ಪ್ರಬಂಧ ಸಂಗಾತಿ
ಭಾರತಿ ಅಶೋಕ್
“ಯಾರಿಗ್ಹೇಳೋಣ”
ನಮ್ ಊರಲ್ಲಿ ನೀರು ಬಾರದೇ ನಾಲ್ಕು ದಿನ ಆಯ್ತುರೀ. ನೀರಂದ್ರೆ ನಮ್ ಡ್ಯಾಂ ನೀರು, ಅದೆಷ್ಟು ರುಚಿ ಅಂತೀರಾ! ಬೇರೆ ಊರಿಗೆ ಹೋದಾಗ ನೀರು ಕುಡಿಯುವ ಸಂದರ್ಭ ಬಂದಾಗೆಲ್ಲ- ಇದೇನು ಹಿಂಗಿದೆ ನೀರು,ನಮ್ ಡ್ಯಾಂ ನೀರು ಕುಡಿಬೇಕು ನೀವು, ಎಷ್ಟು ರುಚಿ ಅಂತ -ಪ್ರೀತಿಯಿಂದ ನೀರು ಕೊಟ್ಟು, ಟೀನೋ, ಕಾಫಿನೋ ಕೊಟ್ಟವರ ಮುಖದ ಮೇಲೆ ಅಂದು ಬರ್ತಿವಿ. ನಾನು ಮಾತ್ರ ಅಲ್ಲ ಹಿಂಗ ಅಂದು ಬರೋದು, ಯಾವಾಗಲಾದರೂ ನನ್ನ ಜೊತೆ ನನ್ನ ಅತ್ತಿಗೆ, ಅವರ ಅತ್ತಿಗೆ, ಮತ್ತೆ ನಮ್ಮ ಜೊತೆಗೆ ಬಂದ ಹೊಸಪೇಟೆ ಜನರೆಲ್ಲರ ಮಾತು ಇದೆ.
ಆದರೆ ಇವತ್ತಿಗೆ ಐದು ದಿನಗಳಾದವು ಆ ಸುಂದರಿನ್ನ ಕಂಡು. ಇವತ್ತು ಬರ್ತಾಳೆ, ನಾಳೆ ಬರ್ತಾಳೆ ಅಂತ ಕಾಯ್ತಾನೇ – ಅಲ್ಲಿ ಇಲ್ಲಿ ಬೋರು ನೀರು ತಂದು ಕುಡಿತಾ ನಾಲಿಗೆ ಕೊರಡಾಗಿದೆ. ಯಾರೋ ಹೇಳಿದ್ರು ಇವತ್ತು ಆ ಚೆಲುವೆ ಆಗಮಿಸುವಳು ಅಂತ. ಮನಸಾರೆ ಕಣ್ತುಂಬಿಕೊಂಡು, ದೇಹದ ತೃಷೆ ನೀಗುವಳು ಅಂತ ತುದಿಗಾಲಲ್ಲಿ ಕಾಯ್ತಿದಿನಿ. ನಾನಷ್ಟೇ ಅಲ್ಲರೀ ಹೊಸಪೇಟೆ ಅದರಲ್ಲೂ ನಮ್ಮ ಏರಿಯಾದ ಮಹಾನ್ ಜನತೆ.
ಇನ್ನೊಂದ್ ವಿಷ್ಯ ಹೇಳ್ಲೇಬೇಕು ಕಣ್ರೀ, ಅದು ನನ್ನ, ಅಲ್ಲ ನಮ್ಮ ಏರಿಯಾದವರ ಹೆಮ್ಮೆ!ಅದೇನಂದ್ರೇ.. ಗುಟ್ಟಾಗಿರ್ಲಿ ನಿಮಗಷ್ಟೇ ಹೇಳ್ತಿನಿ. ನಮ್ ಏರಿಯಾದಲ್ಲಿ ಮಾತ್ರ ಯಾವಾಗಲೂ ನೀರು ಬರ್ತನೇ ಇರುತ್ತೆ ಕಣ್ರೀ! ಹೊಲಸುಪೇಟೆ, ಕ್ಷಮಿಸಿ, ಹೊಸಪೇಟೆಯ ಯಾವ ಏರಿಯಾದಲ್ಲೂ ಹೀಗೆ ಯಾವಾಗಲೂ ನೀರು ಬರಲ್ಲ. ದಯಮಾಡಿ ನೀವು ಯಾರಿಗೂ ಹೇಳ್ಬೇಡಿ. ಯಾಕೇಂದ್ರೆ,ಅವ್ರೆಲ್ಲಾ ನಮ್ ಕಡೆ ನೀರು ಹಿಡಿಲಿಕ್ಕೆ ಬಂದ್ಬಿಡ್ತಾರೆ. ಅದಕೆ ನೀವು ಎಲ್ಲೂ ಬಾಯ್ಬಿಡ್ಬೇಡಿ ಅಂದೆ.
ಇವತ್ತಿಗೆ ಐದನೇ ದಿನ ಅಂತ ಅಂದ್ನಲ್ಲ. ಇವತ್ತು “ನೀರಮ್ಮ ಬರ್ತಾಳೆ” ಅಂತ ಐದು ಗಂಟೆಗೆ ಎದ್ದಿದಿನ್ರೀ, ಅಲ್ಲಿ, ಇಲ್ಲಿ ಬಸಿ ನೀರು ಬರ್ತಾ ಇತ್ತು. ಎರಡು ಕೊಡ ತುಂಬಿಕೊಂಡೆ. ಇನ್ನು ಬರ್ತಾ ಇತ್ತು ಅಕ್ಕ ಪಕ್ಕದ ಮನೆ ಹತ್ರ. ತುಂಬಿಸ್ಕೊಂಡ್ಬಿಡಿ, ಮತ್ತೆ ನೀರು ಬರುತ್ತೋ ಇಲ್ವೋ ಗೊತ್ತಿಲ್ಲ ಅಂದ್ರು. ಆದ್ರೆ ನಾನು (ನೀರು) ಹಿಡ್ದುಬಿಡ್ತಿನಾ? “ನಮ್ ಮನೆಯಲ್ಲೂ ಬರುತ್ತೆ ಅಗ ಹಿಡಿತಿನಿ ಬಿಡ್ರಿ” ಅಂತ – ಎರಡೇ ಎರಡು ಕೊಡ ಸಾಕು ಕುಡಿಯೋದಕ್ಕೆ ಅಂದೆ. ಅಲ್ವಾ …ನಮ್ಮನೇಲು ನೀರು ಬಂದ್ರು ಇನ್ನೊಬ್ಬರ ಮನೆಗೆ ಯಾಕ್ ಹೋಗ್ಬೇಕು? ಅದಕೆ ಎರಡೇ ಕೊಡ ತುಂಬಿಸ್ಕೊಂಡೆ.
