ಅಮರಾವತಿ ಹಿರೇಮಠ-” ಪ್ರೀತಿ ಎಂದರೇನು” ?

ಲೇಖನ

ಅಮರಾವತಿ ಹಿರೇಮಠ-

“ಪ್ರೀತಿ ಎಂದರೇನು”?

” ಪ್ರೀತಿ ಎಂದರೇನು” ? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ತುಂಬಾ ಕಷ್ಟಕರವಾಗಿದೆ. ಏಕೆಂದರೆ , ಇಂದಿನ ಯುವ ಪೀಳಿಗೆ ತಾತ್ಕಾಲಿಕ ಪ್ರೀತಿಗೆ ಮರುಳಾಗಿ ಪ್ರೀತಿಯ ಜಾಡಿನಲ್ಲಿ  ಸೆರೆಯಾಗಿ ತಮ್ಮ ಜೀವ ಜೀವನಗಳು ದುರಂತಕ್ಕೀಡಾದ ಘಟನೆಗಳು ದಿನ ನಿತ್ಯವೂ ನೋಡುತ್ತಿದ್ದೇವೆ ಕೇಳುತ್ತಿದ್ದೇವೆ ಮತ್ತು ಪ್ರತಿ ಮನೆಯಲ್ಲೂ ನಡೆಯುವ ಘಟನೆಗಳು ಬಂಧನದಲ್ಲಿ ತಲ್ಲಣ ಉಂಟುಮಾಡಿದೆ.ಪವಿತ್ರವಾದ ಪ್ರೀತಿ ಮನಸ್ಸಿನ ಜೊತೆಗೆ ಬೆಸೆದು ಹೋಗುವ ಅಗೋಚರ ಶಕ್ತಿಯ ಮಿಲನವಾಗಿ ಬಾಂಧವ್ಯ ಬೆಳೆಸಲು ಕಾರಣವಾಗುತ್ತದೆ.
ಪ್ರೀತಿ ಅಂದ್ರೆ ಬರಿ ಹುಡುಗ ಹುಡುಗಿಯ ಪ್ರೀತಿ ಅಲ್ಲ . ತಂದೆ ತಾಯಿಯ ಪ್ರೀತಿ, ಅಜ್ಜ ಅಜ್ಜಿಯ ಪ್ರೀತಿ,ಅಣ್ಣಾ ತಂಗಿ, ಅಕ್ಕ ತಮ್ಮ ,ಅಣ್ಣ ತಮ್ಮಂದಿರು,ಅಕ್ಕ ತಂಗಿಯರು ಮತ್ತು ಕರುಳಿನ ಸಂಬಂಧ ಹಾಗೂ ಸ್ನೇಹ ಸಂಬಂಧದ ಪ್ರೀತಿ ಹೃದಯದಲ್ಲಿ ಬೆರೆತಾಗ ಮಾತ್ರ ಅದಕ್ಕೊಂದು ಅರ್ಥ.
ಆದರೆ ಇಂದಿನ ಮಕ್ಕಳಲ್ಲಿ ಕಂಡುಬರುವ ಪ್ರೀತಿ ಆಕರ್ಷಣೆ ಮತ್ತು ತೋರುವಿಕೆ ಆಗಿರುವುದು.
ಪ್ರೀತಿ ಎಂದರೆ ದೇಹ ಹಂಚಿಕೊಳ್ಳುವುದು ಅಲ್ಲರಿ. ಪರಿಶುದ್ಧವಾದ ಮನಸ್ಸು ಬೇಕು.
ಸಹನೆ ತಾಳ್ಮೆ ತ್ಯಾಗ ಬಲಿದಾನವೇ ಪ್ರೀತಿಯ ಕೊಡುಗೆ.

