ಕಾವ್ಯಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಸೌಂದರ್ಯ ಲಹರಿಯಾಗಬೇಕಿದ್ದ ಬದುಕು
ಅನಿಷ್ಟಗಳ ಗೂಡಾಯಿತಲ್ಲ
ಆಂತರ್ಯ ಸಹಿಸಲಾರದ ನೋವುಂಡು
ಯಾತನೆಗಳ ಬೀಡಾಯಿತಲ್ಲ
ಹಂಗಿನ ಬದುಕಿದು ನುಂಗಲಾರದ
ತುತ್ತಾಗುತ್ತದೆಂದು ಕಂಡಿರಲಿಲ್ಲ
ಅಂಗನೆಯೊoದಿಗಿನ ಸಮರಸವಿರದ ಬಾಳು
ವಿರಸಗಳ ಕೇಡಾಯಿತಲ್ಲ
ದಿನಕರನ ಅಂಶುಗಳು ತೂರಲಾರದ
ಜಾಗವೆಲ್ಲಿದೆ ಹೇಳು ಗೆಳೆಯಾ
ಬೆನಕನನು ಸ್ಮರಿಸಿ ಶುಭಾರಂಭಗೈದುದು
ಅಪಶಕುನಗಳ ಪಾಡಾಯಿತಲ್ಲ
ರಕ್ಕಸದಲೆಗಳಂತ ಕಡುಕಷ್ಟಗಳೇ ಬಂದು
ಎರಗುತ್ತಿರುವಾಗ ಸುಖವೆಲ್ಲಿ
ತಕ್ಕ ವಿಚಾರಗಳ ಮೈಗೂಡಿಸಿಕೊಳ್ಳದ ಮನ
ಅವಗುಣಗಳ ಜಾಡಾಯಿತಲ್ಲ
ವಿತ್ತದಾ ವ್ಯಾಮೋಹದಲಿ ಸಿಲುಕಿದವನು
ಮಹಾತ್ಮನಾಗಬಲ್ಲನೆ ಮಾಲಾ
ಚಿತ್ತ ಕಲುಷಿತವಾಗಿ ಅಹಂಕಾರ ಸ್ವಾರ್ಥ
ಲಾಲಸೆಗಳ ಗೂಡಾಯಿತಲ್ಲ
ಮಾಲಾ ಚೆಲುವನಹಳ್ಳಿ