ಅಲ್ಲಮಪ್ರಭುಗಳ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ.

ವಚನ ಸಂಗಾತಿ

ಪ್ರೊ. ಜಿ ಎ. ತಿಗಡಿ.

ಅಲ್ಲಮಪ್ರಭುಗಳ ವಚನ ವಿಶ್ಲೇಷಣೆ

ಅಜ್ಞಾನವೆಂಬ aತೊಟ್ಟಿಲೊಳಗೆ,
ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ,
ಭ್ರಾಂತಿಯೆಂಬ ತಾಯಿ!
ತೊಟ್ಟಿಲು ಮುರಿದು ನೇಣು ಹರಿದು,
ಜೋಗುಳ ನಿಂದಲ್ಲದೆ,
ಗುಹೇಶ್ವರನೆಂಬ ಲಿಂಗವ ಕಾಣಬಾರದು

   ಸಕಲ ವೇದ ಶಾಸ್ತ್ರಗಳೆಂಬ ವ್ಯಾಮೋಹದ ಹಗ್ಗದಿಂದ ಅಜ್ಞಾನವೆಂಬ ತೊಟ್ಟಿಲನ್ನು ಕಟ್ಟಿ, ಅದರಲ್ಲಿ ಪರಿಪೂರ್ಣ ಜ್ಞಾನ ಬಿಂದುವೆನಿಸಿದ ಜೀವಾತ್ಮನೆಂಬ ಶಿಶುವನ್ನು  ಮಲಗಿಸಿ  ಭ್ರಾಂತಿ ಎಂಬ ತಾಯಿ ವ್ಯಾಮೋಹವೆಂಬ ಹಗ್ಗವನ್ನು ಬಲವಾಗಿ ಹಿಡಿದುಕೊಂಡು ತೂಗುತ್ತಾ ವಿಷಯಾಸಕ್ತಿಗಳ ಜೋಗುಳವನ್ನು ಹಾಡುತ್ತಿದ್ದಾಳೆ.   ವ್ಯಾಮೋಹದ ಹಗ್ಗ ಹರಿದು ಅಜ್ಞಾನದ ತೊಟ್ಟಿಲು ಮುರಿದಾಗ ಜೋಗುಳದ ಮೋಹಕ ದನಿ ಅಡಗುತ್ತದೆ.   ಆಗ ಮಾತ್ರ ಗುಹೇಶ್ವರಲಿಂಗದ ದರ್ಶನವಾಗುತ್ತದೆ.   ಇಲ್ಲದಿದ್ದರೆ ಎಂದಿಗೂ ಸಾಧ್ಯವಿಲ್ಲವೆಂದು ಅಲ್ಲಮರು ಈ ವಚನದಲ್ಲಿ ಹೇಳಿದ್ದಾರೆ.

