ಕಾವ್ಯಯಾನ

ಅಮುಕ್ತ ಅಮೃತಮತಿ

To Be A Woman Painting by Steve K

ಲಕ್ಷ್ಮೀ ಪಾಟೀಲ

ಅಂಗ ಸೌಷ್ಠವದ ಬಾಹ್ಯ ಸೌಂದರ್ಯ
ರಾಜ ವರ್ಚಸ್ಸು ವಜ್ರ ವೈಡೂರ್ಯ
ಭೋಗ ಭಾಗ್ಯಗಳ ನಿವಾಳಿಸಿ
ಅಂತರಂಗ ಬೇಟಕೆ ಮನವ ಬೀಳಿಸಿ
ಬಿಗಿ ಮೌನ ಮುರಿದು ಮಾತಾಗಲು ನಡೆದೆ
ಪಂಜರದ ಅರಗಿಳಿಗೆ ಮಾತು ಕಲಿಸಿದ್ದೂ ಮರೆತು,
ಕಾಡ ಕೋಗಿಲೆ ಕರೆಗೆ ವಸಂತ ಕೂಟಕೆ ನಡೆದೆ
ಬೇಟ ಕೂಟಕೆ ಮನವ ಮಿಡಿಸಿ
ಶರತ್ತುಗಳಿಲ್ಲದೆ ಪ್ರೀತಿ ಕೊಡಲು
ಮೈ ಬೆವರ ಬಸಿದು ಸೋನೆ ಸುಯ್ಯಲು
ಬಿಡುವಿಲ್ಲದೆ ನಡೆದೆ, ಭಾವ ಕೂಟಕೆನಡೆದೆ,,,

ಅಗ್ನಿ ದಿವ್ಯದ ದಾರಿಗೆ ಅಗ್ನಿ ಮಳೆಯಾದರೂ
ಸಾಕಿದ ಗಂಡಿನ ಕ್ರೌರ್ಯಕೆ ನಲುಗಿದೆ
ರಾಗ ಭಾವದೊಳು ಲಯವಾಗಲು ನಡೆದೆ
ಅಮೃತಧಾರೆ ಎದೆಗವಚಿ ನಡೆದೆ,,,

ಇಂಪಾದ ಕೊರಳ ಮೆದು ಬೆರಳ ಸ್ಪರ್ಶದಲಿ
ಪ್ರೀತಿ ಕಾಮನೆಗಳ ಕಟೆದಂತೆ ಭಗ್ನಶಿಲ್ಪ
ಕನಸುಗಳಿಗೆ ಅಮೃತ ಹನಿಸಿ
ಅರಮನೆಯ ಕಣ್ಣಕೆಂಪಿಗೆ ನಂಜೇರಿಸಿ
ಲೋಕದೆಲ್ಲೆಗೆ ವಿಷವಾಗಲು ನಡೆದೆ
ಸುರಂಗದಾರಿಯಲ್ಲಿ ಮಲ್ಲಿಗೆಮನವಾಗಿನಡೆದೆ
ಭಾವಮೇಳದಲಿ ನಾಟ್ಯವಾಡಲು ನಡೆದೆ
ಬಿಡುವಿಲ್ಲದೆ ನಡೆದೆ ಭಾವ ಕೂಟಕೆ ನಡೆದೆ,,,

ಅಂತರಂಗ ಅರಳಿಸಲು ಅಮೃತ
ನರಳಿಸಲದು ವಿಷ ಕಾಲಕರ್ಮವಿಧಿಗಳನ್ನು ಬೆರಗಾಗಿಸಿ ಷರಾ ಹೊಡೆದು ನಡೆದೆ
ವಿಷ ಮಥಿಸಿ ಕಕ್ಕಿಸಿ, ಎದೆಯಲ್ಲಿ ಇಳಿಸಿದರು
ಗುಂಡುಗಳ ಭಾರ, ನಿನ್ನ ಬೆತ್ತಲೆ ಬರೆದು ತಮ್ಮಬೆತ್ತಲೆ ಮರೆತು ,
ಯಶೋಧರನ ಯಶೋದುಂದುಭಿ ಹಾಡಿ
ನಿನ್ನ ಬೆಂತರ ಮಾಡಿದರು
ಅವರ ಗಂಡುಗಳಿಗಿಲ್ಲಿ ಮುಕ್ತಿಸಾಲು
ಈಗಲೂಸಂಕಟದಲಿ ಕುದಿವ ಅಮೃತಮತಿನೀನು,ಅತೃಪ್ತಪ್ರೇತಗಳುನಾವು

