ಬಸವ ಜಯಂತಿ

ಬಸವ ಜಯಂತಿ

ಜಾತಿಯನ್ನು ೧೨ ನೆಯ ಶತಮಾನದಲ್ಲಿಯೇ ಕಾಯಕ ಸೂಚಕವಾಗಿಸಿದ ಬಸವಣ್ಣ..!

ನಾಳೆ ದಿನಾಂಕ ೨೬ ರಂದು ಬಸವಣ್ಣನವರ ಜಯಂತಿ. ಆ ನೆಪದಲ್ಲಿ ಈ ಲೇಖನ…

ಬಸವೇಶ್ವರ ( ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು…

ಬಸವಣ್ಣನವರು ೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತ ಇದೆ.)

ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದವರು ಬಸವೇಶ್ವರರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು.
ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನೀವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾನೆ, ಆಗ ಇದು ಪುರುಷರಿಗೆ ಮಾತ್ರ ಕೂಡುವಂತಹುದು ಆದ್ದರಿಂದ ಅಕ್ಕನಿಗೆ ಕೋಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ…

ಧಾರ್ಮಿಕ ಬೆಳವಣಿಗೆ

ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧವಾಗಿದೆ ಎಂದು ಬಸವಣ್ಣ ಸಾರಿದರು.
ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣನವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ ಎಂದೂ ಕರೆಯಲಾಗುತ್ತದೆ.
ಮಾನವಿಯತೆ. ಕಾಯಕ ನಿಷ್ಟೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು…

ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ. ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ. ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು…

ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಈ ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ…

ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗನಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ…

ಸಾಮಾಜಿಕ ಸಮಾನತೆ–

“ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ
ಇವನಮ್ಮವ ಇವನಮ್ಮವ ಇವನಮ್ಮವ ನೆಂದಿನಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದನಿಸಯ್ಯ.”

ಶೂದ್ರರಾದ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಪಂಚಮರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪುರುಷ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಅನುತ್ಪಾದಕ ಪುರುಷರಿಗಾಗಿಯೇ ಬದುಕಿನ ಎಲ್ಲ ಸುಖಭೋಗಗಳು ಮೀಸಲಾಗಿದ್ದವು. ಇವರು ಮಾತ್ರ ಜನಿವಾರ ಧರಿಸುವ ಹಕ್ಕನ್ನು ಪಡೆದಿದ್ದರು. ಜನಿವಾರ ಧರಿಸುವ ಬ್ರಾಹ್ಮಣ ಓದಿರಬಹುದು, ಬರೆದಿರಬಹುದು ಆದರೆ ಕಾಯಕಜೀವಿಯಾಗಿ ಉತ್ಪಾದನೆಯಲ್ಲಿ ತೊಡಗಿಲ್ಲ. ಉತ್ಪಾದನೆಯ ಅನುಭವದಿಂದ ಬರುವ ಜ್ಞಾನವನ್ನು ಹಿಂದಿನ ಕಾಲದಲ್ಲಿ ಅವನೆಂದೂ ಪಡೆಯಲಿಲ್ಲ. ಕ್ಷತ್ರಿಯ ಕಾದಿರಬಹುದು ಆದರೆ ಉತ್ಪಾದನೆಯಲ್ಲಿ ತೊಡಗಲಿಲ್ಲ. ವೈಶ್ಯ ವಸ್ತುಗಳ ಮಾರಾಟ ಮಾಡಿರಬಹುದು, ಕೃಷಿಭೂಮಿಯ ಒಡೆಯನೂ ಆಗಿರಬಹುದು ಆದರೆ ಸ್ವತಃ ಉತ್ಪಾದನೆ ಮಾಡಲಿಲ್ಲ. ಈ ಮೂರೂ ವರ್ಣದವರಿಗೂ ಜನಿವಾರ ಇದೆ. ಆದರೆ ಉತ್ಪಾದನೆಯಲ್ಲಿ ತೊಡಗಿದ ಕಾಯಕಜೀವಿಗಳಿಗೆ ಮತ್ತು ಪಂಚಮರಿಗೆ ಜನಿವಾರ ಇಲ್ಲ. ಯಾರಿಗೆ ಜನಿವಾರ ಇತ್ತೋ ಅವರು ದುಡಿಯದೇ ಸುಖಜೀವನವನ್ನು ಅನುಭವಿಸಿದರು. ಯಾರಿಗೆ ಜನಿವಾರ ಇದ್ದಿದ್ದಿಲ್ಲವೊ ಅವರು ದುಡಿದೂ ಕಷ್ಟ ಜೀವನವನ್ನು ಅನುಭವಿಸಿದವರು. ಅಂತೆಯೆ ಬಸವಣ್ಣನವರು ಕಟ್ಟಕಡೆಯ ಮನುಷ್ಯನ ಕಡೆಗೆ ಬಂದರು ಈ ಅನ್ಯಾಯದ ವಿರುದ್ಧ ಸಿಡಿದೆದ್ದರು. “ಜಾತಿ ಸಂಕರ ವಾದ ಬಳಿಕ ಕುಲವನರಸುವರೆ” ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು.


ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು ಶರಣಸಂಕುಲದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ.


ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿವಿಷವನ್ನು ಹೊರಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು..!

**********

ಕೆ.ಶಿವು.ಲಕ್ಕಣ್ಣವರ

Leave a Reply

Back To Top