ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಜಾತಿ ಮತಗಳ ಗೋಳಿನಲಿ ಸಿಲುಕಿ ಮುಳುಗಬೇಡ ತಿಳಿದುಕೋ ನೀನು
ಪ್ರೀತಿ ಮಮತೆ ಸ್ನೇಹಗಳ ಬಾಂಧವ್ಯ ಬಾಳಿನಲಿ ಮರೆಯಬೇಡ ತಿಳಿದುಕೋ ನೀನು
ಜನಿಸಿ ಬರುವಾಗ ಯಾವ ಕುಲದ ಮುದ್ರೆ ಇದಯೇನು ನಿನಗೆ
ಕುರುಡು ನಂಬಿಕೆಯೊಳಗೆ ಎಂದೂ ಇರುವುದಬೇಡ ತಿಳಿದುಕೋ ನೀನು
ಸೃಷ್ಟಿಕರ್ತನ ಅಪಾರ ಕುಲುಮೆಯೊಳು ನಾವೆಲ್ಲಾ ಮೂಡಿ ಬಂದಿಹೆವು
ಮನುಜ ಮತದ ನಂಬುಗೆಯಲಿ ಭೇದಭಾವದ ಮಾತು ನುಡಿಯಬೇಡ ತಿಳಿದುಕೋ ನೀನು
ದೇಹದಲಿ ಹರಿವ ರಕ್ತ ಮಿಡಿವ ಹೃದಯ ಎಲ್ಲರಲಿ ಒಂದೇ ಇಹುದು
ತೊಗಲು ಹೊದಿಕೆಯ ಬಣ್ಣಕೆ ಮರುಳಾಗಿ ಮೋಸಹೋಗಬೇಡ ತಿಳಿದುಕೋ ನೀನು
ಅಂತರಂಗದ ಭಾವಾತ್ಮ ಪರಿಶುದ್ಧ ಸ್ಫಟಿಕದಂತೆ ಹೊಳೆಯುತಿರಲಿ
ಮನದೊಳಗೆ ಬೇಗಂ ಅಶಾಂತಿ ಭ್ರಾಂತಿ ಭ್ರಮೆಯ ದುಗುಡಬೇಡ ತಿಳಿದುಕೋ ನೀನು.
ಹಮೀದಾಬೇಗಂ ದೇಸಾಯಿ
ಚಿಂತನಾರ್ಹ ಗಝಲ್, ಅರ್ಥಪೂರ್ಣವಾಗಿ ಮೂಡಿಬಂದಿದೆ.
ಸ್ಪಂದನೆಗೆ ಧನ್ಯವಾದಗಳು ತಮಗೆ.
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ .