ಭಾಗ್ಯ.ಎಂ.ವಿ.ರವರ ಗಜಲ್

ಕಾವ್ಯ ಸಂಗಾತಿ

ಭಾಗ್ಯ.ಎಂ.ವಿ.ರವರ

ಗಜಲ್

ಭಾವನೆಗಳ ಖಜಾನೆಗೆ ಬೀಗ ಜಡಿದುಬಿಟ್ಟೆ ನೀ ದೂರಾದ ಮೇಲೆ
ಕಟ್ಟಿದ್ದ ಕನಸುಗಳ ಮಾಲೆ ಕಿತ್ತೆಸೆದುಬಿಟ್ಟೆ ನೀ ದೂರಾದ ಮೇಲೆ

ನೆನಪಿನ ಬುತ್ತಿಯಲಿ ಸಿಹಿ ತುತ್ತೂ ಕಹಿಯಾಗಿ ರುಚಿಸುತಿಹುದು!
ಭೂತದ ಔತಣಕೂಟಕ್ಕೆ ತೆರೆ ಎಳೆದುಬಿಟ್ಟೆ ನೀ ದೂರಾದ ಮೇಲೆ

ಮಧುರ ಪ್ರೇಮಗೀತೆಗಳೂ ವಿರಹ ಭಾವವನೆ ಸ್ಫುರಿಸುತಿಹವು!
ಮೈಮರೆತು ಹಾಡುವ ದನಿಯ ಕುಗ್ಗಿಸಿಬಿಟ್ಟೆ ನೀ ದೂರಾದ ಮೇಲೆ

ಒಲವಿನೋಕುಳಿಯಲ್ಲಿ ಮಿಂದಿದ್ದ ಕೆನ್ನೆಗಳಿಗೆ ಕಂಬನಿಯಿಂದ ಜಳಕ!
ಅಣಕಿಸುವ ಮಾತುಗಳಿಗೆ ಕಲ್ಲಾಗಿಬಿಟ್ಟೆ ನೀ ದೂರಾದ ಮೇಲೆ

ವಿರಹದ ಉರಿಗೆ ತುಪ್ಪ ಸುರಿಯುತ್ತಾನಂತೆ ಚಂದ್ರಮ ಭಾಗ್ಯ!
ಸುಡುವ ಬೆಳದಿಂಗಳಲಿ ಕರಕಲಾಗಿಬಿಟ್ಟೆ ನೀ ದೂರಾದ ಮೇಲೆ


ಭಾಗ್ಯ.ಎಂ.ವಿ.

One thought on “ಭಾಗ್ಯ.ಎಂ.ವಿ.ರವರ ಗಜಲ್

  1. ತುಂಬಾ ಚೆನ್ನಾಗಿದೆ ನಿಮ್ಮ ಭಾವನೆಗಳು ಭಾಗ್ಯ ಮೇಡಂ

Leave a Reply

Back To Top