ವೈ.ಎಂ.ಯಾಕೊಳ್ಳಿ-ಒಮ್ನೊಮ್ಮೆ ಹೀಗೆ ….

ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ಒಮ್ನೊಮ್ಮೆ ಹೀಗೆ ….

ಒಮ್ಮೊಮ್ಮೆ ಹೀಗೆ
ಆಗಿ ಬಿಡುತ್ತದೆ
ನಾವು ಅರಿಯದಂತೆಯೆ
ಅಲ್ಲಿ ಬೀಜವೊಂದು
ಭೂಮಿಯನು ಬಿರಿಯಿಸಿ‌
ಮೊಳಕೆಯೊಡೆಯುತ್ತದೆ

ನಮಗೆ ಹೇಳದೆಯೆ ಮಳೆಯು
ನಾಕು ಹನಿ ಉದುರಿಸಿ
ನೀರು ಹನಿಸುತ್ತದೆ
ಗೊತ್ತಾಗದಂತೆಯೆ
ಎಲೆ ಹೂಕೋಸು
ಕಾಯಿಗಳಾಗಿ
ಚಿಗುರೊಡೆದು
ಜೀವ ಸಂಬ್ರಮಿಸುತ್ತದೆ

ನಾವರಿಯದಯೆ
ದುಂಬಿ ಹಾರಿಬಂದು
ನಮ್ಮ ಕಣ್ಮುಂದೆಯೆ
ಘಮ ಘಮ
ಗಂಧ ಹೀರುತ್ತದೆ
ಅರಲಿ ನಿಂತ ಹೂವು
ಸುತ್ತೆಲ್ಲ ಸುವಾಸನೆ
ಬೀರಿ ಅಲ್ಲಿ ಹಬ್ಬವಾಗುತ್ತದೆ

ನಾವು ಅರಿಯದೆ ಯೆ
ಗಿಡದಿ‌ ಕಾಯಿ ಸುರಿದು
ನೂರೆಂಟು ಹಕ್ಕಿಗಳು
ಎಲ್ಲಿಂದಲೋ ಬಂದು
ಗೂಡು ಕಟ್ಟುತ್ತವೆ.
ಊರಿಗೂರೇ
ಜೀವ ಜಾತ್ರೆ
ಸೇರುತ್ತದೆ.‌.

ಮತ್ತೂ ಒಂದೆಂದರೆ
ನಾವರಿಯದಂತೆಯೆ
ಚೂಪು ಕೊಡಲಿಯ
ಒಬ್ಬಾತ ಬಂದು ಗಿಡದ
ಬೊಡ್ಡೆಗೆ ಕೊಡಲಿ
ಯಿಡುತ್ತಾನೆ
ನಮಗರಿಯದಂತೆಯೆ
ಜೀವದಾಯಿಯ
ಬಲಿಯಾಗಿರುತ್ತದೆ
ನೋಡಿದ ಕವಿ
ಕವಿತೆ ಬರೆದು
ಶೃದ್ಧಾಂಜಲಿ ಅರ್ಪಿಸುತ್ತಾನೆ.


ವೈ.ಎಂ.ಯಾಕೊಳ್ಳಿ

2 thoughts on “ವೈ.ಎಂ.ಯಾಕೊಳ್ಳಿ-ಒಮ್ನೊಮ್ಮೆ ಹೀಗೆ ….

Leave a Reply

Back To Top