ಕಾವ್ಯಯಾನ

ಅಂತಿಮಯಾತ್ರೆ

Riding with Death (1988): One of Jean-Michel Basquiat's Last Paintings

ಹರೀಶ ಕೋಳಗುಂದ

ಉಸಿರು ಬಿಗಿ ಹಿಡಿದಿದೆ,
ಎದೆಬಡಿತ ಕ್ಷೀಣ.
ಕೆಲವೇ ಸಮಯ ಬಾಕಿ.
ಪಸೆಯಾರಿದ ಗಂಟಲಿಗೆ
ಕಡೆಯ ಬಯಕೆ, ಗುಟುಕು
ಗಂಗಾಜಲ ಮಾತ್ರ. ಮತ್ತೇನೂ ಬೇಡ.

ಉರಿವ ಹಣತೆಯ ಸೊಡರು
ಬೀಸುಗಾಳಿಗೆ ತುಯ್ದಾಟ….!

ಕಾಲ ಮೀರುತ್ತಿದೆ,
ಸಾಸಿವೆಯ ಸಾಲಕ್ಕೆ ಹೋದವಳು
ಇನ್ನೂ ಮರಳಿಲ್ಲ, ದಾರಿಯಲಿ
ಬುದ್ಧ ಸಿಕ್ಕಿರಬೇಕು.
ಕಾಲವಶದಲ್ಲಿ ಸಾವಿತ್ರಿಯೂ ಲೀನ.
ಪುರುದೇವನ ವರ್ತಮಾನವೂ ಇಲ್ಲ.

ಕಣ್ಣು ಕವಿಯುತ್ತಿದೆ,
ಚಾಚಿ ಮಲಗಿದ ದೇಹ ಅಸಾಧ್ಯ ಭಾರ.
ಸುತ್ತ ಕತ್ತಲೆಯ ಕೂಪ, ಏಕಾಂಗಿ ಭಾವ,
ಹಠಾತ್ತನೆ ಯಾರದೋ ಚೀತ್ಕಾರ,
ಯಾರೋ ನಕ್ಕಂತೆ, ಅತ್ತಂತೆ,
ಹೆಸರಿಡಿದು ಕರೆದಂತೆ, ಕೈಹಿಡಿದು
ಜಗ್ಗಿದಂತೆ, ಭ್ರಮೆ-ವಾಸ್ತವ ಇಹ
-ಪರಗಳ ನಡುವೆ ತಾಕಲಾಟ,
ಅವ್ಯಕ್ತ ಆತಂಕ….!

ಯಶೋಧರನ ಹಿಟ್ಟಿನ ಹುಂಜಕ್ಕೂ
ಉಂಟು ಬೆಂತರನ ಕಾವಲು.
ಭೀಷ್ಮ ಇಚ್ಛಾಮರಣಿ.
ಅಂಗಾಧಿಪತಿಗೆ ಕವಚ-ಕುಂಡಲಗಳ ರಕ್ಷೆ.
ಸುಯೋಧನನಿಗೋ ವಜ್ರಕಾಯದ ದೀಕ್ಷೆ.

ನರನ ಬಾಳು..
ಕಾವ, ಕೊಲುವ, ನಗಿಸಿ ಅಳಿಸುವ,
ಕುಣಿಸಿ, ನಲಿಸಿ, ಆಡಿಸಿ,
ಗೆಲಿಸಿ ಸೋಲಿಸಿ, ಇದ್ದು ಇಲ್ಲವಾಗಿಸುವ,
ಕಾಣದ ಕೈಗಳ ಪಗಡೆಯಾಟ…!

ಇನ್ನು ನಿಮಿಷಗಳನೆಣಿಸುವುದಷ್ಟೇ ಕೆಲಸ…
ಹೊಸ್ತಿಲಾಚೆಯ ಸುದೀರ್ಘ ಮೌನ
ಕೈ ಬೀಸಿ ಕರೆಯುತ್ತಿದೆ.
ಸಿದ್ಧನಾಗಲೇಬೇಕಿದೆ, ಬಿದಿರುಯಾನ ಕಟ್ಟಿಟ್ಟ ಬುತ್ತಿ…
ಪಯಣ ಸ್ವರ್ಗಕ್ಕೋ ನರಕಕ್ಕೋ ತಿಳಿಯದು,
ಈಗಲೇ ಅರ್ಜಿ ಹಾಕುವೆ.

ಛೇ… ಎಲ್ಲಿಗಾದರೇನು….?
ನಭಕೇರಿದ ಆಯುಷ್ಯಚಪ್ಪರದ
ಮುದಿಹಣ್ಣೆಲೆ ಉದುರಿ ಮಣ್ಣಾಗಲೇಬೇಕು.
ಹಸಿರು ಚಿಗುರಿಗೆ ಎಡೆಯಾಗಲೇಬೇಕು.
ಪರಿವರ್ತನೆ ಜಗದ ನಿಯಮ…

ಅದೋ….. ಅಲೆ ಅಲೆಯಾಗಿ ತೇಲಿ ಬರುತ್ತಿದೆ,
ಅಲ್ಲಮನ ತಮಟೆಯ ಸದ್ದು ಶೂನ್ಯತ್ವದಾಳದಿಂದ.
ಜತೆಗೆ ಬಸವನ ಉಕ್ತಿ
ಮರಣವೇ ಮ…..ಹಾ……ನ…….ವ……..ಮಿ.

******

Leave a Reply

Back To Top