ಆನಂದಗಿರಿಯಲ್ಲೊಂದು ನೋವಿನ ನೆನಪು ಡಾ.ಹಸೀನಾ ಹೆಚ್.ಕೆ.

ಅನುಭವ ಕಥನ

ಕರ್ನಾಟಕದ ಸುಂದರ ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯು ಸಾಕಷ್ಟು ಸೌಂದರ್ಯಭರಿತ ಪ್ರವಾಸಿ ತಾಣಗಳಿಂದ ಕೂಡಿದೆ. ಮಲೆನಾಡು ಮೊದಲೆ ಪ್ರಾಕೃತಿಕ ಸೊಬಗಿನಿಂದ ಕಂಗೊಳಿಸುವ ಪ್ರದೇಶ. ಹಾಗಾಗಿ ಇಲ್ಲಿರುವ ಒಂದೊಂದು ಸ್ಥಳಗಳೂ ಸಹ ಒಂದೊಂದು ವಿಶೇಷತೆಯನ್ನು, ಪ್ರಕೃತಿ ಸೌಂದರ್ಯವನ್ನು ಪ್ರವಾಸಿಗರಿಗೆ ಕರುಣಿಸುತ್ತವೆ.

ಡಾ.ಹಸೀನಾ ಹೆಚ್.ಕೆ.

