ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ನನ್ನೊಡಲ ಗುಡಿಯಲಿ ಪ್ರೀತಿ ಸುಮಗಳ ಹರವಿ ಕಾಯುತಿರುವೆ ಚಿಟ್ಟೆ
ಮಡಿಲ ಉಡಿಯಲಿ ಪ್ರೇಮ ಹೂವುಗಳ ಕೆಡವಿ ಕಾಯುತಿರುವೆ ಚಿಟ್ಟೆ
ಹಂಬಲಗಳ ಹೆಕ್ಕಿ ಹೆಕ್ಕಿ* ಹೊಳೆವ ಕಣ್ಣಂಚಲಿ ತಂದು ಹಿಡಿದಿಟ್ಟಿರುವೆ
ಕಡಲ ತೆರೆಗಳಲಿ ಒಲವ ಮುತ್ತುಗಳ ತಡವಿ ಕಾಯುತಿರುವೆ ಚಿಟ್ಟೆ
ಬಯಕೆಗಳ ಸಾಕಿ ಸಾಕಿ ಬೀಳುವ ಕನಸಲಿ ಮಿಂದು ಮೀಯಿಸಿಟ್ಟಿರುವೆ
ಸಡಿಲ ಜೀವದಲಿ ಮಿಡಿವ ಬಯಕೆಗಳ ಕೊಡವಿ ಕಾಯುತಿರುವೆ ಚಿಟ್ಟೆ
ನೆನಪುಗಳ ಬೆದಕಿ ಬೆದಕಿ ಹಿಡಿವಾಸೆ ಮನದಂಗಳದಿ ನಿಂದು ಕಂಗಾಲಾಗಿರುವೆ
ಸಿಡಿಲ ಅಬ್ಬರದಲಿ ನುಡಿವ ಬಡಿತಗಳ ಸುರುವಿ ಕಾಯುತಿರುವೆ ಚಿಟ್ಟೆ
ಅನುಳ ತಲ್ಲಣಗಳ ಹತ್ತಿಕ್ಕಿ ಹತ್ತಿಕ್ಕಿ ತಡವರಿಸೋ ತಾಕಲಾಟದಲಿ ಬೆಂದಿರುವೆ
ತುಮುಲ ತಾಪದಲಿ ಸಿಡಿವ ಕಿಡಿಗಳ ಸಲುವಿ ಕಾಯುತಿರುವೆ ಚಿಟ್ಟೆ
ಡಾ ಅನ್ನಪೂರ್ಣ ಹಿರೇಮಠ
ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
ಅದ್ಭುತವಾಗಿದೆ ಮೇಡಮ್