         ಲೌಕಿಕ ಸಾಂಸಾರಿಕ ಬಂಧನದಲ್ಲಿ ಸಿಲುಕಿಕೊಂಡು ವೇದಶಾಸ್ತ್ರ ಪುರಾಣಾದಿಗಳ ಕಟ್ಟುಪಾಡು ನಿರ್ಬಂಧಗಳ ಜಾಲದಲ್ಲಿ ಬಂಧಿತರಾಗಿ, ಲೌಕಿಕದ  ಕ್ಷಣಿಕ ಸುಖವೇ ಪರಮ ಸುಖವೆಂಬ ಭ್ರಾಂತಿಯಲ್ಲಿ ಬದುಕುತ್ತಿದ್ದೇವೆ.  ಇದಕ್ಕೆ ಪೂರಕವಾಗಿ ವಿಷಯಾಸಕ್ತಿ, ವ್ಯಾಮೋಹಗಳ ಜೋಗುಳದ ನಾದದಲ್ಲಿ ಮೈಮರೆತಿದ್ದೇವೆ.  ಹೀಗಿರುವಾಗ ನಮಗೆ ಪರಮಾತ್ಮನ ನಿಜದರ್ಶನವಾಗುವುದೆಂತು? ಎಂದು ಅಲ್ಲಮರು ಪ್ರಶ್ನಿಸುತ್ತಾರೆ.  ಸಕಲ ವೇದಶಾಸ್ತ್ರಾದಿ ಪುರಾಣಗಳ ವ್ಯಾಮೋಹವು ನಮ್ಮ ಅಜ್ಞಾನಕ್ಕೆ ಕಾರಣವಾಗಿ ಆಸಕ್ತಿಯ ಹಗ್ಗವಾಗಿ ಬಂಧಿಸುತ್ತದೆ.  ನಮಗೆ ಪರಮ ಮೂಲ ಆತ್ಮದ ಸತ್ಯದ ನಿಜ ಜ್ಞಾನವಿಲ್ಲದಿರುವುದರಿಂದ ನಾವೆಲ್ಲರೂ ಅಜ್ಞಾನದ ಕೂಪದಲ್ಲಿ ಬಿದ್ದು ಹೊರಳಾಡುತ್ತಿದ್ದೇವೆ.  ಅಜ್ಞಾನವನ್ನೇ ತೊಟ್ಟಿಲನ್ನಾಗಿಸಿಕೊಂಡು ಅದನ್ನೇ ನಚ್ಚಿ ನಮ್ಮ  ಸುರಕ್ಷಿತ ಆಶ್ರಯದ ಸ್ಥಾನವೆಂದುಕೊಂಡಿದ್ದೇವೆ.  ಹೀಗಾಗಿ ಅಂತರಂಗದಲ್ಲಿರುವ ಜೀವಾತ್ಮನೆಂಬ ಜ್ಞಾನಿಯನ್ನು ಎಚ್ಚರಗೊಳ್ಳದಂತೆ,   ಭ್ರಾಂತಿ ಎಂಬ ತಾಯಿಯು  ವಿಷಯಾಸಕ್ತಿ  ವ್ಯಾಮೋಹಗಳ ಜೋಗುಳವನ್ನು , ಇಂಪಾಗಿ ಹಾಡುತ್ತಿದ್ದಾಳೆ.   ಹೀಗಾಗಿ ಜ್ಞಾನದ ಪ್ರಕಾಶ ಪಸರಿಸದಂತೆ ಜೋಗುಳದ ಅಂಧಕಾರದ ಛಾಯೆ  
ಕವಿದಿದೆ.  ಪರಿಣಾಮವಾಗಿ ಜೀವಾತ್ಮ ತನ್ನ ನಿಜ ಸ್ವರೂಪದ ನೆಲೆಯ ಅರಿವನ್ನೇ ಮರೆತುಬಿಟ್ಟಿದ್ದಾನೆ.

     ‘ ತಾನೆಂದರೆ ದೇಹ ದೇಹವೆಂದರೆ ತಾನು, ‘ ಎಂದು ನಂಬಿ;  ಹುಟ್ಟಿರುವೆ,  ಬೆಳೆದಿರುವೆ, ಮುಪ್ಪು ಬಂದು ಒಂದು ದಿನ ಸಾಯುವೆ.  ಎಂಬ ಪರಂಪರಾಗತ  ಗೊಡ್ಡುತತ್ವಗಳಿಗೆ ಬದ್ಧನಾಗಿ ಬಿಟ್ಟಿದ್ದಾನೆ.   ಆತನ ಈ ನಂಬುಗೆಯನ್ನು  ನೂರಾರು ವಿಷಯ ಸುಖಗಳು ಇನ್ನಷ್ಟು ಬಿಗಿಗೊಳಿಸಿ ಮೋಹಾಂಧಕಾರದಲ್ಲಿ ಮುಚ್ಚಿ ಬಿಡುತ್ತವೆ.   ಹೀಗಾಗಿ ನಿಜವಾಗಿಯೂ ತಾನು ಯಾರು ?  ತನ್ನ ಸ್ವರೂಪವೇನು ?  ತನ್ನ ಜನನದ ಉದ್ದೇಶವೇನು ? ಎಂಬ ಆಲೋಚನೆಗಳೆಂದೂ ಅವನಲ್ಲಿ ಸುಳಿಯಲಾರವು.   ಲೌಕಿಕದ ವಿಷಯ ಸುಖಕ್ಕಿಂತ ಭಿನ್ನವಾದ ಶಾಶ್ವತ ಸುಖ –  ಶಾಂತಿಗಳಿರುವುದು ಆತನ ಅರಿವಿಗೆ ಎಂದೂ  ಬರಲಾರದು.   ಅನಿತ್ಯವೂ,  ಆಶಾಶ್ವತವೂ ಆದ ಕ್ಷಣಿಕ ದೈಹಿಕ   ಸುಖoಗಳಲ್ಲಿ  ಮೈಮರೆತಿರುವುದೇ ಇದಕ್ಕೆ ಕಾರಣ.    ಹೀಗಾಗಿ ಜ್ಞಾನ, ಅರಿವು – ತಿಳುವಳಿಕೆಗಳು ಕಮರಿ ಹೋಗಿ, ಅಜ್ಞಾನವು ದುಷ್ಕ್ರಿಯೆಗಳ ಮೂಲಕ ವಿಜ್ರಂಭಿಸಿ ಭವಾವಳಿಯ ಚಕ್ರದಲ್ಲಿ ಸಿಲುಕಿ  ದುಃಖ –  ದುಮ್ಮಾನಗಳ ಸಂಕೋಲೆಯಲ್ಲಿ ಸಿಲುಕಿ ಬಿಡುತ್ತಾನೆ.

