ಚೆಲುವಾದ ಮುದ್ದಾದ ನಿನ್ನ ಜಯಶ್ರೀ.ಜೆ. ಅಬ್ಬಿಗೇರಿ

ಲಹರಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

ಚೆಲುವಾದ ಮುದ್ದಾದ ನಿನ್ನ

ಮುದ್ದಿನ ಮೋಹಿನಿ,
ಬೆಳ್ಳಂಬೆಳಿಗ್ಗೆ ಮಂಜು ಕವಿದ ವಾತಾವರಣದಲ್ಲಿ ನಿನ್ನ ಸವಿನೆನಪುಗಳು ಮಂಜಿನಂತೆ ದಟ್ಟವಾಗಿ ನನ್ನ ಎದೆಯನ್ನು ದಿನವೂ ಆವರಿಸುತ್ತವೆ. ಆವರಿಸಿದ್ದ ನಿದ್ದೆಯೂ ಸದ್ದಿಲ್ಲದೇ ಸರಿದು ಹೋಗುತ್ತದೆ. ನಿನ್ನ ಬಗೆಗೆ ನನಗಿರುವ ಮಧುರ ಭಾವನೆಗಳು ಎಷ್ಟೊಂದು ಆಳವಾಗಿವೆ ಎಂದು ತೋರಿಸಲು ಏನು ಮಾಡಲಿ ಎಂದು ತೋಚದೇ, ಪತ್ರದಲ್ಲಿ ಗೀಚಿ ಪ್ರೇಮ ಭಿಕ್ಷೆ ಯಾಚಿಸುತ್ತಿರುವೆ.

ಎಂಥವರನ್ನಾದರೂ ಮೋಹಗೊಳಿಸುವ ಮೋಹಕ ಚೆಲ್ವಿಕೆ ನಿನ್ನದು. ಅದರೊಂದಿಗೆ ಚತುರತೆ ಮೇಳೈಸಿ ಮತ್ತಷ್ಟು ಮೆರಗು ನೀಡುವ ನಿನ್ನ ಸರಳ ನಡೆ ನುಡಿ. ಅಬ್ಬಬ್ಬಾ! ನಿನ್ನ ಬಗ್ಗೆ ಅದೆಷ್ಟು ಹೇಳಿದರೂ ಜಾಸ್ತಿ ಎನಿಸುವುದಿಲ್ಲ.. ಚಂದ್ರನಂತೆ ದುಂಡಗಿರುವ ಮುಖ, ಶುಭ್ರ ವರ್ಣ, ಮಟ್ಟಸವಾದ ನಿಲುವು, ಬಟ್ಟಲು ಕಂಗಳು, ತುಂಬಿದ ಕಪೋಲಗಳು. ಭಗವಂತ ನಿನ್ನ ತುಂಬಾ ಪುರಸೊತ್ತಿದ್ದಾಗ ಮಾಡಿರಬಹುದೆಂಬ ಅನುಮಾನ ನೋಡಿದವರಿಗೆ ಅನ್ನಿಸದೇ ಇರದು. ನಿನ್ನ ಸ್ನೇಹ ಸೂಸುವ ಮುಖಭಾವ ಮುತ್ತಿನ ಹಲ್ಲು ತೋರುವ ನಗುಮೊಗ, ಅರಳು ಹುರಿದಂತೆ ಮಾತು ಜನಾನುರಾಗಿಯನ್ನಾಗಿಸಿವೆ.
ಕಾಲೇಜಿನ ಯಾವ ಹುಡುಗರೂ ನಿನ್ನನ್ನು ತನ್ನ ಕನಸಿನ ರಾಣಿ ಅಂದಿಲ್ಲ ಅಂತಿಲ್ಲ. ಮೋಹಿನಿಯಂಥ ಬಾಳ ಗೆಳತಿ ಸಿಕ್ಕರೆ ಜೀವನ ಸಾರ್ಥಕ ಎಂದು ಮಾತಿನಾಡಿಕೊಳ್ಳುವ ಹುಡುಗರ ದಂಡೇ ಸಿಗುತ್ತದೆ. ಆದರೆ ನಿನ್ನೆದುರು ಅವರ‍್ಯಾರಿಗೂ ಪ್ರೇಮ ನಿವೇದಿಸುವ ಧೈರ್ಯ ಸಾಲದು.
ತಾಯ್ತಂದೆಯರ ಏಕ ಸಂತಾನ ನೀನು. ಲಕ್ಷ್ಮೀ ಕಾಲು ಮುರಿದುಕೊಂಡು ಬಿದ್ದಿರುವ ಅರಮನೆಗೆ ರಾಜಕುಮಾರಿ ನೀನು. ದುಡ್ಡು ಒಡವೆ ವೈಭೋಗ ಹೆಚ್ಚಳವಿರುವ ಶ್ರೀಮಂತರ ಮನೆಯಲ್ಲಿ ಹೃದಯದ ಅಭಾವ ಸಾಮಾನ್ಯ ಆದರೆ ನೀನು ಅಪರೂಪ.

