ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ-
ಚಿತ್ರ ಹೊಸತಾದರೆ……
ಮನೆ ಹೊಸತಾದರೆ ಸಾಕು
ಬಣ್ಣವೂ ಹೊಸತೇ
ನೆಲವೂ ಹೊಸತೇ ಫಳಫಳ
ಹೊಳೆವ ಕನ್ನಡಿಯೂ ಕೂಡಾ
ಜಾಗ ಹೊಸತಾದರೆ
ಪರಿಚಯಿಸಿಕೊಳ್ಳಬೇಕು ಜಾಗಕ್ಕೆ
ಹೊಸ ಭಾವಗಳಿಗೆ ಬದಲಾಗಬೇಕು
ಬೇರುಗಳ ಅರಿಯಬೇಕು
ನೆರಳು ಹೊಸತಾದರೆ
ಮೂಲ ಗೆಲುವಾದಂತೆ
ಒಂದು ಸತ್ವವಾದಂತೆ
ಹಚ್ಚ ಹಸಿರಿನ ಚಪ್ಪರವಾದಂತೆ
ಮಣ್ಣು ಹೊಸತಾದರೆ
ಹೊಂದಿಕೊಳ್ಳಬೇಕು ಅದಕ್ಕೆ
ಚಿಗುರುವ ಚೈತನ್ಯ ಪಡೆಯಬೇಕು
ಏನಿಲ್ಲವೆಂದರೂ ಸಾರ ಹಿಡಿದಿಡುವ
ಸಂಪನ್ನವಾಗಬೇಕು
ಚಿತ್ರ ಹೊಸತಾದರೆ
ಗೆರೆಗಳು ನವ್ಯವಾದಂತೆ
ಬಣ್ಣಗಳ ಹರವಿಕೊಂಡು
ಕಂಡಲೆಲ್ಲಾ ನಗುವ ಚೆಲ್ಲಬೇಕು
ಕೊನೆಗೊಮ್ಮೆ ಮನಸ್ಸು ಹೊಸತಾದರೆ
ಜಗವೇ ಹೊಸತು
ಬೆಳಕು ಕತ್ತಲು ನಗು ಅಳು
ಎಲ್ಲವೂ ಹೊಸತೇ ಸಾಧಾರಕೆ…….
ನಾಗರಾಜ ಬಿ.ನಾಯ್ಕ
ಸುಂದರ ಪರಿಕಲ್ಪನೆಯನ್ನು ಚೆನ್ನಾಗಿ ಹೆಣೆದಿದ್ದಾರೆ.
ಹೊಂದಿಕೆ ಎನ್ನುವುದು ಕಷ್ಟದಾಯಕವೂ ಹೌದು, ಕುತೂಹಲಭರಿತವೂ ಹೌದು ಎನ್ನುವ ಸುಂದರ ವಸ್ತುವಿನ ನವಿರಾದ ಕವನ.