ಮಕ್ಕಳ ಕವಿತೆ
ಆಸೆ
ಮಲಿಕಜಾನ ಶೇಖ
ಆಕಾಶಕ್ಕೆ ಹಾರುವ ಆಸೆ
ರೆಕ್ಕೆಗಳಿಲ್ಲದೆ ಹಾರುವದ್ಹೇಗೆ..?
ಗರುಡನೆ ಗರುಡನೆ ಕೇಳಿಲ್ಲಿ
ನಿನ್ನಯ ರೆಕ್ಕೆ ಕೊಡು ಎನಗೆ..
ಮುದ್ದಿನ ಬಾಲಕ ಕೇಳಲೆ ನೀನು
ರೆಕ್ಕೆಗಳೇನು ಕೊಡುವೆನು ನಾನು
ಛಲವಿಲ್ಲದನೆ ಹಾರುವದ್ಹೇಗೆ..?
ರೆಕ್ಕೆಗಳಂತು ಚಿಟ್ಟೆಗೆವುಂಟು..!
ಸಾಗರದಾಚೆ ಈಜುವ ಆಸೆ
ಕಿವಿರುಗಳಿಲ್ಲದೆ ಈಜುವದ್ಹೇಗೆ..?
ಮೀನವೆ ಮೀನವೆ ಕೇಳಿಲ್ಲಿ
ನಿನ್ನಯ ಕಿವಿರು ಕೊಡು ಎನಗೆ..
ಪುಟ್ಟನೆ ಪುಟಾಣಿ ಕೇಳಲೆ ನೀನು
ಕಿವಿರುಗಳೇನು ಕೊಡುವೇನು ನಾನು
ತಾಳ್ಮೇಯ ಇಲ್ಲದೆ ಈಜುವದ್ಹೇಗೆ..?
ಕಿವಿರುಗಳಂತು ಚಿಪ್ಪೆಗೆವುಂಟು..!
ಗುಬ್ಬಿಯ ಗೂಡನು ಕಟ್ಟುವ ಆಸೆ
ಕೊಕ್ಕವನಿಲ್ಲದೆ ಕಟ್ಟವದ್ಹೇಗೆ..?
ಗುಬ್ಬಿ ಗುಬ್ಬಿ ಕೇಳಿಲ್ಲಿ
ನಿನ್ನಯ ಕೊಕ್ಕು ಕೊಡು ಎನಗೆ..
ಚಿಣ್ಣರ ಚಿಣ್ಣಾ ಕೇಳಲೆ ನೀನು
ಕೊಕ್ಕವನೇನು ಕೊಡುವೇನು ನಾನು
ಬುದ್ಧಿಯ ಇಲ್ಲದೆ ಕಟ್ಟುವದ್ಹೇಗೆ..?
ಕೊಕ್ಕಗಳಂತು ಕಾಗೆಗೆವುಂಟು..!
ವೇಗದಿ ನನಗೆ ಓಡುವ ಆಸೆ
ಕಾಲಲಿ ವೇಗ ಇಲ್ಲದ್ಹೇಗೆ..?
ಜಿಂಕೆ ಜಿಂಕೆ ಕೇಳಿಲ್ಲಿ
ನಿನ್ನಯ ಕಾಲು ಕೊಡು ಎನಗೆ..
ಅಂದದ ಕಂದಾ ಕೇಳಲೆ ನೀನು
ಕಾಲುಗಳೇನು ಕೊಡುವೇನು ನಾನು
ಜೋಶ್ ಇಲ್ಲದ ಓಡುವದ್ಹೇಗೆ..?
ಕಾಲುಗಳಂತು ಆಮೆಗೆವುಂಟು..!
ಮಧುರದಿ ಗಾನವ ಗುನುವ ಆಸೆ
ಅಂದದ ಕಂಠವ ಇಲ್ಲದ್ಹೇಗೆ..?
ಕೋಗಿಲೆ ಕೋಗಿಲೆ ಕೇಳಿಲ್ಲಿ
ನಿನ್ನಯ ಕಂಠವ ಕೊಡು ಎನಗೆ..
ಪುಟಾಣಿ ಕಂದಾ ಕೇಳಲೆ ನೀನು
ಕಂಠವನೇನು ಕೊಡುವೇನು ನಿನಗೆ
ರಾಗವ ಇಲ್ಲದೆ ಹಾಡುವದ್ಹೇಗೆ..?
ಕಂಠವೇನು ಗೂಬೆಗೆವುಂಟು..!
ನೂರಾರು ವರ್ಷ ಬದುಕುವ ಆಸೆ
ಜೀವಕೆ ಆಯುಷ್ಯ ಇಲ್ಲದ್ಹೇಗೆ..?
ಆಮೆ ಆಮೆ ಕೇಳಿಲ್ಲಿ
ನಿನ್ನಯ ಜೀವ ಕೊಡು ಎನಗೆ..
ಜಾಣರ ಜಾನ್ ಕೇಳಲೆ ನೀನು
ಬೇಡುವದನ್ನು ಬಿಡುವಲೆ ನೀನು
ನಿನ್ನಯ ಒಳಗೆ ಅಣುಕಿಸು ನೀನು
ಎಲ್ಲವುವುಂಟು ನಿನ್ನಲ್ಲಿ..!
ಅರಿತು ಬಾಳುವದನ್ನು ಕಲಿ ಮೊದಲು…
*****
ಮ
ಕವನದ ಆಶಯ ಮಕ್ಕಳಿಗೆ ಆಸಕ್ತಿ ಹಾಗೂ ಮಹತ್ವಾಕಾಂಕ್ಷೆ ಹೆಚ್ಚಿಸುವಂಥದ್ದು
ತುಂಬಾ ಚೆನ್ನಾಗಿದೆ
ಪ್ರಿಯ ಶೇಖ್,
ಕಾವ್ಯಯಾನ ತುಂಬಾ ಒಳ್ಳೆಯ ಪ್ರಯತ್ನ.. ಈ ಕೊರೊನ ದುರಿತ ಕಾಲಕ್ಕಿದು ಸಾಹಿತ್ಯ ಸಂಜೀವಿನಿ… ಮುಂದುವರಿಯಲಿ ಯಾನ..
ಅಭಿನಂದನೆಗಳು
ದಯಾಸಾಗರ್ ಚೌಟ, ಮುಂಬಯಿ.
ಮಕ್ಕಳ ಆಕಲನೆ ಹಾಗೂ ಕಲಿಕೆಗೆ ತುಂಬ ಚಂದಾದ ಕವನ, ಶೇಖ್ ಸರ್.