ಆನಂದಗಿರಿಯಲ್ಲೊಂದು ನೋವಿನ ನೆನಪು

ಬದುಕಿನ ಅನುಭವಗಳು ನಮ್ಮ ಬದುಕನ್ನು ದಿನನಿತ್ಯ ಮತ್ತೆ ಮತ್ತೆ ಟ್ಯೂನ್ ಮಾಡುತ್ತಾ ಹೋಗುತ್ತವೆ. ಗಟ್ಟಿತನ ಹೊಂದುತ್ತಾ ಹೋಗುತ್ತೇವೆ. ಹಾಗೆಯೇ ನಾನು ೭ನೇ ತರಗತಿಯಲ್ಲಿದ್ದಾಗಿನ ಒಂದು ಸಣ್ಣ ಅನುಭವ ಇವತ್ತಿಗೂ ನನ್ನ ಜೀವನದಲ್ಲಿ ದೊಡ್ಡ ನೆನಪಾಗಿ ಉಳಿದಿದೆ.
ಶಾಲಾ ಶೈಕ್ಷಣಿಕ ಪ್ರವಾಸ ಎನ್ನುವುದು ಇಂದು ನಿನ್ನೆಯದಲ್ಲ.  ನಾನು ಪ್ರೈಮರಿ ಶಾಲೆ ಕಲಿಯುತ್ತಿದ್ದಾಗಲೂ ಇದ್ದಂತಹ ಒಂದು ಅಂಶ. ತೀರ್ಥಹಳ್ಳಿಯ ಸೀಬಿನಕೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ಊರ ಹೊರಗಿರುವ ಆನಂದಗಿರಿ ಗುಡ್ಡಕ್ಕೆ ಒಂದು ದಿನದ ಪಿಕ್‌ನಿಕ್ ಇಟ್ಟಿದ್ದರು.
ಶಿಕ್ಷಕರಾಗಿದ್ದ ರವೀಂದ್ರ ಮೇಷ್ಟು  ನಾಳೆ ಬೆಳಿಗ್ಗೆ ಸಮವಸ್ತ್ರವನ್ನು ಧರಿಸಿ, ಬರಬೇಕು, ಕಾಲಿಗೆ ಚಪ್ಪಲಿ ಧರಿಸಿರಬೇಕು. ಆನಂದಗಿರಿ ಗುಡ್ಡದಲ್ಲಿ ಪಿಕ್‌ನಿಕ್ ಇರುವುದರಿಂದ ಮಧ್ಯಾಹ್ನದ ಸಹಭೋಜನಕ್ಕಾಗಿ ಮನೆಯಲ್ಲಿಯೇ ತಯಾರಿಸಿದ ತಿಂಡಿ-ತಿನಿಸುಗಳನ್ನು ಕೊಂಡೊಯ್ಯಬೇಕು ಎಂದರು. ರವೀಂದ್ರ ಮೇಸ್ಟು ಹೇಳಿದ್ದನ್ನು ಕೇಳಿ ಇಡೀ ಶಾಲೆಯಲ್ಲಿಯ ನೂರಾರು ಮಕ್ಕಳು ಕೇಕೆ ಹಾಕಿ ಕುಣಿದು, ಕುಪ್ಪಳಿಸಿ, ಸಂಭ್ರಮಿಸಿದರು. ಆ ದಿನ ಶಾಲೆಯಲ್ಲಿನ ೧ ರಿಂದ ೭ನೇ ತರಗತಿಯ ಎಲ್ಲಾ ಮಕ್ಕಳಲ್ಲೂ ಆ ಪಿಕ್‌ನಿಕ್ ಹೊರಡುವ ವಿಷಯದ ಬಗ್ಗೆ ಗುಸುಗುಸು ಪ್ರಾರಂಭವಾಗಿತ್ತು.  ಏಕೆಂದರೆ ಆಗಿನ ಕಾಲಕ್ಕೆ ಪಿಕ್‌ನಿಕ್, ಪ್ರವಾಸಗಳು ಮರೀಚಿಕೆಯಾಗಿದ್ದವು. ಹಾಗೆಯೇ ಶಾಲೆ, ಮನೆ, ಆಟದ ಮೈದಾನ ಇವಿಷ್ಟೇ ಪ್ರಪಂಚವಾಗಿತ್ತು. ವರ್ಷಕ್ಕೊಮ್ಮೆ ಬರುವ ಎಳ್ಳಮವಾಸ್ಯೆ ಜಾತ್ರೆ, ದಸರಾ ಹಬ್ಬ, ಮೂರು ವರ್ಷಕ್ಕೊಮ್ಮೆ ಬರುತ್ತಿದ್ದ ಮಾರಿಹಬ್ಬ, ಇವಿಷ್ಟು ಸಾಮಾನ್ಯವಾಗಿ ಮನರಂಜನೆ ಸಿಗುತ್ತಿದ್ದ ಕಾಲವಾಗುತ್ತಿತ್ತು. ಇವೆಲ್ಲವನ್ನು ಹೊರತುಪಡಿಸಿ ಗಣೇಶನ ಹಬ್ಬ ಸ್ವಲ್ಪ ವಿಶೇಷವಾಗಿತ್ತು.  ಎಷ್ಟು ದಿನ ಗಣೇಶನ ಇಡುತ್ತಿದ್ದರೋ ಅಷ್ಟು ದಿನ ಪೂರ್ತಿ ಮನರಂಜನೆ ಸಿಗುತ್ತಿತ್ತು.ಸೀಬಿನಕೆರೆಯಲ್ಲಿ ಒಂದು ಸಿನಿಮ್ ಟೆಂಟ್ ಇತ್ತು. ನಾವಂತು ಹಣ ಕೊಟ್ಟು ಸಿನಿಮಾ ಎಂದೂ ನೋಡಿದವರಲ್ಲ.ಹಾಗಾಗಿ ಪಠ್ಯಪುಸ್ತಕದಲ್ಲಿ ಓದುತ್ತಿದ್ದ ಪಿಕ್‌ನಿಕ್ ನೆನೆನೆನೆದು ನಾನು ನಾಳೆ ಹೊರಡುವ ಆನಂದಗಿರಿಯ ಪಿಕ್‌ನಿಕ್‌ಗೆ ಹೋಗಲು ಮನಸ್ಸಿನಲ್ಲಿಯೇ ಸಂಭ್ರಮಿಸಿಕೊಳ್ಳುತ್ತಿದ್ದೆ.


