಆದರೆ ಅಲ್ಲಿ ಭಯಂಕರ ವಿಷ ಸರ್ಪಗಳು ಓಡಾಡುತ್ತಿದುದನ್ನು ಕಂಡು ಭಯದಿಂದ ದೂರ ಸರಿದು ಈ ವಿಷಯವನ್ನು ಕೂಡಲೇ ಊರಿಗೆ ತಿಳಿಸುತ್ತಾರೆ. ಊರ ಜನರ ಸಮೇತ ನಂಬಿಯನ ತೋಟಕ್ಕೆ ಬಂದು ಕೂಲಂಕುಶವಾಗಿ ಹುತ್ತದ ಹತ್ತಿರ ನಿಂತು ಪರಿಶೀಲಿಸಿದಾಗ ಹುತ್ತದ ಒಳಗಿಂದ ‘ಓಂ ನಮಃ ಶಿವಾಯ’ ಎಂದು ಶಿವ ಪಂಚಾಕ್ಷರಿ ಮಂತ್ರ ನಿರಂತರವಾಗಿ ಕೇಳಿಬರುತ್ತಿದ್ದುದನ್ನು ಗ್ರಹಿಸುತ್ತಾರೆ. ಊರಿನ ಜನರೆಲ್ಲಾ ಇಲ್ಲಿ ಯಾರೋ ಮಹಾತ್ಮರು ತಪಸ್ಸು ಮಾಡುತ್ತಿರಬಹುದು ಎಂದು ತಮ್ಮ ತಮ್ಮಲ್ಲೇ ಮಾತಾಡಿಕೊಂಡಾಗ ನಂಬಿಯನ ತಾನು ಸಿದ್ಧಲಿಂಗೇಶ್ವರರಿಗೆ ವರ್ಷಾನು ಗಟ್ಟಲೆಗಳ ಹಿಂದೆ ಕೊಟ್ಟಿದ್ದ ವಚನ ಜ್ಞಾಪಕವಾಗುತ್ತದೆ. ತನ್ನಿಂದ ಅತಿ ದೊಡ್ಡ ಪ್ರಮಾದವಾಗಿ ಈ ಅಚಾತುರ್ಯಕ್ಕೆ ಕಾರಣವಾಯಿತು ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ಕೂಡಲೇ ಹುತ್ತದ ಹೊರಗೆ ನಿಂತುಕೊಂಡೆ ಸಿದ್ಧಲಿಂಗೇಶ್ವರರನ್ನು ಕರೆಯುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಸಿದ್ಧಲಿಂಗೇಶ್ವರರು ತನ್ನ ಸುತ್ತಲು ಇರುವ ಹುತ್ತದಲ್ಲಿ ಅನೇಕ ಜೀವಿಗಳು ವಾಸಿಸುತ್ತಿರುವುದರಿಂದ ಹುತ್ತವನ್ನು ಒಡೆದರೆ ಅವುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅವುಗಳು ಈ ಸ್ಥಳ ಬಿಟ್ಟು ತೆರಳಿದ ನಂತರ ನೀವು ಹುತ್ತವನ್ನು ಕೆಡವಬಹುದು ಎಂದು ಆಜ್ಞಾಪಿಸುತ್ತಾರೆ. ಅಪ್ಪಣೆ ಅನುಸರಿಸಲು ಅಲ್ಲೇ ನಿಲ್ಲುವ ನಂಬಿಯನ ಅಲ್ಲಿನ ವಿಷಪೂರಿತ ಹಾವುಗಳು, ಇಲಿ ಹೆಗ್ಗಣಗಳು, ಕಪ್ಪೆಗಳು, ಗೆದ್ದಲು ಹುಳುಗಳು, ಮುಂತಾದ ಜೀವಿಗಳು ಆ ಹುತ್ತವನ್ನು ತೊರೆಯುವ ತನಕ ಕಾದು ಅನಂತರ ಇದೇ ಹುತ್ತವನ್ನು ಹಸುವಿನ ಹಾಲಿನಿಂದ ಕರಗಿಸಿ ತನ್ನಿಂದ ಆದ ಪ್ರಮಾದವನ್ನು ಮನ್ನಿಸುವಂತೆ ಸಿದ್ಧಲಿಂಗೇಶ್ವರರನ್ನು ಭಿನ್ನವಿಸಿಕೊಳ್ಳುತ್ತಾನೆ. ಭಕ್ತನೊಬ್ಬನಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಸಲುವಾಗಿ ಕುಳಿತ ಜಾಗದಿಂದ ಕದಲದೇ ಹನ್ನೆರಡು ವರ್ಷಗಳ ಕಾಲ ತೋಟವೊಂದರಲ್ಲಿ ತಪೋನಿಷ್ಠರಾಗಿದ್ದ ಸಿದ್ಧಲಿಂಗೇಶ್ವರರು ಜಗತ್ತು ಕಂಡ ಮಹಾ ಶರಣ ಹಾಗು ಪವಾಡ ಪುರುಷ, ಹಾಗಾಗಿ ಅವರಿಗೆ ‘ತೋಂಟದ ಸಿದ್ಧಲಿಂಗೇಶ್ವರ’ ಎಂಬ ಹೆಸರು ಪ್ರಾಪ್ತವಾಯಿತು.
ಇದು ಪುರಾಣವೆಂದು ಕರೆದರೂ ಇದರ ಹಿಂದಿನ ಆಶಯವನ್ನು ನಾವು ಗುರುತಿಸಬೇಕು.
ಅದೇ ರೀತಿ ಸಿದ್ಧಗಂಗೆಯಲ್ಲಿ ನೀರಿನ ಹಾಹಾಕಾರವಾದಾಗ ಬಂಡೆಯಲ್ಲಿಯೇ ನೀರು ಬರುವಂತೆ ಮಾಡಿದ್ದು .ಅನೇಕರಿಗೆ ಅಂದು ಜನಪರ ಕಾರ್ಯಗಳನ್ನು ಮಾಡುತ್ತಾ ನಿತ್ಯ ಶಿಷ್ಯರೊಂದಿಗೆ ಲೋಕ ಸಂಚಾರ ಮಾಡುತ್ತಿದ್ದರು ಶಿವಯೋಗಿಗಳು.
ಇವರ ಶಿಷ್ಯ ಪರಂಪರೆಯಲ್ಲಿ ಅಗ್ರರು ಬೋಳ ಬಸವ   ಬೋಳ ಬಸವರ ಶಿಷ್ಯರು ಬಾಲ ಸಂಗಯ್ಯ ಮತ್ತು ಅಪ್ರಮಾಣದೇವ.
ಎಡೆಯೂರು ಶ್ರೀ ಸಿದ್ಧಲಿಂಗ ಶಿವಯೋಗಿಗಳೇ ಮಠದ ಪರಂಪರೆ ಹುಟ್ಟು ಹಾಕಿದರು ಎಂದು ತಪ್ಪು ಗ್ರಹಿಕೆಗೆ ನಾವೆಲ್ಲಾ ಒಳಗಾಗಿದ್ದೇ. ಎಡೆಯೂರ ಶಿಕ್ಷಾ ಮತ್ತು ದೀಕ್ಷಾ ಗುರುಗಳು ಗೋಸಲ  ಗುರು ಚೆನ್ನಬಸವೇಶ್ವರರು ಇವರ ಲಿಂಗೈಕ್ಯದ ಕುರುಹು ಸಿದ್ಧಗಂಗೆಯಲ್ಲಿದ್ದರೆ ಇವರ ಶಿಷ್ಯರಾದ ಶ್ರೀ ಎಡೆಯೂರು ಸಿದ್ಧಲಿಂಗ ಶಿವಯೋಗಿಗಳ ಮಹಾನಿರ್ವಾಣದ ಗದ್ದುಗೆ ಎಡೆಯೂರಿನಲ್ಲಿದೆ. ಶ್ರೀ ಎಡೆಯೂರು ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ ಬೋಳ ಬಸವ ಇವರ ಲಿಂಗೈಕ್ಯದ ಕುರುಹು ಮಧುಗಿರಿಯಲ್ಲಿದೆ. ಹೀಗಾಗಿ ಒಂದೇ ಮಠದ ಪರಂಪರೆಗೆ ಇವರೆಲ್ಲರೂ ಇದ್ದಿದ್ದರೆ ಬೇರೆ ಬೇರೆ ಪ್ರದೇಶಗಳಲ್ಲಿ ಏಕೆ ಐಕ್ಯರಾಗುತ್ತಿದ್ದರು ಎಂಬ ಪ್ರಶ್ನೆ ನಮ್ಮ ಕಣ್ಣೆದುರಿಗೆ ಕಂಡು ಬರುತ್ತದೆ.  ಹೀಗಾಗಿ ಇವರು ಮಠ ಪರಂಪರೆಯನ್ನು ಕಟ್ಟಲಿಲ್ಲ . ಆದರೆ ಶಿವಯೋಗದ ಮಹಾಮಾರ್ಗದ ದಾರಿ ಪಥಿಕ ಎಂದರೆ ತಪ್ಪಾಗದು .ಲಿಂಗಾಯತ ತತ್ವ ಸಿದ್ಧಾಂತಗಳನ್ನು ಭಾರತದ ಉದ್ದಗಲಕ್ಕೂ
ಪ್ರಸಾರಾ ಮಾಡಿದ್ದಾರೆ.  

ಮಹಾ ನಿರ್ವಾಣ ಲಿಂಗೈಕ್ಯ
————————————-

ಮಹಾ ಪವಾಡ ಪುರುಷರಾದ ಯತಿಗಳು ಲಿಂಗೈಕ್ಯರಾಗಿದ್ದು ಈಗಿನ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರಿನಲ್ಲಿ. (ಕಲ್ಕೆರೆಯಲ್ಲಿಯೇ ಅವರು ಐಕ್ಯರಾದುದು ಅಂತಲೂ ಜನ ಹೇಳುತ್ತಾರೆ.)

———————————————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಡಾ ಶಶಿಕಾಂತ ಪಟ್ಟಣ – ಇವರು ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಸೈನಿಕ ಶಾಲೆವಿಜಯಪುರದಲ್ಲಿ ಪೂರೈಸಿದರು. ವೃತ್ತಿಯಲ್ಲಿ ಔಷಧ ವಿಜ್ಞಾನಿ ಪ್ರವೃತ್ತಿಯಲ್ಲಿ ಸಾಹಿತಿ ವಿಮರ್ಶಕ ಸಂಶೋಧಕ ಮತ್ತು ಹೊರಾಟಗಾರರು. ಇವರು ಇಲ್ಲಿಯವರೆಗೆ 37 ಪುಸ್ತಕಗಳನ್ನು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.ಇವರ ಗಾಂಧಿಗೊಂದು ಪತ್ರ ಡಾ ಡಿ ಎಸ ಕರ್ಕಿ ಸಾಹಿತ್ಯ ಪ್ರತಿಷ್ಠಾನದ 2022 ಶಾಲಿನ ಶ್ರೇಷ್ಠ ಕವನ ಸಂಕಲನ ಪ್ರಶಸ್ತಿ ಪಡೆದಿದ್ದಾರೆ. ಜನೆವರಿ 2023 ರಲ್ಲಿ ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದಿದ್ದಾರೆ. ಪ್ರಸಕ್ತ ಸಂಗಾತಿಯಲ್ಲಿ ಸಾವಿಲ್ಲದ ಶರಣರು ಎಂಬ ಮಾಲಿಕೆಯಲ್ಲಿ ಪ್ರತಿ ವಾರ ತಮ್ಮ ಲೇಖನವನ್ನು ಪ್ರಕಟಿಸುವರು, ಅವರ ಜ್ಞಾನ ವಿದ್ವತ್ತು ಅನುಭವಗಳನ್ನು ಮುಂಬರುವ ದಿನಗಳಲ್ಲಿ ಓದಿ ಆನಂದಿಸಿರಿ

2 thoughts on “

  1. ಇವತ್ತಿನ ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಶಿವಯೋಗ ಸಾಮ್ರಾಟ…. ದ್ವಿತೀಯ ಅಲ್ಲಮ
    ಎಡೆಯೂರು ಶ್ರೀ ಸಿದ್ಧಲಿ0ಗೇಶ್ವರರ ಬಗೆಗೆ ಅತ್ಯಂತ ವಿವರವಾಗಿ ಅವರ ಜೀವನ ಚರಿತ್ರೆಯನ್ನು ಕಟ್ಟಿಕೊಟ್ಟಿದ್ದೀರಿ…. ಅವರ ವಚನಗಳು… ಕಾರ್ಯಗಳು … ಒಳಗೊಂಡ0ತೆ
    ಸವಿಸ್ತಾರವಾಗಿ ಲೇಖನ ಹೊರಹೊಮ್ಮಿದೆ

    ಸುಶಿ

Leave a Reply

Back To Top