ಕಾವ್ಯ ಸಂಗಾತಿ
ಡಾ.ಕೆ.ಎಸ್.ಗಂಗಾಧರ
ಯಾರಿಗೆ ಬೇಕು ಯುದ್ಧ
ಯುದ್ಧ ಯುದ್ಧ; ಎಲ್ಲಿ ನೋಡಿದರೂ ಯುದ್ಧ
ಪರಸ್ಪರ ಪರಿಚಯವಿಲ್ಲ;ಇಲ್ಲವೇ ಇಲ್ಲ ದ್ವೇಷ.
ಆದರೂ,
ಅವ ಇವನನ್ನು ಇವ ಅವನನ್ನು
ಕೊಲ್ಲುತ್ತಾನೆ ಗುಂಡಿನ ಮಳೆಗರೆದು.
ಅಪರಿಚಿತರ ಸಾವಿಗೆ ರಣಕೇಕೆ.
ಅವನ ಹೆಂಡತಿಯೂ ವಿಧವೆ;
ಇವನ ಮಕ್ಕಳೂ ಅನಾಥ.
ಹತರಾದ ಯುವಕರು;ಆಕ್ರಂದಿಸಿದ ಹಿರಿಯರು.
ನಾಲ್ಕು ದಿನದ ಬದುಕಿಗೆ ಕೊಳ್ಳಿಯಿಟ್ಟು
ವಿನಾಶಕ್ಕೆ ನೂಕುವ ಯುದ್ಧ ಯಾರಿಗೆ ಬೇಕು.
ವೈರತ್ವ ತುಂಬಿದ ಐಲು ನಾಯಕರು
ಏಳು ಸುತ್ತಿನ ಕೋಟೆಯಲವಿತು ರಕ್ಷಣಾ ವ್ಯೂಹದಲಿ
ಮೋಜು ಮಾಡುತ್ತಾ ಆಜ್ಞಿಸುತ್ತಾ ಕನಲುವ ದೊರೆಗಳು.
ರಣರಂಗಕ್ಕೆ ಕಾಲಿಡುವ ಗುಂಡಿಗೆಯಿಲ್ಲ;
ರಾಜಪರಿವಾರಕ್ಕೆ ಯುದ್ಧದಿಂದ ವಿನಾಯಿತಿ.
ಪ್ರಜೆಗಳಿಗೆ ಮಾತ್ರ ಯುದ್ಧ ಕಡ್ಡಾಯವೆಂಬ ರಾಜಾಜ್ಞೆ.
ಸರ್ವಾಧಿಕಾರಿಯ ಫಲಾಯನದ ವಿಮಾನ ಸದಾ ಸಿದ್ದ,
ಧನಕನಕಗಳ ಥೈಲಿಯ ಸಮೇತ.
ಕೆಲವರ ವಿಲಕ್ಷಣ ಮತಿಯ ಕಲರವದಿಂದ
ದೇಶ ರಣರಂಗವಾಗಿಸುವ ಯುದ್ಧ ಯಾರಿಗೆ ಬೇಕು.
ಅಲ್ಲಿ ಯುದ್ಧ; ಇಲ್ಲಿ ಅಂತರ್ಯುದ್ಧ.
ಒಂದು ಕಡೆ ರಾಮನಾಮ ಸ್ಮರಣೆ; ಅವರಿಗೆ ಸಮಯವಿಲ್ಲ.
ಇನ್ನೊಂದೆಡೆ ಭರವಸೆಗಳ ಮಹಾಪೂರ;ಇವರಿಗೆ ಅರಿವಿಲ್ಲ.
ಗರಿಗರಿ ನೋಟುಗಳ ಪೇರಣೆಗೆ ಮಾತ್ರ ಇಬ್ಬರಿಗೂ ಭೇದವಿಲ್ಲ.
ದೋಷಾರೋಪಣೆಯ ಆಟದಲಿ
ದೊಂಬಿ ಸ್ಫೋಟ ಆಸ್ಫೋಟಗಳ ಕೇಳುವರಿಲ್ಲ.
ಮಣಿಪುರದ ಮಹಿಳೆಯರಿಗೆ ಬೆತ್ತಲೆ ಭಾಗ್ಯ.
ಇಳೆ ನಾಚಿಸುವ ವಿಕೃತಿಯ ಪುರುಷನೆಂಬ ಅಯೋಗ್ಯ.
ಬುದ್ಧ ಬಸವ ಗಾಂಧಿ; ಈಗ ಸ್ಮಾರಕಗಳಲ್ಲಿ ಬಂಧಿ.
ದಾಳಿ ದಂಗೆ ಸಂಘರ್ಷಗಳಿಗೆ ಬಲಿಯಾದ
ಹುತಾತ್ಮರ ಚಿತೆಯ ಮೇಲೆ ದೇಶಕಟ್ಟುವ
ನಿತ್ಯ ಗೋಳಿನ ಅಂತರ್ಯುದ್ಧ ಯಾರಿಗೆ ಬೇಕು.
ಯುದ್ಧವೂ ಬೇಡ,ಅಂತರ್ಯುದ್ಧವೂ ಬೇಡ.
ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ ಸಾಕು.
ಡಾ.ಕೆ.ಎಸ್.ಗಂಗಾಧರ
Conveys lot of meaning
ಚಂದದ ಪದ್ಯ
ಸುಂದರವಾದ ಕವನ