ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಕಾಲ ಕಳೆದು ಹೋದ ಮೇಲೆ…

ಅವಳು ತುಂಬಾ ನೋವಿನಿಂದ ನೊಂದುಕೊಂಡು  ಅಳುತ್ತಿದ್ದಳು. ಯಾಕೋ ತುಂಬಾ ಮಂಕಾಗಿದ್ದಳು. “ತಾನು ತಪ್ಪು ಮಾಡಿದ್ದೇನೆಂದು ಒಂಟಿಯಾಗಿ ಪಶ್ಚಾತಾಪ ಭಾವದಿಂದ  ತಪ್ಪಿಸ್ತಳಾಗಿದ್ದಳು…

 ಇವನು ತನ್ನ  ಯೌವ್ವನದಲ್ಲಿ ಮಾಡಿದ ತಪ್ಪುಗಳನ್ನು ನೆನಪು ಮಾಡಿಕೊಂಡು “ಯಾಕೋ ಹಿಂಗಾಯ್ತು ನನ್ನ ಬದುಕು, ಆವತ್ತು ನಾನು ಸ್ವಲ್ಪ ಎಚ್ಚರವಹಿಸಬೇಕಾಗಿತ್ತೆಂದು” ಸಂಕಟ ಪಡುತ್ತಿದ್ದನು. ಅತನ ದೇಹ ಸಣ್ಣದಾಗಿ ರೋಗಗ್ರಸ್ತನಾಗಿದ್ದ…

 ಈ ಮೇಲಿನ ಎರಡು ಸನ್ನಿವೇಶಗಳು ಸಾಮಾನ್ಯವಾಗಿ ಬಹುತೇಕ ಎಲ್ಲರ ಬದುಕಿನಲ್ಲಿ ಆಗಿಹೋಗಿರುತ್ತವೆ.   ಅದು ನಮ್ಮ ನಮ್ಮ ಬದುಕಿನಲ್ಲಿ ಕಳೆದುಕೊಂಡ ಸವಿ ನೆನಪುಗಳಿರಬಹುದು, ಸಂಕಟ – ನೋವುಗಳಿರಬಹುದು. ಏನೋ ಕನಸನ್ನು ಕಟ್ಟಿಕೊಂಡು ಈಡೇರಿಸದೆ ಹಪಹಾಪಿಗೊಂಡ ಕ್ಷಣಗಳಿರಬಹುದು. ಒಂದು ಹಂತಕ್ಕೆ ತಲುಪಿದ ಮೇಲೆ ಇವೆಲ್ಲವೂ ನೆನಪಾಗಿ ನಮ್ಮ ಹೃದಯವನ್ನು ಹಿಂಡುತ್ತವೆ.

 ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟಾಗ ಗುರಿ ಇಲ್ಲದ ಬದುಕನ್ನು ಅನುಭವಿಸುತ್ತಾ, ಗೆಳೆಯರ ಮಾತಿಗೋ, ಒಡನಾಡಿಗಳ ಸ್ನೇಹಕ್ಕೋ, ಕಟುಬಿದ್ದು ಮಾಡಬೇಕಾದ ಕರ್ತವ್ಯಗಳನ್ನು ಮರೆತು ಬಿಡುತ್ತೇವೆ.  ತನಗೆ ತಿಳಿದ ಅಥವಾ ತಿಳಿಯದೆ ಇದ್ದ ತಪ್ಪುಗಳನ್ನು ಮಾಡುತ್ತಾ ಮಾಡುತ್ತಾ ಒಂದು ಹಂತದಲ್ಲಿ ತನ್ನ ಕರ್ತವ್ಯವನ್ನು ಮರೆತು ಬಿಡುತ್ತಾರೆ.  

ಹಾಗಾಗಿ…

ಮುಖ್ಯವಾಗಿ ಯೌವ್ವನದಲ್ಲಿರುವ ಉತ್ಸಾಹ “ಏನನ್ನಾದರೂ ಗೆಲ್ಲುತ್ತೇನೆ” ಎನ್ನುವ ಹುಚ್ಚು ಅಹಂ ಇರುವಾಗಲೇ ಧನಾತ್ಮಕವಾದ ಕರ್ತವ್ಯಗಳನ್ನು ಮಾಡಬೇಕಾಗಿತ್ತು.

 ಆದರೆ…

 ಕೆಲವು ಋಣಾತ್ಮಕ ಸ್ನೇಹಗಳಿಂದಾಗಿ ಋಣಾತ್ಮಕ ವಿಚಾರಗಳು ತಲೆಯೊಳಗೆ ತುಂಬಿಕೊಂಡು ಇಂತಹದೇ ಕರ್ತವ್ಯಗಳಿಗೆ ಅಥವಾ ಕೆಲಸಗಳಿಗೆ  ನಮ್ಮನ್ನು ಎಳೆದ್ಯೋಯ್ದು ಬಿಡುತ್ತದೆ. ಅದು ನಮ್ಮ ತಪ್ಪಲ್ಲ…!!  ಅದು ವಯಸ್ಸಿನ ತಪ್ಪು. ಆದರೆ ನಾವು ಎಚ್ಚರಗೊಳ್ಳಬೇಕಾಗಿತ್ತು.  ಎಚ್ಚರಗೊಳ್ಳುವ ಮುನ್ನವೇ ನಮ್ಮ ಬದುಕಿನಲ್ಲಿ ನಡೆಯಬಾರದ ಘಟನೆಗಳು ನಡೆದು ಹೋಗಿರುತ್ತವೆ.