ಕಾಲೇಜಿನ ಹೂದೋಟದಲ್ಲಿ ನಾನು ಪುಸ್ತಕ ತಿರುವುತ್ತ ಕುಳಿತಿರುವಾಗ,’ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಾಧನೆಗೈದು, ಚಿನ್ನದ ಪದಕ ಪಡೆದ ಚಿನ್ನದ ಹುಡುಗ ನೀನು ಎಂದು ನನಗೆ ಅಭಿನಂದನೆಗಳನ್ನು ಸಲ್ಲಿಸಿದೆ.’ಅದ್ಭುತ ರೂಪದ ಚೆಲುವೆಯೊಬ್ಬಳು ತಾನಾಗಿಯೇ ಬಳಿ ಬಂದು ತನ್ನ ಕುಸುಮ ಕೋಮಲ ಕರಗಳಿಂದ ನನ್ನ ಬಿರುಸು ಕೈ ಕುಲುಕಿದಾಗ ಮಧುರ ಶೃತಿ ಎದೆಯಲ್ಲಿ ಝೇಂಕರಿಸಿತು.

ನಿನ್ನ ರೂಪದ ಸೆಳತಕ್ಕೆ ಸಿಲುಕಬಾರದೆಂದು ನಿರುದ್ವೇಗದಿಂದರಲು ಅದೆಷ್ಟು ಯತ್ನಿಸಿದರೂ ಫಲಿಸಲಿಲ್ಲ. ಹೃದಯದಲ್ಲಿ ಉತ್ಸಾಹದ ಬುಗ್ಗೆಯೊಂದು ಚಿಮ್ಮಿತು. ಹರುಷದಿಂದ ನಿನ್ನ ನಾಮದೇಯ ಎಂದು ಕೇಳಿದೆ. ಮುತ್ತಿನಂತೆ ಜೊಡಿಸಿದ ಹಲ್ಲುಗಳು ಕಾಣಿಸುವಂತೆ ನಕ್ಕು, ಮೋಹಿನಿ ಎಂದೆ. ಓ! ವೆರಿ ಸ್ವೀಟ್ ನೇಮ್. ಈ ಸುಂದರ ಮೋಹಿನಿಯ ಹೃದಯ ವೀಣೆ ಮೀಟುವ ಮೋಹನ ನಾನೇ ಆದರೆ ಜೀವನ ಸ್ವರ್ಗ ಎಂದಿತು ಒಳಗಿಂದೊಳಗೆ ಒಳ ಮನಸ್ಸು. ನಿನ್ನೊಂದಿಗೆ ಮುಂದೇನು ಮಾತನಾಡುವುದು ತಿಳಿಯದೇ ಆವಕ್ಕಾಗಿ ಮೈ ಮರೆತು ನಿಂತು ಬಿಟ್ಟೆ.

ಸಂದರ್ಶನ ತೆಗೆದುಕೊಳ್ಳುವವರಂತೆ ಏನೇನೋ ಪ್ರಶ್ನೆ ಕೇಳುತ್ತಲೇ ಇದ್ದೆ. ಅದಾಗಲೇ ನಿನ್ನ ಒಲವಿನ ಗುಂಗಲ್ಲಿ ತೇಲುತ್ತಿದ್ದ ನಾನು ಏನೇನೋ ತೊದಲಿದೆ. ಮುಂದಿನ ವರ್ಷವೂ ಚಿನ್ನದ ಪದಕಗಳು ನಿಮ್ಮತ್ತ ಅರಸಿ ಬರಲಿ ಎಂದು ಶುಭ ಹಾರೈಸಿ, ಮತ್ತೊಮ್ಮೆ ಕೈ ಕುಲುಕಿದೆ.ಆಗ ನನಗರಿವಿಲ್ಲದಂತೆ ಹೃದಯ ಹಿಗ್ಗಿತು. ಎದೆಯಾಳದಿಂದ ಒಲವಿನ ಕರೆ ಕೇಳಿ ಬಂತು.
ಬಡತನ ಲೆಕ್ಕಿಸದೇ ಸಾಧನೆಗೈದ ನೀನು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುವೆ ಎಂದು ಹುರುದುಂಬಿಸಿದೆ. ಪರಸ್ಪರ ಪರಿಚಯವಾದದ್ದು ಖುಷಿ ತಂತು ಎಂದೆ ನೀನು.