ಯಶೋಧರರ ಪರಮಾಧಿಕಾರ ದಾಟಲು
ಅಷ್ಟಾವಕ್ರರ ಅಸಹನೆ ಅಳಿಯಲು
ನಡದಲ್ಲೆಲ್ಲ ಅಹಂ ಮೂರ್ಖತೆಗೆ
ತಲೆ ತಿರುಗಿಸಿ ಬದುಕಿದ್ದೇವೆ ಅಮೃತಮತಿ
ನಾವೂ ನಿನ್ನಂತೆ ನಿನ್ನೊಳಗಿನ ಉಸಿರಂತೆ
ಅಷ್ಟಾವಕ್ರರ ಚಕ್ರಬಂಧ,
ಯಶೋದುಂಧುಭಿಗಳ ಷರಾ
ಎಲ್ಲ ಬಾಹುಗಳ ಬಿಗಿತದಲಿ ಹಣ್ಣಾದರೂ ನಿಂತಿದ್ದೇವೆ ಅಮೃತಮತಿ
ನಿನ್ನ ಮರೆಯದೆ !ನಿನ್ನ ಹೆಜ್ಜೆಗಳಲಿ
ನಮ್ಮ ಅಸ್ಮಿತೆಯ ಅಗೆಯಲು,,,

ಒಡೆಯ ಒಕ್ಕಲು, ಹೆಣ್ಣು ಗಂಡು
ಸುಂದರ ಕುರೂಪ, ನೀತಿ ನಿಷ್ಟುರಗಳ ಬೆಂಕಿಬಂಧ ನಡೆದಿದ್ದೇವೆ ದಾಟಲು
ನಮ್ಮ ದಾರಿಯ ಗುರಿಗೆ
ಶ್ರದ್ದೆಗಳ ತಳಕು ಕಟ್ಟಿದವರ ಕೈಗಿತ್ತು
ಗೌರವದ ಸೀರೆ ತಲೆಗೆ, ಪಾವಿತ್ರ್ಯದಕಲಶ
ಕೊಟ್ಟವರಿಗೇ ಎತ್ತಿಟ್ಟು, ಸೆರಗು ಸೀರೆಯಾಚೆ ನಗ್ನರಾಗಿದ್ದೇವೆ.
ಲಕ್ಶ್ಮಣರೇಖೆಗಳನ್ನು ದಾಟಿಯೇ ಬದುಕುವ ಹಮ್ಮಿಗೆ.
ನಾವೂ ನಡೆದಿದ್ದೇವೆ ಅಮೃತಮತಿ ನಮ್ಮದೇ ಹೆಜ್ಜೆಯ ನಡಿಗೆ,,,

ಪ್ರೀತಿಯ ಘಾತುಕವರಿತರೂ ಪ್ರಿತಿಸಿದೆ
ಆಳ ಅಳೆಯಲು ಪ್ರೀತಿಯ ಇಣುಕಿದೆ
ಆಳಕ್ಕಿಳಿದು ಒಂಟಿಯಾದರೂ ಪ್ರೀತಿಯ ತಬ್ಬಿದೆ ‘ಪ್ರೀತಿಗೆ ಸ್ವಾತಂತ್ರ್ಯವೇ ಪ್ರೀತಿ ಎಂದು ಸಾರಿದೆ
ಮುಕ್ತಿಗೆ ದೂರಾದೆ ನೆಲಕೆ ಹತ್ತಿರವಾದೆ ನೆಲದ ಘಮವಾಗಿ ಬಂಡಾಯದಕೂಗಾದೆ
ಹೆಣ್ಣುಗಳ ಸುಪ್ತಲೋಕಕೆ ಇಳಿದು ಈ ನೆಲದಲ್ಲೇ ಉಳಿವ ಪ್ರೀತಿಬೇರಾದೆ
ಮುಕ್ತದಾರಿಗೆ ಶಕ್ತರೂಪಿಣಿ
ಅಮುಕ್ತ ಅಮೃತಮತಿಯಾದೆ

********

                 

Leave a Reply

Back To Top