ಒಬ್ಬ ತಂದೆ ತನ್ನ ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾನೆಂದರೆ ಅದು ಕೇವಲ ಜವಾಬ್ದಾರಿ ಅಲ್ಲ . ಕರುಳಿನ ಪ್ರೀತಿ ತುಂಬಿರುತ್ತದೆ.
ಒಬ್ಬ ತಾಯಿ ಒಂಬತ್ತು ತಿಂಗಳು ಹೊತ್ತು ಹೆತ್ತು ತನ್ನ ನೋವೆಲ್ಲಾ ಮರೆಮಾಡಿ ಕಠೋರ ಸತ್ಯವನ್ನು ಮುಚ್ಚಿಟ್ಟು ನಗೆಯ ಮುಖವಾಡ ಧರಿಸಿ ಮಕ್ಕಳನ್ನೂ ಬೆಳೆಸುವುದು ತನ್ನ ಮುಪ್ಪಾವಸ್ತೆಯಲ್ಲಿ  ಆಸರೆ ಆಗಲಿಯಂತಲ್ಲ್ ಅಥವಾ ಕರ್ತವ್ಯವಾಗಿದೆ ಅಂತಲ್ಲ್  ಕರುಳಿನ ಕುಡಿಯ ಪ್ರೀತಿಗಾಗಿ ತನ್ನೆಲ್ಲಾ ಆಸೆ ಆಮಿಷಗಳಿಗೆ ಒಳಗಾಗದೆ ಸರ್ವಸ್ವವನ್ನು ಅರ್ಪಿಸಿ ಬಾಳುತ್ತಾಳೆಂದರೆ ಅದು ನಿಷ್ಕಲ್ಮಶ ಪ್ರೀತಿ ರೀ . ಇಂತಹ ಪವಿತ್ರವಾದ ಪ್ರೀತಿಯನ್ನು ಬೀದಿ ಬೀದಿ ಛಾಪ್ ಆಗುತ್ತಿದೆ.

ಹಿಂದೆ ಅವಿಭಕ್ತ ಕುಟುಂಬದಲ್ಲಿ ಏನಿಲ್ಲವೆಂದರೂ ಸುಮಾರು 50 ರಿಂದ 60 ಜನರು ಕೂಡಿ ಬಾಳುತ್ತಿದ್ದರು ಅಂದ್ರೆ ಅಲ್ಲಿ ಯಾವುದೇ ಸ್ವಾರ್ಥ ಇರುತ್ತಿರಲಿಲ್ಲ. ಒಬ್ಬರಿಗೊಬ್ಬರು ಸ್ಪಂದಿಸುವ ಮನೋಭಾವ ಎಲ್ಲರಲ್ಲೂ ಅನ್ಯೋನ್ಯತೆ ಇರುತ್ತಿತ್ತು. ಕುಟುಂಬದ ಹಿರಿಯರು ಆ ಮನೆ ಕಾಪಾಡಿಕೊಂಡು ಹೋಗುವುದು ಎಂದರೆ ಬರೀ ಹೊಣೆಯಾಗಿರುತ್ತಿರಲಿಲ್ಲ . ಪ್ರೀತಿಯಾಗಿತ್ತು . ಎಲ್ಲರೂ ಸುಖವಾಗಿ ಇರಬೇಕೆಂದು ತಮ್ಮ ತಮ್ಮಲ್ಲಿಯ ಸಣ್ಣ ಪುಟ್ಟ ಮನಸ್ತಾಪಗಳು ಬಂದರು ಅವುಗಳು ಬಯಲಾಗದಂತೆ ರಹಸ್ಯವಾಗಿ ಇಟ್ಟು ಕೊಂಡು, ಎಲ್ಲರ ಜೊತೆಗೆ ಪ್ರೀತಿಯಿಂದ ಹೊಂದಾಣಿಕೆ ಮಾಡಿಕೊಂಡು ಬಾಳುತ್ತಿದ್ದರು.” ಪ್ರೀತಿ ಇರ್ಲಿಲ್ಲ ಅಂದ್ರೆ ಒಂದಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ.” ಇಂತಹ ಅಮೂಲ್ಯವಾದ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೆ, ಕೇವಲ ತಾತ್ಕಾಲಿಕ ಪ್ರೀತಿ ಬಯಸುತ್ತಿದ್ದಾರೆ.