ಇನ್ನೊಂದ್ ವಿಷ್ಯ ಗೊತ್ತ ನಿಮ್ಗೆ. ಎರಡು ಮೂರು ದಿನದಿಂದ, ಅಕ್ಕ ಪಕ್ಕದ ಮನೆಯವರು ನಮ್ ಸಿಂಟೆಕ್ಸ್ ತುಂಬಿದೆರೀ,ನೀರು ಬರೋತನಕ ಕಿರಿ ಕಿರಿ ಇಲ್ಲ ನಮಗೆ ಅಂತ ಬೀಗ್ತಿದ್ರು. ನಮ್ ಮನೆಯಲ್ಲಿ ಸಿಂಟೆಕ್ಸ್ ಹಾಕಿಸಿಲ್ಲದ ಕಾರಣ ನನಗೆ ಬೇಜಾರಾಗ್ತಿತ್ತು- ಅವ್ರು ಹಾಗೆ ಹೇಳುವಾಗ. ನಾನು ಕೊಡ ಹಿಡ್ಕೊಂಡು ಆಚೀಚೆ ನೀರಿಗೆ ಅಲೆಯುವಾಗ, ಅವ್ರು ಆರಾಮಾಗಿ ಕೂತಿರೊದನ್ನು ನೋಡಿ ನನಗಿಲ್ಲದ ಸೌಲತ್ತು ಅವ್ರಿಗಿದೆಯಲ್ಲಪಾ… ಇವ್ರು ನನ್ಹಾಗೆ ಅಲೆಯೋದನ್ನು ನಾನು ನೋಡ್ಬೇಕು ಅಂತ ಅಂದ್ಕೊಳ್ತಿದ್ದೆ. ಮತ್ತೆ ಅದು ತೀರದ ಆಸೆ ಅಂತಾನು ಅಂದ್ಕೋತಿದ್ದೆ. ಅಬ್ಬಾ! ಇವತ್ತು ನೋಡಿ ಎಲ್ಲರ ಮನೆ ಸಿಂಟೆಕ್ಸ್ ಖಾಲಿ! ನನ್ ಜೊತೆ ಅವ್ರು ನೀರಿಗೆ ಅಲಿತಿದ್ದಾರೆ. ಯಪ್ಪಾ!ನೀರ್ ಬರೆದೇ ಇದ್ರು ಪರವಾಗಿಲ್ಲ,ಅವರೆಲ್ಲಾ ನನ್ ಜೊತೆ ಕೊಡ ಹಿಡ್ಕೊಂಡ್ ಅಲೆಯೋದನ್ನು ನೋಡಿದ್ಮೇಲೆ ಸಮಾಧಾನ ಆಯ್ತು ನೋಡ್ರಿ.
ಮತ್ತೇ ನೀರೆಯ ಪುರಾಣ ಅಂದ್ರೆ ಸುಮ್ನೇನಾ?
ಆಕೆ ಬರ್ತಾಳೋ, ಇಲ್ವೋ ಗೊತ್ತಿಲ್ಲ ಕಣ್ರೀ. ಕಾಯ್ತಾನೇ ನಿಮಗೆ ಇದನ್ನೆಲ್ಲಾ ವರದಿಸುತ್ತಿದ್ದೇನೆ. ನಿಮ್ ಜೊತೆ ಮಾತಾಡ್ತಾನೇ ನಳದಮ್ಮನ ಕಡೆ ಧೀನವಾಗಿ ನೋಡ್ತಾನೂ ಇದಿನಿ. ಬಂದ್ಬಿಡು ತಾಯಿ ನೀರೆ, ನೀರಮ್ಮ, ಗಂಗಮ್ಮ, ನಮ್ ಏರಿಯಾದ ಘನತೆಯನ್ನು ಉಳಿಸ್ಕೊಳ್ಳೋದಕ್ಕಾದ್ರು ಬಾರಮ್ಮ ತಾಯಿ ಭಾಗೀರಥಿ ಅಂತ.
ಸರಿ ಕಣ್ರಿ. ಎರಡು ಕೊಡ ನೀರು ಯಾವ ಮೂಲೆಗೂ ಸಾಕಾಗ್ಲಿಲ್ಲ. ಬರುತ್ತೇನೆ ಎನ್ನುವ ಸೊಲ್ಲು ಬಿಡುತ್ತಿಲ್ಲ. ಬರುತ್ತಿಲ್ಲ- ಕಾಯುವ ಕಾತರ ತಣಿಸುವ ಇರಾದೆ ಆ ಹೆಣ್ಮಗಳಿಗೂ ಇದ್ಹಂಗಿಲ್ಲ.
ಯಾವುದಾದ್ರೂ ಹ್ಯಾಂಡ್ ಬೋರ್ ಗೆ ಹೋಗಿ ಅಕೆಯ ಪ್ರತ್ಯಕ್ಷ ದರುಶನ ಮಾಡ್ಕೋತೀನ್ರಿ ನಮಸ್ಕಾರ ನೀರೆ ಪುರಾಣ ಕೇಳಿದ್ದಕ್ಕೆ
ಭಾರತಿ ಅಶೋಕ್