ಕಾವ್ಯಯಾನ

ಗಝಲ್

ಎ. ಹೇಮಗಂಗಾ

ಸ್ಫಟಿಕದಂತೆ ಸದಾ ನಿರ್ಮಲ ಹೃದಯದವನು ನನ್ನ ರಾಜಕುಮಾರ
ಕನಕದಂತೆ ಸದಾ ಹೊಳೆಯುವ ರೂಪದವನು ನನ್ನ ರಾಜಕುಮಾರ

ಸವಿಮಾತಿನಲಿ ಮೊಗ್ಗು ಮನಸ ಅರಳಿಸಿದವನು ನನ್ನ ರಾಜಕುಮಾರ
ಕಿರುನಗೆಯಲಿ ಮೋಡಿ ಮಾಡುತ ಚಿತ್ತ ಕಲಕಿದವನು ನನ್ನ ರಾಜಕುಮಾರ

ಬೆಂಗಾಡಾದ ಬಾಳಲಿ ಚೈತ್ರ ಮೂಡಿಸಿದವನು ನನ್ನ ರಾಜಕುಮಾರ
ಒಲವಿನಾರಾಧನೆಯೇ ತಪವೆಂದು ತೋರಿದವನು ನನ್ನ ರಾಜಕುಮಾರ

ಸಪ್ತಪದಿಯಲಿ ಒಂದಾಗಿ ಸಗ್ಗವನೇ ಸೃಜಿಸಿದವನು ನನ್ನ ರಾಜಕುಮಾರ
ಮಧುರ ಮಿಲನದ ನಶೆಯಲಿ ಮೈ ಮರೆಸಿದವನು ನನ್ನ ರಾಜಕುಮಾರ

ತೋಳಬಂಧನದಿ ಪಿಸುಮಾತುಗಳ ಉಸುರಿದವನು ನನ್ನ ರಾಜಕುಮಾರ
ಕೊರಳಿಗೆ ಅಗಣಿತ ಮುತ್ತಿನ ಹಾರ ಹೆಣೆದವನು ನನ್ನ ರಾಜಕುಮಾರ

ಮೌನದಿರುಳಲಿ ಕಂಗಳಲೇ ಎಲ್ಲ ಹೇಳಿದವನು ನನ್ನ ರಾಜಕುಮಾರ
ಬೇಕೆಂದ ಕ್ಷಣದಿ ಅಧರ ಮಧುರಸ ಉಣಿಸಿದವನು ನನ್ನ ರಾಜಕುಮಾರ

ತಾಯ್ತನದ ಅಮಿತ ಸುಖವ ನೀಡಿ ನಲಿದವನು ನನ್ನ ರಾಜಕುಮಾರ
ಕಷ್ಟವಿರಲಿ ಸುಖವಿರಲಿ ಹಿಡಿದ ಕೈ ಬಿಡದವನು ನನ್ನ ರಾಜಕುಮಾರ

ಮುಂದಿನ ಜನ್ಮಕೂ ಜೊತೆ ಬರುವೆನೆಂದವನು ನನ್ನ ರಾಜಕುಮಾರ
ಜೇನ ಸಿಹಿಯ ಪ್ರೀತಿ ಅಕ್ಷಯಪಾತ್ರೆಯಾದವನು ನನ್ನ ರಾಜಕುಮಾರ

ವಿಧಿ ಆಣತಿಯಂತೆ ಮರಳಿ ಬಾರದೂರ ಸೇರಿದವನು ನನ್ನ ರಾಜಕುಮಾರ
ಜೀವಕ್ಕೆ ಜೀವವಾಗಿ ಕಾಡುವ ನೆನಪಾಗಿ ಉಳಿದವನು ನನ್ನ ರಾಜಕುಮಾರ

******

Leave a Reply

Back To Top