ಪ್ರೀತಿಸಿ ಮದುವೆ ಆಗಿಯೂ ಬದುಕಿನಲ್ಲಿ ಸಾಮರಸ್ಯ ಇಲ್ಲದಂತಾಗಿದೆ. ಏಕೆಂದರೆ ಹೊಂದಾಣಿಕೆ ಕಡಿಮೆಯಾಗುತ್ತಿದೆ. ನಾ  ಮೇಲು ನೀ ಮೇಲು ಎಂಬ ಮನೋಭಾವ ಎಲ್ಲರಲ್ಲೂ ತುಂಬಿದೆ. ಹೀಗಾಗಿ ಗಂಡ ಹೆಂಡತಿ ಇಬ್ಬರೆ ಇದ್ದರು , ದಿನ ನಿತ್ಯವೂ ಜಗಳ ನಡೆಯುತ್ತಿದೆ. “ಗಂಡ ತನ್ನ ಮಾತು ಕೇಳಲಿಲ್ಲ ಎಂದರೆ ಸಾಕು ಅವನು ನನ್ನ ಮೇಲೆ ಪ್ರೀತಿ ಇಲ್ಲ ಎಂದು. “
” ಹೆಂಡತಿ ತನ್ನ ಅನುಕೂಲಕ್ಕೆ ತಕ್ಕ ಹಾಗೆ ನಡೆಯಲಿಲ್ಲ ಎಂದರೆ , ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ ಎಂದು.”
ಒಬ್ಬರ ಮೇಲೆ ಒಬ್ಬರು ಸಂಶಯ ಪಡುವುದು ಹೀಗಾದರೆ ಹೇಗೆ ದಾಂಪತ್ಯದಲ್ಲಿ ಪ್ರೀತಿಯಿಂದ ಇರಲು ಸಾಧ್ಯ ಆಗುತ್ತದೆ.
ಹಿಂದೆ ಹೀಗಿರಲಿಲ್ಲ ..

ಮದುವೆ ಮಾಡಿ ಕೊಟ್ಟ ಮೇಲೆ ಹೆಣ್ಣು ತನ್ನ ತವರಿನ ಹೆಸರು ಉಳಿಸಬೇಕು ಮತ್ತು ತಂದೆ ತಾಯಿ ತನ್ನಿಂದ ಅವರು ತಲೆ ತಗ್ಗಿಸಬಾರದು ಎಂದು ತನಗೆ ಎಷ್ಟೇ ಕಷ್ಟ ಆದರೂ ಸರಿ ಎಲ್ಲರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಳು.
ಅವಳ ಸಹನೆ ತಾಳ್ಮೆ ತ್ಯಾಗದ ಪ್ರೀತಿಯೇ ಅವಳನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತಿತ್ತು .
ಎರಡು ಮನೆತನದ ಮಾನ ಮರ್ಯಾದೆ ಉಳಿಸಿಕೊಂಡು ಬರುವುದಕ್ಕೆ ಅವರಲ್ಲಿರುವ ನಿರ್ಮಲವಾದ ಪ್ರೀತಿ . ಇಂತಹ ಪವಿತ್ರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ವಿಚ್ಛೇದನ ಪಡೆಯುತ್ತಿವೆ .

ಈ ಪ್ರೀತಿ ಎಲ್ಲಿ ಸೋರಿಕೆಯಾಗುತ್ತಿದೆ .
ಎಲ್ಲಿ ಎಂದರೆ ?ನಾವು ಕೊಡುವ ಸಂಸ್ಕಾರದಲ್ಲಿ . ಮತ್ತು ಅತಿ ಮುದ್ದಾಗಿ ಬೆಳೆಸುವುದರಲ್ಲಿ . ನಮ್ಮಗಳ ಸ್ವಾರ್ಥದಲ್ಲಿ. ನೀನು ಯಾರಿಗೇನು ಕಡಿಮೆ ಇಲ್ಲ ಎಂದು ಅವರುಗಳ ತಲೆಯಲ್ಲಿ ತುಂಬುವುದರಲ್ಲಿ.

