ಮಧುಸೂದನ ಮದ್ದೂರುಅವರ ಕವಿತೆ-ನಾನೆಂಬುದು…..

ಕಾವ್ಯಸಂಗಾತಿ

ಮಧುಸೂದನ ಮದ್ದೂರು

ನಾನೆಂಬುದು…..

ನಾನೆಂಬುದು…
ಕಿಮುಚು ಕಟ್ಟಿದ ಕೊಳಾಯಿ….
ನೀರು ಹೊರ ಬರಲು ಏದುಸಿರು…

ನಾನೆಂಬುದು…
ದೇವಳ ಮುಂದೆ
ಗಾಳಿಗೊಡ್ಡಿದ ದೀಪ…
ಉರಿಯುರಿಯಲು
ಕತ್ತು ಹಿಚಿಕಿದಂತೆ….

ನಾನೆಂಬುದು…
ಆಗಸದೀ ಹಾರುವ ಗಾಳಿಪಟದಂತೆ..
ಲಗಾಟಿ ಹೊಡೆದು ಎಲ್ಲಿ ಬೀಳುವನೆಂಬ
ನಿರೀಕ್ಷೆಯ ನೆನಸದ ಮಗುವಿನಂತೆ….

ನಾನೆಂಬುದು…
ಹಾಯಿದೋಣಿಯೇರಿದ
ಪ್ರೇಮಿಗಳಂತೆ..
ಗಾಳಿ ಬಿರುಗಾಳಿಯಾಗುವುದೋ ಭಯವಿಲ್ಲ..
ಇನಿಯನ ಬಿಸಿಯಪ್ಪುಗೆ ಇರಲು…

ನಾನೆಂಬುದು…
ಮರುಭೂಮಿಯಂತೆ…
ದಾವಾರಿದ ಗಂಟಲಿಗೆ
!ಓಯಸಿಸ್ಸ್ ಸಿಕ್ಕೇ.. ಸಿಗಲಿದೆಯೆಂಬ
ಅತೀ ನಿರೀಕ್ಷೆಯಂತೆ…

ನಾನೆಂಬುದು..
ನಾನು… ನಾನೇ…
ನನ್ನದು …ನನ್ನದೇ…
ಎದೆ ನೆಲದೀ ನಾನು ಎಂಬ ಪಸೆ ಆರಲು ನಾನು ನನ್ನದೆಂಬ
ಮತಿಭ್ರಾಂತಿ ಕಡೆಗಾಣವುದೋ..
ಎಂಬ ನಿರೀಕ್ಷೆಯಲಿ..
ನಾನು ನಾನಾಗಿದ್ದೇನೆ…


ಮಧುಸೂದನ ಮದ್ದೂರು

Leave a Reply

Back To Top