ಸಂಜೆಯಾಯಿತು. ಶಾಲೆ ಮುಗಿಸಿ ಮನೆಗೆ ಹೋಗಿ ನಾಳೆ ಪಿಕ್‌ನಿಕ್ ಹೊರಡುವ ವಿಷಯ ಅಮ್ಮನಿಗೆ ಹೇಳಿದೆ. ಅಮ್ಮಾ ಸಮವಸ್ತ್ರ ಎಂದಾಗ ಏನು ಮಾತನಾಡದೇ ಇದ್ದವರು ಕಾಲಿಗೆ ಚಪ್ಪಲಿ ಧರಿಸಿ ಬರಬೇಕು ಎಂದಾಗ ಒಲೆ ಊದುತ್ತಿದ್ದವರು ತಲೆ ಎತ್ತಿ ನೋಡಿದರು. ಹ್ಞಾಂ ಎಂದ ಅವರು ಮನೆಯಲ್ಲಿಯೇ ತಯಾರಿಸಿದ ತಿಂಡಿ ತಿನಿಸುಗಳನ್ನು ಕೊಂಡು ಹೋಗಬೇಕು ಎಂದಾಗ ಮತ್ತೊಮ್ಮೆ ತಲೆ ಎತ್ತಿ ನನ್ನ ಮುಖ ನೋಡಿ ಹ್ಞೂಂ ಎಂದು ತಮ್ಮ ಕೆಲಸವನ್ನು ಮುಂದುವರೆಸಿದ್ದರು.
ನನಗೋ ಅದೆಷ್ಟು ಖುಷಿ ಎಂದರೆ ನಾಳೆ ಬೆಳಿಗ್ಗೆ ೮ ಘಂಟೆ ಯಾವಾಗ ಆಗುತ್ತೋ ಎಂಬುದನ್ನು ಜಾತಕಪಕ್ಷಿಯಂತೆ ಕಾಯುತ್ತಿದ್ದೆ. ಆಗೆಲ್ಲ ನಮ್ಮ ಮನೆಯಲ್ಲಿ ಗಡಿಯಾರ ಗಂಟೆಗಳು ಇಲ್ಲದೇ ಇದ್ದುದರಿಂದ ಸೂರ್ಯನ ಆಧಾರದಲ್ಲಿ ಘಂಟೆ ತಿಳಿಯಲಾಗುತ್ತಿತ್ತು ಮತ್ತು ಬಸ್ಸುಗಳು ನಮ್ಮ ಗಡಿಯಾರ ಆಗಿರುತ್ತಿತ್ತು. ಆಗಿನ ಕಾಲಕ್ಕೆ ಮಾಸ್ತಿಕಟ್ಟೆಗೆ ಹೋಗುತ್ತಿದ್ದ ಗಜಾನನ ಬಸ್ಸು ಮತ್ತು ಸಾಗರದ ಶಿವಶಂಕರ್ ಬಸ್ಸನ್ನು ನೋಡಿ ನಾನು ಶಾಲೆಗೆ ಹೊರಡುತ್ತಿದ್ದೆ.
ಪಿಕ್‌ನಿಕ್ ಹೋಗುವ ದಿನ ಶನಿವಾರ ಆಗಿದ್ದರಿಂದ ೭ ಘಂಟೆ ಆಗುವುದನ್ನೇ ಕಾಯುತ್ತಿದ್ದೆ. ಕೊನೆಗೂ ಬೆಳಗಾಯಿತು. ಕಾಗೆಗಳ ಸದ್ದಿಗೆ, ಕೋಳಿಯ ಬಾಂಗಿಗೆ ಎಚ್ಚರವಾಯಿತು. ಮೊದಲೇ ಎದ್ದಿದ್ದ ಅಮ್ಮನಿಗೆ ಕೇಳಿದೆ ಅಮ್ಮಾ ಚಪ್ಪಲಿ ಧರಿಸಿ ಬರಲು ಹೇಳಿದ್ದಾರೆ. ಅಮ್ಮ ಮತ್ತೆ ಮೌನ. ಮತ್ತೊಮ್ಮೆ ಹೇಳಿದೆ. ಅಮ್ಮಾ ಚಪ್ಪಲಿ ಧರಿಸಿ ಬರಲು ಹೇಳಿದ್ದಾರೆ. ಅಮ್ಮಾಳ ಉತ್ತರ- ಅದು ಯಾರಿಗೆ ಕಲ್ಲು ಮುಳ್ಳುಗಳನ್ನು ತುಳಿದು, ಚುಚ್ಚಿಸಿಕೊಂಡು ಅಭ್ಯಾಸವಿಲ್ಲವೋ ಅಂತಹವರಿಗೆ ಹೇಳಿರುವುದು. ಅವರು ಮಾತ್ರ ಚಪ್ಪಲಿ ಹಾಕೋದು. ನಿನಗೆ ಅಭ್ಯಾಸ ಇರುವುದರಿಂದ ಚಪ್ಪಲಿ ಹಾಕಬೇಕೆಂದಿಲ್ಲ ಎಂದರು. ಆಗಿನ ಸಮಯಕ್ಕೆ ಅದು ನನಗೆ ಸರಿ ಎನ್ನಿಸಿತು. ಏಕೆಂದರೆ ಮನೆಯಲ್ಲಿ ಅಪ್ಪಾ ಅಮ್ಮಾನೆ ಚಪ್ಪಲಿ ಕಂಡವರಲ್ಲ. ನಾನಂತೂ ಆ ವಯಸ್ಸಿಗೆ ಧರಿಸಿದವಳು ಅಲ್ಲ.