    ಹಾಗಾದರೆ ಇದರಿಂದ ಹೊರಬರಲು ಸಾಧ್ಯವಿಲ್ಲವೇ?  ಅದಕ್ಕೂ  ಅಲ್ಲಮರೇ ಉಪಾಯವನ್ನು  ಸೂಚಿಸುತ್ತಾರೆ.    ಎಲ್ಲಿಯವರೆಗೆ ನಮ್ಮಲ್ಲಿ ಅಜ್ಞಾನ ತುಂಬಿರುವುದೋ,  ವಿಷಯಾಸಕ್ತಿಗಳ ವ್ಯಾಮೋಹದ ಆಟ ನಿಲ್ಲುವುದಿಲ್ಲವೋ,  ಅಲ್ಲಿಯವರೆಗೆ ನಮಗೆ ನಮ್ಮ ಮೂಲ ಸ್ವರೂಪನಾದ ಜೀವಾತ್ಮನ ಸತ್ಯದರ್ಶನವಾಗಲಾರದು.   ಜನನ ಮರಣಗಳ ಚಕ್ರದಿಂದ ಮುಕ್ತಿ ದೊರಕಲಾರದು.   ಇದನ್ನೇ ಅಲ್ಲಮರು ‘ ತೊಟ್ಟಿಲು ಮುರಿಯಬೇಕು, ನೇಣು  ಹರಿಯಬೇಕು, ವಿಷಯ ವ್ಯಾಮೋಹಗಳ ಜೋಗುಳ ನಿಲ್ಲಬೇಕು ‘ ಎಂದಿದ್ದಾರೆ.   ಅಂದಾಗ ಮಾತ್ರ ನಮಗೆ ಪರಮಾತ್ಮನ ಸತ್ಯದರ್ಶನವಾಗುತ್ತದೆ.   ಭವಬಂಧನ ಹರಿದು ಭವಾವಳಿಯಿಂದ ಮುಕ್ತನಾಗಿ ನಿಜ ಶರಣನಾಗುತ್ತಾನೆ.   ಎಂದು ಅಲ್ಲಮರು ಹೇಳುತ್ತಾರೆ.

      ಅಂದರೆ ಪಾರಮಾರ್ಥಿಕ ಅಜ್ಞಾನ ಅಳಿದು ಜೀವ ಭಾವ ದೂರಾಗಿ ಸತ್ಯದ ಅರಿವು ಉಂಟಾಗಬೇಕು.   ಇನ್ನು ವೇದಶಾಸ್ತ್ರಾದಿ ಪುರಾಣಗಳ ಮೇಲೆ  ಅಂಧವಿಶ್ವಾಸ ಕುರುಡು ಭಕ್ತಿಗಳು ದೂರಾಗಿ, ರಾಗ ದ್ವೇಷಾದಿ  ಭಾವಗಳು ನಾಶವಾಗಬೇಕು.   ಜೊತೆಗೆ ವ್ಯಸನಗಳ ವ್ಯಾಮೋಹದಿಂದ ಮುಕ್ತರಾಗಬೇಕು.


 ಪ್ರೊ. ಜಿ ಎ. ತಿಗಡಿ.



                              .

Leave a Reply

Back To Top