ಕಾವ್ಯಯಾನ

ತವರಿನ ಮುತ್ತು

Village Fair Painting by Sajila Garg

ರೇಮಾಸಂ
ಡಾ.ರೇಣುಕಾತಾಯಿ.ಸಂತಬಾ

ಮರೀಯಲಿ ಹ್ಯಾಂಗ ಮರೀ ಅಂದರ
ಅವ್ವನ ಅರಮನೆಯ ಅಂತಃಪುರವ
ತವರಿನ ಗಂಜಿಯು ಅಮೃತದ ಕಲಶವು
ಅಕ್ಕರೆಯು ಅಚ್ಚಿನ ಬೆಲ್ಲವ ಮೆಲ್ಲದಂಗ//

ತವರಿನ ಉಡುಗೊರೆ ಆಗೇನಿ ನಾನು
ಅತ್ತೆಯ ಮನೆಗೆ ಮುತ್ತಾಗಿ ಬಂದೇನಿ
ಕಟ್ಟ್ಯಾರ ಕಂಕಣವ ಕೂಡು ಬಾಳ್ವೆಗೆ
ಹಾದಿಗೆ ಹರವ್ಯಾರ ಹವಳದ ಹೂವ//

ತಾಯಂಗ ತಡದೇನ ಕಂಟಕದ ಕದನವ
ಅಪ್ಪನಂಗ ತಪ್ಪಿಲ್ಲದ ಹೆಜ್ಜೆನ ಇಟ್ಟೇನಿ
ನುಡಿದಂಗ ನೇರ ನಡೆ ನಡದೇನಿ
ಮಾತನ್ಯಾಗ ಮಂದ್ಯಾಗೆಲ್ಲ ಹೌದಾಗೇನಿ//

ಬಂಗಾರದಂತ ನನ್ನ ಅಣ್ಣರ ತಮ್ಮರ
ಬಳುವಳಿಯಾಗಿ ಬಂದೇನಿ ಬಂಧುರದ/
ಬಳಗದಾಗೆಲ್ಲರ ಬಾಯಾಗ ಬೆಣ್ಣಿಯಾಗೇನಿ/
ಬಂದೇನಿ ಮುತ್ತಾಗಿ ಮಾಲೆಯ ಕಟ್ಟಲು//

ಹ್ಯಾಂಗರ ತೀರಿಸಲಿ ತವರಿನ ಋಣವ
ಅವ್ವ ಅಪ್ಪನ ಮಮತೆಯ ಬೆಳಕನ
ಅಣ್ಣ ತಮ್ಮರ ಒಲವಿನ ಹೊಳೆಯನು
ಸಾವಿರ ಜನುಮಕು ಋಣವ ತೀರಿಸಲಾರೆ//

*******

Leave a Reply

Back To Top