ಆನಂತರ ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸು ಕಟ್ಟಿಕೊಂಡು ಬರಲು ಹೇಳಿದ್ದಾರೆ ಎಂದು ತಿಳಿಸಿದೆ. ಆಗ ಅಮ್ಮಾ ಮರುಮಾತಾಡದೆ  ನಾಲ್ಕಾಣೆ  ಕೈಗೆ ಕೊಟ್ಟು ಮನೆ ಎದುರಿಗಿರುವ ಕಾಕನ ಅಂಗಡಿಯಲ್ಲಿ ೨ ಮಂಡಕ್ಕಿ ಪೊಟ್ಟಣ ತರಲು ಹೇಳಿದರು. ನಾನು ಚಂಗನೆ ರಸ್ತೆ ದಾಟಿ ೨ ಮಂಡಕ್ಕಿ ಪೊಟ್ಟಣ ತೆಗೆದುಕೊಂಡು ಅದೇ ರಭಸದಲ್ಲಿ ಅಮ್ಮನ ಎದುರಿಗಿದ್ದೆ. ಅಮ್ಮ ನನ್ನ ನೀಳ ಕಪ್ಪು ದಟ್ಟವಾದ ತಲೆಗೂದಲನ್ನು ಎಣ್ಣೆ ಹಾಕಿ ಬಾಚಿ ಎರಡು ಜಡೆಗಳನ್ನು ಹೆಣೆದು ಮಡಚಿ ಕಟ್ಟಿ ಬಿಳಿ ರಿಬ್ಬನ್‌ನಲ್ಲಿ ಹೂ ಹಾಕಿದ್ದರು. ಅಮ್ಮ ಹೆಣೆಯುತ್ತಿದ್ದ ಜಡೆ ಹೇಗಿರುತ್ತಿತ್ತೆಂದರೆ ಅದರಲ್ಲಿ ಮಲ್ಲಯುದ್ಧ ನಡೆಸಿದರೂ ಬಿಚ್ಚಿಕೊಳ್ಳುತ್ತಿರಲಿಲ್ಲ. ಅಷ್ಟು ಗಟ್ಟಿಯಾಗಿ ಹೆಣೆಯುತ್ತಿದ್ದರು. ಆ ಜಡೆಗಳೋ ಮಡಚಿ ಕಟ್ಟಿದರೂ ಭುಜಕ್ಕೆ ತಾಕುತ್ತಿದ್ದವು ನನ್ನ ೧೦ನೇ ವಯಸ್ಸಿನಲ್ಲಿ.
ಅಮ್ಮಾ ನಮ್ಮ ಜೋಪಡಿಯಲ್ಲಿದ್ದ ಏಕೈಕ ಅಲ್ಯುಮಿನಿಯಂ ಕ್ಯಾಟಲಿಯಲ್ಲಿ ಮಂಡಕ್ಕಿಯನ್ನು ಸುರಿದು ಅದರಲ್ಲಿ ಎರಡು ಉಂಡೆ ಬೆಲ್ಲ ಹಾಕಿಟ್ಟು ನನ್ನ ಕೈಗಿತ್ತು ಹೇಳಿದರು. ಕ್ಯಾಟಲಿಯನ್ನು ನಡೆಯಬೇಕಾದರೆ ಕೈ ಬೀಸಿದ ಹಾಗೆ ರಭಸವಾಗಿ ಬೀಸಬೇಡ. ಗಟ್ಟಿಯಾಗಿ ಹಿಡಿದು ನಡೆ ಎಂದು ಕಿವಿಮಾತು ಹೇಳಿ ಕಳಿಸಿದ್ದರು. ನಾನೂ ಹಾಗೆಯೇ ಆನಂದಗಿರಿ ಗುಡ್ಡವನ್ನು ತಲುಪುವವರೆಗೂ ಯಾವುದೋ ಭಾರವಾದ ತಿಂಡಿ ಕ್ಯಾಟಲಿಯಲ್ಲಿ ಇದ್ದಹಾಗೆ ಪೋಜು ಕೊಟ್ಟು ನಡೆಯುತ್ತಿದ್ದೆ. ಒಮ್ಮೊಮ್ಮೆ ಮರೆತು ಕೈ ರಭಸವಾಗಿ ಬೀಸಿದರೂ ತಕ್ಷಣ ಅಮ್ಮನ ನೆನಪಾಗಿ ಮತ್ತೆ ನಿಧಾನವಾಗಿ ಬೀಸುತ್ತಿದ್ದೆ.


ಮನೆಯಿಂದ ಹೊರಟು ಶಾಲೆಗೆ ಹೋಗಿ ಮಕ್ಕಳ ಹಾಗೂ ಶಿಕ್ಷಕರ ಜೊತೆ ಸಾಲಾಗಿ ಸೀಬಿನಕೆರೆಯಿಂದ ಆನಂದಗಿರಿಯವರೆಗೂ ನಡೆಯುತ್ತಾ ಸಾಗಿದೆವು. ಸಾಲಿನಲ್ಲಿ ಹಾಡುಗಳು, ಜಾನಪದ ಗೀತೆಗಳು, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳನ್ನು ಹಾಡುತ್ತಾ ಸಾಗುತ್ತಿದ್ದೆವು. ತೀರ್ಥಹಳ್ಳಿಯಲ್ಲಿ ಆಗಿನ ಕಾಲಕ್ಕೆ ವಾಹನ ಸಂದಣಿ ಕಡಿಮೆ ಇದ್ದುದರಿಂದ ನಮ್ಮ ಕಾಲ್ನಡಿಗೆಗೆ ಯಾವುದೇ ಭಂಗವಿರಲಿಲ್ಲ.  ಸ್ನೇಹಿತರೊಂದಿಗೆ ನನ್ನ ಕಾಲ್ನಡಿಗೆ ಪಿಕ್‌ನಿಕ್ ಇವತ್ತಿಗೂ ನನ್ನ ಮನಸ್ಸಿನಲ್ಲಿ ಹಚ್ಚಹಸುರಾಗಿದೆ. ಅದರಲ್ಲೂ ಚಪ್ಪಲಿ ಇಲ್ಲದೆ ಗುಡ್ಡವನ್ನು ಹತ್ತಿದ ನೆನಪು ಇನ್ನೂ ಹಸಿರು. ಎಲ್ಲರೂ ಆನಂದಗಿರಿಯ ಮೇಲಿರುವ ಶಿಖರಕ್ಕೆ ತಲುಪಿದೆವು. ಎಲ್ಲರೂ ಕುಳಿತು ದಣಿವಾರಿಸಿಕೊಂಡ ನಂತರ ಟೊಪ್ಪಿ ಆಟ ಆಡಿಸಿದರು. ಆನಂತರ ಕೆರೆದಡ ಆಟ ಆಡಿಸಿದರು.   ಕಣ್ಣಿಗೆ ಬಟ್ಟೆ ಕಟ್ಟಿ ಕಣ್ಣಾಮುಚ್ಚಾಲೆ ಆಟ ಸಹ ಆಡಿಸಿದರು.
ಆಟದ ನಂತರ ರಾಮಾನಾಯಕ್ ಮಾಸ್ಟರ್ ಡ್ರಾಕುಲ ಕಥೆ ಹೇಳಿದರು. ಎಲ್ಲರ ಸಂಭ್ರಮ, ಖುಷಿ, ಸಂತಸ, ಮಾತು, ಹರಟೆ, ಆನಂದಗಿರಿಯ ಗುಡ್ಡದ ಮೇಲಿನಿಂದ ಇಡೀ ತೀರ್ಥಹಳ್ಳಿಯ ಸೌಂದರ್ಯ, ಒಂದೋ ಎರಡೋ. ಕೃಷ್ಣ ಕೂಗಿದ ಓ ನಮ್ಮ ಮನೆ ಕಾಣಿಸ್ತಾ ಇದೆ. ಪದ್ಮಾವತಿ ಹೇಳಿದಳು ನಮ್ಮ ಮನೆಯೂ ಕಾಣ್ತಾ ಇದೆ.  ಎಲ್ಲರೂ ತಮ್ಮ ತಮ್ಮ ಮನೆಗಳನ್ನು ಮಾರ್ಕ್ ಮಾಡಿ ಹೇಳುತ್ತಿದ್ದರು. ನಾನು ಮಾತ್ರ ನನ್ನ ಜೋಪಡಿಯ ಪಕ್ಕದ ಟೋಲ್‌ಗೇಟನ್ನು ಹುಡುಕುತ್ತಿದ್ದೆ.
ಎಲ್ಲರೂ ತಾವು ತಂದಿದ್ದ ನೀರನ್ನು ತೆಗೆದು ಕೈತೊಳೆದುಕೊಂಡು ತಮ್ಮ ತಮ್ಮ ಬುತ್ತಿಗಳನ್ನು ಬಿಚ್ಚಿ ತಿಂಡಿ ತಿನ್ನಲು ಕುಳಿತರು. ಬುತ್ತಿಗಳನ್ನು ತೆರೆಯುತ್ತಿದ್ದಂತೆ, ಉಪ್ಪಿಟ್ಟು, ಅವಲಕ್ಕಿ, ಫಲಾವ್‌ನ ಘಮ ಮೂಗಿಗೆ ಬಡಿಯುತ್ತಿತ್ತು. ಕೆಲವರು ಚಿತ್ರಾನ್ನ, ಪುಳಿಯೋಗರೆ ತಂದಿದ್ದರು. ಕಡುಬು, ದೋಸೆಗಳು, ಪಡ್ಡುಗಳು, ಚಪಾತಿ, ರೊಟ್ಟಿ, ಪಲ್ಯಗಳ ಪರಿಮಳ ಮೂಗಿಗೆ ಬಡಿಯುತ್ತಿತ್ತು.