ನನಗಾಗಿ ಹಗಲಿರುಳು ಶ್ರಮಿಸುವ ಹೆತ್ತವರನ್ನು ಸುಖದಲ್ಲಿಡುವುದೊಂದೇ ಆಸೆ ಎಂದೆ. ಶಿಕ್ಷಣಕ್ಕೆ ಹಣದ ಸಹಾಯ ಬೇಕೆಂದರೆ ಕೇಳಲು ಹಿಂಜರಿಯದಿರು ಎಂಬ ನಿನ್ನ ಮನದಾಳದ ನೆರವಿನ ಮಾತು ಆನಂದ ಬಾಷ್ಪ ಹರಿಸಿತು. ನಿನ್ನ ಸ್ನೇಹ ಪರ ಗುಣದಿಂದ ಬಹು ಬೇಗ ಆಪ್ತತೆ ಬೆಳೆಯಿತು. ಬರಬರುತ್ತ ದಿನಕ್ಕೊಮ್ಮೆ ನಿನ್ನ ಕಂಡು ನಾಲ್ಕು ಮಾತನಾಡದಿದ್ದರೆ ಸಮಾಧಾನ ಆಗುತ್ತಿರಲಿಲ್ಲ.ಹಣಕ್ಕಾಗಿ ಬಾಯ್ಬಿಟ್ಟು ಕೇಳುವುದಕ್ಕೆ ಸಂಕೋಚ ಪಡುತ್ತಿದ್ದ ನನ್ನನ್ನು ನಿಮ್ಮ ತಂದೆ ಮುಂದೆ ನಿಲ್ಲಿಸಿ ಅಭಿಮಾನದಿಂದ ಸಹಾಯ ಸಹಕಾರ ನೀಡುವಂತೆ ಕೋರಿದೆ.

ದೂಸರಾ ಮಾತಿಲ್ಲದೇ ಉನ್ನತ ಶಿಕ್ಷಣಕ್ಕೆ ಬೇಕಾದ ಖರ್ಚೆಲ್ಲವೂ ನನ್ನದೇ ಎಂದರು. ಮುಂದೆ ನೌಕರಿ ಸಿಕ್ಕ ಮೇಲೆ ನಿಮ್ಮ ಹಣ ಚುಕ್ತಾ ಮಾಡುವೆ ಎಂದಾಗ ನಸುನಕ್ಕು ಆಶೀರ್ವದಿಸಿದ್ದರು. ಆನಂದವೂ ಆಯಿತು. ಸಂಕೋಚವೂ ಆಯಿತು. ನಿನ್ನಪ್ಪ ನೀಡಿದ ಸಕಾಲದ ಹಣದಿಂದ ನಾನು ಪಿಜಿ ಶಿಕ್ಷಣ ಮುಗಿಸುವಂತಾಯಿತು. ನಿನ್ನಾಸೆಯಂತೆ ಆರು ಚಿನ್ನದ ಪದಕಗಳನ್ನು ಭೇಟಿಯಾಡಿದ ನಿನ್ನ ನೆಚ್ಚಿನ ಹುಡುಗನಾದೆ.
ನೀಳವಾದ ಜಡೆಗೆ ಆಗ ತಾನೆ ಬಿರಿದ ಸಂಪಿಗೆ ಮುಡಿದು ಕೈಯಲ್ಲಿ ಘಲ್ ಘಲ್ ಸದ್ದು ಮಾಡುವ ಬಳೆಗಳ ತೊಟ್ಟು ಸಣ್ಣನೆಯ ಬಂಗಾರ ಜರಿಯ ಕುಪ್ಪಸಕ್ಕೊಪ್ಪುವ ಕಡುಗಪ್ಪು ಸೀರೆಯನ್ನುಟ್ಟು ಆ ಸಂಜೆ ನೀ ನನ್ನೆದರು ನಿಂತಾಗ ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಅಚಾನಕ್ಕಾಗಿ ನಿನ್ನ ಕಿರುಬೆರಳು ನನಗೆ ತಾಗಿದಾಗ ಅವ್ಯಕ್ತ ಸಂತಸ ಮನ ತುಂಬಿತು. ಅರೆ ಕ್ಷಣ ಮಾತೆಲ್ಲಾ ಮೂಕವಾಗಿ ಹಿತಭಾವ ಎದೆಯ ತಂತಿಯನ್ನು ನುಡಿಸಿತು. ಪ್ರಾಯದ ದಿನಗಳನ್ನು ಹೀಗೆ ಕಳೆದುಕೊಂಡರೇನು ಚೆಂದ? ಮೈಗೆಲ್ಲ ಪುಳಕದ ಭಾವ ಹೆಚ್ಚಿಸುವ ನಿನ್ನ ಸನಿಹ ಬೇಕೆನಿಸುತಿದೆ ಈ ಜೀವಕೆ. ನಿನ್ನ ಸಿಹಿ ಕೆಂದುಟಿಯ ಹೋಳಿಗೆಯ ಸವಿಯುವ ಆಸೆಯಾಗಿದೆ ಎನ್ನುತ್ತ ನಿನ್ನ ಕಿವಿಯನ್ನು ಕಿರಿದಾಗಿ ಕಚ್ಚಿದೆ.

