ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ನಂಬಿಕೆಯ ನೆಂಟಸ್ಥನದಲ್ಲಿ ಸ್ವಾರ್ಥ ಕುಣಿಯದಿರಲಿ…

ಅವನು ಸಮಾಜದಲ್ಲಿ ಎಲ್ಲರೊಂದಿಗೆ  ಬೈಸಿಕೊಳ್ಳುತ್ತಾನೆ.  ಅಯ್ಯೋ ಅವನು  ಎಲ್ಲರಿಗೂ  ಸಹಾಯ ಮಾಡ್ತಾನೇ ಇರ್ತಾನೆ..

ಆದರೆ…

 ಮನೆಯಲ್ಲಿ ಬೈಸಿಕೊಳ್ಳುತ್ತಾನೆ.

ಸತ್ತವರ ಮನೆಯಲ್ಲಿ ಸಾಂತ್ವನ ಹೇಳಿ,  ನಿಂತು ಕರ್ತವ್ಯ ನಿಭಾಯಿಸುವ, ಸ್ನೇಹಿತನಿಗೆ ಅಪಘಾತವಾದಾಗ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ, ವಿಶೇಷ ಚೇತನ ಸ್ನೇಹಿತರಿಗೆ ಕೈಹಿಡಿದು ಉಪಕಾರ ಮಾಡುವ ದೊಡ್ಡತನ….ಇವೆಲ್ಲಾ  ಒಬ್ಬ  ನಿಸ್ವಾರ್ಥ ನೆಂಟಸ್ತಿಕೆಯಿಂದ ಮಾಡಲು ಮಾತ್ರ ಸಾಧ್ಯ..!!

“ಅವನು ಸರಿಯಿಲ್ಲ. ನಂಬಿಕೆಗೆ ಯೊಗ್ಯನಲ್ಲ, ಆ ಯೋಗ್ಯತೆಯು ಅವನಿಗೋ, ಅವಳಿಗೋ ಇಲ್ಲವೇ ಇಲ್ಲ ಎಂದು ಎಲ್ಲರೂ ಮುದಲಿಸಿದಾಗಲೂ…ನಿಮ್ಮ ನಂಟಸ್ತಿಕೆ ಬಿಡದವನು. ಅವನ ದೃಢವಾದ ಗಟ್ಟಿಮುಟ್ಟಾದ ನಂಬಿಕೆಯು ಸದಾ ಸ್ನೇಹವನ್ನು ಬಯಸುತ್ತದೆ.

ಅದೊಂದು ದಿನ…

ಅವನಿಗೆ ಗೊತ್ತೇ ಆಗದಷ್ಟು ಮೋಸ ಮಾಡಿಬಿಟ್ಟರೇ…!! ನಂಬಿಕೆ ಛಿದ್ರ ಛಿದ್ರವಾಗುತ್ತದೆ. ಹಣ, ಅಂತಸ್ತು, ಆಸ್ತಿ, ಕೀರ್ತಿ ಯಾವುದನ್ನೂ ಅಪೇಕ್ಷಿಸದವನಿಗೆ ಬೆನ್ನಿಗೆ ಚೂರಿ ಹಾಕುವುದಿದೆಯಲ್ಲ ಅದು ಎಲ್ಲಾ ಮೋಸಕ್ಕಿಂತಲೂ ದೊಡ್ಡದು…!!

ಅವನು ಹತಾಶೆಯಿಂದ ನೊಂದುಕೊಳ್ಳುತ್ತಾನೆ..!! ಬದುಕಿನಲ್ಲಿ ಆತನಂತೆ ನೀವು ಆಗಿರಬಹುದು. ಅಂತಹ ಅನುಭವಗಳನ್ನು ನೀವು ಅನುಭವಿಸಿರಬಹುದು…!!

ಬದುಕೇ ಹಾಗೇ…

ನಂಬಿಕೆಯ ನೆಂಟಸ್ತಿಕೆ ನಮ್ಮ ವಿಶ್ವಾಸವನ್ನು ಕುಗ್ಗಿಸಬಾರದು. ವಿಶ್ವಾಸವನ್ನು ಕುಗ್ಗಿಸುವ ಯಾವುದೇ ಸಂಬಂಧವೂ ನಂಟಸ್ತಿಕೆ ಎನಿಸಿಕೊಳ್ಳುವುದಿಲ್ಲ…!!

ಆಗ ನೀವಿಷ್ಟೇ ಮಾಡಿಬಿಡಿ..!!

ಯಾರು ನಿಮಗೆ ಮೋಸ ಮಾಡುತ್ತಾರೋ ಅವರನ್ನು ನಿರ್ಲಕ್ಷ್ಯ ಮಾಡಿಬಿಡಿ. ದ್ವೇಷವನ್ನು ಮಾಡಬೇಡಿ..!! ಯಾಕೆಂದರೆ ಅವರ ನಿಮ್ಮ ಬಾಂಧವ್ಯ ಸ್ನೇಹ, ತ್ಯಾಗದಿಂದ ಪ್ರಾರಂಭವಾದುದು…!!  ಅದು ಕೊನೆಯಾಗುವಂತದಲ್ಲ. ನಿರಂತರವಾಗಿರಬೇಕಾದುದು…!!

ಹಾಗಾಗಿ…

ನಿಮ್ಮನ್ನು ಬಿಟ್ಟವರನ್ನು, ತೊರೆದವರನ್ನು ಪ್ರೀತಿಯಿಂದಲೇ ತಿರಸ್ಕರಿಸಿ..!!