ನಾನು ತೆಗೆದುಕೊಂಡು ಹೋಗಿದ್ದ ಮಂಡಕ್ಕಿಯ ಕ್ಯಾಟಲಿಯಲ್ಲಿ ಬಿಚ್ಚಿ, ಮಂಡಕ್ಕಿಯನ್ನು ಬೆಲ್ಲದ ಜೊತೆ ತಿಂದು ಮುಗಿಸಿದೆ. ಆ ಮಂಡಕ್ಕಿ ಮುಗಿಯುವವರೆಗೂ ನನಗಿದ್ದ ಆತಂಕ, ಕೀಳರಿಮೆ, ನೋವು, ನನ್ನ ದುಗುಡ, ಯಾರೂ ಬಂದು ನನ್ನ ಮಂಡಕ್ಕಿ ನೋಡಿ ಏನೆಂದುಕೊಳ್ಳುತ್ತಾರೋ ಅನ್ನುವ ಹಪಹಪಿಕೆ ನಾನೆಂದಿಗೂ ಮರೆಯಲಾರೆ. ಇವತ್ತಿಗೂ ಅದು ಹಸಿರು. ಆ ದಿನಗಳು ನನ್ನ ಬದುಕಿನ ನೋವಿನ ಕ್ಷಣಗಳು. ಆ ಒಂದೊಂದು ಘಟನೆಗಳು ನನ್ನನ್ನು ತುಂಬಾ ಗಟ್ಟಿಯಾಗಿಸುತ್ತಾ ಬಂದವು.


ಡಾ.ಹಸೀನಾ ಹೆಚ್.ಕೆ.

2 thoughts on “ಆನಂದಗಿರಿಯಲ್ಲೊಂದು ನೋವಿನ ನೆನಪು ಡಾ.ಹಸೀನಾ ಹೆಚ್.ಕೆ.

  1. Very nice experience dear Haseena who knows what is there behind a great person I was working there in govt p u college from 1974to 1976 and used to visit Ananda Giri with my sister Ahalya

  2. ಅಮ್ಮನ ಅಮ್ಮ ಹೇಳಿದ ಮಾತು ಯಾವಾಗಲೂ ನಿಜವಾಗಿರುತ್ತದೆ

Leave a Reply

Back To Top