ಕಾವ್ಯಯಾನ

ನೀರಿಗೇತಕೆ ಬಣ್ಣವಿಲ್ಲ?

close-up photography of droplets

ಮಹಾಂತೇಶ ಮಾಗನೂರ

ಅರೆ ಯಾರು ಹೇಳಿದರು
ನೀರಿಗೆ ಬಣ್ಣವಿಲ್ಲವೆಂದು…
ನೋಡಿಲ್ಲಿ ಕವಿತೆ ಸಾರಿ ಹೇಳುತಿದೆ
ನೀರಿಗೂ ತರತರದ ಬಣ್ಣಗಳುಂಟು ಎಂದು

ನೀರಿಗೇತಕೆ ಬಣ್ಣವಿಲ್ಲ?
ಧುಮ್ಮಿಕ್ಕುವ ಜಲಪಾತದಿ
ಹಾಲಿನಂತಹ ಬಿಳುಪು
ಸೂರ್ಯಾಸ್ತದ ಸಮಯದಲ್ಲಿ
ಸಾಗರದಿ ನಸುಗೆಂಪು

ನೀರಿಗೇತಕೆ ಬಣ್ಣವಿಲ್ಲ?
ಆಗಸದಿಂದ ನೋಡಿದೊಡೆ
ನೀರೆಲ್ಲ ತಿಳಿನೀಲಿ
ಕಾನನದಿ ಹರಿಯುವ
ಜುಳು ಜುಳು ನೀರು
ಪ್ರಕೃತಿಯ ಬಣ್ಣದಲಿ

ನೀರಿಗೇತಕೆ ಬಣ್ಣವಿಲ್ಲ?
ಬೆಟ್ಟಗಳಲಿ ಸುಳಿ ಸುಳಿದಾಡಿ
ಹರಿಯುವುದು ಝರಿಯಾಗಿ,ಗಿಡ
ಮರಗಳಿಗೆ ನೀಡುತ ಉಸಿರು
ಕಾಣುವದು ಹಸಿರು ಹಸಿರು!

ನೀರಿಗೇತಕೆ ಬಣ್ಣವಿಲ್ಲ?
ಆಕಾಶದಿಂದ ಧರೆಗಿಳಿಯುತ
ಸೂರ್ಯರಶ್ಮಿಯ ಚುಂಬಿಸಿ
ಕಾಣುವುದಿಲ್ಲವೇ ಬಣ್ಣ ಬಣ್ಣದ
ಮೋಹಕ ಕಾಮನಬಿಲ್ಲು

ನೀರಿಗೇತಕೆ ಬಣ್ಣವಿಲ್ಲ?
ರೈತನೊಂದಿಗೆ ಬೆರೆತು
ಗದ್ದೆಯಲ್ಲಿ ಹರಿದಾಡಿ,
ಪೈರಿನೊಂದಿಗೆ ಸೇರಿ
ಹಚ್ಚ ಹಸಿರಾಗಿ ಹೊಮ್ಮುವುದು

ನೀರಿಗೇತಕೆ ಬಣ್ಣವಿಲ್ಲ?
ಆಧುನಿಕತೆಯ ಭರದಲ್ಲಿ
ಕಾರ್ಖಾನೆಗಳು ಉಗುಳುವ
ವಿಷ ಗಾಳಿಗೆ ಬಿಗಿದಪ್ಪಿ
ಸುಟ್ಟು ಕಪ್ಪಾದ ನೀರು

ನೀರಿಗೇತಕೆ ಬಣ್ಣವಿಲ್ಲ?
ನಗರೀಕರಣದ ಕೊಳಕಿನೊಂದಿಗೆ
ಮೋರೆಯ ಸೇರಿ, ಹಳಸಿ
ಪಡೆಯುವದಿಲ್ಲವೆ ಬೇಡದ ಬಣ್ಣ

ನಿಜ, ನೀರು ವರ್ಣರಹಿತ
ಕಾಪಾಡಿದರೆ ಪರಿಸರ,
ಸಾಧ್ಯ ಸುಂದರ ಬಣ್ಣವೂ ಸಹಿತ;
ತಪ್ಪಿದರೆ, ಬಯಲಾಗುವದು ಶುದ್ಧ
ನೀರಿನ ಅಭಾವದ ಬಣ್ಣ!

******

Leave a Reply

Back To Top