ಕಡಲತೀರದ ಭಾರ್ಗವ…ಶಿವರಾಮ ಕಾರಂತರ ಜನುಮದಿನದ ನೆನಪಿಗೆ-ಹಮೀದಾ ಬೇಗಂ ದೇಸಾಯಿಯವರ ಕವಿತೆ

ಕಾವ್ಯ ಸಂಗಾತಿ

ಕಡಲತೀರದ ಭಾರ್ಗವ…ಶಿವರಾಮ ಕಾರಂತರ ಜನುಮದಿನದ ನೆನಪಿಗೆ-

ಹಮೀದಾ ಬೇಗಂ ದೇಸಾಯಿಯವರ ಕವಿತೆ

ಕಡಲ ಗರ್ಭದಿ ಹುಟ್ಟಿ
ಬೆಳೆದ ಸಿಂಪಿಯ ಮುತ್ತು
ಹೊಳೆದಿಹುದು ಜಗದ ತುಂಬ;
ಕಡಲ ತೀರದಿ ಜನಿಸಿ
ಬೆಳೆದೊಂದು ಜೀವ
ಬೆಳಗಿಹುದು ಜಗದ ಮನವ..

ಪ್ರಕೃತಿ ಮಡಿಲಿನ ಕೂಸು
ಶಿವಶಕ್ತಿ ಪಡೆದು
ರಾಮ ಬಾಣವನೆತ್ತಿ ಸಾಗಿ ;
ಕಾರ್ ಗುಣಗಳ ಮೆಟ್ಟಿ
ಅಂತ ಮಾಡುತಲದರ
ಬೆಳೆದರು ಶಿವರಾಮ ಕಾರಂತರಾಗಿ..

ಅನ್ಯಾಯದೆದುರಿನಲಿ
ನ್ಯಾಯ ಹುಟ್ಟನು ಹಾಕಿ
ತೋರಿಹರು ಸತ್ಯತೆಯ ತೀರವ;
ಪಾಶವೀ ಕೃತ್ಯಕ್ಕೆ
ಪಾಶಗಳ ತೊಡಿಸುತಲಿ
ಉಳಿಸಿಹರು ನಮ್ಮೀ ಪರಿಸರವ…

ಸಾಹಿತ್ಯ ದೀವಿಗೆಯ
ಹಿಡಿದು ಕೈಯಲಿ ನೀವು
ತೆರೆದಿರಿ ವಿಜ್ಞಾನದ ಹೆಬ್ಬಾಗಿಲವ;
ರಾಗ ತಾಳಗಳಿಂದ
ಯಕ್ಷಗಾನದ ಹಿರಿಮೆ
ತೋರಿದಿರಿ ವಿಶ್ವಕೆ ಯಕ್ಷಲೋಕವ…

ಬಿರುದುಗಳ ಹಂದರದಿ
ತಮ್ಮತನವೆತ್ತರಿಸಿ
ನಿಂದಿಹಿರಿ ಕೀರ್ತಿ ಪಾರಿಜಾತವಾಗಿ ;
ಬಾಲವನದಲಿ ನಲಿವ
ಚಿಣ್ಣರೆದೆ ಹಿಗ್ಗಿಸುವ
ಜ್ಞಾನದಂಗಳ ಕಾರಂತಜ್ಜನಾಗಿ..

ದುಷ್ಟ ಕಾಲನ ಕ್ರೂರ
ದೃಷ್ಟಿ ತಾಕಿತೇ ನಿಮಗೆ
ಸೇರಿದಿರಿ ನೀವು ಮರಳಿ ಮಣ್ಣಿಗೆ;
ಮರೆಯಲಾರೆವು ನಿಮ್ಮ
ಅನುದಿನ ಅನುಕ್ಷಣವು
ನಿಮ್ಮ ಚೇತನವಿರಲಿ ನಮ್ಮ ಬಾಳಿಗೆ..


ಹಮೀದಾ ಬೇಗಂ ದೇಸಾಯಿ

One thought on “ಕಡಲತೀರದ ಭಾರ್ಗವ…ಶಿವರಾಮ ಕಾರಂತರ ಜನುಮದಿನದ ನೆನಪಿಗೆ-ಹಮೀದಾ ಬೇಗಂ ದೇಸಾಯಿಯವರ ಕವಿತೆ

  1. ಧೀಮಂತ ಸಾಹಿತಿಯ ಅರ್ಥಪೂರ್ಣ, ಮೌಲ್ಯಯುತ, ಚಿಂತನಾರ್ಹ ನೆನವು.

Leave a Reply

Back To Top