ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಬೆಳಗಾಗುವ ಮುನ್ನ…
ಅದೊಂದು
ಬೇಸಗೆಯ ರಾತ್ರಿ
ಕಪ್ಪು ಕಪ್ಪಾಗಿ
ಹೆಪ್ಪಾಗಿ ಕಲೆತಂತೆ
ನೀರವ ರಾತ್ರಿ…
ಕಪ್ಪು ರೇಶಿಮೆಯ
ನವುರು ಒಡಲ ತುಂಬ
ಮಿನುಗಿವೆ ನಕ್ಷತ್ರಗಳು
ವಜ್ರ ಕಸೂತಿಯೊಲು
ನಿಶಾದೇವಿಗೆ ನಮಿಸಿ
ಆರುತಿ ಬೆಳಗಿದಂತೆ…
ಹಗಲು ಬಾನಿನ
ಬಿಳಿ, ನೀಲಿ, ಕೆಂಪುಗಳ
ತನ್ನ ಜೊತೆಗೇ ಒಯ್ದ
ಸಂಜೆ ತೇರಿನಲಿ
ಸೂರ್ಯ ದೇವ…!
ಆದರೇನಂತೆ..ನಾ
ಹಾಲ ಬೆಳಕನು ತಂದೆ
ಎನುತ ಮೆಲ್ಲಗೆ ಬಂದ
ಹುಣ್ಣಿಮೆಯ ಚಂದ್ರ..!
ಜೊನ್ನ ಹಾಲ್ಜೇನು
ಸವಿದ ತಾರೆಗಳೆಲ್ಲ
ಓಲಾಡಿ ತೇಲುತಿವೆ
ಮತ್ತೇರಿ ಗಗನಾಂಗಣದಿ…!
ರಜನಿಕಾಂತನ ಸಂಗ
ಸಂತಸದ ಒಡನಾಟ
ಪರವಶದ ಕ್ಷಣಗಳವು
ಧನ್ಯತೆಯ ಭಾವದಲಿ
ಪರಿಪೂರ್ಣವಾಗಿರಲು…
ತೆರೆಯುತಲಿ ಝಗ್ಗೆಂದು
ಮೂಡಣದ ಬಾಗಿಲು
ಹೊಂಬೆಳಕು ಚೆಲ್ಲಿಹುದು
ತಾರೆಗಳೆಡೆ ನಗುತ…!
ಜಗವೆಲ್ಲ ಚೇತನದಿ
ಮಿಂದು ಪುಳಕಿತವಹುದು
ಹಸಿರು ಉಸಿರಿನ ಜೀವ
ನಗುತ ಅರಳಿಹುದು…!
———————
ಹಮೀದಾ ಬೇಗಂ ದೇಸಾಯಿ
ಬೆಳದಿಂಗಳ ರಾತ್ರಿಯಲಿ ಸಂಚರಿಸಿ ಮುನ್ನೇಸರವ ವರ್ಣಿಸಿದ ರೀತಿ ಚಿತ್ತಾಕರ್ಷಕವಾಗಿ ಮೂಡಿಬಂದಿದೆ.
ಸ್ಪಂದನೆಗೆ ಧನ್ಯವಾದಗಳು ತಮಗೆ
ಹಮೀದಾ ಬೇಗಂ.