ಮಕ್ಕಳ ಕಥೆ,ತಾಳಿದವನು ಬಾಳಿಯಾನು….ಪ್ರಿಯಾಂಕ

ವಿದ್ಯಾರ್ಥಿ ಸಂಗಾತಿ

ಮಕ್ಕಳ ಕಥೆ,

ತಾಳಿದವನು ಬಾಳಿಯಾನು….

ಪ್ರಿಯಾಂಕ

ಮಂದಾಪುರ ಎನ್ನುವ ಊರು ಅಲ್ಲಿ ಸೋಮು ಎಂಬ ಅನಾಥ ಹುಡುಗನಿದ್ದನು. ಅವನು ಶ್ರೀಮಂತ ಧನಿಕರಾದ ರಾಮು ಎಂಬುವವರ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದನು. ಜಾನುವಾರುಗಳಿಗೆ ಮೇವು ಹಾಕುವುದು,ದನದ ಕೊಟ್ಟಿಗೆಯನ್ನು ಹಸ ಮಾಡುವುದು, ಹುಲ್ಲು ತರುವುದು, ಮನೆ ಮನೆಗೆ ಹೋಗಿ ಹಾಲು ಹಾಕುವುದು,ರಾಮುವಿನ ಮಕ್ಕಳನ್ನು ಶಾಲೆಗೆ ಬಿಟ್ಟು ಕರೆದುಕೊಂಡು ಬರುವುದು ಮಾಡುತ್ತಿದ್ದನು ಒಟ್ಟಿನಲ್ಲಿ ದಣಿವಿಲ್ಲದೆ ದುಡಿಯುತ್ತಿದ್ದನು. ಸೋಮು ಮಾಡುವ ಕೆಲಸದಲ್ಲಿ ಏನಾದರೂ ಚೂರು ತಪ್ಪಾದರೆ ರಾಮು ಅವನಿಗೆ ಬಾಸುಂಡೆ ಬರುವಂತೆ ಹೊಡೆದು ಬೈಯ್ಯುವುದು ಮಾಡುತ್ತಿದ್ದ. ಆದರೆ ಸೋಮು ಮಾತ್ರ ಏನು ಮಾತನಾಡದೆ ಸುಮ್ಮನೆ ತನ್ನಿಂದ ಸಾಧ್ಯವಾದಷ್ಟು ಕೆಲಸವನ್ನು ಮಾಡಿ ಮುಗಿಸುತ್ತಿದ್ದನು.
ಹಳ್ಳಿಯ ಚಿಕ್ಕ ಚಿಕ್ಕ ಮಕ್ಕಳು ಜನರು ಸಹ ಅವನಿಗೆ ಕಲ್ಲು, ಸೆಗಣಿ ಎಸೆಯುವುದು ಮಾಡುತ್ತಿದ್ದರು ಹಾಗೂ ಅನಾಥ ಅಬ್ಬೇಪಾರಿ ತಬ್ಬಲಿ ಎಂದು ಕರೆದು ಅವಮಾನಿಸುತ್ತಿದ್ದರು. ಜನರು, ಮಕ್ಕಳು ಅಷ್ಟೇಲ್ಲ ಅವಮಾನಿಸಿ,ಹಿಂಸಿಸಿದರು ಅವನು ಮರು ಮಾತನಾಡದೆ ಸುಮ್ಮನೆ ನಗುತ್ತಾ ಹೋಗುತ್ತಿದ್ದ. ಹೀಗೆ ದಿನಗಳು ಕಳೆದು ಹೋಗುತ್ತಿದ್ದವು, ಹೀಗಿರಬೇಕಾದರೆ ಒಂದು ದಿನ ರಾಮುವಿನ ಮಗುವು ಮನೆ ಹೊರಗಡೆ ಚೆಂಡಿನಾಟ ಆಡುತ್ತಿತ್ತು, ಆಡುತ್ತ ಆಡುತ್ತಾ ಚೆಂಡು ಮನೆಯ ಹತ್ತಿರದ ಕಾಲುವೆಯಲ್ಲಿ ಬಿದ್ದು ಬಿಟ್ಟಿತು ಚೆಂಡನ್ನು ತೆಗೆದುಕೊಳ್ಳಲು ಹೋದ ಮಗು ಕಾಲು ಜಾರಿ ಕಾಲುವೆಗೆ ಬಿದ್ದು ಬಿಟ್ಟಿತು. ಮಗುವನ್ನು ಹುಡುಕುತ್ತಾ ಬಂದ ತಾಯಿ ಕಾಲುವೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಮಗು ಹರಿದು ಹೋಗುವುದನ್ನು ಕಂಡು ನನ್ನ ಮಗು ನೀರಿನಲ್ಲಿ ಬಿದ್ದಿದೆ ಯಾರಾದರೂ ಕಾಪಾಡಿ ಎಂದು ಜೋರಾಗಿ ಅಳುತ್ತಾ ಕೂಗುತ್ತಿದ್ದಳು. ಇದನ್ನು ಕೇಳಿದ ತಕ್ಷಣವೇ ಸೋಮು ಓಡುತ್ತಾ ಓಡುತ್ತಾ ಬಂದು ಕಾಲುವೆಗೆ ಹಾರಿ ಮಗುವನ್ನು ಕಾಪಾಡಿದನು. ಈ ಒಂದು ದೃಶ್ಯವನ್ನು ಕಣ್ಣಾರೆ ಕಂಡ ಧನಿಕ ರಾಮುವಿನ ಮನಸು ಕರಗಿ ಕಲ್ಲಾಯಿತು. ನಾನು ಎಷ್ಟೊಂದು ಬೈದರು, ಹೊಡೆದರು, ತಾಳ್ಮೆಯಿಂದ ಇದ್ದೆ ಒಂದು ದಿನ ಎದುರು ಮಾತಾಡಲಿಲ್ಲ. ಮಕ್ಕಳು ಕೀಟಲೆ ಮಾಡಿದರು ಮರು ಮಾತಾಡಲಿಲ್ಲ, ನಾನು ಹೊಡೆದರು ಬೈದರು ನನಗೆ ಸದಾ ಒಳಿತನ್ನೇ ಬಯಸಿದ್ದಾನೆ. ನನ್ನ ಮಗುವನ್ನು ಕಾಪಾಡಿದ್ದಾನೆ ಎಂದು ಹೊಗಳಿ ಸೋಮುವನ್ನು ಬಿಗಿದಪ್ಪಿಕೊಂಡನು. ರಾಮು ಮತ್ತು ಊರಿನ ಜನರು ಸೋಮುವಿನ ತಾಳ್ಮೆಯನ್ನು ಒಳ್ಳೆಯ ಗುಣಗಳನ್ನು, ಮೆಚ್ಚಿ ಕೊಂಡಾಡಿದರು.ಅಂದಿನಿಂದ ಸೋಮುವನ್ನು ಸ್ನೇಹ-ಪ್ರೀತಿಯಿಂದ ಕಾಣ ತೊಡಗಿದರು.


ಪ್ರಿಯಾಂಕ
ಎಂಟನೇ ತರಗತಿ
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಸರಕಲ್
ತಾ ದೇವದುರ್ಗ ಜಿ ರಾಯಚೂರು

Leave a Reply

Back To Top