 ಬಾಲ್ಯವನ್ನು ಮುಗಿಸಿ ಯೌವನಕ್ಕೆ ಕಾಲಿಡುತ್ತಿದ್ದಂತೆ ಸರಿಯಾದ ಗುರಿಯೊಂದಿಗೆ ಓದಿ ಒಂದು ದೊಡ್ಡ ಹುದ್ದೆಯನ್ನಾಗಲಿ,  ದೊಡ್ಡ ಗುರಿಯನ್ನಾಗಲಿ ಮುಟ್ಟಬೇಕಾಗಿತ್ತು.

ಆದರೆ ಹಾಗಾಗಲಿಲ್ಲ.

 ಮೋಜು, ಮಸ್ತಿ, ಚೂಜಾಟ ಮಧ್ಯಪಾನದೊಳಗೆ ಬಿದ್ದು, ನಮ್ಮತನವನ್ನು ಕಳೆದುಕೊಂಡು ಬಿಡುತ್ತೇವೆ. ಪಾಲಕರ ಮಾತುಗಳಿಗೆ ಕಿವುಡರಾಗುತ್ತೇವೆ. ಹಿರಿಯರ ಮಾತುಗಳೆಂದರೆ ಆಗ ಅಲರ್ಜಿ..!!  ಗುರುಗಳನ್ನು ವಕ್ರದೃಷ್ಟಿಯಿಂದ ನೋಡುತ್ತಾ, ಅವರನ್ನು ಅಣಕಿಸುತ್ತಾ, “ಏನೋ ದೊಡ್ಡ ಸಾಧನೆಯನ್ನು ಮಾಡಿದೆವು” ಎನ್ನುವ ರೀತಿಯಲ್ಲಿ ನಮ್ಮ ವರ್ತನೆಗಳು ಇರುತ್ತವೆ.

 ಅಷ್ಟೇ ಅಲ್ಲದೆ ಬದುಕು ಮುಗಿದು ಹೋಗುವ ಹಂತದಲ್ಲಿದ್ದಾಗಲೇ ಪಾಲಕರ ಮಾತುಗಳಿಗೆ ಕಿವುಡರಾದ ನಾವು ಒಲ್ಲದ  ಕೆಲಸಗಳನ್ನು ಮಾಡುತ್ತೇವೆ.

ಓದಬೇಕಾದ ಸಮಯದಲ್ಲಿ ಪ್ರೇಮದಲ್ಲಿ ಬಿದ್ದು ಸಂಗಾತಿಗಳನ್ನು ಆಯ್ದುಕೊಂಡು, ಓದದೆ ನಿರುದ್ಯೋಗಿಯಾಗುವುದು.  ಆರೋಗ್ಯವನ್ನು ಹಾಳು ಮಾಡಿಕೊಂಡು ದುಶ್ಚಟಗಳಿಗೆ ದಾಸರಾಗಿ, ಕನಸುಗಳನ್ನು ಕೊಲ್ಲಿಕೊಂಡು ಬರುಡಾದ ಮನಸ್ಸನ್ನು ಏಕಾಂತಕ್ಕೆ ದೂಡುತ್ತವೆ.

ಸದಾ ಉಲ್ಲಾಸಿತವಾಗಿರಬೇಕಾದ ಮನಸ್ಸನ್ನು ನಿರಾಸೆಯ ಕೂಪಕ್ಕೆ ದೂಡಿ ನಮ್ಮ ಸ್ಪೂರ್ತಿದಾಯಕ ಬದುಕನ್ನು ಹಾಳು ಮಾಡಿ ಬಿಡುತ್ತೇವೆ.

 ಅಲ್ಲದೇ ಸಮಾಜದಲ್ಲಿ ನಮಗೆ ಒಂದು ಉನ್ನತ ಸ್ಥಾನ ಸಿಗದೇ ಹೋದಾಗ, ಬದುಕು ಸ್ಥಿರವಾಗಿ ನಿಲ್ಲದೆ ಹೋದಾಗ, ನಮ್ಮನ್ನು ನೋಡಿ ಎಲ್ಲರೂ ನಗುವಾಗ ನಮಗೆ ನಾಚಿಕೆಯಾಗುತ್ತದೆ. ಸಂಕೋಚವಾಗುತ್ತದೆ. ಮನಸ್ಸು ಕುದಿಯುತ್ತದೆ.

 ಹೌದಲ್ಲ…!!

