ಡಾ ಸಾವಿತ್ರಿ ಕಮಲಾಪೂರ ಕವಿತೆ ಮುನಿಸು ತೊರೆ ಮಲ್ಲ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ ಕವಿತೆ

ಮುನಿಸು ತೊರೆ ಮಲ್ಲ

ಬೇಸರಿಸದಿರು ಒಡೆಯ
ನಾಡ ಮಡಿಲ ಮಣ್ಣಿನಲ್ಲಿ
ದುಡಿದ ದೇಹಕೆ ಬಲ
ನೀನು ಮಲ್ಲಸರ್ಜ
ಅದಾವ ಮುನಿಸು
ನಾ ಕಾಣೆ ಒಡೆಯ
ನೂರೆಂಟು ನೋವುಗಳ ಮದ್ಯ ಸಾಧನೆಯ ಛಲ ನೀಡಿದ ಚೆನ್ನಮ್ಮಳ ಕಂಬನಿಯ ವರೆಸಲು
ಮುಂದಡಿ ಇಟ್ಟ ರಾಜ ಮಲ್ಲ

ದೂರಾಗಿ ಬಿಟ್ಟೆ
ಕುಸಿದ ನೆಲ
ಹರಿದು ಬಿದ್ದ ಮುಗಿಲು
ಕುತಂತ್ರಿಗಳ ಕಾರಬಾರ
ಕಾರಣವಾಯಿತೇ ?
ಮಣ್ಣ ಕಣ ಕಣದಲ್ಲೂ ಆರಾದಿಸುವೆ
ಕುಂತ ನೆಲದಲಿ
ನಡೆಯುವ ಹೆಜ್ಜೆಯಲಿ

ಕಟ್ಟಿದ ನಾಡ
ಶರಣರ ಸಂತರ ದಾಸರ
ಉಸಿರೊಳಗೆ ಬೆರೆತ ಜೀವ
ನಿನ್ನದು ಒಡೆಯ
ಹೇಗೆ ಜಯಿಸಲಿ?
ಅಡಿ ಇಟ್ಟ ಹೆಜ್ಜೆಗೆ ಬಲ ನೀನು
ಕಾಣುವೆ ನನ್ನೆದೆಯ ಬಿತ್ತಿಯಲಿ
ನಿನ್ನದೇ ಛಾಪು
ಮೂಡಿದ ಮೂರ್ತಿ
ಗುರುದ್ರೋಣನ ಸ್ಪೂರ್ತಿ ಎಕಲವ್ಯ

ಸ್ಪಷ್ಟವಾಯಿತು ಬಿಡು ರಾಜ
ಅರಸ ನಲ್ಲವೇ? ನೀನು
ಕೈ ಹಿಡಿದ ರಾಣಿ ರುದ್ರಮ್ಮ
ಹಿರಿಯಕ್ಕ ಎನಗೆ
ಕಂಡಿಲ್ಲ ಇನಿತು ಮತ್ಸರ
ಹೋರಾಡುವೆ ಕಿತ್ತೂರಿನ
ಬಾವುಟ ಕೆಳಗಿಳಿಯದಂತೆ

ಚಂಡಿಯಾಗಿ ಚಾಮುಂಡಿಯಾಗಿ
ತೆರೆಯುವೆ ಅಟ್ಟಹಾಸ ಮೆರೆವ
ರಕ್ಕಸರ ರುಧಿರ ಕುಡಿದು ಬಿಡುವೆ
ಕಾಯುವೆ ನಾಡನ್ನು ದೇವತೆಯಾಗಿ
ಶರಣಾದ ಸೈನಿಕರಿಗೆ ಶರಣಾಗಿ ನಿಲ್ಲುವೆ ಒಡೆಯ
ಶೋಕ ನನಗೆ ಕಳೆದುಕೊಂಡೆ ರಾಯ ನಿನ್ನನ್ನು ಮರೆತು ಸಾಗುವೆ
ನಾಡ ಮಕ್ಕಳೇ ನನ್ನವರೆಂದು

ಬಿಸುಗುಡುವ ಸರ್ಪಗಳ
ಹೆಡೆ ಮುರಿದು ಬೀಡುವೆ
ಬಿಡು ನನ್ನನ್ನು
ನಿನ್ನ ತೋಳ ತೆಕ್ಕೆಯಲಿ ಮಲಗಿ ನಿದ್ರಿಸುವ ಸುಖ ಬೇಡ ನನಗೆ
ಮಲಗಿಸುವೆ ತಾಯ ಒಡಲ ಫೊರೆಯುವೆ ಹಸು ಕಂದಗಳ

ತೊರೆದು ಬಿಡು ಹುಸಿಕೋಪ
ಶರಣೆನ್ನುವೆ
ಕೋಪವಿದ್ದರೆ
ಉರುಳಿಸಿಬಿಡು
ಒಂದೇ ಏಟಿಗೆ
ಉರುಳಿ ಬೀಳಲಿ
ಚೆನ್ನಮ್ಮ ಳ ರುಂಡ

ಮಣ್ಣ ಪದರ ವಾಸನೆಯಲಿ
ಸೇರಿ ಹೋಗಲಿ
ನಾಡಿಗಾಗಿ ನುಡಿಗಾಗಿ
ಸೆರಗು ಒಡ್ಡಿ ಬೇಡುವೆ ಒಡೆಯ ಮುನಿಸು ತೊರೆದು
ಮೊಗ ತೋರು.


ಡಾ ಸಾವಿತ್ರಿ ಕಮಲಾಪೂರ

Leave a Reply

Back To Top