ಕಷ್ಟ ಅಂದ್ರೆ ಏನು ಅಂತ ಗೊತ್ತಿರದ ಹಾಗೆ ಬೆಳೆಸುವಲ್ಲಿ.
ಅನುಭವ ಇಲ್ಲದ ಡಿಗ್ರಿ ಕೊಡೆಸುವುದರಲ್ಲಿ .ನಡೆ ನುಡಿಗಳಲ್ಲಿ ತಿದ್ದಿದ ಹಾಗೆ ಬಿಡುವುದರಲ್ಲಿ. ಹೀಗಾಗಿ ನಾವುಗಳೇ ಎಡವಿದ್ದೇವೆ .
ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪವಿತ್ರವಾದ ಮಿಲನ್  ಇಂದು ರೋಡ್ ರೋಡಗಳಲ್ಲಿ ನಡೆಯುತ್ತಿದೆ.
ಹುಡುಗ ಹುಡುಗಿ ರಾಜಾರೋಷವಾಗಿ ಅರ್ಥವಿಲ್ಲದ ಪ್ರೀತಿ ಮಾಡುತ್ತಿದ್ದಾರೆ.
ಇದುವೇ ನಿಜವಾದ ಪ್ರೀತಿ ಎಂದು ತಿಳಿದು ಕೊಂಡಿರುವ ಅವಿವೇಕಿಗಳು.
ಇದರಿಂದಾಗಿ ಮನೆ ಮನೆಗಳಲ್ಲಿ ತಲೆ ತಗ್ಗಿಸುವಂತಾಗಿದೆ.
ಇತ್ತೀಚೆಗೆ ಯೂಟ್ಯೂಬ್ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಕೆಲವು ದೃಶ್ಯಗಳು ಮನುಷ್ಯರನ್ನು ದಾರಿ ತಪ್ಪಿಸುತ್ತಿವೆ.

ಹೀಗಾಗಿ ಪ್ರೀತಿ ಪ್ರೇಮ ಎಂಬ ಬಲೆಗೆ ಬಿದ್ದು ಬದುಕಿನ ಮೌಲ್ಯವೇ ಕಳೆದು ಕೊಂಡಿದೆ.
ದಯವಿಟ್ಟು ಪ್ರತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ಪ್ರೀತಿ ಎಂದರೆ ಅದೊಂದು ಅಗೋಚರ ಶಕ್ತಿ.ಕಣ್ಣಿಗೆ ಕಾಣದ ನಿಗೂಢ ಮನಸ್ಸನ್ನು ಸೆಳೆಯುವ ಪ್ರೀತಿಯೇ ದೇವರು.
ಎಂದು ತಿಳಿದು ಕೊಂಡು ಪ್ರೀತಿಗೆ ಅರ್ಥ ಕೊಟ್ಟು ಸಂಬಂಧಗಳು ಉಳಿಸಿ ಕೊಂಡು ಹೋಗೋಣ.
ಕೈಯಲ್ಲಿ ಗುಲಾಬಿ ಕೊಟ್ಟ ಮಾತ್ರಕ್ಕೆ ಪ್ರೀತಿ ಎನ್ನುವುದು ತಪ್ಪು.

ಅಂತರಾಳದಿಂದ ಬರುವ ನಿಜವಾದ ಪ್ರೀತಿ ತನಗಾಗಿ ಏನನ್ನೂ ಬಯಸದೆ ಇನ್ನೊಬ್ಬರಿಗಾಗಿ ಬದುಕುತ್ತದೆ.
ಎಲ್ಲವನ್ನೂ ಅರ್ಥ ಮಾಡಿಕೊಂಡು ಸಂಸ್ಕಾರ ಸಂಸ್ಕೃತಿಯಿಂದ ಬಾಳಿದರೆ ನಮ್ಮ ಬದುಕು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.


ಅಮರಾವತಿ ಹಿರೇಮಠ-

Leave a Reply

Back To Top