ಕಾವ್ಯಯಾನ

ಗಝಲ್

ಲಕ್ಷ್ಮಿ ದೊಡಮನಿ

ಮಹಾಮಾರಿಯ ಬಲಿ ಕಂಡು ಎದೆಗೆ ಬೆಂಕಿ ಇಟ್ಟಂತಾಗಿದೆ
ಎಲ್ಲರ ಕೈಮೀರುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ

ನನ್ನ ದೌರ್ಬಲ್ಯಗಳನ್ನು ಖಚಿತ ಪಡಿಸಿಕೊಂಡು ನನ್ನೊಂದಿಗೆ
ಕಣ್ಣುಮುಚ್ಚಾಲೆಯಾಡುತ್ತಿರುವೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ

ಹಳೆಯದಾದರೂ ಮರೆಯಾಗುತ್ತಿಲ್ಲ ಹೆಚ್ಚುತ್ತಿದೆ ನೋವು
ಮನ ನೆನಪಿಸುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ

ಅಂದಿನ ಅನ್ನವನ್ನು ಅಂದೇ ಗಳಿಸುವ ಜನ ನಾವು ಗೃಹಬಂಧನದಿ
ಹೊಟ್ಟೆ ಹೊರೆದುಕೊಳ್ಳುವದ್ಹೇಗೆಂದು ಎದೆಗೆ ಇಟ್ಟಂತಾಗಿದೆ

ಅತಿಯಾದ ಸ್ವಾರ್ಥವನೆಂದಿಗೂ ನಾನು ಯೋಚಿಸಿಲ್ಲ ‘ಚೆಲುವೆ’
ಈ ಅನೀರಿಕ್ಷಿತತೆಯ ಮಾತು ಎದೆಗೆ ಬೆಂಕಿ ಇಟ್ಟಂತಾಗಿದೆ

*********

Leave a Reply

Back To Top