ಆಗತಾನೆ ಹಿತವಾಗಿ ಬೆಳದಿಂಗಳು ಹರಡುತ್ತಿದ್ದ ಚಂದ್ರ ನಮ್ಮ ತುಂಟಾಟದ ಸೊಬಗನ್ನು ಮೋಡದ ಮರೆಯಲ್ಲಿ ನಿಂತು ನೋಡಿ ನಕ್ಕಂತೆನಿಸುತ್ತಿದೆ ಎಂದಾಗಲೂ ನೀನು ಮೌನ ಮುದ್ರೆಯನ್ನು ಬಿಚ್ಚಲಿಲ್ಲ. ಸುಕೋಮಲವಾದ ತೋಳುಗಳಿಂದ ನನ್ನ ಕೊರಳನ್ನು ಹಾವಿನಂತೆ ಸುತ್ತಿ ತುಂಬುಗಣ್ಣುಗಳಿಂದ ನೋಡಿ ಬೊಗಸೆಯಲ್ಲಿ ನನ್ನ ಮುಖವನ್ನು ಹಿಡಿದು, ನಿನ್ನ ಮುಖ ಅರ್ಧ ವಾರೆ ಮಾಡಿ, ಅರ್ಧ ಕಣ್ರೆಪ್ಪೆ ಮುಚ್ಚಿ ತುಟಿಗೆ ತುಟಿ ಸೇರಿಸಿದೆ. ಮೂರು ಗಂಟು ಹಾಕಿದ ಮೇಲೂ ಬಿಟ್ಟೂ ಬಿಡದೇ ಹೀಗೇ ಸಿಹಿ ನೀಡುವೆಯಾ? ಎಂದು ಸ್ತಂಭೀಭೂತನಾಗಿ ಉದ್ಗರಿಸಿದೆ. ಪ್ರತಿ ರಾತ್ರಿ ದೀಪ ಆರಿಸಿ ಆಡುವ ಆಟಕೆಲ್ಲ ನನ್ನೊಪ್ಪಿಗೆಯಿದೆ ಆದರೆ ಈಗಲ್ಲ. ನನ್ನಪ್ಪನ ಒಪ್ಪಿಗೆಯಿಂದ ನನ್ನ ಕೈ ನೀ ಹಿಡಿದಾಗ ಎಂದು ನಾಚಿ ಓಡಿದವಳು ಮತ್ತೆ ಕೈಗೆ ಸಿಕ್ಕಿಲ್ಲ. ಸೂಜಿ ಮೊನೆ ತಾಗಿದರೂ ನೋಯುವದೆಂದು ಕಾಪಾಡಿದ ಸುರಸುಂದರಿ ನೀನು.
ನಿನ್ನಪ್ಪನಿಂದ ಮಾಂಗಲ್ಯ ಧಾರಣೆಗೆ ಒಪ್ಪಿಗೆ ಪಡೆದಿರುವೆ. ದಾಳಿಂಬೆ ಬೀಜದಂತೆ ಹಲ್ಲಿರುವ ಪುಟ್ಟದಾದ ಗುಲಾಬಿ ಎಸಳಿನಂತಿರುವ ತುಟಿ ಹೊಂದಿದ ಚೆಲುವಾದ ಮುದ್ದಾದ ನಿನ್ನಂತೆ ಇರುವ ವಂಶದ ಕುಡಿಯನ್ನು ನಿನ್ನ ಮಡಿಲಲಿಡಲು ಕಾದಿರುವೆ. ಬೇಗ ಬಂದು ಸಹಕರಿಸು ಮೋಹಿನಿ
ಇಂತಿ ನಿನ್ನ ಪ್ರಿಯ ಮೋಹನ


ಜಯಶ್ರೀ.ಜೆ. ಅಬ್ಬಿಗೇರಿ

One thought on “ಚೆಲುವಾದ ಮುದ್ದಾದ ನಿನ್ನ ಜಯಶ್ರೀ.ಜೆ. ಅಬ್ಬಿಗೇರಿ

Leave a Reply

Back To Top