ನಮ್ಮ ಬದುಕನ್ನು ಎಷ್ಟು ವ್ಯರ್ಥವಾಗಿ ಕಳೆದುಬಿಟ್ಟೇವು ಎನಿಸತೊಡಗುತ್ತದೆ. ಬದುಕಿನಲ್ಲಿ ಪ್ರತಿಯೊಂದು ಹೆಜ್ಜೆ ಇಡುವಾಗಲೂ ಎಚ್ಚರಿಕೆಯಿಂದ ನಾವು ನಡೆದುಕೊಳ್ಳಬೇಕಾಗಿತ್ತು, ಎನ್ನುವ ವಾಸ್ತವ ಪ್ರಜ್ಞೆ ನಮ್ಮಲ್ಲಿ ಇರದೇ ಹೋದರೆ ನಮ್ಮ ಬದುಕು ವ್ಯರ್ಥವಾಗುತ್ತದೆ. ನಾವು ಅಂದುಕೊಂಡಿದ್ದನ್ನು ಸಾಧಿಸಬೇಕೆಂದರೆ ಮೊದಲು ನಾವು ಧನಾತ್ಮಕವಾಗಿ ಆಲೋಚಿಸಬೇಕು.

ಓದಿ ಗುರಿಯನ್ನು ಮುಟ್ಟಬೇಕಾದ ಸಮಯದಲ್ಲಿ,  ಸಂಗಾತಿಗಳನ್ನು ಆರಿಸಿಕೊಳ್ಳುವಾಗ, ಬದುಕಿನ ಉದ್ಯೋಗಗಳನ್ನು ಆರಿಸಿಕೊಳ್ಳುವಾಗ, ಏನನ್ನಾದರೂ ಹೊಸ ಹೆಜ್ಜೆಯನ್ನಿಡುವಾಗ… ನಾವು ಒಂದು ಸಲ ಧನಾತ್ಮಕವಾಗಿ ಆಲೋಚಿಸಬೇಕು…!!  ಹಿರಿಯರ ಮಾತುಗಳನ್ನು ಕೇಳಿ ಒಳ್ಳೆಯ ನಿರ್ಧಾರ ನಾವೇ ತೆಗೆದುಕೊಳ್ಳಬೇಕು.

 ನಾವು ಬದುಕನ್ನು ಸ್ವೀಕರಿಸುವಾಗ ಗೊತ್ತು ಗುರಿಯಿಲ್ಲದೆ ಹ್ಯಾಗೇಬೇಕು ಹಾಗೇ ಸ್ವೀಕರಿಸಿದರೆ ಇಂತಹ ತೊಂದರೆಗಳು, ನೋವುಗಳು ಸಹಜ. ಇದರ ಬಗ್ಗೆ  ಕಾಲಾನಂತರ ಪಶ್ಚಾತಾಪಪಟ್ಟು ಸಂಕಟದಿಂದ ವರ್ತಿಸಿದರೆ ಎಲ್ಲವೂ ವ್ಯರ್ಥ…!  ಕಾಲ ಕಳೆದು ಹೋಗುವ… ಮುಂಚೆ…!!  ನಾವು ಬದುಕಿನ ಬಗ್ಗೆ ಒಳ್ಳೆಯ ಆಲೋಚನೆಯೊಂದಿಗೆ, ಕನಸುಗಳೊಂದಿಗೆ ಹೆಜ್ಜೆ ಹಾಕಬೇಕು. ಆಗ ಮಾತ್ರ ಬದುಕನ್ನು ನಾವು ಒಲವಿನಿಂದ ಅನುಭವಿಸಲು ಸಾಧ್ಯ. ಬದುಕು ಒಂದು ಸುಂದರ ಲೋಕ ಆ ಲೋಕವೇ ನಮ್ಮನ್ನು ಪ್ರೀತಿಯಿಂದ ಕರೆಯುತ್ತದೆ. ನಾವು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು.
 ಆಗ ಮಾತ್ರ ಬದುಕಿನ ಎಲ್ಲಾ ಆಶಯವನ್ನು ಈಡೇರಿಸಿಕೊಳ್ಳಲು ಸಾಧ್ಯ. ಕಾಲ ಕಳೆದು ಹೋಗುವ ಮುನ್ನ.. ಒಂದು ಸಲ ಬದುಕಿಗಾಗಿ ನಿಮ್ಮ ಮನಸ್ಸನ್ನು ತೆರೆದುಬಿಡಿ. ನಿಮಗೆ ಪ್ರೀತಿಯ ಒಲವಧಾರೆ ದಕ್ಕೆ ದಕ್ಕುತ್ತದೆ.  


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು

(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವ ಶಕ್ತಿ ಬಂದರೆ ಯೌವನದಲ್ಲಿ ಸರಿ ದಾರಿಯಲ್ಲಿ ಸಾಗಬಹುದು.
    ಲೇಖನ ಮಾರ್ಗದರ್ಶನ ನೀಡುತ್ತಿದೆ ಯುವ ಜನತೆಗೆ.
    ಅಭಿನಂದನೆಗಳು.

Leave a Reply

Back To Top