ಸಹಾಯ ಮಾಡುವಾಗ, ಉಪಕಾರ ಮಾಡುವಾಗ, ಯಾವುದೇ ಸ್ವಾರ್ಥವಿಲ್ಲದೆ ಮಾಡುವ ನಿಮ್ಮ ದೊಡ್ಡ ಗುಣವು ಎಂದಾದರೊಂದು ದಿನ ನಿಮ್ಮ ಕೈ ಹಿಡಿದೆ ಹಿಡಿಯುತ್ತದೆ…!!  ಆ ನಂಬಿಕೆ ನಿಮ್ಮಲ್ಲಿ ಸದಾ ಇರಲಿ, ಯಾರೋ ಒಬ್ಬರು ಸೂರ್ಯನಿಗೆ ಉಗುಳಿದರೆ ಆ ಉಗುಳು  ಮರಳಿ ಅವರಿಗೆ ಸಿಡಿಯುತ್ತದೆ.  

ಒಳ್ಳೆಯದನ್ನು, ಒಳ್ಳೆಯತವನ್ನು ಮಾಡುವವರಿಗೆ ಸದಾ ಬೈಗುಳ, ಮೋಸ, ವಂಚನೆಯಾಗುತ್ತಲೇ ಇರುತ್ತದೆ.  ಅದನ್ನು ನುಂಗಿಕೊಂಡು ಬದುಕಿನಲ್ಲಿ ಮುನ್ನುಗ್ಗಬೇಕು.  ಹೀಗೆ ಮುನ್ನುಗ್ಗುವಾಗ ನಿಮ್ಮ ಬದುಕಿಗೆ ಆಸರಾಗುವವರು ತಂದೆ, ತಾಯಿಗಳು, ಸಹೋದರರು, ಕುಟುಂಬ ವರ್ಗದವರು… ಅವರ ಅಪರಮಿತವಾದ ವಾತ್ಸಲ್ಯ ಎಂದಿಗೂ ಕೂಡ ಮರೆಯಲಾರದಂತಹದು.  

ಎಂತಹ ಸ್ನೇಹವೇ ಇರಲಿ, ಸಮಯ, ಸಂದರ್ಭ ಬಂದಾಗ ಅದು ಮುರಿಯಬಹುದು ಆದರೆ ರಕ್ತ ಸಂಬಂಧ ಎಷ್ಟೇ ದ್ವೇಷ ಅಸೂಯೆಪಡುತ್ತಿದ್ದರೂ ಎಲ್ಲಿಯೋ ಒಂದು ಎಳೆ ನಿಮ್ಮನ್ನು, ನಿಮ್ಮ ಮನಸ್ಸನ್ನು ಸೆಳೆಯುತ್ತಿರುತ್ತದೆ. ಅಂತಹ ಸೆಳೆಯುವ ಕರುಳ ಸಂಬಂಧಗಳ ನಂಟಸ್ತಿಕೆಯನ್ನು ಸದಾ ಉಳಿಸಿಕೊಂಡು ಬಿಡಿ. ನಂಟಸ್ತಿಕೆಯ ನೆಪದಲ್ಲಿ ಯಾವತ್ತೂ ನಾವು ದ್ವೇಷವನ್ನು ಬಿತ್ತಬಾರದು. ಅದು ಸ್ನೇಹವೇ ಇರಲಿ, ರಕ್ತ ಸಂಬಂಧವೇ ಇರಲಿ, ವ್ಯವಹಾರವೇ ಇರಲಿ, ಉದ್ಯಮವೇ ಇರಲಿ, ಉದ್ಯೋಗ ವಲಯದ ಸ್ನೇಹವೇ ಇರಲಿ..! ಎಲ್ಲರನ್ನೂ ಉಳಿಸಿಕೊಳ್ಳಬೇಕಾಗಿರುವುದು ನಂಬಿಕೆಯ ಮೊದಲ ಹೆಜ್ಜೆ..!!

ಅಂತ ನಂಬಿಕೆಗೆ ನಾವು ಒಲವನ್ನು ಧಾರೆಯರೆಯಬೇಕು. ಒಲವಿಲ್ಲದ ಬದುಕು ಅದು ನಿಸ್ಸಾರ.

ಇರಲಿ ಬಿಡಿ…

 ನಿಮ್ಮ ಒಳ್ಳೆಯ ಕಾರ್ಯಗಳು ಮುಂದುವರೆಯಲಿ. “ಸಮಾಜ ಕೆಟ್ಟು ಹೋಗಿದೆ. ಕಾಲ ಕೆಟ್ಟು ಹೋಗಿದೆ. ಅಯ್ಯೋ, ಮೊದಲಿನಂತೆ ಇಂದು ಇಲ್ಲ” ಎನ್ನುವ ಮಾತುಗಳಲ್ಲಿಯೇ ನಾವು ಹೊಸತನವನ್ನು, ಒಳ್ಳೆಯತನವನ್ನು ಕಟ್ಟಬೇಕಾಗಿದೆ. ಅಂತಹ ಸಮಯದಲ್ಲಿ ಬಾಂಧವ್ಯದಲ್ಲಿ   ದ್ವೇಷ ಮಾಡಿಕೊಡಬಾರದು.

ಸ್ನೇಹಿತರೇ,

ಏನೇ ಆಗಲಿ…

ನಂಬಿಕೆಯ ನೆಂಟಸ್ತನದಲ್ಲಿ ದ್ವೇಷ ಸುಳಿಯದಿರಲಿ…ಒಲವು ಹರಿಯುತಿರಲಿ ನಿರಂತರ.


ಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)

ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

Leave a Reply

Back To Top