ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಹಾಯ್ಕುಗಳು…
1…. ಚೆಂಗುಲಾಬಿಯ
ಮೂಗುಬೊಟ್ಟಿನ ಮುತ್ತು
ಈ ಇಬ್ಬನಿಯು…
2…. ಕಡಲ ಅಲೆ
ಉಯ್ಯಾಲೆಯಲಿ ಉಷೆ
ತೇಲಿ ಬಂದಳು…
3…. ಎಲ್ಲಿದೆ ಶಾಂತಿ
ಜಾತಿ ಮತ ಭ್ರಾಂತಿಯ
ಕ್ರಾಂತಿಯೊಳಗೆ…
4…. ಮಾನವತೆಯ
ಮಾರಣ ಹೋಮವದು
ಕೋಮು ವಾದದಿ….
5…. ಸಾಕು ನೋಡಲು
ಮನದ ಕನ್ನಡಿಯು
ನನ್ನನ್ನೇ ನಾನು…
6…. ನಂಬುಗೆ ತಾನು
ಪ್ರೀತಿಯ ಬೀಜದಲಿ
ಮೊಳೆಯುತಿದೆ…
7…. ಕಾವು ಕೊಟ್ಟಿತು
ಅವ್ವನೆದೆಯ ಬಿಸಿ
ನೋವ ತಾನುಂಡು…
8…. ನಲುಗುತಿದೆ
ಭ್ರಷ್ಟರಪ್ಪುಗೆಯಲಿ
ನಿಷ್ಠೆ ನಂಬಿಕೆ…
9… ಹಸಿರು ಮರ
ಮರಗಟ್ಟಿ ಹೋಯಿತು
ಅತಿ ಆಸೆಗೆ…
10… ಅನ್ನ , ಉಸಿರು
ನೀರ ಹನಿ ಹನಿಯು
ವಿಷ ಕನ್ಯೆಯು…
11….. ಮಳೆಬಿಲ್ಲಿನ
ಏಳು ಬಣ್ಣಗಳಲಿ
ನಾನು ನಿರ್ವರ್ಣ…
12…. ನೆಲದೆದೆಯ
ಉಸಿರು ಹಸಿ- ಬಿಸಿ
ವರ್ಷ ಧಾರೆಗೆ…
13…. ಕಾನು ಕನಲಿ
ಕೆಂಡವಾದಾಗ ಅದೋ
ಬಂತು ಕಾಳ್ಗಿಚ್ಚು..
14…. ಮೋಹದಾಸೆಯ
ತಿರುಗಣಿಯೊಳಗೆ
ಮನ ಬುಗುರಿ…
15…. ಕಂಗಳೆರಡು
ನಕ್ಕವು ಮಿಂಚುತಲಿ
ಮೌನಮಾತಲಿ…
16…. ನಕ್ಕಾಗ ಮಗು
ನಕ್ಷತ್ರ ಹೊಳೆದಂತೆ
ಬಾಂದಳದಲಿ…
17…. ಜೀವ ರಾಶಿಗೆ
ಬೆಳಕು ಚೇತನವು
ಕಂದ ತಾಯಿಗೆ…
18…. ಹೆದರದಿರು
ಕಷ್ಟ ನಷ್ಟಗಳಿಗೆ
ತಾಳ್ಮೆ ಇರಲಿ…
19…. ಚಂದ್ರ ಸುರಿದ
ಹಾಲ್ಬೆಳದಿಂಗಳು ತಾ
ನೆಲದವ್ವಗೆ…
20… ನಮಿಸುತಿದೆ
ಹುಲ್ಲಿನೆಸಳು ಬಾಗಿ
ಭೂಮಿ ತಾಯಿಗೆ..
ಹಮೀದಾ ಬೇಗಂ. ದೇಸಾಯಿ.
ಚೆಂದ